ಪಿಒಕೆ ಕಬಳಿಸಲು ಪಾಕ್ ನೊಂದಿಗೆ ಕೈಜೋಡಿಸಿದ ಚೀನ

ಪಿಒಕೆ ಕಬಳಿಸಲು ಪಾಕ್ ನೊಂದಿಗೆ ಕೈಜೋಡಿಸಿದ ಚೀನ

ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿಯತ್ತ ಮುಖ ಮಾಡಿರುವ ಪಾಕಿಸ್ತಾನ ಇದೀಗ ತನ್ನನ್ನು ಪಾರು ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಪಾಲಿಗೆ ಪರಮಾಪ್ತ ರಾಷ್ಟ್ರವಾಗಿರುವ ಚೀನ ಭರಪೂರ ಪ್ರಮಾಣದಲ್ಲಿ ಹಣಕಾಸು ನೆರವನ್ನು ನೀಡುತ್ತಿದ್ದರೂ ತೀವ್ರ ಸಂಕಷ್ಟದಿಂದ ನರಳುತ್ತಿರುವ ಪಾಕಿಸ್ತಾನದ ಪಾಲಿಗೆ 'ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬಂತಾಗಿದೆ. 

ಈ ಹಿನ್ನಲೆಯಲ್ಲಿ ಚೀನದಿಂದ ಮತ್ತಷ್ಟು ಹಣಕಾಸು ನೆರವನ್ನು ಪಡೆಯುವ ಉದ್ದೇಶದಿಂದ ಪಾಕಿಸ್ತಾನ, ಪಾಕ್ ಆಕ್ರಮಿತ ಪ್ರದೇಶದ ಭಾಗವಾದ ಗಿಲ್ಗಿಟ್-ಬಾಲ್ಟಿಸ್ಥಾನ್ ಅನ್ನು ಲೀಸ್ ಆಧಾರದಲ್ಲಿ ಚೀನಕ್ಕೆ ಹಸ್ತಾಂತರಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಕಾರಕೋರಂ ನ್ಯಾಶನಲ್ ಮೂವ್ ಮೆಂಟ್ ನ ಅಧ್ಯಕ್ಷ ಮುಮ್ತಾಜ್ ನಗ್ರಿ ಗಂಭೀರ ಆರೋಪ ಮಾಡಿದ್ದಾರೆ. ಒಂದು ವೇಳೆ ಪಾಕಿಸ್ತಾನ ಸರಕಾರ ಇಂಥ ನಿರ್ಧಾರ ಕೈಗೊಂಡದ್ದೇ ಆದಲ್ಲಿ ಈಗಾಗಲೇ ಪ್ರತ್ಯೇಕತಾವಾದ ಮತ್ತು ಪಾಕಿಸ್ತಾನ ಸರಕಾರದ ತೀವ್ರ ನಿರ್ಲಕ್ಷ್ಯದಿಂದಾಗಿ ಕನಿಷ್ಟ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಈ ಪ್ರದೇಶ ಸದ್ಯೋಭವಿಷ್ಯದಲ್ಲಿ ಯುದ್ಧ ಭೂಮಿಯಾಗಿ ಮಾರ್ಪಡುವ ಎಲ್ಲ ಸಾಧ್ಯತೆಗಳಿವೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಚೀನ-ಪಾಕಿಸ್ತಾನ ನಡುವಣ ಆರ್ಥಿಕ ಕಾರಿಡಾರ್ ಒಪ್ಪಂದದ ಭಾಗವಾಗಿ ಚೀನ, ಪಿಒಕೆಯ ಭಾಗವಾಗಿರುವ ಗಿಲ್ಗಿಟ್-ಬಾಲ್ಟಿಸ್ಥಾನ್ ಭಾಗದಲ್ಲಿ ಬಂಡವಾಳ ಹೂಡಿ ತನಗೆ ಅಗತ್ಯವಿರುವೆಡೆ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಈ ಮೂಲಕ ಚೀನ ಮತ್ತು ಪಾಕಿಸ್ತಾನ ಜಂಟಿಯಾಗಿ ಭಾರತದ ವಿರುದ್ಧ ಷಡ್ಯಂತ್ರ ಹೂಡಿದ್ದು ಈ ಬೆಳವಣಿಗೆಯ ಮುಂದುವರಿದ ಭಾಗವೇ ಗಿಲ್ಗಿಟ್-ಬಾಲ್ಟಿಸ್ಥಾನವನ್ನು ಚೀನಾದ ವಶಕ್ಕೆ ಒಪ್ಪಿಸುವುದಾಗಿ ಎಂಬ ವಿಶ್ಲೇಷಣೆಯೂ ಕೇಳಿ ಬಂದಿದೆ. 

ಆರ್ಥಿಕ ಸಂಕಷ್ಟದಿಂದ ಪಾರಾಗಲು ಪಾಕಿಸ್ತಾನ ಸರಕಾರ ಚೀನಾದ ಮುಂದೆ ಈ ಪ್ರಸ್ತಾವ ಇಟ್ಟಿದೆ ಎನ್ನಲಾಗುತ್ತಿದೆಯಾದರೂ ಪಾಕಿಸ್ತಾನ ಸರಕಾರ ಮಾತ್ರ ಈ ವರದಿ ನಿರಾಕರಿಸಿದೆ. ಆದರೂ ಪಾಕ್ ಮತ್ತು ಚೀನ ಜಂಟಿ ಷಡ್ಯಂತ್ರ ಹೂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. 

ಆದರೆ ಪಾಕಿಸ್ತಾನದ ಯಾವುದೇ ಹೇಳಿಕೆಗಳನ್ನು ಭಾರತ ಸಹಿತ ವಿಶ್ವ ಸಮುದಾಯ ನಂಬುವ ಸ್ಥಿತಿಯಲ್ಲಿ ಇಲ್ಲ. ಭಯೋತ್ಪಾದಕರಿಗೆ ಆಶ್ರಯ, ಹಣಕಾಸು ನೆರವು ಮತ್ತಿತರ ವಿಚಾರದಲ್ಲಿ ಪಾಕಿಸ್ತಾನ ದಶಕಗಳಿಂದ ತನ್ನ ಗೋಸುಂಬೆತನವನ್ನು ಪ್ರದರ್ಶಿಸುತ್ತಾ ಬಂದಿರುವುದರಿಂದ ಈ ಸ್ಪಷ್ಟನೆಯ ಕುರಿತಂತೆಯೂ ಸಹಜವಾಗಿಯೇ ಅನುಮಾನ ವ್ಯಕ್ತವಾಗಿದೆ. 

ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿರುವ ವಿಸ್ತರಣಾವಾದದ ಗುಂಗಿನಲ್ಲಿರುವ ಚೀನದ ಪಾಲಿಗೆ ಪಾಕಿಸ್ತಾನದ ಈ ಪ್ರಸ್ತಾವ ಬಲುದೊಡ್ಡ ವರದಾನವಾಗಿ ಪರಿಣಮಿಸಲಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು ಸದ್ಯ ಪಾಕ್ ನ ವಶದಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಈ ಪ್ರಸ್ತಾವ ಘನಘೋರ ಪ್ರಮಾದವಾಗಲಿದೆಯಲ್ಲದೆ ತಕ್ಕ ಶಾಸ್ತಿ ಅನುಭವಿಸಲಿದೆ.

ಲೀಸ್ ಪ್ರಸ್ತಾವನೆ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಗಡಿಭಾಗದಲ್ಲಿರುವ ಚೀನ ಮತ್ತೆ ತಕರಾರು ಆರಂಭಿಸುವ ಸಾಧ್ಯತೆ ಇದೆಯಲ್ಲದೆ ವಾಣಿಜ್ಯ-ವ್ಯವಹಾರ ಕ್ಷೇತ್ರಗಳಲ್ಲೂ ಭಾರೀ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಲಿದೆ. ಈ ಹಿನ್ನಲೆಯಲ್ಲಿ ಭಾರತ ಪಾಕ್ ಗೆ ಇಂಥ ಪ್ರಯತ್ನಕ್ಕೆ ಕೈಹಾಕದಂತೆ ಎಚ್ಚರಿಕೆ ನೀಡುವ ಜತೆಗೆ ಇವರಿಬ್ಬರ ಷಡ್ಯಂತ್ರದ ಕುರಿತಂತೆ ಜಾಗತಿಕ ಸಮುದಾಯದ ಗಮನ ಸೆಳೆಯಬೇಕಾಗಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೪-೦೬-೨೦೨೨