ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗಲಿದೆ?

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗಲಿದೆ?

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದುಂಟು. ಅವು ಬೇಗ ಇತ್ಯರ್ಥಗೊಳ್ಳದೇ ಕುಟುಂಬದಲ್ಲಿ ಬಿರುಕು, ಜಗಳವುಂಟಾಗಿ ಆಸ್ತಿಗಳು ಪ್ರಯೋಜನಕ್ಕೆ ಬಾರದಿರುವ ಹಲವು ಪ್ರಕರಣಗಳನ್ನು ಕಾಣುತ್ತೇವೆ. ಆದರೆ, ಸಾಮಾನ್ಯ ಪರಿಭಾಷೆಯಲ್ಲಿ ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಮತ್ತು ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ವಿಂಗಡಿಸಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

ಪಿತ್ರಾರ್ಜಿತ ಆಸ್ತಿ: ಕಾನೂನಿನ ಪ್ರಕಾರ ಹೇಳುವುದಾದರೆ, ಒಂದು ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳವರೆಗೆ ಆನುವಂಶಿಯವಾಗಿ ಪಡೆಯಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವಿಕೆಯು ಹುಟ್ಟಿನಿಂದಲೇ ಉಂಟಾಗುತ್ತದೆ. ಮೂರು ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಈ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿ ಸ್ವಯಾರ್ಜಿತ ಆಸ್ತಿ ಎನ್ನುತ್ತಾರೆ.

ಪಿತ್ರಾರ್ಜಿತ ಆಸ್ತಿ ಯಾರಿಗೆಲ್ಲಾ?: ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗುವುದಾದರೆ ಎಷ್ಟು ಸಿಗುತ್ತದೆ?. ತಂದೆಯಾದವನು ತನ್ನ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನತೆ ಇದೆಯೇ? ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಿದ ತಂದೆಯ ಮೇಲೆ ದಾವೆ ಹಾಕಿ ನ್ಯಾಯ ಪಡೆದುಕೊಳ್ಳಬಹುದೇ?. ಇಂಥ ಹಲವಾರು ಪ್ರಶ್ನೆಗಳು, ಗೊಂದಲ ಸಾಮಾನ್ಯ ಜನರಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಬರುವುದು ಸಹಜ. ಯಾರಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲಾ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನಿಶ್ಚಿತವಾಗಿ ಪಾಲು ಇರುತ್ತದೆ. ಆದರೆ, ತಂದೆಯ ಆಸ್ತಿ ಯಾವ ಮೂಲದಿಂದ ದೊರಕಿದೆ ಎನ್ನುವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ. ಸಂವಿಧಾನ ತಿದ್ದುಪಡಿಯಲ್ಲಿ ಮತ್ತು ನ್ಯಾಯಾಲಯದಲ್ಲಿ ಇದೇ ವಿಷಯವನ್ನು ಹಲವಾರು ಸಂದರ್ಭಗಳಲ್ಲಿ ಪುನರುಚ್ಚರಿಸಲಾಗಿದೆ. ತಂದೆಯ ಆಸ್ತಿಯಲ್ಲಿ ಮಗಳ ಪಾಲಿನ ಬಗ್ಗೆ ಹಲವಾರು ಆದೇಶಗಳು ಬಂದಿದೆ. ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕಿನಲ್ಲಿ ಎರಡು ರೀತಿಯ ವರ್ಗಗಳನ್ನು ಮಾಡಲಾಗಿದೆ. ಪಿತ್ರಾರ್ಜಿತ ಆಸ್ತಿ ಹಕ್ಕು, ಸ್ವಯಾರ್ಜಿತ ಆಸ್ತಿ ಹಕ್ಕು.

ಹೆಣ್ಣುಮಕ್ಕಳ ಪಾಲು: ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇರುತ್ತಾನೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ಮದುವೆಯಾಗಿರುತ್ತದೆ. ಅಂಥ ಸಂದರ್ಭದಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಬಹುದು. ಸಾಮಾನ್ಯವಾಗಿ ಹಿಂದೂ ಉತ್ತರಾಧಿಕಾರಿ ಕಾಯಿದೆ ಪ್ರಕಾರ, ಹುಟ್ಟಿದ ದಿನದಿಂದಲೇ ಮಕ್ಕಳಿಗೆ ತನ್ನಿಂದ ತಾನೇ ಸಮಾನ ಹಕ್ಕು ಬರುತ್ತದೆ. ಹೆಣ್ಣು ಮಕ್ಕಳ ಆಸ್ತಿಯ ಕುರಿತು ಈಗ ಇರುವ ಕಾನೂನು ಬಹಳ ಸರಳವಾಗಿದ್ದು, ಯಾವುದೇ ಗೊಂದಲವಿಲ್ಲದೇ ತಿಳಿದುಕೊಳ್ಳಬಹುದು. ಒಟ್ಟಾರೆ ಹೇಳುವುದಾದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಪಾಲು ಇರುತ್ತದೆ.

ಸ್ವಯಾರ್ಜಿತ ಆಸ್ತಿ ಯಾರಿಗೆಲ್ಲ: ಸ್ವಯಾರ್ಜಿತ ಆಸ್ತಿಯಲ್ಲಿ ಮಗ, ಮಗಳು ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ. ಏಕೆಂದರೆ ತಂದೆ ಬೆಳೆಸಿದ ಅಥವಾ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯಾಗಿದೆ. ಆ ವ್ಯಕ್ತಿ ಯಾರಿಗಾದರೂ ಕೊಡಬಹುದು. ಎಲ್ಲವೂ ತಂದೆಯ ವಿವೇಚನೆಗೆ ಬಿಟ್ಟಿದೆ. ಆದರೆ, ತಂದೆ ಆಸ್ತಿ ವಿಲೇವಾರಿ ಮಾಡದೇ, ಪರಭಾರೆ ಮಾಡದೇ ಅಥವಾ ಮಾರಾಟ ಮಾಡದೆ ಹಾಗೇ ತಂದೆ ಮರಣ ಹೊಂದಿದ್ದರೆ ಆತನ ಉತ್ತರಾಧಿಕಾರಿಗಳಾದ ಮಗ, ಮಗಳು, ಹೆಂಡತಿ, ತಾಯಿಗೆ ಸಮಾನವಾದ ಪಾಲು ಇರುತ್ತದೆ.

ಇನ್ನು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ಜೀವಂತ ಇದ್ದಾಗಲೇ ಮಗ, ಮಗಳ ಅಥವಾ ಕುಟುಂಬದ ಇತರ ಸದಸ್ಯರಿಗೆ ಪಾಲು ಕೇಳಲು ಬರುವುದಿಲ್ಲ. ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳಲು ಗೊತ್ತಿರಬೇಕಾದ ವಿಷಯಗಳೇನು? ಗಂಡು ಮತ್ತು ಹೆಣ್ಣು ಸಮಾನವಾಗಿದ್ದು, ಅದರಂತೆ ಮಕ್ಕಳಿಗೆ ಆಸ್ತಿಯಲ್ಲಿಯೂ ಸಮಪಾಲು ಇರುತ್ತದೆ. ಕುಟುಂಬದಲ್ಲಿ ಬಾಂಧವ್ಯ ಹಾಳಾಗದಂತೆ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ವಿನಯವಾಗಿ ಕೇಳಬೇಕು.

ಪಾಲಕರ ಪೋಷಣೆ ಜವಾಬ್ದಾರಿ: ಒಂದು ವೇಳೆ ತಂದೆಯ ಆಸ್ತಿಯಲ್ಲಿ ಪಾಲು ಸಿಗದಿದ್ದಾಗ ರಾಜಿ ಸಂಧಾನ ಮಾಡಿಸುವುದು. ಇಲ್ಲೂ ನಿಮಗೆ ನ್ಯಾಯ ಸಿಗದಿದ್ದರೆ, ನ್ಯಾಯಾಲಯದಲ್ಲಿ ವಿಭಾಗ ದಾವೆ ಹಾಕಬಹುದು. ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಕೇವಲ ಗಂಡು ಮಕ್ಕಳಿಗೆ ಇರುತ್ತದೆ ಎಂದು ಭಾವಿಸಬಾರದು. ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುವಂತಿಲ್ಲ. ಅಂದರೆ ಪಾಲಕರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಎಲ್ಲಾ ಆಗು ಹೋಗುಗಳಲ್ಲಿ ಮಹಿಳೆಯರ ಜವಾಬ್ದಾರಿ ಗಂಡಿನಂತೆ ಇರುತ್ತದೆ. ಪಾಲಕರನ್ನು ನೋಡಿಕೊಳ್ಳುವ ಜತೆಗೆ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವುದು ಅವರ ಹೊಣೆಗಾರಿಕೆಯಾಗಿದೆ. ಆಸ್ತಿಯ ಮೇಲೆ ಯಾವುದಾದರೂ ಸಾಲ, ಋಣಭಾರ ಇದ್ದಲ್ಲಿ ಅದನ್ನು ತೀರಿಸಲು ಪುರುಷ ಅಥವಾ ಮಹಿಳೆ ಬದ್ಧಳಾಗಿರಬೇಕು.

ಆಸ್ತಿ ಖರೀದಿ ವೇಳೆ ಎಚ್ಚರಿಕೆಗಳೇನು?: ಆಸ್ತಿ ಖರೀದಿಸುವಾಗ ಮುಂಜಾಗ್ರತೆ, ಪ್ರಾಥಮಿಕ ಜ್ಞಾನ ಇದ್ದರೆ ವಂಚನೆ, ವ್ಯಾಜ್ಯಗಳಿಂದ ತಪ್ಪಿಸಿಕೊಳ್ಳಬಹುದು. ಆಸ್ತಿ ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಲಭ್ಯ ಇರುವ ಮೂಲ ಮಾಲೀಕತ್ವ ದಾಖಲಾತಿಗಳನ್ನು ಪರಿಶೀಲಿಸಬೇಕು. ಸಂಬಂಧಿಸಿದ ಉಪನೋಂದಣಾಧಿಕಾರಿ ಕಚೇರಿ ಅಥವಾ ಕಂದಾಯ ಕಚೇರಿಯಲ್ಲಿ ಮೂವತ್ತು ವರ್ಷಗಳ ಋಣರಾಹಿತ್ಯ ಪ್ರಮಾಣ ಪತ್ರ ಎನ್ ಕಂಬರೆನ್ಸ್ ಸರ್ಟಿಫಿಕೇಟ್ (ಇ.ಸಿ.) ಅನ್ನು ಪರಿಶೀಲಿಸಬೇಕು.

ಮ್ಯುಟೇಷನ್ ಹಾಗೂ ಮಾಲೀಕರು ಪಾವತಿಸಿರುವಂಥ ತೆರಿಗೆ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ಇನ್ನು ಆ ಆಸ್ತಿಯು ಉತ್ತರಾಧಿಕಾರದ ಮೂಲಕ ಬಂದಿದ್ದಲ್ಲಿ ಮೂಲ ಮಾಲೀಕರ ಮರಣ ಪ್ರಮಾಣಪತ್ರ ಹಾಗೂ ಮೂಲ ಮಾಲೀಕರ ಕಾನೂನುಬದ್ಧ ಉತ್ತರಾಧಿಕಾರಿಗಳ ಪ್ರಮಾಣಪತ್ರ ಪರಿಶೀಲಿಸಬೇಕು. ಮೂಲ ಮಾಲೀಕರು ಮರಣ ಹೊಂದಿದ್ದಾಗ ಆ ವ್ಯಕ್ತಿಯ ಉತ್ತರಾಧಿಕಾರಿಗಳಿಗೆ ಉತ್ತರಪತ್ರದ ಮೂಲಕ ಆಸ್ತಿ ವರ್ಗಾವಣೆ ಆಗುತ್ತದೆ.

ಮಾಲೀಕತ್ವಕ್ಕೆ ದಾಖಲೆ ಆಗಿರುತ್ತದೆ. ಇದರ ನಕಲನ್ನು ಮಾಡಿ, ವಂಚಿಸುವ ಸಾಧ್ಯತೆ ಇರುವುದರಿಂದ ಉತ್ತರ ಪತ್ರದ ನಿಜಾಂಶವನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಈ ದಾಖಲೆ ಸರಿಯಾಗಿದೆ ಎಂದು ಖಚಿತವಾದ ಮೇಲೆ ಆ ಮಾಹಿತಿಯನ್ನು ಕ್ರಯಪತ್ರದಲ್ಲಿ ದಾಖಲಿಸಬೇಕು. ಆಸ್ತಿ ಹಂಚಿಕೆ ವಿಚಾರವು ಆಯಾ ಕುಟುಂಬದ ಸದಸ್ಯರ ಜವಾಬ್ದಾರಿ ನಿರ್ವಹಿಸಿದವರ ಮತ್ತು ಆಯಾ ಕುಟುಂಬದ ಬೆಳವಣಿಗೆ ಪರಿಸ್ಥಿತಿಯಂತೆ ಹಂಚಿಕೊಂಡರೆ, ಅಸ್ತಿಯು ಉಳಿಯುತ್ತದೆ ಹಾಗೂ ಸಂಬಂಧಗಳೂ ಉಳಿಯುತ್ತದೆ.

ಆದರೆ ಯಾವ ತಂದೆ ತಾಯಿಯೂ ಮುಂದೆ ನನ್ನ ಮಗಳು ಆಸ್ತಿ ಕೇಳುತ್ತಾಳೆ ಎಂದು ಆಸ್ತಿ ಮಾರಿ ಮದುವೆ ಮಾಡೊಲ್ಲ. ತಾವು ಕಷ್ಟ ಪಟ್ಟು ಸಂಪಾದಿಸಿದ ಹಣದಿಂದ ಮದುವೆ ಮಾಡುತ್ತಾರೆ. ಆಸ್ತಿಗಾಗಿ ಬಡಿದಾಡುವರು ಇದನ್ನು ಅರ್ಥ ಮಾಡಿಕೊಂಡರೆ ವ್ಯಾಜ್ಯವೇ ಇರೋದಿಲ್ಲ.

(ಆಧಾರ) ‘ಮನು' ಶಕ್ತಿನಗರ

ಚಿತ್ರ ಕೃಪೆ: ಇಂಟರ್ನೆಟ್ ತಾಣ