ಪಿ ಎಸ್ ಐ ನೇಮಕದಲ್ಲಿ ಅಕ್ರಮ : ಸೂಕ್ತ ತನಿಖೆ ಅಗತ್ಯ

ಪಿ ಎಸ್ ಐ ನೇಮಕದಲ್ಲಿ ಅಕ್ರಮ : ಸೂಕ್ತ ತನಿಖೆ ಅಗತ್ಯ

ರಾಜ್ಯ ಸರಕಾರದ ಪ್ರತಿ ನೇಮಕ ಪ್ರಕ್ರಿಯೆಯಲ್ಲೂ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ನಡೆದ ೫೪೫ ಪಿ ಎಸ್ ಐ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲೂ ಭಾರಿ ಅಕ್ರಮ ನಡೆದಿದ್ದು, ಇದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎನ್ನಲಾಗಿದೆ. ಕಡು ಬಡತನದಲ್ಲೂ ವರ್ಷಾನುಗಟ್ಟಲೇ ಓದಿ ಪರೀಕ್ಷೆಗೆ ಸಿದ್ಧವಾಗಿರುವ ಆಕಾಂಕ್ಷಿಗಳು ಭ್ರಷ್ಟರ ಕೈಚಳಕದಿಂದಾಗಿ ಹುದ್ದೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಸರಕಾರವು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಅಕ್ರಮ ಮಾರ್ಗದ ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕಠಿಣ ಶಿಕ್ಷೆ ನೀಡಬೇಕಿದೆ. ಅಲ್ಲಿಯವರೆಗೂ ಪಿ ಎಸ್ ಐ ಹುದ್ದೆಗೆ ನೇಮಕವಾಗಿರುವವರ ತಾತ್ಕಾಲಿಕ ಪಟ್ಟಿ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇಂತಹ ಅಕ್ರಮದ ವಾಸನೆ ಬಂದಾಗಲೆಲ್ಲ ಮರು ಪರೀಕ್ಷೆ ನಡೆಸಲಾಗಿದೆ. ಆದರೆ ಅದಕ್ಕೆ ವರ್ಷಾನುಗಟ್ಟಲೆ ಸಮಯ ವ್ಯರ್ಥವಾಗಿರುವುದರಿಂದ ಸಾವಿರಾರು ಆಕಾಂಕ್ಷಿಗಳು ವಂಚಿತರಾಗಿರುವ ಉದಾಹರಣೆಗಳೂ ಇವೆ. ಹೀಗಾಗಿ ಪರೀಕ್ಷೆ ದಿನಾಂಕವನ್ನು ಶೀಘ್ರವೇ ಬಿಡುಗಡೆ ಮಾಡಬೇಕಿದೆ. ಪರೀಕ್ಷಾ ಕೇಂದ್ರದಲ್ಲಿ ನೋಂದಣಿ ಸಂಖ್ಯೆಯನ್ನು ಅಕ್ಕಪಕ್ಕದಲ್ಲೇ ಹಾಕಿಕೊಡುತ್ತಿದ್ದಾರೆ ಎಂಬ ಅನುಮಾನವನ್ನು ಆಕಾಂಕ್ಷಿಗಳು ವ್ಯಕ್ತಪಡಿಸಿದ್ದು, ಅದನ್ನು ತಡೆಯಲು ಇನ್ನು ಮುಂದೆ ಪರೀಕ್ಷಾ ಕೇಂದ್ರಗಳ ಸುತ್ತ ಸಿಸಿಟಿವಿ ಕ್ಯಾಮರಾ ಹಾಗೂ ಜಾಮರ್ ಗಳನ್ನು ಅಳವಡಿಸುವ ಮೂಲಕ ಅಕ್ರಮ ದಾರಿಯಿಂದ ಉನ್ನತ ಹುದ್ದೆಗಳನ್ನು ಅಲಂಕರಿಸುವವರಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೇ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡ ೩೦ ದಿನಗಳೊಳಗೆ ಆರ್ ಟಿ ಐ ಅಡಿ ನಕಲಿ ಉತ್ತರ ಪತ್ರಿಕೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕಿದೆ. ಅನೇಕ ಅಭ್ಯರ್ಥಿಗಳು ಸ್ಥಳೀಯ ಕೇಂದ್ರಗಳಲ್ಲೇ ಪರೀಕ್ಷೆ ಬರೆಯುವುದರಿಂದ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಹೀಗಾಗಿ ಅಭ್ಯರ್ಥಿಗಳು ಸ್ಥಳೀಯ ಕೇಂದ್ರಗಳಲ್ಲೇ ಪರೀಕ್ಷೆಯನ್ನು ಬರೆಯುವುದಕ್ಕೆ ಕಡಿವಾಣ ಹಾಕಬೇಕಿದೆ. ಇಲಾಖೆಯಲ್ಲಿರುವ ಪ್ರಭಾವಿಗಳ ಮಕ್ಕಳನ್ನು ಪಿ ಎಸ್ ಐ ಹುದ್ದೆಗೆ ನೇಮಕ ಮಾಡಲು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಇಲಾಖೆಯಲ್ಲಿ ಇರುವ ಅಂತಹವರನ್ನು ಕಂಡು ಹಿಡಿದು ಅವರಿಗೂ ಶಿಕ್ಷೆ ನೀಡುವ ಮೂಲಕ ಪಾರದರ್ಶಕ ನೇಮಕ ಪ್ರಕ್ರಿಯೆ ನಡೆಸಬೇಕಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೫-೦೪-೨೦೨೨

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ