ಪುಕ್ಕಲು ಸಿಂಹ ಮತ್ತು ಜಾಣ ಆಡು
ಹಿಂದೊಮ್ಮೆ ಮುದಿ ಆಡೊಂದು ತನ್ನ ಹಿಂಡಿನಿಂದ ಬೇರೆಯಾಯಿತು. ಆಗಲೇ ಸಂಜೆ ದಾಟಿ ಕತ್ತಲಾಗುತ್ತಿತ್ತು. ತನ್ನ ಹಳ್ಳಿಗೆ ಹೇಗೆ ಹೋಗಿ ಸೇರುವುದೆಂದು ಆಡಿಗೆ ಚಿಂತೆಯಾಯಿತು.
ಆ ಕತ್ತಲಿನಲ್ಲಿ ನಡೆದು ತನ್ನ ಹಳ್ಳಿ ಸೇರಲು ಸಾಧ್ಯವಿಲ್ಲವೆಂದು ಮುದಿ ಆಡಿಗೆ ಅರ್ಥವಾಯಿತು. ಹಾಗಾಗಿ, ಅಲ್ಲೇ ಎಲ್ಲಾದರೂ ರಾತ್ರಿ ಕಳೆಯಲು ನಿರ್ಧರಿಸಿತು. ಅಲ್ಲಿ ಗುಡ್ಡದ ಬದಿಯಲ್ಲೊಂದು ಗವಿ ಕಂಡಿತು. ಅದರಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದ ಮುದಿ ಆಡು ಗವಿಯೊಳಗೆ ಹೋಯಿತು. ಹಠಾತ್ತನೇ ಗವಿಯೊಳಗೆ ವಾಸ ಮಾಡುತ್ತಿದ್ದ ಭಯಾನಕ ಸಿಂಹದೊಂದಿಗೆ ಮುದಿ ಆಡು ಮುಖಾಮುಖಿಯಾಯಿತು.
ಮುದಿ ಆಡು ಈಗ ಓಡಿ ಹೋಗುವಂತಿರಲಿಲ್ಲ; ಸಿಂಹದೊಂದಿಗೆ ಕಾದಾಡಲೂ ಸಾಧ್ಯವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮುದಿ ಆಡಿಗೆ ಒಂದು ಉಪಾಯ ಹೊಳೆಯಿತು.
ಸಿಂಹ ಬೆರಗಾಗಿ ನಿಂತು ಬಿಟ್ಟಿತ್ತು. ಯಾವುದೇ ಪ್ರಾಣಿಗೆ ಅದರ ಗುಹೆಯೊಳಗೆ ಕಾಲಿಡಲು ಧೈರ್ಯವಿರಲಿಲ್ಲ. ಆಡನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಸಿಂಹ ಕೇಳಿತು, "ಯಾರು ನೀನು? ಇಲ್ಲಿಗೆ ಯಾಕೆ ಬಂದಿದ್ದಿ?”
ಮುದಿ ಆಡು ಧೈರ್ಯದಿಂದ ಉತ್ತರಿಸಿತು, "ನಾನು ಕಾಡಿನ ಆಡುಗಳ ಮಹಾರಾಣಿ. ೫೦ ಚಿರತೆಗಳನ್ನು, ೨೦ ಆನೆಗಳನ್ನು ಮತ್ತು ೧೦ ಸಿಂಹಗಳನ್ನು ತಿನ್ನುತ್ತೇನೆಂದು ನಾನು ಶಪಥ ಮಾಡಿದ್ದೇನೆ. ಈ ವರೆಗೆ ೫೦ ಚಿರತೆಗಳನ್ನು ಮತ್ತು ೨೦ ಆನೆಗಳನ್ನು ತಿಂದಿದ್ದೇನೆ. ನನ್ನ ಶಪಥ ಪೂರೈಸಲಿಕ್ಕಾಗಿ ಈಗ ೧೦ ಸಿಂಹಗಳನ್ನು ಹುಡುಕುತ್ತಿದ್ದೇನೆ.”
ಇದನ್ನು ಕೇಳಿದ ಸಿಂಹ ಹೆದರಿ ಬಿಟ್ಟಿತು. ಯಾಕೆಂದರೆ, ಆಡು ಸತ್ಯ ಹೇಳುತ್ತಿದೆ ಎಂದು ಅದು ಯೋಚಿಸಿತು. "ನಾನು ಸಾಯುವ ಮುಂಚೆ ಸ್ನಾನ ಮಾಡಬೇಕಾಗಿದೆ” ಎಂದಿತು ಸಿಂಹ.
ಇದಕ್ಕೆ ಆಡು ಒಪ್ಪಿತು ಮತ್ತು ಸಿಂಹ ಬೇಗನೇ ಗವಿಯಿಂದ ಹೊರಗೆ ಬಂದು ಓಡಿತು. ಓಡುತ್ತಿದ್ದ ಸಿಂಹಕ್ಕೆ ನರಿಯೊಂದು ಎದುರಾಯಿತು. ಅದು ಸಿಂಹವನ್ನು ಮಾತನಾಡಿಸಿತು, “ಓ ಕಾಡಿನ ರಾಜನೇ, ಎಲ್ಲಿಗೆ ಓಡಿ ಹೋಗುತ್ತಿದ್ದಿ?”
ಸಿಂಹ ಹೀಗೆಂದು ಉತ್ತರಿಸಿತು, “ಇವತ್ತು ಕತ್ತಲಾಗುತ್ತಿದ್ದಂತೆ, ಆಡಿನಂತೆ ಕಾಣುವ ಪ್ರಾಣಿಯೊಂದು ನನ್ನ ಗವಿಯೊಳಗೆ ಬಂತು. ಈ ಪ್ರಾಣಿ ಸಿಂಹವನ್ನೂ ತಿನ್ನುತ್ತದೆಯಂತೆ. ನನ್ನ ಜೀವ ಉಳಿಸಿಕೊಳ್ಳಲು ಓಡುತ್ತಿದ್ದೇನೆ.”
ತಂತ್ರಗಾರ ನರಿ ನಕ್ಕು, ತನಗೆಲ್ಲ ಅರ್ಥವಾಯಿತೆಂದು ಹೇಳಿತು. "ನಾವು ಜೊತೆಯಾಗಿ ಗವಿಯೊಳಗೆ ಹೋಗಿ ಹಬ್ಬದೂಟ ಮಾಡೋಣ” ಎಂದು ಒತ್ತಾಯಿಸಿತು.
ಸಿಂಹ ಮತ್ತು ನರಿ ಒಟ್ಟಾಗಿ ಗವಿಯತ್ತ ಬರುವುದನ್ನು ನೋಡಿದ ಮುದಿ ಆಡಿಗೆ ಹೆದರಿಕೆಯಾಯಿತು. ಆದರೆ ಅದು ಎದೆಗುಂದಲಿಲ್ಲ. ತಕ್ಷಣವೇ ಅದು ನರಿಯನ್ನು ಉದ್ದೇಶಿಸಿ ವ್ಯಂಗ್ಯವಾಗಿ ಹೇಳಿತು, “ಎಲೇ ಅಯೋಗ್ಯ ನರಿ! ನಾನು ನಿನಗೆ ಹತ್ತು ಸಿಂಹಗಳನ್ನು ಕರೆತರಲು ಹೇಳಿದ್ದೆ. ಆದರೆ ನೀನು ಒಂದೇ ಒಂದು ಸಿಂಹವನ್ನು ಕರೆ ತಂದಿದ್ದೀಯಾ. ಅಲ್ಲೇ ನಿಲ್ಲ, ನಿನ್ನ ಅವಿಧೇಯತೆಗೆ ತಕ್ಕ ಶಿಕ್ಷೆ ಕೊಡುತ್ತೇನೆ.”
ಇದನ್ನು ಕೇಳಿದ ಸಿಂಹ, ತನಗೆ ನರಿ ಮೋಸ ಮಾಡಿದೆಯೆಂದು ಯೋಚಿಸಿತು. ಅದು ನರಿಯ ಮೇಲೆ ಜಿಗಿದು, ಅದನ್ನು ತುಂಡುತುಂಡಾಗಿ ಹರಿದು ಹಾಕಿತು. ಅನಂತರ ಹಿಂತಿರುಗಿ ನೋಡದೆ ಅಲ್ಲಿಂದ ಓಡಿ ಹೋಯಿತು.
ಆ ರಾತ್ರಿ ಮುದಿ ಆಡು ಗವಿಯಲ್ಲಿ ನೆಮ್ಮದಿಯಿಂದ ಮಲಗಿತು. ಅದರ ಧೈರ್ಯ ಮತ್ತು ಜಾಣ್ಮೆ ಅದನ್ನು ರಕ್ಷಿಸಿತ್ತು. ಬಡಪಾಯಿ ಸಿಂಹ ಕಾಡಿನಲ್ಲಿ ಅಲೆಡಾಡುತ್ತಾ ಇಡೀ ರಾತ್ರಿ ಕಳೆಯಬೇಕಾಯಿತು.
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಮಹಮ್ಮದ್ ಹನೀಫ್ ಖುರೇಷಿ