ಪುಟ್ಟ ಕಂದನ ನೆನಪಿನ ಡೈರಿ...

ಪುಟ್ಟ ಕಂದನ ನೆನಪಿನ ಡೈರಿ...

ನನಗೆ ಈ ಭೂಮಿಯ ಮೇಲೆ ನನ್ನ ಅಸ್ತಿತ್ವದ ಮೊದಲ  ನೆನಪಿರುವುದೇ ಅಮ್ಮನ ಸೆರಗಿನ ಒಳಗೆ ಸೇರಿ ಹಾಲು ಕುಡಿಯುತ್ತಿರುವಾಗ ಹೊರಗೆ ಚಾಚಿದ ನನ್ನ ಪಾದಗಳಿಗೆ ನನ್ನ ಅಕ್ಕ ಕಚಗುಳಿ ಇಟ್ಟಾಗ ನಾನು ಕಿಲಕಿಲ ನಗುತ್ತಾ, ಎರಡೂ ಕೈಗಳಿಂದ ಅಮ್ಮನ ಹೊಟ್ಟೆಯನ್ನು ಬಿಗಿಯಾಗಿ ಹಿಡಿದಾಗ ಬೆರಳ ಉಗುರು ತಾಗಿ ಅಮ್ಮನಿಗೆ ಸಣ್ಣಗೆ ನೋವಾದಾಗ  ನನ್ನ ಕೈಗೆ ಮೆತ್ತಗೆ ಹೊಡೆದು ಅಕ್ಕನಿಗೆ ‘ಏಯ್ ಸುಮ್ನೆ ಇರೆ ಹಾಲು ಮಗು ನೆತ್ತಿಗೇರಿಬಿಡುತ್ತದೆ’ ಎಂದದ್ದು. ನಾನು ಮೆತ್ತಗೆ ಸೆರಗು ಸರಿಸಿ ಅಕ್ಕನನ್ನು ನೋಡಿ ಮತ್ತೆ ನಕ್ಕಿದ್ದು....

ಒಂದು ಮಧ್ಯಾಹ್ನ ಹಾಸಿಗೆಯ ಮೇಲೆ ನನ್ನನ್ನು ಮಲಗಿಸಿ ಅಮ್ಮ ಅಡುಗೆ ಕೋಣೆಯಲ್ಲಿದ್ದರು. ಸ್ವಲ್ಪ ಸಮಯದ ನಂತರ ಏನೋ ಶಬ್ದವಾಗಿ ಬೆಚ್ಚಿ ಕಣ್ಣು ಬಿಟ್ಟೆ.  ಕಿಟಕಿಯಲ್ಲಿ ದಪ್ಪ ಮೀಸೆಯ ಬೆಕ್ಕೊಂದು ಮಿಯಾವ್ ಮಿಯಾವ್ ಎಂದು ಕಿರುಚುತ್ತಾ ನನ್ನನ್ನೇ ದುರುಗುಟ್ಟಿ ನೋಡಿತು. ‘ಅಮ್ಮಾ’ ಎಂದು ಕಿಟಾರನೆ ಕಿರುಚಿದೆ. ಆಗ ನನ್ನಲ್ಲಿ ಉಂಟಾದ ಭಯ ನಾಲ್ಕು ವರ್ಷಗಳಾದರು ಇನ್ನೂ ಹಸಿಹಸಿಯಾಗಿಯೇ ಇದೆ. ಈಗಲೂ ಅದು ನನ್ನ ಕನಸಿನಲ್ಲಿ ಬಂದು ಬೆಚ್ಚುತ್ತೇನೆ. ಹಾಸಿಗೆ ಒದ್ದೆ ಮಾಡುತ್ತೇನೆ.....

ಮೂರು ವರ್ಷದ ಹಿಂದೆ ಅಜ್ಜಿಯ ಶವವನ್ನು ಮನೆಯ ಮುಂಭಾಗ ಮಲಗಿಸಿ ಹೂವಿನ ಅಲಂಕಾರ ಮಾಡಿದ್ದರು. ನನಗೆ ಅಜ್ಜಿ ಸತ್ತಿದ್ದಾರೆ ಎಂದೇ ಗೊತ್ತಿರಲಿಲ್ಲ. ಏನೋ ಹಬ್ಬ ಇರಬೇಕು. ಅಜ್ಜಿಗೆ ಅಲಂಕಾರ ಮಾಡಿದ್ದಾರೆ ಎಂದೇ ಭಾವಿಸಿದ್ದೆ. ಆಗ ಅಲ್ಲಿಯೇ ಆಟವಾಡುತ್ತಿದ್ದೆ. ಆಗ ಅಕ್ಕ ನನ್ನನ್ನು ಹಿಡಿಯಲು ಅಟ್ಟಿಸಿಕೊಂಡು ಬಂದಳು. ನಾನು ಓಡುತ್ತಾ ಬಂದು ಅಜ್ಜಿಯ ಮೇಲೆ ಹೊದಿಸಿದ್ದ ಹೂವಿನ ಮೇಲೆ ಮಲಗಿ ಅಜ್ಜಿ ಅಜ್ಜಿ ನೋಡು ಅಕ್ಕ ಹೊಡಿತಾ ಇದಾಳೆ ಎಂದಾಗ ಅಲ್ಲಿದ್ದ ಎಲ್ಲರೂ ಅದು ಸಾವಿನ ಮನೆ ಎಂಬುದನ್ನು ಮರೆತು ನಕ್ಕು ನನ್ನನ್ನು ಬೇಗ ಅಲ್ಲಿಂದ ಎತ್ತಿಕೊಂಡು ಅಕ್ಕನಿಗೆ ಬೈದರು. ಅದು ನೆನಪಾದಾಗ ಈಗಲೂ ನಗುತ್ತೇನೆ, ಅಜ್ಜಿ ನೆನಪಾಗಿ ಅಳುವೂ ಬರುತ್ತದೆ.....

ಒಂದು ದಿನ ಇದ್ದಕ್ಕಿದ್ದಂತೆ ಬೆಳಗ್ಗೆ ಎದ್ದಾಗ ಏನೋ ಭಯ ನೋವು ಸಂಕಟ, ಹಾಸಿಗೆಯಿಂದ ಏಳಲು ಸಾಧ್ಯವಾಗುತ್ತಿಲ್ಲ. ಮೈಯಲ್ಲಾ ಬಿಸಿಯಾಗಿತ್ತು. ಅಳು ಬರುತ್ತಿತ್ತು. ಅಪ್ಪ ನನ್ನ ಹಣೆಯ ಮೇಲೆ ಕೈ ಇಟ್ಟು ನೋಡಿದರು. ಏನೋ ಅನಾಹುತ ಆದಂತೆ ಬೇಗ ರೆಡಿಯಾಗಿ ನನ್ನನ್ನು ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಅದಕ್ಕೆ ಮೊದಲು ಎಷ್ಟು ಬಾರಿ ಇಂಜೆಕ್ಷನ್ ಕೊಟ್ಟಿದ್ದರೋ ನೆನಪಿಲ್ಲ. ಈಗ ಮಾತ್ರ ತುಂಬಾ ಭಯವಾಯಿತು. ಜೋರಾಗಿ ಕಿರುಚಿದೆ. ಬೇಡ ಬೇಡ ಎಂದು ಕೇಳಿಕೊಂಡೆ. ಸಿಸ್ಟರ್ ಒಬ್ಬರು ಅಪ್ಪನನ್ನು ಆಚೆ ಕಳಿಸಿ ಕೈಕಾಲು ಹಿಡಿದರು. ಡಾಕ್ಟರ್ ಸೂಜಿ ಚುಚ್ಚಿದರು. ಆಗ ನನಗಾದ ನೋವಿನ ಅನುಭವ ಈಗಲೂ ಬೆಚ್ಚಿಬೀಳುಸುವಂತೆ ಕಾಡುತ್ತದೆ.

ನಮ್ಮ ಮನೆಯ ನಾಯಿ ಮರಿಯ ಜೊತೆ ಅಪ್ಪಿ ಮುದ್ದಾಡಿ ಆಟವಾಡುವುದರಲ್ಲಿ ನನಗೆ ಸಿಗುವ ಸುಖ ಮತ್ಯಾವುದರಲ್ಲೂ ಸಿಗುವುದಿಲ್ಲ. ಆಗ ಅಪ್ಪ ಯಾಕೋ ಸಿಡಿಮಿಡಿಗೊಳ್ಳುತ್ತಾರೆ. ನಾಯಿಯನ್ನು ಕಂಡರೆ ಅವರಿಗೆ ಆಗುವುದಿಲ್ಲ. ಅದನ್ನು ಗದರಿಸಿ ದೂರ ಸರಿಸಲು ಪ್ರಯತ್ನಿಸುತ್ತಾರೆ. ಅಮ್ಮನಿಗೆ ರೇಗುತ್ತಾರೆ. ನಾಯಿಯಿಂದ ಖಾಯಿಲೆಗಳು ಬರುತ್ತವೆ ಅದನ್ನು ಓಡಿಸು ಆಚೆ ಎನ್ನುತ್ತಾರೆ. ಒಂದೆರಡು ಬಾರಿ ಅದಕ್ಕಾಗಿ ನನ್ನನ್ನು ಹೊಡೆದಿದ್ದಾರೆ. ಆಗೆಲ್ಲಾ ಅಪ್ಪನ ಬಗ್ಗೆ ನನಗೆ ಭಯಂಕರ ಕೋಪ ಬರುತ್ತದೆ. ದೊಡ್ಡವನಾದ ಮೇಲೆ ಮನೆಯ ತುಂಬಾ ನಾಯಿಗಳನ್ನು ಸಾಕಬೇಕು ಎಂಬ ಆಸೆಯಾಗುತ್ತಿದೆ.....

ಮೊದಮೊದಲು ನನಗೆ ಶಾಲೆಗೆ ಹೋಗುವುದೆಂದರೆ ತುಂಬಾ ಹಿಂಸೆ - ಕಸಿವಿಸಿಯಾಗುತ್ತಿತ್ತು. ಮನೆಯಲ್ಲಿ ಸ್ವಚ್ಛಂದವಾಗಿ ಆಟವಾಡಲು ಮನಸ್ಸು ಬಯಸುತ್ತಿತ್ತು. ಬೆಳಗ್ಗೆ ಇನ್ನೂ ನಿದ್ರೆಯಲ್ಲಿರುವಾಗಲೇ ಎಚ್ಚರಿಸಿ ಸ್ನಾನ ಮಾಡಿಸಿ ಹಾಲು ಕುಡಿಸಿ ಅಜ್ಜನ ಜೊತೆ ಬ್ಯಾಗು ಕೊಟ್ಟು ಕಳಿಸುತ್ತಿದ್ದರು. ಪ್ರಾರಂಭದಲ್ಲಿ ಕೆಲವು ದಿನ ಹೋಗಲು ನಿರಾಕರಿಸಿದ್ದೆ. ಅಮ್ಮ ಹೊಡೆಯುತ್ತಿದ್ದರು. ಆಮೇಲೆ ಭಯದಿಂದ ಹೋಗುತ್ತಿದ್ದೆ. ಈಗ ಶಾಲೆಗೆ ಹೋಗಲು ಖುಷಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ನಾನೇ ರೆಡಿಯಾಗುತ್ತೇನೆ. 

ನನಗೆ ಯಾಕೋ ಬೋರ್ನವಿಟಾ ಹಾಕಿದ ಹಾಲು ಎಂದರೆ ವಾಕರಿಕೆ ಬರುತ್ತದೆ. ಕಾಫಿ ತುಂಬಾ ಇಷ್ಟ. ಆದರೆ ಅಮ್ಮ ಕೊಡುವುದಿಲ್ಲ. ಮನೆಯಲ್ಲಿ ಬೇರೆ ಎಲ್ಲರೂ ಕಾಫಿಯನ್ನೇ ಕುಡಿಯುತ್ತಾರೆ. ಚಿಪ್ಸ್, ಕುರ್ ಕುರೆ, ಚಾಕಲೇಟ್, ಐಸ್ ಕ್ರೀಂ ನನಗೆ ತುಂಬಾ ಇಷ್ಟ. ಅಪ್ಪ ಅದೆಲ್ಲಾ ಜಂಕ್ ಪುಡ್ ಒಳ್ಳೆಯದಲ್ಲ. ಮನೆಯಲ್ಲಿ ಮಾಡಿದ ಉಪ್ಪಿಟ್ಟು, ದೋಸೆ, ಇಡ್ಲಿ, ಪಲಾವ್, ಚಪಾತಿ ತಿನ್ನು  ಅದು ಒಳ್ಳೆಯದು ಎನ್ನುತ್ತಾರೆ. ಅದು ನನಗೆ ಸೇರುವುದೇ ಇಲ್ಲ. ಮನೆಗೆ ಯಾರಾದರೂ ಅಪ್ಪನ ಸ್ನೇಹಿತರು ಬಂದರೆ ನನಗೆ ಚಾಕಲೇಟ್ ಕೊಡಿಸುತ್ತಾರೆ. ಅದಕ್ಕಾಗಿ ಯಾವಾಗಲೂ ಕಾಯುತ್ತಿರುತ್ತೇನೆ. ಅವರು ಬಂದಾಗ ಅವರ ಕೈಯನ್ನೇ ನೋಡುತ್ತಿರುತ್ತೇನೆ. ಒಮ್ಮೊಮ್ಮೆ ಅವರು ಏನೂ ಕೊಡದೇ ಇದ್ದಾಗ ನಿರಾಸೆಯಾಗುತ್ತದೆ. ಅವರ ಬಗ್ಗೆ ಕೋಪವೂ ಬರುತ್ತದೆ.

ಅಪ್ಪನಿಗೆ ನಾನು ಚೆನ್ನಾಗಿ ಓದಿ ಮುಂದೆ ದೊಡ್ಡ ಸರ್ಕಾರಿ ಅಧಿಕಾರಿಯಾಗಬೇಕೆಂಬ ಆಸೆ, ಅಮ್ಮನಿಗೆ ನಾನು ಶ್ರೀಮಂತ ಬಿಸಿನೆಸ್ ಮನ್ ಆಗಿ ಜಾಸ್ತಿ ಹಣ ಮಾಡಬೇಕು ಎಂಬ ಆಸೆ, ಅಜ್ಜ ನಾನು ಕ್ರಿಕೆಟ್ ಆಟಗಾರ ಅಗಬೇಕು ಎನ್ನುತ್ತಾರೆ. ಈ ಬಗ್ಗೆ ಅವರು ಆಗಾಗ ಚರ್ಚೆ ಮಾಡುತ್ತಾರೆ. ನನಗೆ ಮಾತ್ರ ವಿಮಾನದ ಪೈಲಟ್ ಆಗಿ ವಿಮಾನವನ್ನು ತುಂಬಾ ಮೇಲೆ ಜೋರಾಗಿ ಓಡಿಸಬೇಕು. ಕೆಳಕ್ಕೆ ಇಳಿಸಲೇಬಾರದು ಎಂದು ಆಸೆಯಾಗುತ್ತಿದೆ.  

ನನಗೆ ತುಂಬಾ ನೋವು ಮತ್ತು ಕೋಪ ಬರುವುದು ಅಪ್ಪ ಅಮ್ಮ ಜಗಳವಾಡುವಾಗ. ಇಬ್ಬರೂ ಚೆನ್ನಾಗಿಯೇ ಇರುತ್ತಾರೆ. ಇದ್ದಕ್ಕಿದ್ದಂತೆ ಜಗಳ ಶುರುವಾಗುತ್ತದೆ. ಒಬ್ಬರಿಗೊಬ್ಬರು ಕೂಗಾಡುತ್ತಾ ಇರುತ್ತಾರೆ. ಸ್ವಲ್ಪ ಸಮಯದ ನಂತರ ಅಮ್ಮ ಅಳುತ್ತಾ ಕೋಣೆಯ ಒಳಗೆ ಸೇರುತ್ತಾರೆ. ಆಗ ಇಬ್ಬರೂ ನನ್ನನ್ನು ನಿರ್ಲಕ್ಷಿಸುತ್ತಾರೆ. ನನ್ನ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ. ಆಗ ನನಗೆ ತುಂಬಾ ಕೋಪ ಬರುತ್ತದೆ. ನಾನು ದೊಡ್ಡವನಾದ ಮೇಲೆ ಯಾರೊಂದಿಗೂ ಜಗಳವೇ ಆಡಬಾರದು ಎನಿಸುತ್ತದೆ. ಆಗೆಲ್ಲಾ ಅಜ್ಜನೇ ನನಗೆ ಊಟ ಮಾಡಿಸಿ ಮನೆಯಿಂದ ಆಚೆ ಕರೆದುಕೊಂಡು ಹೋಗಿ ಆಟವಾಡಿಸುತ್ತಾರೆ. ಮನೆಗೆ ಬರುವಷ್ಟರಲ್ಲಿ ಎಲ್ಲವೂ ಮರೆತಂತೆ ಆಗುತ್ತದೆ.

ಇತ್ತೀಚೆಗೆ ಏನೋ ಕೊರೋನಾ ಖಾಯಿಲೆ ಬಂದಿದೆಯಂತೆ. ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಮೊಬೈಲಿನಲ್ಲಿಯೇ ಶಾಲೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಅಪ್ಪ ಕೆಲಸಕ್ಕೆ ಹೋಗುತ್ತಿಲ್ಲ. ತುಂಬಾ ಕಷ್ಟ ಬಂದಂತೆ ಮಂಕಾಗಿದ್ದಾರೆ. ಯಾವುದರಲ್ಲೂ ಉತ್ಸಾಹವಿಲ್ಲ. ಅಮ್ಮ ಈಗ ಪ್ರೀತಿಯಿಂದ ಅವರಿಗೆ ಧೈರ್ಯ ಹೇಳುತ್ತಿದ್ದಾರೆ. ಅಜ್ಜ ಸಮಾಧಾನ ಮಾಡುತ್ತಿದ್ದಾರೆ. ಹಳ್ಳಿಯ ಯಾವುದೋ ಜಮೀನು ಮಾರಾಟ ಮಾಡುವ ಬಗ್ಗೆ ಮಾತನಾಡುತ್ತಿರುತ್ತಾರೆ.

ನಾನು ಬೇಗ ಬೆಳೆದು ದೊಡ್ಡವನಾಗಿ ದುಡ್ಡು ಸಂಪಾದನೆ ಮಾಡಿ ಅಪ್ಪನ ಕಷ್ಟ ಪರಿಹರಿಸಬೇಕು ಎಂದು ಆಸೆಯಾಗುತ್ತಿದೆ. 

ಈಗ ಎಲ್ಲರೂ ಕೊರೋನಾ ಭಯದಿಂದ ಮೂಗು ಬಾಯಿ ಮುಚ್ಚಿಕೊಂಡು ಇರುತ್ತಾರೆ. ಯಾವ ನೆಂಟರು, ಅಪ್ಪ ಅಮ್ಮನ ಫ್ರೆಂಡ್ಸ್ ಸಹ ಮನೆಗೆ ಬರುವುದಿಲ್ಲ.  ಒಂಥರಾ ಎಲ್ಲಾ ಖಾಲಿ ಖಾಲಿ. ಏನೋ ಅನಾಹುತ ಆಗಬಹುದು ಎಂದು ಭಯವಾಗುತ್ತಿದೆ. ಕನಸಿನಲ್ಲಿ ಬರೇ ಕೆಟ್ಟ ವಿಷಯಗಳೇ ಬರುತ್ತದೆ. ಆಡಲು ಮನೆಯಿಂದ ಹೊರಗೆ ಹೋಗುವಂತಿಲ್ಲ. ಶಾಲೆಯೂ ಇಲ್ಲ, ಮೈದಾನವೂ ಇಲ್ಲ. ಏನೋ ಬೇಸರ. 

ಈಗ ಇಷ್ಟು ಸಾಕು. ಹೇಳಲು ಇನ್ನೂ ಜಾಸ್ತಿ ಇದೆ. ಈಗ ನೆನಪಾಗುತ್ತಿಲ್ಲ. ವಿವೇಕ್ ಅಂಕಲ್ ಮತ್ತೆ ಮನೆಗೆ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಅವರು ಅದನ್ನು ಬರೆದು ನಿಮಗೆ ಹೇಳುತ್ತಾರೆ. ಬಾಯ್ ಬಾಯ್.....

(ಆರು ವರ್ಷದ ಪುಣಾಣಿಯ ಸ್ವಗತ)

  • ಜ್ಞಾನ ಭಿಕ್ಷಾ ಪಾದಯಾತ್ರೆಯ 237 ನೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಿಂದ ಸುಮಾರು 8 ಕಿಲೋಮೀಟರ್ ದೂರದ ಮೆಟಕುರ್ಕಿ ಗ್ರಾಮ ತಲುಪಿತು. ಅಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹವಿದು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಮಾಸ್ಟರ್ ಹವಿಕ್ಷ್, ಕುಂಪಲ