"ಪುಟ್ಟ ತಮ್ಮನ ಕಗ್ಗ” - ಬದುಕಿನ ದಾರಿದೀಪ

"ಪುಟ್ಟ ತಮ್ಮನ ಕಗ್ಗ” - ಬದುಕಿನ ದಾರಿದೀಪ

ಅನಂತ ಭಟ್ ಪೊಳಲಿ ಅವರ “ಪುಟ್ಟ ತಮ್ಮನ ಕಗ್ಗ” ಬದುಕಿಗೆ ದಾರಿದೀಪದಂತಿರುವ 201 ಮುಕ್ತಕಗಳ ಸಂಕಲನ. (ಪ್ರಕಾಶಕರು: ಕಲ್ಕೂರ ಪ್ರಕಾಶನ, ಶ್ರೀಕೃಷ್ಣ ಕಾಂಪ್ಲೆಕ್ಸ್, ಮಹಾತ್ಮ ಗಾಂಧಿ ರಸ್ತೆ, ಮಂಗಳೂರು 575003). ಇದರ ಪರಿಚಯವನ್ನು ಇವತ್ತು "ಪುಸ್ತಕ ಪರಿಚಯ” ವಿಭಾಗದಲ್ಲಿ ಪ್ರಕಟಿಸಿದ್ದೇನೆ. ಅದರೊಂದಿಗೆ ಆಯ್ದ 10 ಮುಕ್ತಕಗಳೂ ಅಲ್ಲಿವೆ.

ಇವೆಲ್ಲವೂ ಅವರ ಜೀವನಾನುಭವದಿಂದ ಭಟ್ಟಿಯಿಳಿಸಿದ, ಅಧ್ಯಾಪನ ವೃತ್ತಿ ಮತ್ತು ಪೌರೋಹಿತ್ಯದ ಸಾಧನೆಯ ಬೆಂಕಿಯಲ್ಲಿ ಸಂಸ್ಕರಿಸಿದ ಅಪ್ಪಟ ಬಂಗಾರದ ಪದ್ಯಗಳು. ಅದರಿಂದ ಆಯ್ದ ಇನ್ನೂ 11 ಮುಕ್ತಕಗಳು ಇಲ್ಲಿವೆ:

ಹಣವ ಗಳಿಸುವುದೊಂದೆ ಜೀವನದ ಗುರಿಯೆಂದು
ಎಣಿಸದಿರು; ಅದೆ ನಿನ್ನ ಪತನಕ್ಕೆ ಮೂಲ /
ಹಣದಾಸೆಯನು ಬಿಟ್ಟು ಸರಳ ಜೀವನ ನಡೆಸು
ಗುಣಕೆ ಮತ್ಸರವಿಲ್ಲ! - ಪುಟ್ಟ ತಮ್ಮ           (48)

ನದಿಯೊಂದು ಬೆಟ್ಟದಲಿ ಹುಟ್ಟಿ ಹೇಗೋ ಹರಿದು
ಅದರ ಗುರಿಯಾದ ಸಾಗರವ ಸೇರುವುದು
ಅದರಂತೆ ಬದುಕಿನಲಿ ಧ್ಯೇಯವೊಂದಿರಬೇಕು
ಕಠಿಣ ಸಾಧನೆ ಮುಖ್ಯ - ಪುಟ್ಟ ತಮ್ಮ           (52)

ಜೀವನದಿ ಕಷ್ಟಗಳು ಬಂದಾಗ ಹೆದರದಿರು, ಅವು
ಜೀವನವ ರೂಪಿಸುವ ಕೊಡಲಿಯೇಟುಗಳು
ಸಾವಿರದ ಉಳಿಯ ಪೆಟ್ಟುಗಳಿಂದ ಕಲ್ಲೊಂದು
ದೇವರಾಗುವುದು ತಿಳಿ - ಪುಟ್ಟ ತಮ್ಮ           (64)

ಧೈರ್ಯ, ಕ್ಷಮೆ, ದಯೆ, ಶುಚಿಯು ಅಸ್ತೇಯ ಅಕ್ರೋಧ
ವಿದ್ಯೆ, ಬುದ್ಧಿಯು, ಇಂದ್ರಿಯಗಳ ನಿಗ್ರಹವು
ಸತ್ಯವನು ನುಡಿಯುವುದು ಈ ಹತ್ತು ಗುಣಗಳಿವು
ಧರ್ಮದಾ ಲಕ್ಷಣವು - ಪುಟ್ಟ ತಮ್ಮ          (69)

ನಾನೇನೂ ಸಾಧನೆಯ ಮಾಡಿಲ್ಲ, ಮುಂದಕ್ಕೆ
ಸಾಧಿಸುವುದೆಷ್ಟೆಷ್ಟೋ ಇದೆಯೆಂದು ತಿಳಿದು
ಸಾಧಿಸುತ ಸಾಗಿದರೆ ನಿನಗೆ ನೀ ತಿಳಿಯದೆಯೆ
ಸಾಧನೆಯ ವ್ಯಕ್ತಿಯಾಗುವೆ - ಪುಟ್ಟ ತಮ್ಮ         (74)

ಎಂದೆಂದಿಗು ನಿನ್ನ ಬೆಳೆಸಿ ಮುನ್ನಡೆಸಿರುವ
ತಂದೆ ತಾಯಿಗಳನ್ನು ದೂರ ಮಾಡದಿರು /
ಅಟ್ಟವೇರಲು ಬಳಸಿದೇಣಿಯನು ಕೋಪದಿ
ಒದ್ದು ಒಗೆದಂತೆ ತಿಳಿ - ಪುಟ್ಟ ತಮ್ಮ           (81)

ಸತ್ಯದಾ ಬೆಳಕಿನಲಿ ಅಸತ್ಯವನು ತೊರೆಯುತ್ತ
ಕತ್ತಲಿನ ಕಡೆಯಿಂದ ಬೆಳಕಿನೆಡೆ ಸಾಗು!
ಮೃತ್ಯುವನು ತೊರೆದು ಅಮೃತತ್ವವನು ಪಡೆಯುತ್ತ
ಉತ್ತಮೋತ್ತಮನಾಗು - ಪುಟ್ಟ ತಮ್ಮ           (84)

ಕರ್ಮವನು ಮಾಡಲಷ್ಟೇ ನಿನಗೆ ಅಧಿಕಾರ /
ಸುಮ್ಮನಿರು ಫಲದ ಗೊಡವೆಯು ನಿನಗೆ ಬೇಡ!
ಮರ್ಮವಿದ ತಿಳಿಯದಯ್ಯೋ! ಇದೇನಿದು? ನನ್ನ
ಕರ್ಮ! ಎಂದಳಬೇಡ - ಪುಟ್ಟ ತಮ್ಮ           (88)

ಬದುಕೆಂಬ ದೋಣಿಯಲಿ “ಹಾಯಿ"ಯಾಗುತ ಸಾಗು
ವಿಧವಿಧದ ಕಷ್ಟಗಳು ಸುರಿಯೆ, ಕಲ್ಲಾಗು /
ಮದುವೆ, ಮನೆ, ಸಂಸಾರಿ ಏನಾದರೂ ಆಗು
ಮೊದಲು ಮಾನವನಾಗು - ಪುಟ್ಟ ತಮ್ಮ        (107)

ನಡೆಯ ಕಲಿಯಲು ಬೇಕೆ? ಸನ್ಮಾರ್ಗದಲ್ಲಿ ನಡೆ!
ನುಡಿಯ ಕಲಿಯಲು ಬೇಕೆ? ಸತ್ಯವನೆ ನುಡಿಯೋ
ಬಿಡಲು ಕಲಿಯಲು ಬೇಕೆ? ದುರ್ಗುಣಗಳನ್ನು ಬಿಡು
ಇತರ ಕಲಿಕೆಯದೇಕೆ? - ಪುಟ್ಟ ತಮ್ಮ           (165)

ಹೂವು ಬಾಡುವ ತೆರದಿ, ದೀಪ ಆರುವ ತೆರದಿ
ಆಯುಷ್ಯ ಮುಗಿದಾಗ ತನ್ನಿಂದ ತಾನೇ   
ನಾವು ನೀವುಗಳೆಂಬ ಸಂಬಂಧಗಳ ಬಿಟ್ಟು
ಜೀವವಿದು ತೆರಳುವುದು - ಪುಟ್ಟ ತಮ್ಮ           (201)