ಪುಟ್ಟ ಹೆಜ್ಜೆ ದೊಡ್ಡ ಕಣ್ಣು

ಪುಟ್ಟ ಹೆಜ್ಜೆ ದೊಡ್ಡ ಕಣ್ಣು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಿಯಾ ಕೆರ್ವಾಶೆ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೨

ಬರಹಗಾರ್ತಿ, ಪತ್ರಕರ್ತೆ ಪ್ರಿಯಾ ಕೆರ್ವಾಶೆ ತಮ್ಮ ಬಾಲ್ಯದ ನೆನಪುಗಳನ್ನು ‘ಪುಟ್ಟ ಹೆಜ್ಜೆ ದೊಡ್ಡ ಕಣ್ಣು’ ಪುಸ್ತದ ಮೂಲಕ ಹರಡಿದ್ದಾರೆ. ಈ ಕೃತಿಯಲ್ಲಿ ಬಹು ಮುಖ್ಯವಾಗಿ ತುಳುನಾಡಿನಲ್ಲಿ ನಡೆಯುವ ಭೂತದ ಆರಾಧನೆ,ಭೂತ, ಗುಳಿಗ ಮೊದಲಾದುವುಗಳ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಬರೆದು ‘ಇದು ಭೂತ ಕಾಲ’ ಎಂದು ನಿವೇದಿಸಿದ್ದಾರೆ. ಈ ಕೃತಿಗೆ ಸುಂದರವಾದ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ ಜೋಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಬರಹದ ಕೆಲವು ಸಾಲುಗಳು ಇಲ್ಲಿವೆ…

“ಅಪ್ಪನೊಂದಿಗೆ ಮಗಳು ಆಡುವ ಮಾತುಕತೆ ಎಂಬಂತೆ ನಿರೂಪಿತವಾಗಿರುವ ಈ ಬರಹಗಳು ಚಳಿಗಾಲದ ಮುಂಜಾನೆಯ ಮಂಜು ಹೊದ್ದುಕೊಂಡ ಹುಲ್ಲಿನ ಗರಿಗಳಂತೆ ತಾಜಾ ಆಗಿವೆ. ನಿರೂಪಣೆಯ ಕ್ರಮ, ಯೋಚಿಸುವ ರೀತಿ, ಒಪ್ಪಿತ ಅನುಮಾನ ಮತ್ತು ಸಂಶಯ ಸಹಿತ ಮೆಚ್ಚುಗೆ, ಅರಿವು ಮತ್ತು ಕುತೂಹಲ ಬೆರೆತ ಸ್ವೀಕಾರ -ಈ ಬರಹವನ್ನು ಮುನ್ನಡೆಸುತ್ತಾ ಹೋಗಿದೆ. 

ಇದೊಂದು ಬದುಕನ್ನು ಬಗೆಯುತ್ತಾ ಹೋಗುವ ಶೈಲಿ ಕೂಡ. ಬೆರಗನ್ನು ಕಳೆದುಕೊಳ್ಳುತ್ತಲೇ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಯಾವಾಗ ಪ್ರಶ್ನೆಗಳಿಗೆ ನಮಗೆ ಉತ್ತರ ಗೊತ್ತಿರುವುದಿಲ್ಲವೋ ಆಗ ಕತೆಗಳು ಹುಟ್ಟುತ್ತವೆ ಎನ್ನುವುದನ್ನು ಇಲ್ಲಿಯ ಮಾತುಕತೆಗಳು ಸೂಚಿಸುತ್ತವೆ. ಮಗಳು ಕೇಳುವ ಪ್ರಶ್ನೆ, ಅಪ್ಪ ಕೊಡುವ ಉತ್ತರ, ಪ್ರಕೃತಿ ಕೊಡುವ ಉತ್ತರ, ಮಗಳೇ ಕಂಡುಕೊಳ್ಳುವ ಉತ್ತರ, ಪ್ರಶ್ನೆಯನ್ನು ಪ್ರಶ್ನೆಯಾಗಿಯೇ ಇರಿಸಿಕೊಳ್ಳುವುದರಲ್ಲಿ ಇರುವ ಗಮ್ಮತ್ತು, ಗೊತ್ತಿಲ್ಲ ಎನ್ನುವುದರಲ್ಲಿರುವ ವಿಸ್ಮಯ ಸಂಕಟ - ಇವೆಲ್ಲವನ್ನೂ ಪ್ರಿಯಾ ಒಂದಿಷ್ಟೂ ಬಗ್ಗಡವಾಗಿಸದೇ ಬರೆಯುತಾ ಹೋಗಿದ್ದಾರೆ. 

ಯಾವ ತೋರಿಕೆಯೂ ಇಲ್ಲದ, ತಾರ್ಕಿಕ ಬೆಂಬಲವೂ ಇಲ್ಲದ, ಇವತ್ತು ನಾಳೆಯಾಗುವಷ್ಟೇ ಸಹಜವಾಗಿ ಓದಿಸಿಕೊಂಡು ಹೋಗುವ ಈ ಬರಹಗಳ ಗುಚ್ಛವನ್ನು ನಾನು ಪ್ರೀತಿಸಲು ಆರಂಭಿಸಿದ್ದೇನೆ. ನೀವೂ ಪ್ರೀತಿಸುತ್ತೀರಿ ಎಂಬ ನಂಬಿಕೆ ನನಗಿದೆ.”

ಪುಸ್ತಕದ ‘ನನ್ನ ಮಾತು’ ನಲ್ಲಿ ಲೇಖಕಿ ಪ್ರಿಯಾ ಕೆರ್ವಾಶೆ “ನಿಗೂಢತೆ ನನಗೆ ಬಹಳ ಪ್ರಿಯವಾದದ್ದು. ಅಸ್ಪಷ್ಟತೆ ಸದಾ ಕಾಡುವಂಥದ್ದು. ಗೊತ್ತು ಗುರಿಯಿಲ್ಲದ ಅಲೆಮಾರಿತನ ಹುಟ್ಟುಗುಣ. ‘ನಿನ್ನ ಕಾಲಲ್ಲಿ ನಾಯಿ ಗೆರೆ ಉಂಟು. ತಿರುಗಾಡಿ !’ ನನ್ನಿಷ್ಟದ ಬೈಗುಳ. ಬುದ್ಧಿ ಕಣ್ಣು ಬಿಡುವ ಮೊದಲೇ ಆವರಿಸಿದ್ದು ದೈವದ ಕತೆಗಳು. ದೈವ ಅಂತ ಕರೆಸಿಕೊಳ್ಳುವ ನಮ್ಮೂರ ಭೂತಗಳು ಒಂದೋ ಕಾಯುತ್ತವೆ. ಇಲ್ಲಾ ಕಾಡುತ್ತವೆ. ಈ ಕಾಯುವ, ಕಾಡುವ ಭೂತಗಳ ಬಗ್ಗೆ ನಮ್ಮೂರ ನೂರು ಜನ ನೂರು ಕತೆ ಹೇಳ್ತಾರೆ. ಹಾಗೆ ಹೇಳುವಾಗ ಅವರ ಭಾವ ಭಂಗಿಯಲ್ಲಿ ಭೂತವೇ ಆವಾಹನೆ ಆದ ಹಾಗೆ ಕಾಣುವುದೂ ಉಂಟು. ಬಹಳ ಚಿಕ್ಕವಳಿದ್ದಾಗ ನಡೆದ ಒಂದು ಘಟನೆ ಈ ಪುಸ್ತಕ ಬರೆಯಲು ಪ್ರೇರಣೆ.

ಮನೆಯಲ್ಲಿ ಭೂತಕೋಲ ನಡೆಯುತ್ತಿದ್ದ ಒಂದು ಮುಂಜಾವ. ನಂಬರ್ ಟೂ ಗೆ ಅರ್ಜೆಂಟ್ ಆದ ಕಾರಣ ಮನೆ ಎದುರಿನ ಗುಡ್ಡೆಗೆ ಓಡಿದ್ದೆ. (ಆಗ ಮನೆಯಲ್ಲಿ ಟಾಯ್ಲೆಟ್ ಇರಲಿಲ್ಲ) ಮನೆಯಿಂದ ಕೇಳಿ ಬರುತ್ತಿದ್ದ ಭೂತದ ಅಬ್ಬರಕ್ಕೆ ಸಣ್ಣಗೆ ಹೆದರಿಕೆಯೂ ಆಗುತ್ತಿತ್ತು. ಬೇಗ ಬೇಗ ಕೆಲಸ ಮುಗಿಸಿ ಬಟ್ಟೆ ಎತ್ತಿಕೊಂಡು ಗುಡ್ಡೆಯಿಂದ ಮೆಟ್ಟಲಿಳಿಯುತ್ತಾ ಬರುತ್ತಿದ್ದೆ. ಎದುರಿಗೆ ಯಾರೋ ನಿಂತ ಹಾಗಾಯ್ತು. ಕೆಳಗೆ ನೋಡಿದೆ, ಗುಳಿಗ ಭೂತ ನನ್ನನ್ನೇ ಕೆಕ್ಕರಿಸಿ ನೋಡುತ್ತಾ ನಿಂತಿತ್ತು ! ಪುಣ್ಯಕ್ಕೆ ಗುಡ್ಡೆಯಲ್ಲಿ ಒಂದು ಎರಡು ಮುಗಿಸಿದ್ದೆ. ಇಲ್ಲದಿದ್ದರೆ ಆ ಭಯಕ್ಕೆ ಎಲ್ಲವೂ ನಿಂತಲ್ಲೇ ಆಗಿ ಬಿಡುತ್ತಿತ್ತು. ಭೂತ ಆವೇಶದಲ್ಲಿ ನಡುಗುತ್ತಿದ್ದರೆ, ನಾನು ಭಯದಲ್ಲಿ ನಡುಗುತ್ತಿದ್ದೆ.

ಅಪ್ಪ ಈಗಲೂ ಈ ಘಟನೆ ಹೇಳಿ ನಗ್ತಾರೆ. ಅಪ್ಪನ ನೆರಳಿನಲ್ಲಿ ಕಳೆದ ಅವರೇ ಪ್ರೀತಿಯಿಂದ ಮುನ್ನಡೆಸಿದ ದಿನಗಳವು. ನಾನು ಹಿಡಿಯಲೆಂದೇ ತುಸು ಡೊಂಕಾಗಿದ್ದ ಅಪ್ಪನ ಕಿರಿ ಬೆರಳು. ಆ ಬೆರಳು ಹಿಡಿದು ಗುಡ್ಡೆ ಗುಡ್ಡೆ ಅಲೆಯುತ್ತಿದ್ದಾಗ, ಮುಸ್ಸಂಜೆ ದೂರದ ಅರಬ್ಬೀ ಸಮುದ್ರದಲ್ಲಿ ಸೂರ್ಯ ಮುಳುಗುವಾಗ ಅವರು ಹೇಳಿದ ಕತೆ, ಸಂಗತಿಗಳೆಲ್ಲ ಈ ಪುಸ್ತಕ ತುಂಬಿವೆ. ಹೀಗಾಗಿ ಈ ಪುಸ್ತಕ ಅಪ್ಪನಿಗೆ ಅರ್ಪಣೆ.” ಎಂದು ತಮ್ಮ ಬಾಲ್ಯದ ಅನುಭವಗಳನ್ನು ಬರೆದಿದ್ದಾರೆ.

ಈ ಕೃತಿಯಲ್ಲಿ ೧೮ ಪುಟ್ಟ ಪುಟ್ಟ ಅಧ್ಯಾಯಗಳಿವೆ. ಎಲ್ಲವೂ ‘ಭೂತ’ ಕ್ಕೇ ಸೇರಿದ್ದು. ಅದರಲ್ಲಿ ಒಂದು ಅಧ್ಯಾಯ ‘ಅತ್ತೆ, ನನಗೆ ಬೊಂಡ ಇಲ್ವಾ?’ ಎನ್ನುವುದು. 

“ಅಪ್ಪ ಭೂತ ಅಂದ್ರೆ ಎಂತ..?

ಅಜ್ಜಾ ನಾನೂ ಪಾತ್ರಿ ಆಗಬಹುದಾ!

ಭೂತಕ್ಕೆ ಅತ್ತೆ ಮಾಡಿದ ಸಾಂಬಾರು ಕೊಟ್ಟರೆ ಆಗೋದಿಲ್ವಾ!

ಕಾಗೆ ಮುಟ್ಟಿದರೆ ಅಮ್ಮ ಯಾಕೆ ಬರಬಾರದು?

ಕರ್ಣ ನಿನ್ನನ್ನ ಕಾಗೆ ಎಂದಾದರೂ ಮುಟ್ಟಿತ್ತಾ?

ಅಪ್ಪಾ ಆಕಾಶದ ತುದಿಗೆ ಹೋಗ್ಬೇಕು! ಆಕ್ತದಾ?

ಅಪ್ಪ! ಭೂತ ಅತ್ತೆಗೆ ಮಕ್ಕಳಾಗ್ತದೆ ಅಂತ ಬೊಂಡ ಕೊಟ್ಟಿತ್ತಲ್ವಾ? ಬೊಂಡ ಕುಡಿದರೆ ಮಕ್ಕಳಾಗತಾರ!

ಅಂತನ್ನುವ ಹತ್ತಾರು ಬೆರಗಿನ ಪ್ರಶ್ನೆಗಳ ಜೊತೆಗೆ ಈ ಪುಸ್ತಕದಲ್ಲಿ  ವರ್ಗ ಸಂಘರ್ಷವಿದೆ, ತಾರತಮ್ಯದ ಕುರಿತ ಧ್ವನಿಯಿದೆ, ಮುಟ್ಟು, ಮಡಿ ಮೈಲಿಗೆ, ಬಂಡಾಯವು ಇದೆ.. ಭೀತಿ,ಕೌತುಕ, ಬೆರಗಿನ ಜೊತೆ ಇಹದಷ್ಟೇ ದಿಟವೆನಿಸುವ ಅಲೌಕಿಕ ಅನುಭಾವದ ಮಿಂಚಿನ ಸಂಚಾರವು ಇದೆ. ಇವೆಲ್ಲವುದರ ಜೊತೆಗೆ  ಒಟ್ಟೂ ನಿರೂಪಣೆಯಲ್ಲಿ ಇನ್ನೂ ಕಾಪಿಟ್ಟು ಕೊಂಡ ಮುಗ್ಧತೆ ಇದೆ. ಅದೇ ನನಗೆ ಇನ್ನೂ ಬೆರಗಿನಲ್ಲಿ ಇರಿಸಿರೋದು! ಕಾರಣ ಪತ್ರಕರ್ತೆ, ನಟಿ, ಕಂಠದಾನ ಕಲಾವಿದೆಯಾದ ಪ್ರಿಯಾ ಕೆರ್ವಾಶೆ ಸುದ್ದಿ ಮನೆಯ ನಿತ್ಯದ ನೂರಾರು ವಿದ್ಯಮಾನಗಳ ಕಡು ಬಿಸಿಲಿನ ಸಂತೆಯಲ್ಲೇ ಕುಳಿತು ಈ ಸ್ವಾರಸ್ಯಕರವಾದ ಕೃತಿಯನ್ನು ಹೊರತಂದಿದ್ದಾರೆ.

ಇನ್ನು ಈ ಪುಸ್ತಕ.. ಗುಡ್ಡಮ್ಮನ ಮನೆ, ಬೊಳ್ಳ, ಗುಳಿಗನ ಕಣ್ಣು, ಕಾಗೆ ಮುಟ್ಟಿದ ಅಮ್ಮ, ಸಂಕಪ್ಪ ಮತ್ತು ಗರ್ನಾಲು, ಕಳಂಜೆ ಮಲೆಯಲ್ಲಿ ಭೂತದ ಸೂಟೆ.. ಅಂತನ್ನುವ ೧೮ ಕಥನಗಳ ಅನುಭವ ಗುಚ್ಛವನ್ನು ಹೊಂದಿದ್ದು, ತೋಟ, ಕಾಡು, ತೋಡು ಸೂಡಿ, ನೇಮ, ಗಗ್ಗರ, ದೈವದ ಹಿನ್ನೆಲೆಯಲ್ಲಿ  ಒಬ್ಬ ಪುಟ್ಟ ಹುಡುಗಿ  ತನ್ನ ತಂದೆ, ತಾಯಿ, ಅಜ್ಜ ಅಜ್ಜಿ, ಚಿಕ್ಕಮ್ಮ… ಸಾಕು ನಾಯಿಗಳ ಜೊತೆಯ ಒಡನಾಟದ ಪ್ರಸಂಗಗಳನ್ನ ಬಿಚ್ಚಿಡುತ್ತದೆ. ಜೊತೆಗೆ ಇಲ್ಲಿಯ ಪ್ರಸಂಗಗಳಲ್ಲಿ ದೈವ ಮೂರು ಮುಕ್ಕಾಲು ಗಳಿಗೆ ಪಾತ್ರಿಯಲ್ಲಿ ಪರಕಾಯ ಪ್ರವೇಶಿಸುವದಷ್ಟೇ ಅಲ್ಲ ಸ್ವತಃ ಆ ಬಾಲಕಿಯ ಒಡನಾಟಕ್ಕೆ ಅದೃಶ್ಯವಾಗಿಯೇ ದಕ್ಕಿ ಹೋಗತ್ತೆ…!

“ಭೂತ ಸ್ಥಾನದ ಜೋಕಾಲಿ ಕುಳಿತುಕೊಳ್ಳುವವರಿಲ್ಲದೆ ಸುಮ್ಮನೆ ನಿಂತಿತ್ತು.. ಹಿಂದಕ್ಕೆ ನೆಗೆದೆ ಯಾರೋ ಎಳೆದು ಜೋಕಾಲಿಯಲ್ಲಿ ಕೂರಿಸಿದಂತಾಯ್ತು…” ಆದರೆ ಆ ಅನುಭವವನ್ನೂ ಗಿಡ ಹೂ ಬಿಡುವಷ್ಟೇ ಸಹಜವಾಗಿಸಿದ್ದಾರೆ ಪ್ರಿಯಾ ಕೆರ್ವಾಶೆ. ಸುಮಾರು ೧೧೦ ಪುಟಗಳ ಈ ಪುಟ್ಟ ಕೃತಿಯನ್ನು ಓದುತ್ತಾ ಇದ್ದಂತೆ ಹಲವರಿಗೆ ತಮ್ಮ ಬಾಲ್ಯದ ನೆನಪುಗಳ ಕಾಡುವ ಸಾಧ್ಯತೆ ಹೆಚ್ಚು.