ಪುರಾಣ ಪ್ರಸಿದ್ಧ ಹಕ್ಕಿ - ಗರುಡ
ಹಕ್ಕಿ ಕಥೆಯ ಇನ್ನೊಂದು ಸಂಚಿಕೆಗೆ ಸ್ವಾಗತ. ಇವತ್ತು ಒಂದು ಹೊಸ ಹಕ್ಕಿಯ ಪರಿಚಯ ಪರಿಚಯ ಮಾಡಿಕೊಳ್ಳೋಣ. ಇದ್ಯಾವ ಹೊಸ ಹಕ್ಕಿ, ಇದನ್ನು ನಾವು ದಿನವೂ ನೋಡ್ತೇವೆ ಅಂತ ನೀವೆಲ್ಲಾ ಹೇಳಬಹುದು. ಆಕಾಶದಲ್ಲಿ ರೆಕ್ಕೆ ಬಡಿಯದೇ, ಕೇವಲ ಬಿಡಿಸಿ ಇಟ್ಟುಕೊಂಡು ಗಾಳಿಪಟದ ಹಾಗೆ ಹಾರಾಡ್ತಾ ಇರ್ತದೆ. ಹಾಗಾಗಿಯೇ ಈ ಹಕ್ಕಿಯ ಇಂಗ್ಲೀಷ್ ಹೆಸರು ಗಾಳಿಪಟ ಅಂದರೆ KITE.
ಈ ಹಕ್ಕಿಯನ್ನು ನಾವು ತಕ್ಷಣ ಗುರುತು ಹಿಡಿಯುವುದು ಇದರ ತಲೆ, ಎದೆಯಮೇಲೆ ಮತ್ತು ಹೊಟ್ಟೆಯವರೆಗೂ ಕಾಣುವ ಬಿಳೀ ಬಣ್ಣ ದಿಂದ. ನಿಮ್ಮ ಮನೆಯಲ್ಲಿ ದೇವರ ಫೋಟೋ ಇದ್ರೆ ಸ್ವಲ್ಪ ನೋಡಿ, ಈ ಹಕ್ಕಿ ಎಲ್ಲಾದ್ರೂ ಕಾಣಲಿಕ್ಕೆ ಸಿಗಬಹುದು. ಅಥವಾ ನಿಮ್ಮ ಹತ್ತಿರ ಪೌರಾಣಿಕ ಚಿತ್ರಕಥೆಗಳ ಪುಸ್ತಕ ಇದ್ದರೂ ನೀವು ಈ ಹಕ್ಕಿಯನ್ನು ನೋಡಿರಬಹುದು. ಹೌದು, ನಮ್ಮ ಪುರಾಣಗಳಲ್ಲಿ ಬರುವ ಮಹಾವಿಷ್ಣು ಎಂಬ ದೇವರ ವಾಹನ ಗರುಡ ಅಂತ ಇದನ್ನು ಕರೀತಾರೆ.
ಕೇಸರಿ ಮಿಶ್ರಿತ ಕಂದು ಬಣ್ಣದ ದೇಹ, ತಲೆಯಿಂದ ಎದೆಯವರೆಗೂ ವಿಸ್ತರಿಸಿರುವ ಬಿಳೀ ಬಣ್ಣ, ಮನೆಯಲ್ಲಿ ಸಾಕುವ ಹುಂಜದಷ್ಟು ದೊಡ್ಡ ಹಕ್ಕಿ. ನೀರಿನ ಮೂಲಗಳಾದ ಕೆರೆ, ಹಳ್ಳ, ನದಿ, ಸರೋವರ ಸಮುದ್ರ ಮುಂತಾದವುಗಳ ಹತ್ತಿರ, ಸಿಗುವ ಮೀನು, ಏಡಿ, ಕಪ್ಪೆ ಮುಂತಾದ ಜೀವಿಗಳನ್ನು ಹಿಡಿದು ತಿನ್ನುತ್ತದೆ. ನೀವು ಸಮುದ್ರ ತೀರಕ್ಕೆ ಹೋದರಂತೂ ಇದು ಅನೇಕ ಸಂಖ್ಯೆಯಲ್ಲಿ ನೋಡಲು ಸಿಗುತ್ತದೆ. ಮನೆಯಲ್ಲಿ ಸಾಕುವ ಕೋಳಿ ಮರಿಗಳನ್ನೂ ಸಹ ಹಿಡಿಯುತ್ತದೆ. ದುರಾದೃಷ್ಟ ಅಂದರೆ ಪೇಟೆ ಪಟ್ಟಣಗಳಲ್ಲಿ ಕಸದ ರಾಶಿಯಲ್ಲಿ ಸಿಗುವ ಆಹಾರ ಹುಡುಕಿಕೊಂಡು ಬರುತ್ತದೆ. ಮೀನು, ಮಾಂಸದ ಮಾರುಕಟ್ಟೆಗಳ ಸುತ್ತೆಲ್ಲಾ ನಾವು ಸುಲಭವಾಗಿ ನೋಡಲು ಸಿಗುವ ಹಕ್ಕಿ.
ಡಿಸೆಂಬರ್ ನಿಂದ ಎಪ್ರಿಲ್ ವರೆಗೆ ಈ ಹಕ್ಕಿಯ ಸಂತಾನಾಭಿವೃದ್ಧಿಯ ಕಾಲ. ಎತ್ತರದ ಮರಗಳ ಮೇಲೆ ಗೂಡುಕಟ್ಟುತ್ತದೆ. ಈಗಂತೂ ದೊಡ್ಡ ಮರಗಳೇ ಇಲ್ಲದ ನಗರಗಳಲ್ಲಿ ಮೊಬೈಲ್ ಟವರ್ ಗಳ ಮೇಲೆಯೇ ಗೂಡು ಕಟ್ಟುವುದನ್ನು ಮತ್ತು ಯಶಸ್ವಿಯಾಗಿ ಮರಿಗಳನ್ನು ಬೆಳೆಸಿದ್ದನ್ನು ನೋಡಿದವರು ಇದ್ದಾರೆ.
ಈ ಹಕ್ಕಿಯ ಕನ್ನಡ ಹೆಸರು : ಗರುಡ
English Name: Brahminy Kite
Scientific Name: Haliastur Indus
ಚಿತ್ರ- ಬರಹ: ಅರವಿಂದ ಕುಡ್ಲ, ಬಂಟ್ವಾಳ