ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೫)
*****ಭಾಗ ೧೫
ಕನ್ಯಾಕುಬ್ಜವನ್ನು ಸೇರಿ ಹಲವು ದಿನಗಳ ಕಾಲ ನಾನು ದೇವಾಲಯವೊಂದರಲ್ಲಿ ತಂಗಿದ್ದು ಆಚೆಯೇ ಬರಲಿಲ್ಲ. ನನ್ನ ಮಿತ್ರ ಬಂದಾಗಲೆಲ್ಲ ಅಸ್ವಸ್ಥನಾಗಿರುವೆ ಎಂದು ಹೇಳಿ ಕಳುಹಿಸಿಬಿಡುತ್ತಿದ್ದೆ. ಸುತ್ತ-ಮುತ್ತಲಿನ ಜನರ ಬಳಿ ನನ್ನನ್ನು ಹುಡುಕಿಕೊಂಡು ಯಾರಾದರೂ ಬಂದಿದ್ದರೇ ಎಂದು ಕೇಳಿ, ನನ್ನ ಮಿತ್ರನನ್ನು ಬಿಟ್ಟು ಯಾರೂ ಬಂದಿಲ್ಲವೆಂದು ಕೇಳಿ ಸ್ವಲ್ಪ ಧೈರ್ಯ ಹೆಚ್ಚಾಯಿತು. ಕೊನೆಗೆ ಆಗೊಮ್ಮೆ ಈಗೊಮ್ಮೆ ಆಚೆ ಬರಲು ಆರಂಭಿಸಿದೆ.
ಕನ್ಯಾಕುಬ್ಜ ಪ್ರದೇಶ ಸುಮಾರು ಎರಡು ಸಹಸ್ರ ಕ್ರೋಶಗಳ ಸುತ್ತಳತೆ ಹೊಂದಿತ್ತು. ಹರ್ಷ ರಾಜನ ರಾಜಧಾನಿಯು ಸುಮಾರು ೧೦ ಕ್ರೋಶ ಉದ್ದ ಹಾಗು ೨-೩ ಕ್ರೋಶ ಅಗಲವಾಗಿದ್ದು ಗಂಗಾನಿದಿಯ ತೀರದಲ್ಲಿ ನೆಲೆಮಾಡಿತ್ತು. ಊರ ಸುತ್ತಲೂ ಕಂದಕವಿದ್ದರೂ ಈಗ ಅದು ಒಣಗಿ ಬರಿದಾಗಿತ್ತು. ಅಲ್ಲಲ್ಲೇ ಎತ್ತರದ ಕಾವಲು ಸ್ಥಂಭಗಳು ನಿರ್ಮಿತವಾಗಿದ್ದವು. ಸುಂದರ ಹೂವುಗಳುಳ್ಳ ವನಗಳು, ಹೂದೇಟಗಳು, ಕನ್ನಡಿಗಳಂತೆ ಹೊಳೆವ ಸರೋವರಗಳು ಎಲ್ಲೆಡೆ ಕಾಣಿಸುತ್ತಿದ್ದವು.
ಇಲ್ಲಿಯ ಜನಾಂಗ ಶಾಂತ ಮನೋಭಾವ ಹಾಗು ಸಮೃದ್ಧಿ ಹೊಂದಿದವರು, ನಿಸ್ಪೃಹ ಹಾಗು ಪ್ರಾಮಾಣಿಕತೆಯ ಗುಣಗಳುಳ್ಳವರು. ಕನಕಾಭರಣಗಳು ಹಾಗು ರೇಷ್ಮೆಯ ವಸ್ತ್ರಗಳನ್ನು ಧರಿಸುವ ಜನರು ವಾಸಿಸುವ ಮನೆಗಳು ಸೊಂಪಾಗಿ, ವಿಶಾಲವಾಗಿವೆ. ಶಿಕ್ಷಣೆ ಹಾಗು ವಿದ್ವತ್ತಿಗೆ ಬಹು ಮಹತ್ವ ಕೊಡುವ ಇಲ್ಲಿಯ ನಿವಾಸಿಗಳ ಶುದ್ಧ ಭಾಷೆ ಪ್ರಖ್ಯಾತವಾಗಿದೆ. ಸೌಖ್ಯ ವಾತಾವರಣದ ವರ ಪಡೆದ ನಗರ ಕನ್ಯಾಕುಬ್ಜವಾಗಿತ್ತು.
ನನ್ನ ಮಿತ್ರನಿಗೆ ಇಲ್ಲಿ ಸ್ಥಾನೇಶ್ವರದಲ್ಲಿ ಆದಷ್ಟು ಬೇಸರವಾಗಲಿಲ್ಲ. ನಮ್ಮ ಧರ್ಮದವರೇ ಹೆಚ್ಚಾಗಿದ್ದರೂ, ಬೌದ್ಧಧರ್ಮ ಅನುಸರಿಸುವವರು ಹೆಚ್ಚು ಕಡಿಮೆ ಸಮ ಸಂಖ್ಯೆಯಲ್ಲಿದ್ದರು. ಒಂದು ನೂರು ಸ್ತೂಪ-ಸಂಘಾರಾಮಗಳಿದ್ದರೆ, ಸುಮಾರು ಎರಡು ಶತಕ ನಮ್ಮ ದೇವತೆಗಳ ದೇವಾಲಯಗಳಿದ್ದವು. ಮೇಲಾಗಿ ಹರ್ಷರಾಜ ಬೌದ್ಧರಿಗೆ ಸಾಕಷ್ಟು ಬೆಂಬಲ ನೀಡಿದ್ದರೂ ಮೂಲತಃ ವೈಶ್ಯ ವರ್ಣದವನಾಗಿದ್ದು ಶಿವಶಂಕರನ ಭಕ್ತನಾಗಿದ್ದನು. ಹಾಗಾಗಿ ಕನ್ಯಾಕುಬ್ಜದಲ್ಲಿ ಎರಡೂ ಧರ್ಮಗಳು ಸರಿಸಮಾನವಾಗಿ ನಡೆಬರುತ್ತಿದ್ದವು.
ಪೂರ್ವಕಾಲದಲ್ಲಿ ಈ ಸ್ಥಳದ ಹೆಸರು ಕುಸುಮಪುರವಾಗಿದ್ದು, ಬ್ರಹ್ಮದತ್ತನೆಂಬ ರಾಜ ಇಲ್ಲಿಯ ದೊರೆಯಾಗಿದ್ದನಂತೆ. ಬ್ರಹ್ಮದತ್ತನಿಗೆ ಸಹಸ್ರ ಮೇಧಾವಿ ಪುತ್ರರು, ಶತಕ ಸುಂದರೀಮಣಿ ಪುತ್ರಿಯರು. ಗಂಗಾ ನದಿ ತೀರದಲ್ಲಿ ತಪಸ್ಸಿನಲ್ಲಿ ಮುಳುಗಿದ್ದ ಋಷಿಯೊಬ್ಬರು ಒಮ್ಮೆ ಬ್ರಹ್ಮದತ್ತನ ಪುತ್ರಿಯರು ನದಿಯಲ್ಲಿ ವಿಹರಿಸುತ್ತಿರುವುದನ್ನು ನೋಡಿ, ಅವರಲ್ಲಿ ಕಾಮಧಾತು ಎಚ್ಚೆತ್ತು, ರಾಜನ ಬಳಿ ಹೋಗಿ ರಾಜಕುಮಾರಿಯರಲ್ಲಿ ಒಬ್ಬಳನ್ನು ವಿವಾಹ ಮಾಡಿಕೊಡಲಾಗಿ ಕೇಳಿದರಂತೆ. ರಾಜಕುಮಾರಿಯರೆಲ್ಲರೂ ನಿರಾಕರಿಸಲು ರಾಜನು ಚಿಂತಾಗ್ರಸ್ಥನಾದನಂತೆ. ಆ ಸಮಯದಲ್ಲಿ ರಾಜನ ಚಿಂತನೆಯ ಕಾರಣ ಅರಿತ ಕಿರಿಯ ರಾಜಕುಮಾರಿ ಆ ಋಷಿಯನ್ನು ವಿವಾಹವಾಗಲು ಒಪ್ಪಿದಳಂತೆ. ಋಷಿಗೆ ವಿಚಾರ ತಿಳಿಯಲು, ಕುಪಿತನಾಗಿ "ನನ್ನ ಮುಪ್ಪಿನ ಕಾರಣದಿಂದ ನನ್ನನ್ನು ವಿವಾಹವಾಗಲು ನಿರಾಕರಿಸಿದ ಆ ತೊಂಬತ್ತೊಂಬತ್ತು ರಾಜಕುಮಾರಿಯರು ಗೂನು ಬೆನ್ನಿನಿಂದ ಕುಬ್ಜರಾಗಿಹೋಗಲಿ" ಎಂಬ ಶಾಪವನ್ನಿತ್ತರಂತೆ. ಆಗಿನಿಂದ ಆ ನಗರಕ್ಕೆ ಕನ್ಯಾಕುಬ್ಜವೆಂಬ ನಾಮಕರಣವಾಯಿತಂತೆ.
ಪ್ರಭಾಕರವರ್ಧನ-ರಾಜ್ಯವರ್ಧನ ಹಾಗು ಹರ್ಷವರ್ಧನರ ಕತೆಯನ್ನು ಆಗಲೇ ಹೇಳಿರುವುದಾಗಿ ಪುನಃ ಸ್ತುತಿಸುವುದಿಲ್ಲ. ಐದು ವರ್ಷಗಳಿಗೊಮ್ಮೆ ಹರ್ಷವರ್ಧನನು ಧಾರ್ಮಿಕ ಸಮಾವೇಷವನ್ನು ಆಯೋಜಿಸುವನಂತೆ. ಇದಕ್ಕೆ 'ಮೋಕ್ಷ' ಎಂಬ ನಾಮಕರಣವೂ ಮಾಡಿರುವನಂತೆ. ಬೌದ್ಧ ಶ್ರಮಣರು, ಜೈನರು, ವೈದಿಕ ಬ್ರಾಹ್ಮಣರೆಲ್ಲರನ್ನೂ ಕೂಡಿಸಿದ ಸರ್ವ-ಧರ್ಮ ಸಮಾವೇಷವದು. ಸಮಾವೇಷದ ಮೂರನೆ ಹಾಗು ಏಳನೆಯ ದಿನಗಳಂದು ರಾಜ್ಯ ಬೊಕ್ಕಸದಿಂದ ಸೈನಿಕರ ಆಯುಧಗಳನ್ನು ಬಿಟ್ಟು ಬೇರೆಲ್ಲವನ್ನೂ ದಾನವಾಗಿ ಕೊಟ್ಟುಬಿಡುವನಂತೆ. ಪ್ರವೀಣರ ನಡುವೆ ತರ್ಕ-ವಾದಗಳನ್ನು ನಡೆಸಿ ಅವುಗಳನ್ನು ಅವನೇ ತೀರ್ಮಾನಿಸುವನಂತೆ. ಗೆದ್ದವರನ್ನು ಸನ್ಮಾನಿಸಿ, ಧರ್ಮ ಪಥದಲ್ಲಿ ನಡೆವ ಈ ಪುರುಶರನ್ನು ಸಿಂಹಾಸನಕ್ಕೇರಿಸಿ ಧರ್ಮದ ಬೋಧನೆ ಪಡೆಯುತ್ತಾನಂತೆ. ಪುಣ್ಯಾತ್ಮರನ್ನು ಸನ್ಮಾನಿಸಿ ಪಾಪಾತ್ಮರನ್ನು ಗಡೀಪಾರು ಮಾಡಿಸುವನಂತೆ. ಅಂತೆಯೇ ಧರ್ಮಬದ್ಧರಾದ ಸಾಮಂತರನ್ನು 'ಶ್ರೇಷ್ಠ ಮಿತ್ರ' ಎಂದು ಕೂಗಿ ತನ್ನ ಆಸನದಲ್ಲಿಯೇ ಕುಳ್ಳಿರಿಸಿಕೊಳ್ಳುವನಂತೆ.
ಕಾಮರೂಪ ಪ್ರದೇಶದ ಒಬ್ಬ ಶ್ರೀಮಂತನಾದ ಕುಮಾರರಾಜ ಆ ಸಮಯದಲ್ಲಿ ನನ್ನ ಮಿತ್ರನನ್ನು ಕಂಡು, ನಾವು ತನ್ನೊಡನೆ ಕಾಮರೂಪಕ್ಕೆ ಹೋಗುವ ಆಹ್ವಾನವಿತ್ತ. ನನ್ನ ಮಿತ್ರನು ಮಗಧ ದೇಶ ಸಂದರ್ಶನ ಮಾಡಿ ಕಾಮರೂಪಕ್ಕೆ ಬರುವುದಾಗಿ ಹೇಳಿದನು. ನಂತರ ಕಾಜುಗೃಹದ ಬಳಿ ರಾಜಯಾತ್ರೆ ಮಾಡುತ್ತಿದ್ದ ಹರ್ಷರಾಜನನ್ನು ನೋಡಲೆಂದು ಕಾಜುಗೃಹಕ್ಕೆ ಹೋದೆವು. ನಾನು ಊರಿನಲ್ಲಿ ಹಲವು ದಿನಗಳ ಕಾಲ ಕಾಣಿಸಿಕೊಂಡಿದ್ದರೂ ಯಾರೂ ನನ್ನನ್ನು ಗುರುತಿಸಿದ ಹಾಗೆ ಕಾಣಿಸಲಿಲ್ಲ. ಬಹುಶಃ ನನ್ನ ರೂಪವೇ ಬದಲಾಗಿರುವುದರಿಂದ ಹಾಗಿರಬಹುದು ಎಂದು ಊಹಿಸಿ ಚಿಂತೆಯಿಲ್ಲದೆ ನಾನೂ ನನ್ನ ಮಿತ್ರನೊಡನೆ ಹರ್ಷರಾಜನ ಸಭೆಗೆ ಹೋರಟೆ.
ಹರ್ಷನ ಸಭೆಗೆ ಹೋಗಿ ನನ್ನ ಮಿತ್ರ ತನ್ನ ರಾಜಾಜ್ಞೆ, ಪರಿಚಯ ಪತ್ರಗಳನ್ನು ತೋರಿಸಿದ. ನಾನೂ ಸಂಸ್ಕೃತದಲ್ಲಿ ಅವನೊಡನೆ ಜಾಲಂಧರದಿಂದ ಭಾಷಾಂತರಕ್ಕಾಗಿ ಬಂದಿರುವುದಾಗಿ ಹೇಳಿದೆ. ಆಗ ಹರ್ಷರಾಜನು ನನ್ನ ಮಿತ್ರನನ್ನು ಕುರಿತು "ನೀವು ಯಾವ ದೇಶದಿಂದ ಬಂದಿರುವಿರಿ? ನಿಮ್ಮ ಯಾತ್ರೆಯಲ್ಲಿ ಏನು ಸಾಧಿಸುವ ಅಪೇಕ್ಷೆ ಇಟ್ಟುಕೊಂಡಿದ್ದೀರಿ?" ಎಂದು ಕೇಳಿದ.
ನಾನು ಇದನ್ನು ಅನುವಾದಿಸಿ ನನ್ನ ಮಿತ್ರನಿಗೆ ಕೇಳಿದೆ. ಅವನು ಕೊಟ್ಟ ಉತ್ತರವನ್ನು ಹೀಗೆ ಮಹಾರಾಜನಿಗೆ ಹೇಳಿದೆ "ನಾನು ಮಹಾನ್ 'ಟಾಂ' ದೇಶದಿಂದ ಬೌದ್ಧ ಧರ್ಮ ಗ್ರಂಥಗಳನ್ನು ಓದಿ ಅರಿಯುವ ಅಪೇಕ್ಷೆಯಿಂದ ಬಂದಿರುವೆ"
ಮಹಾರಾಜ ನುಡಿದ "ನಿಮ್ಮ ಟಾಂ ದೇಶ ಎಲ್ಲಿದೆ? ಯಾವ ರಸ್ತೆಯಲ್ಲಿ ಬಂದಿರಿ? ಎಷ್ಟು ದೂರದ ಪ್ರಯಾಣ?"
"ನನ್ನ ದೇಶ ಈಶಾನ್ಯ ದಿಕ್ಕಿನಲ್ಲಿ ಅಸಂಖ್ಯಾತ ಕ್ರೋಶಗಳ ದೂರದಲ್ಲಿದೆ. ಈ ನಿಮ್ಮ ಜಂಬೂದ್ವೀಪದಲ್ಲಿ ನಮ್ಮ ದೇಶದ ಹೆಸರು ಮಹಾಚೀನ" ನನ್ನ ಮಿತ್ರ ನನ್ನ ಮೂಲಕ ಉತ್ತರಿಸಿದ.
"ನಿಮ್ಮ ದೇಶ ಹಾಗು ಅದರ ಅರಸನ ಬಗ್ಗೆ ಕೇಳಿ ತಿಳಿದಿರುವೆ. ನಿಮ್ಮ ದೇಶದ ಬಗ್ಗೆ ಹೆಚ್ಚಿನ ವಿವರ ಕೊಡಿ" ಎಂದ ಮಹಾರಾಜ
ನನ್ನ ಮಿತ್ರ "ಮಹಾಚೀನ ನಮ್ಮ ಪೂರ್ವ ಅರಸರ ಕಾಲದ ಹೆಸರು. ಈಗಿನ ದೊರೆ ಅದನ್ನು 'ಮಹಾ ಟಾಂ' ಎಂದು ಕರೆಯುತ್ತಾನೆ. ಪೂರ್ವದಲ್ಲಿ ನಮ್ಮ ಅರಸನು 'ಸಿಂ ಸಾರ್ವಭೌಮ' ಎಂಬ ಬಿರುದನ್ನು ಹೊತ್ತಿದ್ದ. ಅವನು ಪಟ್ಟಕ್ಕೇರಿದಾಗ ಹಿಂದಿನ ಅರಸ ಮರಣ ಹೊಂದಿದವನಾಗಿ ಸಮಾಜದಲ್ಲಿ ಕೋಲಾಹಲವೆದ್ದು ಜನರ ಹಾ ಹಾ ಕಾರ ಗಗನಕ್ಕೇರಿತ್ತು. ನಮ್ಮ 'ಸಿಂ ಸಾರ್ವಭೌಮನ ಅನುಕರಣೆ, ಅನುಕಂಪಗಳಿಂದ ದುಷ್ಟರಿಗೆ ಶಿಕ್ಷೆಯಾಗಿ ಶಿಷ್ಟ ರಕ್ಷಣೆಯಾಯಿತು. ಎಂಟು ದಿಕ್ಕುಗಳು ಶಾಂತವಾಗಿ ಹತ್ತು ಸಹಸ್ರ ಸಾಮಂತರು ಕಪ್ಪ ಕಾಣಿಕೆಗಳನ್ನು ಸಲ್ಲಿಸಿದರು. ಕೊನೆಗೆ ಜನರು ಶಾಂತಿ ಸಮೃದ್ಧಿ ಹೊಂದಿದರು. ಅವನ ಗುಣಗಾನ ಎಷ್ಟುಮಾಡಿದರೂ ಸಾಲದು" ಎಂದು ದೊಡ್ಡ ಭಾಷಣವನ್ನೇ ಭಿಗಿದ.
ಹರ್ಷ ರಾಜ "ಬಹಳ ಸಂತೋಷ" ಎಂದು ಹೇಳಿ ಕಳುಹಿಸಿ ಕೊಟ್ಟ.