ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೬)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೬)

ಬರಹ

*****ಭಾಗ ೧೬

ಹರ್ಷರಾಜನ ಧಾರ್ಮಿಕ ಸಮಾವೇಷದ ಸಮಯವಾಗಿತ್ತು. ಗಜಾರೋಹಣ ಮಾಡುತ್ತ, ನಗಾರಿಗಳ ಬಡಿತ ಹಾಗು ಕಹಳೆಗಳ ನಾದಗಳೊಂದಿಗೆ ಹರ್ಷರಾಜ ಕನ್ಯಾಕುಬ್ಜದ ಬಳಿ ಗಂಗಾ ನದಿಯ ಪಶ್ಚಿಮ ತೀರಕ್ಕೆ ಆಗಮಿಸಿದ. ಅವನ ಆಜ್ಞೆಯ ಮೇರೆಗೆ ಇಪ್ಪತ್ತು ಸಾಮಂತರು ಸುತ್ತ ಮುತ್ತಲಿನ ಪ್ರದೇಶಗಳಿಂದ ಬಂದು ನೆರೆದಿದ್ದರು. ಅವರೊಂದಿಗೆ ಮೂರು ಸಹಸ್ರ ಬ್ರಾಹ್ಮಣರು, ಮೂರು ಸಹಸ್ರ ಬೌದ್ಧ ಶ್ರಮಣರಲ್ಲದೆ ಮೇಧಾವಿಗಳು, ಶ್ರೀಮಂತರು ಮತ್ತಿತರರು ಅಲ್ಲಿಗೆ ಆಗಮಿಸಿದ್ದರು. ಎಲ್ಲರಿಗೂ ತಂಗಲು ಅಲ್ಲಿಯೇ ವಿಹಾರಗಳನ್ನು ನಿರ್ಮಿಸಲಾಗಿತ್ತು.

ಆಸನವೊಂದರಲ್ಲಿ ಬುದ್ಧನ ಪ್ರತಿಮೆಯನ್ನು ಇರಿಸಲಾಗಿತ್ತು. ಅಂತೆಯೇ ಹೋಮಕುಂಡದಲ್ಲಿ ಬ್ರಾಹ್ಮಣರು ಯಜ್ಞ-ಯಾಗಾದಿಗಳನ್ನು ನಡೆಸಿದ್ದರು. ಹರ್ಷರಾಜನೂ ಆ ಸಮಯದಲ್ಲಿ ವಿಹಾರದ ಹತ್ತಿರದಲ್ಲಿಯೇ ಬಿಡಾರ ಊರಿದ್ದನು. ರಾಜನ ಬಿಡಾರದಿಂದ ಸಾರ್ವಜನಿಕ ವಿಹಾರದವರೆಗು ಗುಡಾರಗಳನ್ನು ನಿರ್ಮಿಸಲಾಗಿತ್ತು. ಸಂಗೀತಗಾರರು ತಮ್ಮ ಕಲೆಯನ್ನು ಈ ಗುಡಾರಗಳಲ್ಲಿ ಪ್ರದರ್ಶಿಸುತ್ತಿದ್ದರು. ವಸಂತ ಋತುವಿನ ಎರಡನೇ ಮಾಸವಾಗಿತ್ತು. ಬ್ರಾಹ್ಮಣ ಹಾಗು ಶ್ರಮಣರಿಗೆ ಅವರವರ ಧರ್ಮಕ್ಕೆ ತಕ್ಕಂತೆ ಭೋಜನಾದಿಗಳ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಎರಡೂ ಧರ್ಮಗಳ ದೇವತೆಗಳಿಗೆ ಅಶ್ವಾರೋಹಣ, ಗಜಾರೋಹಣ, ಛತ್ರ ಛಾಮರಾದಿ ಸಕಕಲ ರಾಜೋಪಚಾರಗಳನ್ನು ಸಲ್ಲಿಸುತ್ತಿದ್ದರು.

ಹರ್ಷರಾಜನು ಆ ಮೆರವಣಿಗೆಯಲ್ಲಿ ಹೋಗುತ್ತಿದ್ದಂತೆ ಮುತ್ತು, ರತ್ನ ಹಾಗು ಬಂಗಾರ-ಬೆಳ್ಳಿ ಹೂಗಳನ್ನು ಎಲ್ಲೆಡೆ ಚೆಲ್ಲುತ್ತ ಹೋದನು. ನಂತರ ದೇವತೆಗಳಿಗೆ ಅಭಿಶೇಕ ಮಾಡಿ ನೂರಾರು ರೇಷ್ಮೆ ವಸ್ತ್ರಗಳನ್ನು, ನಾಣ್ಯಗಳನ್ನು, ಇತರ ದ್ರವ್ಯಗಳನ್ನು ಸಲ್ಲಿಸಿದನು. ನಂತರ ಮೇಧಾವಿಗಳ ಸಭೆಯಲ್ಲಿ ಕ್ಲಿಷ್ಟ ವಿಚಾರಗಳನ್ನು ಕುರಿತು ತರ್ಕ-ವಾದಗಳಿಗೆ ಅವಕಾಶವಿತ್ತು. ಇದೇ ರೀತಿ ಆ ಸಮಾವೇಷದ ಪ್ರತಿನಿತ್ಯವೂ ಹರ್ಷರಾಜನೇ ಪೂಜೆಸಲ್ಲಿಸುತ್ತಿದ್ದನು.

ಸಮಾವೇಷದ ಕೊನೆಯ ದಿನದಂದು ಒಂದು ವಿಹಾರದಲ್ಲಿ ಮಹತ್ತಗ್ನಿ ಹೊತ್ತಿಕೊಂಡಿತು. ಉದ್ವೇಗದಿಂದ ಹರ್ಷರಾಜನು "ನನ್ನ ರಾಜ್ಯ ಸಂಪತ್ತನ್ನು ಧರ್ಮದಲ್ಲಿ ಧಾರೆಯೆರೆದು ಕೊಟ್ಟಿರುವೆ. ನನ್ನ ಪೂರ್ವಿಕರಂತೆ ಧರ್ಮಪಥದಲ್ಲಿ ಯಾಣ ಮಾಡಬಯಸಿ ಈ ವಿಹಾರವನ್ನು ಕಟ್ಟಿಸಿರುವೆ. ಆದರೂ ಯಾವ ದುರ್ವೃತ್ತಿಯಿಂದಲೋ ಏನೋ ಯಾವ ಈ ಅನಾವೃತ್ತಿ ಒದಗಿಬಂದಿದೆ. ಹೀಗಿರುವಲ್ಲಿ ನಾನು ಜೀವಿಸಿ ಫಲವೇನು?" ಎಂದು ಹೇಳಿಕೊಂಡು ದೈವ ಪ್ರಾರ್ಥನೆ ಮಾಡಿದನು.

ನಂತರ "ಪೂರ್ವಜನ್ಮದ ಪುಣ್ಯದಿಂದಲೋ ಏನೋ ನಾನು ಈ ಜಂಬೂದ್ವೀಪದ ಅಧಿಪತಿಯಾಗಿರುವೆ. ನಾನು ಸಂಪಾದಿಸಿದ ಧರ್ಮ ಕೀರ್ತಿಯಿಂದ ಈ ಅಗ್ನಿಯು ಆರಿಹೋಗಲಿ ಇಲ್ಲವಾದರೆ ನಾನು ನನ್ನ ಪ್ರಾಣವನ್ನೇ ತ್ಯಜಿಸುವೆ" ಎಂದು ಪ್ರತಿಜ್ಞೆ ಮಾಡಿದನು. ಅಷ್ಟು ಹೊತ್ತಿಗೆ ಆ ಅಗ್ನಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಭಟರು ಕಾರ್ಯದಲ್ಲಿ ಸಫಲರಾಗಿ ಆ ಅಗ್ನಿಯು ಶಾಂತವಾಯಿತು.

ಈ ದೃಶ್ಯವನ್ನು ಸಮೀಕ್ಷಿಸುತ್ತಿದ್ದ ರಾಜನನ್ನು ಯಾರೋ ಒರ್ವ ಮನುಷ್ಯ ಕೈಯಲ್ಲಿ ಕತ್ತಿಯೊಂದನ್ನು ಹಿಡಿದು ರಾಜನನ್ನು ಕೊಲ್ಲಲು ಹೊರಟ. ಒಂದು ಕ್ಷಣ ಭಯಭೀತನಾದರೂ ಹರ್ಷರಾಜನು ಅವನನ್ನು ತಡೆ ಹಿಡಿದು ಸಮೀಪದಲ್ಲಿದ್ದ ಭಟರಿಗೆ ಒಪ್ಪಿಸಿದನು. ನಂತರ ಆ ಕೊಲೆಪಾತಕನನ್ನು ಇಂತು ಪ್ರಶ್ನಿಸಿದನು "ನಾನು ನಿನಗೆ ಮಾಡಿರುವ ಅನ್ಯಾಯವಾದರೂ ಏನು? ನನ್ನನ್ನು ಕೊಲ್ಲಲೇಕೆ ಪ್ರಯತ್ನಿಸಿದೆ?"

ಆ ಮನುಷ್ಯನು ಸರಿಯಾದ ಉತ್ತರ ಕೊಡಲಿಲ್ಲ. ಹತ್ತಿರ ನೆರೆದಿದ್ದ ಶ್ರಮಣರನ್ನು ಭೀತಿಯಿಂದ ನೋಡುತ್ತ "ಮಹಾರಾಜ, ನೀನು ಬೌದ್ಧರ ಕಡೆಯಲ್ಲಿ ಪಕ್ಷಪಾತ ಮಾಡುವೆಯೆಂದು ತಿಳಿದು ಬ್ರಾಹ್ಮಣವರ್ಗದವರು ನನ್ನನ್ನು ಈ ಕಾರ್ಯಕ್ಕೆ ಒತ್ತಾಯಿಸಿದರು" ಎಂದನು.

"ಇದು ನಿಜವಲ್ಲ ನಾನು ಬೌದ್ಧರನ್ನು ಪೋಷಿಸುವಷ್ಟೇ ಬ್ರಾಹ್ಮಣರನ್ನೂ ಪೋಷಿಸುವೆ. ಇದು ನಿಜವಾಗಿರಲು ಸಾಧ್ಯವಿಲ್ಲ. ಇವನನ್ನು ಕಾರಾಗ್ರಹದಲ್ಲಿ ಬಂಧಿಸಿ, ವಿಚಾರಣೆ ಮುನ್ನಡೆಸಿ" ಎಂದು ಹೇಳಿ ತನ್ನ ಅರಮನೆಗೆ ಹಿಂತಿರುಗಿದನು.

ಈ ವಿಷಯವನ್ನು ಕುರಿತು ನೆರೆದ ಬ್ರಾಹ್ಮಣಾದಿ ಜನರಲ್ಲಿ ವಿಚಾರಣೆ ನಡೆಸಿದರೂ ಯಾವ ತೀರ್ಮಾನವೂ ಆಗಲಿಲ್ಲ. ಕೊನೆಗೆ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಕೊಲೆಪಾತಕನನ್ನು ಕಾರಾಗ್ರಹಕ್ಕೆ ತಳ್ಳಲಾಯಿತು.

ಆ ಸಮಾವೇಷ ಮುಗಿದ ಕಾಲದಿಂದ ನನಗೇಕೋ ಮನಸ್ಸಿನಲ್ಲ ಕಳವಳವುಂಟಾಗ ತೊಡಗಿತ್ತು. ಯಾವಾಗಲೂ ಯಾರೋ ನನ್ನ ಮೇಲೆ ಕಣ್ಣಿಟ್ಟಿರುವಂತೆ, ಯಾರೋ ನನ್ನ ಬೆನ್ನ ಹಿಂದೆ ಹೊಂಚು ಹಾಕುತ್ತಿರುವಂತೆ. ಈ ವ್ಯಥಿಗೆ ಕಾರಣಗಳಾದರೂ ಆಗ ಅರ್ಥವಾಗುತ್ತಿರಲಿಲ್ಲ. ಈಗ ಯೋಚಿಸಿದರೆ ನನ್ನ ಮನಸ್ಸಿನಾಳದಲ್ಲಿ 'ರಾಜನ ಪ್ರಾಣ ತೆಗೆಯಲು ಪ್ರಯತ್ನ ಮಾಡಲಾಗಿದೆ. ಯಾರು ಏನು ಎಂಬ ತೃಪ್ತ ವಿವರಣೆ ಸಿಕ್ಕಿಲ್ಲ. ನಾನಾದರೋ ಪೂರ್ವ ಗೂಢಚಾರ, ಮೇಲಾಗಿ ಈ ರಾಜನ ವೈರಿಗೆ ಇವನ ವಿರುದ್ಧ ಕೆಲಸ ಮಾಡಿದವ. ಎಲ್ಲಿಂದಲೋ ಬಂದು ಅನುಮಾನದ ಬೆರಳು ನನ್ನನ್ನು ತೋರಿಸಿದರೆ?' ಎಂಬ ಚಿಂತೆ ಇದ್ದಿರಬೇಕು. ಹೀಗೇ ಚಿಂತಾಸ್ಥಿತಿಯಲ್ಲಿ ಅಂದು ಹೋಗಿ ಮಹೇಶ್ವರ ದೇವಾಲಯದ ಜಗುಲಿಯ ಮೇಲೆ ಮಲಗಿದೆ.

ಅಂದು ದೇವಾಲಯದಲ್ಲಿ ಹೆಚ್ಚು ಮಂದಿ ಇರಲಿಲ್ಲ. ಸಮಾವೇಷದ ನಂತರ ಎಲ್ಲರೂ ತಮ್ಮ ತಮ್ಮ ಊರು ಕೇರಿಗಳ ಕಡೆ ಹೊರಟುಹೋಗಿದ್ದರು. ಮೇಲಾಗಿ ವೃಷ್ಠಿಯ ಸಂಭಾವನೆ ಇದ್ದ ಹಾಗೆ ಕಾಣಿಸುತ್ತಿತ್ತು. ಆಕಾಶದಲ್ಲಿ ಚಂದ್ರ ತಾರೆಯರು ಮಾಯವಾಗಿ ಕೇವಲ ನೀಲ ವರ್ಣ ಮೇಘಗಳಿಂದ ತುಂಬಿತ್ತು. ಶೀತವೂ ಸ್ವಲ್ಪ ಹೆಚ್ಚೆನ್ನುವಷ್ಟೇ ಇದ್ದ ಕಾರಣ ನಾನು ಜಗುಲಿಯ ಮೂಲೆಯಲ್ಲಿ ಮುದುರಿಕೊಂಡು ಮಲಗಿದ್ದೆ. ನನ್ನ ಮಿತ್ರ ತನ್ನೊಡನೆ ಸಂಘಾರಮಕ್ಕೆ ಬರಲು ಹೇಳಿದ್ದ. ನನಗಾದರೋ ಏಕೀ ಧಾರ್ಮಿಕ ಸಂಕೋಚವೆಂದು ನನ್ನನ್ನೇ ನಾನು ದೋಷಿಸುತ್ತ ನಿದ್ರೆ ಮಾಡಲು ಯತ್ನಿಸಿದೆ. ಚಳಿಯಿಂದಲೋ, ವೃಷ್ಠಿಯ ಆತಂಕದಿಂದಲೋ ಅಥವ ನನ್ನ ಮನಸ್ಸಿನೊಳಗಿನ ಚಿಂತಾ-ವ್ಯಥಗಳಿಂದಲೋ ಇಂದೇಕೋ ನಿದ್ರೆ ಬಾರದಾಗಿತ್ತು.

ಮಧ್ಯ ರಾತ್ರಿ ಕಳೆದು ಹೋಗಿ ಸುಮಾರು ಸಮಯವಾಗಿತ್ತು. ಮೆಲ್ಲನೆಯ ಶೀಶ್ಕಾರದ ಶಬ್ಧ ಕೇಳಿಸಿತು. ಇಂತಹ ಶೀಶ್ಕಾರ ಬಹು ಚನ್ನಾಗಿ ಅರಿತಿದ್ದೆ ನಾನು. ಆರ್ಯ ಜನರು ಬಳಸುವುದಲ್ಲ ಇದು. ನನಗೆ ಅದೇ ಕ್ಷಣದಲ್ಲಿ ಏನೆನಿಸಿತೋ ಏನೊ ಸದ್ದಿಲ್ಲದೆ ಜಗುಲಿಯಿಂದ ಇಳಿದು ಹತ್ತಿದರಲ್ಲಿದ್ದ ಬಂಡೆಯ ಹಿಂದೆ ಹೋಗಿ ಅವಿತು ವೃದ್ಧಿಯನ್ನು ಆಲಿಸಿ ಕುಳಿತೆ. ಹೆಚ್ಚು ಸಮಯ ಕಾಯಬೇಕಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ದಾರಿಯ ಎರಡೂ ಬದಿಗಳಿಂದ ಭಟರು ಬಂದು ಜಗುಲಿಯ ಸುತ್ತ ನಿಂತರು. ನನ್ನ ಹೊದ್ದಿಕೆ ಜಗುಲಿಯ ಮೇಲೇ ಉಳಿದುಹೋಗಿತ್ತು. ನಿಶ್ಯಬ್ದವಾಗಿ ಬಂದು ಕತ್ತಿ-ಈಟಿಗಳನ್ನು ಎತ್ತಿ ಜಗುಲಿಯ ಸುತ್ತ ನಿಂತ ಭಟರು ಒಂದು ದೀಪವನ್ನು ಗುಡಿಯ ಒಳಗಿನಿಂದ ತಂದರು. ಆ ಕ್ಷಣದಲ್ಲಿ ನನ್ನನ್ನು ಅಲ್ಲಿ ಕಾಣದೆ ಅವರಲ್ಲಿ ಕಳವಳ.

"ಇಲ್ಲಿದ್ದಾನೆ ಎಂದು ಹೇಳಿದೆಯಲ್ಲ, ಎಲ್ಲಿ?" ಒಬ್ಬ ಕೇಳಿದ

"ಇಲ್ಲೇ ಇದ್ದ... ಈಗೊಂದು ಕ್ಷಣದಲ್ಲಿ. ಹೋಗಿ ಬರುವುದರಲ್ಲಿ..." ಮತ್ತೊಬ್ಬನ ಉತ್ತರ

"ಹಾಗಾದರೆ ಜಗುಲಿ ನುಂಗಿತೆ? ಗಾಳಿಯೊಳಗೆ ಮಾಯವಾದನೇ ..." ಮೂರನೆಯ ಧ್ವನಿ ಕೇಳಿಬಂತು

"ಒಂದು ಕ್ಷಣ ನಿಲ್ಲಿ.... ಇಲ್ಲಿ ನೋಡಿ ಹೊದ್ದಿಕೆ ಇನ್ನೂ ಬೆಚ್ಚಗಿದೆ. ಈಗೆಲ್ಲೋ ಎದ್ದು ಹೋಗಿರಬೇಕು. ಸುತ್ತ ನೋಡಿ" ಒಬ್ಬವ ಜಗುಲಿಯ ಮೇಲೆ ಬಗ್ಗಿ ನನ್ನ ಹೊದ್ದಿಕೆ ಎತ್ತಿ ಹಿಡಿದು ಹೇಳಿದ.

ಭಟರೆಲ್ಲರೂ ಸುತ್ತಲೂ ಚದುರಿದರು. ಪೊದೆಗಳಲ್ಲಿ ತಮ್ಮ ಈಟಿ ಕತ್ತಿಗಳನ್ನು ತಿವಿಯುತ್ತ ನನ್ನನ್ನು ಹುಡುಕತೊಡಗಿದರು. ನಾನು ಅಷ್ಟು ಹತ್ತಿರದಲ್ಲಿರುವುದು ಅವರಾರು ಬಹುಶಃ ಆಲಿಸಿರಲಿಲ್ಲ. ಅವರು ಬಹಳ ಮಂದಿ ಇದ್ದರು. ನಾನಾದರೋ ಒಬ್ಬನೇ, ಆಯುಧವಿಲ್ಲ - ಅವರೊಂದಿಗೆ ಕಾದಾಡಲು ಸಾಧ್ಯವಿರಲಿಲ್ಲ. ನಾನು ವೀರನೆಂದಲ್ಲ, ಆದರೂ ಈ ಕ್ಷಣದಲ್ಲಿ ಪಲಾಯನವೇ ಸರಿಯಾದ ಪಾಡೂ ಎಂದು ಯೋಚಿಸಿದೆ. ನಿಂತಲ್ಲಿಯೇ ನಿಂತಿದ್ದರೆ ನಾನು ಅವರ ಕೈಗೆ ಸಿಕ್ಕಿಕೊಳ್ಳುವುದಕ್ಕೆ ಬಾಧೆಯಾಗಿದ್ದದ್ದು ಸಮಯವೊಂದೇ. ಈಗಲ್ಲದಿದ್ದರೆ ಇನ್ನು ಹಲವು ನಿಮಿಷಗಳಲ್ಲಿ ಸಿಕ್ಕಿಕೊಳ್ಳುವನಿದ್ದೆ. ಹಾಗಾಗಿ ಇವರುಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ನಿರ್ಧರಿಸಿದೆ.

ನಿಧಾನವಾಗಿ ನಾನು ಕುಳಿತಿದ್ದ ಸ್ಥಳದಿಂದ ಎದ್ದು, ನನ್ನನ್ನು ಹುಡುಕುತ್ತಿದ್ದ ಭಟರಿಂದ ನಿಶ್ಯಬ್ಧವಾಗಿ ಹಿಂದೆ ಸರಿಯಲು ಆರಂಭಿಸಿದೆ. ಭಟರು ಆಗಲೇ ಹುಡುಕಿದ್ದ ಸ್ಥಳಗಳಲ್ಲಿ ಅವಿತುಕೊಂಡು ಅವರಿಂದ ದೂರವಾದೆ. ಸ್ವಲ್ಪ ಸಮಯದ ನಂತರ ಅವರೆಲ್ಲೋ ಹುಡುಕುತ್ತಿದ್ದರು, ನಾನು ಬೇರೆಲ್ಲೋ ಇದ್ದೆ. ಸ್ವಲ್ಪ ಬೆಳಕಾಗಹತ್ತಿತ್ತು, ಅಪಾಯವಿನ್ನೂ ಕಳೆದಿರಲಿಲ್ಲ. "ಅಬ್ಬ ಇನ್ನು ತಪ್ಪಿಸಿಕೊಂಡೆ; ಏನು ಕಾರಣದಿಂದ ನನ್ನನ್ನು ಹುಡುಕಿಕೊಂಡು ಬಂದಿದ್ದರೋ ಏನೋ. ಮೊದಲು ಇಲ್ಲಿಂದ ಕಾಲು ಕೀಳಬೇಕು" ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದೆ.

ಅಷ್ಟರಲ್ಲಿ ಬೌದ್ಧ ಶ್ರಮಣನೊಬ್ಬ ನನ್ನ ಬಳಿ ಬಂದು ನನ್ನೊಡನೆ ಮಾತನಾಡತೊಡಗಿದ. ಇವನಿಗೆ ನನ್ನೊಡನೆ ಏನು ಕೆಲಸವಿದ್ದಿರಬಹುದೆಂಬುದು ನನಗೆ ತಿಳಿಯಲಿಲ್ಲ. ತಲೆ ತಗ್ಗಿಸಿಕೊಂಡು ಅವನೊಡನೆ ಮಾತನಾಡದೆ ಹೊರಟೆ. ಆದರೆ ಆ ಭಟರ ಜ್ಞಾನವು ನನ್ನೆಡೆ ಹರಿದಿತ್ತು. ಒಡನೆ ಎಲ್ಲರೂ ನಾನು ಹೊರಟಿದ್ದ ದಿಕ್ಕಿನಲ್ಲಿ ಓಡಿಬಂದರು. ನಾನೂ ಓಡಿದೆ. ಮುಂಜಾವಿನ ಮಬ್ಬಿನಲ್ಲಿ ಮನೆಗಳ ಮಧ್ಯೆ ಓಡಿದೆ. ಆದರೆ ಎಲ್ಲೆಲ್ಲಿ ನೋಡಿದರೂ ಭಟರು ಪ್ರತ್ಯಕ್ಷವಾಗುತ್ತಿದ್ದಂತೆ ತೋರುತ್ತಿತ್ತು. ಸ್ವಲ್ಪ ಕಾಲದ ಬಳಿಕ ನನ್ನ ಸುತ್ತಲು ಭಟರು ಬಂದು ನಿಂತರು. ಯಾರೋ ನನ್ನ ತಲೆಯ ಮೇಲೆ ಭಾರವಾದ ವಸ್ತುವಿನಿಂದ ಕುಟ್ಟಿರಬೇಕು; ಎಲ್ಲವೂ ಕತ್ತಲಾಯಿತು.