ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೯)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೯)

ಬರಹ

*****ಭಾಗ ೧೯

ಅಷ್ಟರಲ್ಲಿ ಅವನು "ಅದು ಹಾಗಿರಲಿ, ನಿನ್ನ ಕತೆಯೇನು" ಎಂದು ನನ್ನನ್ನೇ ಕೇಳಿದ.

"ನಾನು ದಕ್ಷಿಣ ದೇಶದವನು. ಮಹಾಚೀನಾ ದೇಶದ ಪ್ರಯಾಣಿಕನೊಬ್ಬನೊಡನೆ ಪ್ರಯಾಣ ಮಾಡುತ್ತಿದ್ದೆ. ಇಂದು ರಾತ್ರಿ ಮಹೇಶ್ವರ ದೇವಾಲಯದ ಜಗುಲಿಯ ಮೇಲೆ ಮಲಗಿದ್ದೆ. ಧಗ್ಗನೆ ಬಂದು ರಾಜಭಟರು ನಾನು ಗೂಢಚಾರನೆಂದು ಹೇಳಿ ನನ್ನನ್ನು ಬಂಧಿಸಿದರು. ನಂತರ ಇಲ್ಲಿಗೆ ಕಳುಹಿಸಿದರು" ಎಂದು ಸಂಕ್ಷಿಪ್ತವಾಗಿ ನನ್ನ ಕತೆ ಹೇಳಿದೆ. ನಾನು ನಿಜವಾಗಿ ಗೂಢಚಾರನಾಗಿದ್ದೆ ಎಂದು ಅವನಿಗೆ ಹೇಳಲಿಲ್ಲ. ನಾನು ಹೇಳಿದ ಕತೆಯನ್ನು ಅವನು ನಂಬಿದ ಹಾಗೆ ಕಾಣಿಸಿತು.

ನಾನು ತಪ್ಪಿಸಿಕೊಳ್ಳುತ್ತಿದ್ದ ಸಮಯದಲ್ಲಿ ಆ ಶ್ರಮಣ ನನ್ನ ಬಳಿ ಬಂದು ಭಟರ ಗಮನ ನನ್ನೆಡೆ ಸೆಳೆದದ್ದು ನೆನಪಾಯಿತು. "ನೀನು ಆ ವಿಚಾರಕರಿಗೆ ಹೇಳಿದ್ದ ಹೊರದೇಶ ಗೂಢಚಾರರ ವಿಚಾರ ಹೇಗೋ ಆಚೆ ಹೋಗಿ ನಿನ್ನನ್ನು ಈ ಕಾರ್ಯಕ್ಕೆ ಒತ್ತಾಯಿಸಿದವರ ಬಳಿ ಸೇರಿರಬೇಕು. ನನ್ನನ್ನು ಭಟರು ಹುಡುಕುತ್ತಿದ್ದಾಗ ನಾನು ತಪ್ಪಿಸಿಕೊಂಡು ಓಡುತ್ತಿದ್ದೆ. ಆಗ ಶ್ರಮಣನೊಬ್ಬ ನನ್ನೊಡನೆ ಮಾತನಾಡಲು ಬಂದು ಭಟರ ಗಮನ ನನ್ನೆಡೆ ಹರಿಯುವಂತೆ ಮಾಡಿದ. ಆ ಕಾರಣದಿಂದ ನಾನು ಬಂಧಿಯಾದೆ. ಅಂತೆಯೇ ಯಾರೋ ನನ್ನನ್ನು ದಕ್ಷಿಣದವನೆಂದು ಗುರುತಿಸಿದ್ದಿರಬೇಕು. ಹಾಗಾಗಿ ನಾನು ಗೂಢಚಾರನೆಂದು ನನ್ನನ್ನು ಬಂಧಿಸಿರಬೇಕು" ಎಂದು ಹೇಳಿದೆ. ಮನಸ್ಸಿನಲ್ಲೇ ಯಾರೋ ನನ್ನ ಗೂಢಚರ್ಯೆ, ರಾಯಭಾರ, ಇತ್ಯಾದಿಗಳ ಹಿನ್ನೆಲೆ ಅರಿತವರಿದ್ದಿರಬೇಕು, ಹಾಗಾಗಿ ನನ್ನ ಬಂಧನವಾಗಿರಬೇಕು ಎಂದುಕೊಂಡೆ. ಗೂಢಚಾರರು ನಮ್ಮ ಕಡೆಯಷ್ಟೇ ಅಲ್ಲ ವೈರಿಯ ಪಡೆಯಲ್ಲೂ ಇರುವರು! ಬಹುಶಃ ನಮ್ಮ ಕಡೆಯವರೇ ಯಾರೋ ಹರ್ಷರಾಜನ ಪಡೆಗೆ ವಲಸೆ ಬಂದಿದ್ದು ನನ್ನ ಗುರುತು-ಪರಿಚಯಗಳನ್ನು ಬಯಲು ಮಾಡಿರಬೇಕು ಎಂದುಕೊಂಡೆ. ಒಮ್ಮೆ ಗೂಢಚಾರನಾದರೆ ಅದರ ಕಲುಷ ಜೀವನ ಪರ್ಯಂತ!

"ನಾವೀಗಿರುವುದು ನಿಜ ಕಾರಾಗೃಹವಲ್ಲ. ಆಚೆಯ ಕಾವಲುಗಾರ ನನಗೆ ಹೇಳಿದ. ವಿಚಾರಣೆಯ ಸಮಯವಾದ್ದರಿಂದ ಇಲ್ಲಿ ಬಂಧಿಸಿರಬೇಕು. ನಾಳೆ ನಮ್ಮನ್ನು ನೆಲಮಾಳಿಗೆಯಲ್ಲಿರುವ ಸೆರೆಮನೆಗಳಲ್ಲಿ ಹಾಕುತ್ತಾರಂತೆ" ನನ್ನ ಚಿಂತನೆ ಮುರಿಯುವ ಹಾಗೆ ಮಾತನಾಡಿದ.

"ಹಾಗಾದರೆ...." ನಾನು ಹೇಳಿದೆ

ನಂತರ ಇಬ್ಬರೂ ಒಟ್ಟಿಗೆ "ಈ ಕಾರಾಗೃಹದಿಂದ ತಪ್ಪಿಸಿಕೊಳ್ಳಲು ಈ ರಾತ್ರಿಯೊಂದೇ ಇರುವುದು" ಎಂದು ಹೇಳಿದೆವು.

"ಬಂಧನ ಒಡೆದು ಓಡಿಹೋಗಲು ಸಿದ್ಧನಿರುವೆಯಾ?" ನಾನು ಅವನನ್ನು ಕೇಳಿದೆ.

"ನನಗೂ ಅದೊಂದೇ ದಾರಿ" ಅವನು ಹೇಳಿದ. "ಆದರೆ ಹೊರಗೆ ಕಾವಲುಗಾರನಿದ್ದಾನೆ. ಹೋಗುವುದಾದರೂ ಹೇಗೆ?"

"ಒಬ್ಬ ಮಾಡಲಾಗದ್ದನ್ನು ಇಬ್ಬರೂ ಸೇರಿ ಮಾಡೋಣ. ಕಾವಲುಗಾರರಿಗೆ ನಾವಿಬ್ಬರೂ ಸೇರಿರುವುದು ಗೊತ್ತಾಗಿರುವ ಹಾಗೆ ಕಾಣಿಸುತ್ತಿಲ್ಲ. ಈಗಲೆ ಉಪಾಯ ಮಾಡಬೇಕು" ನಾನು ಹೇಳಿದೆ. "ಬೆಳಕಿಂಡಿಯಿಂದಾಚೆ ನೋಡು. ಅಲ್ಲಿ ಒಂದು ಅಂಗಳ ಕಾಣುತ್ತಿದೆ. ಆ ಅಂಗಳಕ್ಕೆ ಹೋದರೆ ನದಿಯೊಳಗಿನಿಂದ ತಪ್ಪಿಸಿಕೊಳ್ಳಬಹುದು"

ಅವನು ಆಚೆ ನೋಡಿ "ನಿನಗೆ ತಲೆ ಕೆಟ್ಟಿದೆ! ಅಂಗಳದಿಂದ ನದಿಗೆ ಹಾರಿದರೆ ಮೂಳೆಯ ಒಂದು ಚೂರೂ ಸಿಗುವುದಿಲ್ಲ! ಆ ಬಂಡೆಗಳು ಎಷ್ಟು ಎತ್ತರವಾಗಿವೆ ನೋಡಿರುವೆಯಾ?" ಎಂದ

"ಅದೆಲ್ಲ ನೀನು ನನಗೆ ಬಿಡು. ನೀನು ಇಲ್ಲೇ ಇದ್ದರೂ ಅದೇ ಗತಿ ಅಲ್ಲವೇ? ಹಾಗಿದ್ದಲ್ಲಿ ಓಡಿಹೋಗುವ ಪ್ರಯತ್ನವೇಕೆ ಮಾಡಬಾರದು. ಗಂಡಾಂತರದ ಕಾರ್ಯ ಇಲ್ಲವೆಂದು ಹೇಳೋದಿಲ್ಲ"

"ಸರಿ, ಹಾಗಿದ್ದರೆ"

"ನನಗೆ ಸ್ವಲ್ಪ ಸಮಯ ಕೊಡು ಯೋಚಿಸಿ ಯೋಜನೆ ಹೂಡಲು" ಎಂದು ಹೇಳಿ ಚಿಂತನೆಯಲ್ಲಿ ತೊಡಗಿದೆ. ಸ್ವಲ್ಪ ಹೊತ್ತಿನ ಬಳಿಕ ನನ್ನ ಮನಸ್ಸಿನಲ್ಲೊಂದು ಯೋಜನೆ ಧೃಡವಾಯಿತು. ತ್ರಿವಿಕ್ರಮನಿಗೆ ಎಲ್ಲವನ್ನೂ ಹೇಳಿದೆ.

ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮೊದಲು ಕಾವಲುಗಾರನನ್ನು ಒಳಗೆ ಕರೆಸುವುದು ಅನಿವಾರ್ಯವಾಗಿತ್ತು. ನಾನು ಮೊದಲು ಬಾಗಿಲ ಬಳಿ ಹೋಗಿ ಮಾತನಾಡಲು ಇದ್ದ ಸಣ್ಣ ಕಿಂಡಿಯಿಂದ ಕಾವಲುಗಾರನನ್ನು ಕಂಡು ಮಾತನಾಡಿದೆ. ನಂತರ ಕೋಣೆಯೊಳಗೆ ಓಡಾಡತೊಡಗಿದೆ. ಪ್ರತಿ ಬಾರಿ ಕಿಂಡಿಯ ಬಳಿ ಬಂದಾಗಲೂ ಕಾವಲುಗಾರನಿಗೆ ಏನೊಂದನಾದರೂ ಮಾತನಾಡಿಸಿ ಪುನಃ: ಕೋಣೆಯೊಳಕ್ಕೆ ಹಿಂಜರಿಯುತ್ತಿದ್ದೆ. ಹೀಗೇ ಸ್ವಲ್ಪ ಕಾಲ ಓಡಾಡಿದ ಮೇಲೆ ನಾನು ಬೆಳಕಿಂಡಿಯ ಕಂಬಿಗಳನ್ನು ಹಿಡಿದು ಹತ್ತ ತೊಡಗಿದೆ. ಓಡಾಡುತ್ತಿದ್ದವನು ಏನಾದನೆಂದು ಕಾವಲುಗಾರ ಇಣುಕಿ ನೋಡಿದ. ನನ್ನನ್ನು ಬೆಳಕಿಂಡಿಯ ಬಳಿ ನೋಡಿ, ತಪ್ಪಿಸಿಕೊಳ್ಳುತ್ತಿರುವೆ ಎಂದು ಭಾವಿಸಿ, ಉಳಿದ ಭಟರನ್ನು ಕೂಗಿ ಬಾಗಿಲನ್ನು ತೆಗೆದು ನನ್ನನ್ನು ಹಿಡಿಯಲು ಕೋಣೆಯೊಳಗೆ ಬಂದ.

ಅವನಿಗೆ ನನ್ನ ಹಾಗು ತ್ರಿವಿಕ್ರಮ ಒಡಗೂಡಿದ ವಿಚಾರ ತಿಳಿದಿರಲಿಲ್ಲವಾದ್ದರಿಂದ ಅವನು ತ್ರಿವಿಕ್ರಮನನ್ನು ನನ್ನ ಕೋಣೆಯಲ್ಲಿ ಆಲಿಸಿರಲಿಲ್ಲ. ಅವನು ಕೋಣೆಗೆ ಬಂದಂತೆ ತ್ರಿವಿಕ್ರಮ ಅವನ ತಲೆಗೆ ಬಾಗಿಲ ಒದೆಗೊರಡಿನಿಂದ ಚೆಚ್ಚಿದ. ಹೆಚ್ಚು ಸಮಯವಿಲ್ಲವೆಂಬುದು ಇಬ್ಬರಿಗೂ ಗೊತ್ತಿತ್ತು. ಕಾವಲುಗಾರ ಚೆಚ್ಚಿಸಿಕೊಂಡು ಮೂರ್ಛೆಬಿದ್ದ ಕೂಡಲೆ ನಾವಿಬ್ಬರೂ ಬಾಗಿಲಿನಿಂದ ಹೊರಬಿದ್ದೆವು. ಯಾರೂ ಕಾರಾಗೃಹದ ಹಿಂಬಾಗದ ಕಡಿದಾದ ಕಲ್ಲುಬಂಡೆಗಳಿಂದ ತಪ್ಪಿಸಿಕೊಳ್ಳಲಾರರೆಂದು ಕಾವಲು ಕಾರಾಗೃಹದ ಮುಂಭಾಗದಲ್ಲಿ ಹೆಚ್ಚಾಗಿತ್ತು. ಭಟರು ನಮ್ಮ ಮೊಗಸಾಲಿನಲ್ಲಿ ಬರುತ್ತಿದ್ದಂತೆ ನಾವು ವಿರುದ್ಧ ದಿಕ್ಕಿನಲ್ಲಿ - ಅಂಗಳದ ಕಡೆ ಹೋದೆವು.

ಭಟರು ನಮ್ಮನ್ನು ನೋಡಿ ಅಟ್ಟಿಸಿಕೊಂಡು ಬಂದರು. ನಾವು ಮೊಗಸಾಲಿನ ಕೊನೆಯಲ್ಲಿದ್ದ ಅಂಗಳಕ್ಕೆ ಓಡಿ ಮೋಟುಗೋಡೆ ಹಾರಿ ಆ ಕಡಿ ಬಂಡೆಗಳಮೇಲಿನಿಂದ ಚಾಚಿಕೊಂಡಿದ್ದ ಒಂದು ಸಣ್ಣ ಜಗಲಿಯ ಮೇಲೆ ನಿಂತೆವು. ಮೇಲಿನಿಂದ ನಾವು ಕಾಣಿಸುವಂತೆ ಇರಲಿಲ್ಲ. ಭಟರು ಬರುವುದರೊಳಗೆ ಅಲ್ಲಿ ಬಿದ್ದಿದ್ದ ಬಡಿಗೆಯೊಂದಕ್ಕೆ ಒಂದು ದೊಡ್ಡ ಕಲ್ಲು ಕಟ್ಟಿ ಆ ಸಂಯೋಜನೆಯನ್ನು ನದಿಯೊಳಕ್ಕೆ ಎಸೆದೆವು.

ಭಟರು ಮೇಲಿನ ಅಂಗಳಕ್ಕೆ ಬಂದಂತೆ ಅವರು ಕಂಡಿದ್ದು ನೀರಿನೊಳಕ್ಕೆ ಬೀಳುತ್ತಿದ್ದ ಆ ಬಂಡೆ-ಬಡಿಗೆಗಳನ್ನು. ರಾತ್ರಿಯ ಆ ಮಬ್ಬಿನಲ್ಲಿ ವಿವರಗಳು ಕಾಣಿಸುತ್ತಿರಲಿಲವಾಗಿ ಅದನ್ನು ನಾವೆಂದೇ ಭಾವಿಸಿದರು.

"ಹಾರಿಬಿಟ್ಟರು! ನಾನೇ ನೋಡಿದೆ ಮೇಲಿನಿಂದ ಹಾರಿಬಿಟ್ಟರು" ಒಂದು ಧ್ವನಿ ಮೇಲಿನಿಂದ ಕೇಳಿಸಿತು.

"ಆ ಬಂಡೆಗಳ ಮೇಲೆ ಹಾರಿ ಬದುಕಲು ಸಾಧ್ಯವಿಲ್ಲ! ಎಲುಬುಗಳೂ ಪುಡಿಯಾಗಿರಬೇಕು" ಮತ್ತೊಂದು ಧ್ವನಿ

"ಈಜಿಕೊಂಡು ಹೋದರೆ?" ಮೂರನೆಯ ಧ್ವನಿ

"ಕೆಳಗೆ ಹೋಗಿ. ನದಿಯನ್ನು ಜಾಲಾಡಿರಿ. ಬಂಧಿಗಳನ್ನು, ಇಲ್ಲವಾದರೆ ಅವರ ಶವಗಳನ್ನು ತೆಗೆದುಕೊಂಡು ಬನ್ನಿ" ಒಂದು ಅಧಿಕಾರದ ಧ್ವನಿ ಹೇಳಿತು.

ಭಟರು ಮೇಲಿನ ಅಂಗಳವನ್ನು ಬಿಟ್ಟು ಹೋದ ಸದ್ದು ಕೇಳಿಸಿತು. "ಎಲ್ಲಿ ಹೋಗುತ್ತಾರೆ? ನನ್ನ ಕಾವಲಿನಿಂದ ತಪ್ಪಿಸಿಕೊಳ್ಳಲಸಾಧ್ಯ! ಕೊನೆ ಪಕ್ಷ ಅವರ ಶವಗಳನ್ನಾದರೂ ಬಂಧಿಸುವೆ" ಎಂದು ಆ ಅಧಿಕಾರದ ಧ್ವನಿ ಹೇಳಿದ್ದು ಕೇಳಿಸಿತು. ನಾನು ತ್ರಿವಿಕ್ರಮ ಮುಖ ನೊಡಿಕೊಂಡೆವು. ಒಂದು ಸಣ್ಣ ನಗೆ ಬೀರಿದೆವು.

ಇನ್ನೂ ಅಪಾಯ ಕಳೆದಿರಲಿಲ್ಲ. ಆ ಕಾರಾಗೃಹದ ನೆರಳಿನಲ್ಲೇ ಇದ್ದೆವು. ಆದಷ್ಟು ಬೇಗ ಆ ಸ್ಥಳವನ್ನು - ಬೆಳಗಿನೊಳಗೆ ಆ ದೇಶವನ್ನೇ ಬಿಟ್ಟು ಹೋಗಬೇಕಿತ್ತು. ಅದಕ್ಕೂ ಮುಂಚೆ ಕಾವಲುಗಾರರ ಕಣ್ಣು ತಪ್ಪಿಸಿ ನದಿಯೊಳಗೆ ಈಜಿ ಹೋಗಬೇಕಿತ್ತು. ತ್ರಿವಿಕ್ರಮನ ಕಡೆ ತಿರುಗಿ ಕೇಳಿದೆ.

"ನಿನಗೆ ಈಜು ಬರುವುದಲ್ಲವೆ?" ಅವನು ಬರುವುದೆಂದು ತಲೆಯಾಡಿಸಿದ. "ನಿಧಾನವಾಗಿ ಕೆಳಗಿಳಿದು ಹೋಗಿ ನದಿಗೆ ಇಳಿದು ಸಾಧ್ಯವಾದಷ್ಟು ನೀರಿನೊಳಗೆ ಈಜಿ ಹೋಗಬೇಕು. ಒಂದೆರಡು ಕ್ರೋಶಗಳ ದೂರ ನೀರಿನಲ್ಲೇ ಹೋಗಿ ನಂತರ ನೀರಿನಾಚೆ ಹೋಗಬೇಕು. ಅವರು ನಮ್ಮನ್ನು ಅಷ್ಟು ದೂರದಲ್ಲಿ ಎಂದೂ ನಿರೀಕ್ಷಿಸುವುದಿಲ್ಲ. ಈಗ ನೀನೇನು ಮಾಡುವೆ?" ಎಂದು ಕೇಳಿದೆ.

"ನಾನು ಹಿಂತಿರುಗಿ ಊರಿಗೆ ಹೋಗಿ, ಕುಟುಂಬದವರನ್ನು ಒಗ್ಗೂಡಿಸಿ ಈಗಿನಿಂದೀಗಲೆ ದೇಶಬಿಟ್ಟು ಹೋಗುವೆ" ಎಂದ.

"ನರ್ಮದೆಯನ್ನು ದಾಟಿ ವರಾಹಪುರಿಯೆಂಬ ಊರಿಗೆ ಹೋಗು. ಅಲ್ಲಿ ನನ್ನ ಮಿತ್ರನೊಬ್ಬ ಇರುವನು. ಅಲ್ಲಿ ಹೋಗಿ ವಿಚಾರವನ್ನು ಹೇಳು. ಅವನು ನಿನಗೆ ಸಹಾಯ ಮಾಡುತ್ತಾನೆ" ಎಂದು ಹೇಳಿ ನಾವು ವರಾಹಪುರಿಯಲ್ಲಿ ಗೂಢಚರ್ಯೆ ಮಾಡುತ್ತಿದ್ದ ಮನೆಯ ಒಡೆಯನ ವಿವರಗಳನ್ನು ಅವನಿಗೆ ಕೊಟ್ಟೆ. ನಂತರ ನಿಧಾನವಾಗಿ ಇಳಿದು ನದಿಗೆ ಹೋದೆವು. ಭಟರು ಹುಡುಕಾಟವನ್ನು ತೊರೆಯುತ್ತಿದ್ದ ಹಾಗೆ ಕಾಣಿಸಿತು.

"ಬಂಡೆಗಳ ಮೇಲೇ ಸತ್ತು ಹೋಗಿರಬೇಕು, ಇಲ್ಲವಾದರೆ ಮುಳುಗಿ ಹೋಗಿರಬೇಕು" ಎಂದುಕೊಂಡು ಕಾರಾಗೃಹಕ್ಕೆ ಹಿಂತಿರುಗುತ್ತಿದ್ದರು.

ನಾನು ತ್ರಿವಿಕ್ರಮನಿಗೆ "ಮಿತ್ರ, ಹೋಗಿ ಬರೋಣಾ. ಇಬ್ಬರಿಗೂ ಶುಭಕಾಮನೆಗಳು. ವಿಧಿ ನಿಯೋಜಿಸಿದರೆ ಪುನಃ ಭೇಟಿಮಾಡೋಣ" ಎಂದು ಹೇಳಿ ಬೀಳ್ಕೊಟ್ಟೆ.

ತ್ರಿವಿಕ್ರಮ ಹೊರಡುತ್ತ "ಒಂದು ವಿಚಾರ ಹೇಳು - ನಿಜ ಹೇಳು! ನೀನು ನಿಜವಾಗಿ ಗೂಢಚಾರನೋ ಅಲ್ಲವೋ?" ಎಂದ

ನಾನು ತಲೆಯಾಡಿಸುತ್ತ ಮುಗುಳ್ನಗೆ ಬೀರಿದೆ. ಇಬ್ಬರೂ ನಿಧಾನವಾಗಿ ನದಿಗೆ ಇಳಿದೆವು. ನಂತರ ತ್ರಿವಿಕ್ರಮ ಏನಾದನೆಂದು ನನಗೆ ತಿಳಿಯದು.