ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೩)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೩)

ಬರಹ

***** ಭಾಗ ೩.

ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು ಯೋಚಿಸತೊಡಗಿದೆ.

ಎಷ್ಟು ಹೊತ್ತು ಕಳೆದಿತ್ತೋ ನನಗೆ ತಿಳಿಯದು. ಮತ್ತೆ ರಾತ್ರಿಯಾಗಿರಬಹುದೆಂಬ ಅನಿಸಿಕೆ. ಏನೊ ಸದ್ದು ಕೇಳಿಸಿತು. ನೋಡುತ್ತಿದ್ದಂತೆಯೇ ನನ್ನ ಕಾರಾಗ್ರಹದ ಕೋಣೆಯ ನೆಲದೊಳಗಿಂದ ಒಂದು ಚೌಕ ಬೆಳಕು ಕಾಣಿಸಿತು. ನೆಲದೊಳಗೆ ಒಂದು ಬಾಗಿಲು ತೆರೆಯಿತು. ಇಬ್ಬರು ಭಟರು ಬಂದು "ನಡೆ ನಮ್ಮ ಜೊತೆ" ಎಂದಷ್ಟೆ ಹೇಳಿದರು. ನನಗೆ ಮಾತನಾಡಲು ಅವಕಾಶವಾಗಲಿಲ್ಲ. ಅವರೊಂದಿಗೆ ಆ ಬಾಗಿಲೊಳಗಿನಿಂದ ಸುರಂಗ ಮಾರ್ಗವಾಗಿ ಎಲ್ಲಿಗೋ ಕರೆದೊಯ್ದರು. ಹೀಗೆ ಸ್ವಲ್ಪ ಹೊತ್ತು ನಡೆದ ಮೇಲೆ ಸುರಂಗದಿಂದ ಆಚೆ ಹೋದೆವು. ಮೂರು ಕುದುರೆಗಳನ್ನು ಕುದುರೆ ಏರಿದ ಮತ್ತೊಬ್ಬ ಕಾಯ್ದು ನಿಂತಿದ್ದ.

"ಕುದುರೆ ಸವಾರಿ ಬಲ್ಲೆಯಾ?" ಭಟರಲ್ಲೊಬ್ಬ ಕೇಳಿದ.

ನಾನೆಂದೂ ಕುದುರೆ ಏರಿದವನಲ್ಲ. "ಇಲ್ಲ" ನಾನು ಉತ್ತರಿಸಿದೆ.

"ಇಂಥವರನ್ನು ಎಲ್ಲಿಂದ ಹಿಡಿಯುತ್ತಾರೋ" ಎಂದು ಗೊಣಗುತ್ತ "ರಿಕಾಬಿನೊಳಗೆ ಎಡಗಾಲು ಹಾಕಿ ಬಲಗಾಲು ಕುದುರೆಯ ಬೆನ್ನಮೇಲೆ ಹಾಕು... ಹೀಗೆ" ಎಂದ ಒಬ್ಬ ಹೇಳಿದ ಮಾತಿಗೆ ಕ್ರಿಯೆ ತೋರಿಸುತ್ತ.

ನಾನು ಪ್ರಯತ್ನಿಸಿದೆ. ಅವನು ತೋರಿಸಿದಷ್ಟು ಸುಲಭವಾಗಿರಲಿಲ್ಲ. ಅಂತೂ ಅವರುಗಳ ಸಹಾಯದಿಂದ ಕುದುರೆ ಏರಿ ನಾನೂ ಅವರೊಂದಿಗೆ ಹೊರಟೆ. ಮೊದಲಿಗೆ ಸ್ವಲ್ಪ ಕಷ್ಟವಾದರೂ ಸಾಗುತ್ತಿದ್ದಂತೆ ಅಳವಡಿಸಿಕೊಂಡು ಕೊನೆಗೆ ಸುಲಭವಾಗಿಯೇ ಸವಾರಿ ಮಾಡ ತೊಡಗಿದೆ. ಮಾರನೆಯ ದಿನ ಮಧ್ಯಾಹ್ನದವರೆಗು ಹೀಗೆ ಅರಣ್ಯದೊಳಗೆ ಹೋಗುತ್ತಿದ್ದು, ಸೂರ್ಯ ನೆತ್ತಿಗೇರುವಷ್ಟು ಹೊತ್ತಿಗೆ ನಮ್ಮ ಗುರಿ ತಲುಪಿದೆವು. ಕಾಡಿನ ಮಧ್ಯೆ ಒಂದು ಸಣ್ಣ ಬಿಡಾರದಂತಿತ್ತು. ನನಗೀಗ ಅರ್ಥವಾಯಿತು. ಇದು ಗೂಢಚಾರ ಪಾಠಶಾಲೆ. ಗೂಢಚರ್ಯೆಯ ಶಿಕ್ಷಣಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿತ್ತು.

ಕಾಲ ಕಳೆದಂತೆ ಏನೇನೊ ಶಿಕ್ಷಣ ಹೊಂದಿದೆ. ಗೂಢಚರ್ಯೆ ಪ್ರಪಂಚದ ಎರಡನೇ ಹಳೆಯ ವೃತ್ತಿ. ವರುಣದೇವನೇ ಇದರ ಮೂಲ ಗುರುವಂತೆ. ಅಂತೆಯೇ ನನ್ನ ಗುರುವಿನ ಹೆಸರೂ ವರುಣಾಚಾರ್ಯ ಎಂದೇ ಆಗಿತ್ತು.

ವರುಣಾಚಾರ್ಯರು ಒಮ್ಮೆ ನನಗೆ ಹೇಳಿದ್ದರು "ನ್ಯಾಸ, ವೃತ್ತಿ, ಭಾಷ್ಯಗಳಿಂದ ಕೂಡಿದ, ಪಾಣಿನಿಯ ಸೂತ್ರಗಳನ್ನವಲಂಭಿಸಿದ ವ್ಯಾಕರಣವು ಪಾಪಸ ಭಾಷ್ಯವಿಲ್ಲದೆ ಹೇಗೆ ಒಪ್ಪುವುದಿಲ್ಲವೋ, ಹಾಗೆ ರಾಜನೀತಿಯಲ್ಲಿ ದಂಡನೀತಿಯ ವಿರುದ್ಧ ಯಾವುದೇ ಒಂದು ಹೆಜ್ಜೆ ಹಾಕಿದರೂ ಗೂಢಚಾರರಿಲ್ಲದೆ ಅದು ಒಪ್ಪುವುದಿಲ್ಲವೆಂದು ಶಿಷುಪಾಲ ವಧೆ ಹೇಳುತ್ತದೆ. ಗೂಢಚಾರರು ರಾಜನ ಕಣ್ಣುಗಳಂತೆ"

ಮತ್ತೊಮ್ಮೆ ಹೇಳಿದರು "ಗೂಢಚರ್ಯೆ ರಾಜ್ಯಾಡಳಿತದ ಒಂದು ಅತ್ಯಗತ್ಯ ಅಂಗ. ವೈರಿಗಳು, ವೈರಿಗಳ ಅನಿಷ್ಟಾವಂತರು, ಸ್ವಾಮಿದ್ರೋಹಿಗಳು, ಹಾಗು ಹೊರದೇಶದ ಗುಪ್ತಚರರ ಚಟುವಟಿಕೆಗಳು, ತೊಂದರೆಗಳು ಹಾಗು ಕಾರ್ಯಕಲಾಪಗಳನ್ನು ರಾಜನಿಗೆ ತಿಳಿಸುವುದೇ ಗೂಢಚಾರರ ಕೆಲಸ. ಗೂಢಚರ್ಯೆ ರಾಯಭಾರದಷ್ಟೇ ಅಗತ್ಯ ಅಂಗ, ಹಾಗು ರಾಜನೀತಿಯಲ್ಲಿ ಇದಕ್ಕೆ ಹಲವಾರು ಕಟ್ಟಲೆಗಳು ಹಾಗು ಉಪಯೋಗಗಳು ಇವೆ"

ಗೂಢಚರ್ಯದಲ್ಲಿ ಎರಡು ಅಂಗಗಳು - ಸಂಸ್ಥ ಹಾಗು ಸಂಚಾರ. ಸಂಥವೆಂದರೆ ಒಂದು ಕಡೆ ಸ್ಥಿತವಾಗಿರುವ ಗೂಢಚಾರರು, ಸಂಚಾರವೆಂದರೆ ಎಲ್ಲೆಡೆ ಓಡಾಡುವವರು. ಈ ಎರಡು ಅಂಗಗಳನ್ನು ಆಯಾ ಅಗ್ರರು ನಿಯಂತ್ರಿಸುವರು, ಹಾಗು ಒಂದು ಅಂಗಕ್ಕೆ ಇನ್ನೊಂದು ಅಂಗದ ವಿಚಾರ ತಿಳಿದಿರುವುದಿಲ್ಲ. ಆದರೆ ವರುಣಾಚಾರ್ಯರು ನನ್ನ ಹಿಂದಿನ ಗುರುಕುಲ ಶಿಕ್ಷಣದ ಕಾರಣ ನನ್ನನ್ನು ಬುದ್ಧಿಜೀವಿಯೆಂದು ಎಣಿಸಿ ಈ ಎರಡು ಅಂಗಗಳ ಸಹಕಾರ ನಿರ್ವಹಿಸುವ, ಮಹಾಮಂತ್ರಿ ಹಾಗು ಮಹಾರಾಜರಿಗೆ ನೇರವಾಗಿ ವರದಿ ಒಪ್ಪಿಸುವ ಗುಂಪಿನ ಪದಾತಿಯಾಗಿ ಮಾಡಲು ಶಿಕ್ಷಣ ಕೊಡುತ್ತಿದ್ದರು.

ಗೂಢಚರ್ಯೆ ಪಾಠಶಾಲೆಯಲ್ಲಿ ನನ್ನಂತೆ ಹಲವಾರು ಜನರು. ನನ್ನ ಹಾಗೆ ಕಾರಾಗ್ರಹದಿಂದ, ಗುರುಕುಲಗಳಿಂದ, ಸೈನ್ಯದಿಂದ, ಹಲವರು ಕಳ್ಳ ಖದೀಮರು, ಹೀಗೆ ಎಲ್ಲ ತರಹದ ಸದಸ್ಯರಿದ್ದರು. ವೇಷ ಬದಲಾವಣೆ, ಸೂಚನಾಶಾಸ್ತ್ರ, ಗುಪ್ತ ಲೇಖನ, ಕಳ್ಳ ಖದೀಮರನ್ನು ಹುಡುಕಿ ಗುರುತಿಸುವುದು, ಸಾರ್ವಜನಿಕ ಅಭಿಪ್ರಾಯವನ್ನು ಯುಕ್ತಿಯಿಂದ ನಿಭಾಯಿಸುವುದು, ಹಾಗು ವೈರಿಗಳಲ್ಲಿ ಅಸಮ್ಮತಿ ಹಾಗು ಒಡಕುಂಟುಮಾಡುವುದರಲ್ಲಿ ಶಿಕ್ಷಣೆ ಪಡೆದೆ.

ಸಂಸ್ಥ ಹಾಗು ಸಂಚಾರ ಗೂಢಚರ್ಯೆಕ್ಕೆ ಒಗ್ಗೂಡಿಸಿದ ಪಾರುಪತ್ಯವಿರಲಿಲ್ಲ. ನನ್ನ ಸುತ್ತಲೂ ಗೂಢಚಾರರನ್ನು ಪ್ರೇರಿಸಲು ಉಪಯೋಗಿಸುತ್ತಿದ್ದ ಸಾಧನಗಳನ್ನು ನೋಡುತ್ತಿದ್ದೆ. ಹೊನ್ನು, ಹೆಣ್ಣು, ಮಣ್ಣು ಇವು ತಪ್ಪಿದರೆ ಪ್ರತೀಕಾರ, ಅಧಿಕರಣದ ಮದ್ದುಗಳನ್ನು ಗೂಢಚಾರರ ಪ್ರೇರೆಣೆಗೆ ವಿನಿಯೋಗಿಸಲಾಗುತ್ತಿತ್ತು. ದುರ್ಬಲರನ್ನು ಕಾಣಿಕೆ ಹಾಗು ರಾಯಭಾರದಿಂದ ಗೆದ್ದರೆ, ಬಲವಂತರನ್ನು ದಂಡ ಹಾಗು ಅಸಮ್ಮತಿಯಿಂದ ಗೆಲ್ಲಲಾಗುತ್ತಿತ್ತು. ನನ್ನ ಮೇಲೆ ದೇಶಪ್ರೇಮದ ಬಾಣ ಬಿಡುತ್ತಿದ್ದದ್ದು ನನಗೇ ಗೊತ್ತಾದರೂ, ನನಗೆ ಆ ರೀತೆಯ ಯಾವ ಪ್ರೇರಣೆಯೂ ಬೇಡವೆಂದು ಮನಸ್ಸಿನಲ್ಲೇ ಅಂದುಕೊಂಡು ಮುನ್ನಡೆದೆ. ವರುಣಾಚಾರ್ಯರಿಗೆ ನನ್ನ ನಿಜ ಸಂಗತಿಯನ್ನು ಹೇಳಿ ಅವರ ಅನುಮತಿ ಪಡೆದು ಮನೆಗೆ ಒಂದು ಗುಪ್ತ ಓಲೆ ಕಳುಹಿಸಿದೆ. ಎಲ್ಲಿರುವೆ ಹೇಗಿರುವೆ ಎಂದು ಹೇಳದಿದ್ದರೂ ಮನೆಯವರಿಗೆ ನಾನಿನ್ನೂ ಜೀವಂತವಾಗಿರುವೆನೆಂಬುದು ನಂಬಲಾಗುವಂತಹ ಓಲೆ.

ಹೊರ ದೇಶಗಳಲ್ಲಿ, ಮನುಷ್ಯರ ಮಾನಸಶಾಸ್ತ್ರವನ್ನರಿತು, ಅವರ ಪ್ರೇರಣೆ ಹಾಗು ದೌರ್ಬಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಗುರಿ ಆಯ್ದುಕೊಳ್ಳಬೇಕು. ವೈರಿ ರಾಜನೊಡನೆ ಅತೃಪ್ತರಾಗಿರುವವರು, ಅವನಿಂದ ಅಪಮಾನಿತರಾದವರು, ಅತವ ಗಡಿಪಾರು ಮಾಡಲ್ಪಟ್ಟವರು, ರಾಜನಿಂದ ತಮ್ಮ ಸೇವೆಗೆ ಹೊನ್ನು ಪಡೆಯದಿದ್ದವರು, ಅಧಿಕಾರ ಅಥವ ಹೊನ್ನು ಕಳೆದುಕೊಂಡವರು, ಕಾರಣರಹಿತವಾಗಿ ಕಾರಾಗ್ರಹ ಸೇರಿದವರು, ಬೆದರಿಕೆಗಳಿಗೆ ಹೆದರುವಂಥವರನ್ನು ಹಿಡಿದು ಕೆಲಸಗಳನ್ನು ಮಾಡಿಸಿಕೊಳ್ಳಬೇಕು.

ಗೂಢಚಾರರು ವೈರಿಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದರೆ ಬಿಡಬಾರದು - ತಟವಟ ಗೂಢಚಾರರಾಗಬೇಕು. ತಟವಟ ಗೂಢಚಾರನೆಂದರೆ ತನ್ನ ಒಡೆಯನಿಗೆ ನಿಷ್ಠೆ ತೋರುತ್ತ ಎದುರಾಳಿಗೆ ಕೆಲಸ ಮಾಡುವವ. ವೈರಿಗಳಲ್ಲಿ ಒಡಕು ಹಾಗು ಕೋಲಾಹಲ ಉಂಟು ಮಾಡಲು ಇದು ಸುವರ್ಣಾವಕಾಶ. ಸುಳ್ಳು ಕಾಗದ ಪತ್ರಗಳನ್ನು ವೈರಿಗಳ ದಂಡನಾಯಕನ ಬಳಿ ಸಿಗುವಹಾಗೆ ಮಾಡಿ ವೈರಿ ಸೇನೆಯನ್ನು ನಿಶಕ್ತ ಮಾಡಬಹುದು. ಒಡೆಯನ ಪಡೆಯಲ್ಲಿ ವೈರಿಯ ಗೂಢಚಾರರನ್ನು ಹಿಡಿಯಲೂ ಇಂತಹವರು ಬೇಕಾಗುತ್ತಾರೆ.

ಹೀಗೆ ಸಂಪರ್ಕದವರಿಗೆ ಹೊನ್ನು ತಲುಪಿಸುವುದರಲ್ಲಿ, ಓಲೆಗಳನ್ನು ಕದ್ದು ಓದುವುದರಲ್ಲಿ, ಸುದ್ಧಿ ವಿಮರ್ಶನ ಮಾಡುವುದರಲ್ಲಿ, ವೇಷ ಬದಲಿಸಿ ಕೆಲಸ ಮಾಡುವುದರಲ್ಲಿ, ವೈರಿ ಗೂಢಚಾರರನ್ನು ಕಂಡುಹಿಡಿಯುವುದರಲ್ಲಿ, ತಪ್ಪು ಸುದ್ಧಿ ಹರಡಿ ಅಸಮ್ಮತಿಯುಂಟು ಮಾಡುವುದರಲ್ಲಿ, ವಿಶಕನ್ಯೆಯರ ಉಪಯೋಗದಲ್ಲಿ, ಹಾಗು ವಿಧ್ವಂಸಕ ಕೃತ್ಯಗಳಲ್ಲೂ ಶಿಕ್ಷಣೆ ಪಡೆದೆ.

ಹಲವು ಮಾಸಗಳು ಕಳೆದವು. ಕಾಲ ಕಳೆದಂತೆ ನಾನು ಈ ಎಲ್ಲ ವಿಷಯಗಳಲ್ಲಿ ನಿಪುಣನಾಗತೊಡಗಿದೆ.

ಒಂದು ದಿನ ವರುಣಾಚಾರ್ಯರು ನನ್ನನ್ನು ಅವರ ಬಳಿ ಕರೆದು ಹೇಳಿದರು "ಇಂದಿಗೆ ನಿನ್ನ ಶಿಕ್ಷಣೆ ಮುಕ್ತಾಯವಾಯಿತು. ನಾನು ಹೇಳಿರುವ ಎಲ್ಲ ವಿಷಯಗಳನ್ನು ಯಾವಾಗಲೂ ನೆನಪಿರಲಿ"

"ಹಾಗೆಂದರೆ ... " ನಾನು ಹೇಳಿದೆ

"ನೀನು ಇಲ್ಲಿಂದ ಹೊರಡುವ ಕಾಲ ಬಂದಿದೆಯೆಂದು ಅರ್ಥ" ಎಂದು ಹೇಳಿದರು

"ಮುಂದೇನು?" ನಾನು ಕೇಳಿದೆ

"ನಿನ್ನ ಶಿಷ್ಯವೃತ್ತಿಯಿಂದ ನಾನು ಪ್ರಸನ್ನನಾಗಿದ್ದೇನೆ. ವಾತಾಪಿ ನಗರಕ್ಕೆ ಹಿಂತಿರುಗು. ಮಹಾಮಂತ್ರಿಗಳಿಗೆ ನೇರವಾಗಿ ವರದಿ ಒಪ್ಪಿಸುವ ರಾಯಭಾರ ಹೊತ್ತಿರುವ ಸಂಘದಲ್ಲಿ ನೀನೊಬ್ಬ ಪದಾತಿ. ಈ ಓಲೆ ತೆಗೆದುಕೊಂಡು ಸುರಂಗ ಮಾರ್ಗವಾಗಿ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗು. ಮುಂದಿನದನ್ನು ಅವರೇ ನೋಡುತ್ತಾರೆ" ಎಂದು ಹೇಳಿ ಒಂದು ಓಲೆ ನನ್ನ ಕೈಗಿತ್ತು, ನಾನು ಹೋಗಬೇಕಾಗಿರುವ ಸ್ಥಳದ ವಿವರಗಳನ್ನು ಕೊಟ್ಟರು.

ನಾನು ಅವರಿಗೆ ನಮಿಸಿ, ಪ್ರವರ ಹೇಳಿ ಹೊರಬಿದ್ದೆ.

ಕೊನೆಯದಾಗಿ ವರುಣಾಚಾರ್ಯರು ನನಗೆ ಹೀಗೆ ಹೇಳಿ ಬೀಳ್ಕೊಟ್ಟರು "ಶಕ್ತಿಯಿಂದ ಗಳಿಸಲಾದದ್ದು ಯುಕ್ತಿಯಿಂದ ಗಳಿಸಬಹುದು. ಕರಿ ನಾಗನನ್ನು ಕಾಗೆಯು ಹೊನ್ನಿನ ಸರದ ಯುಕ್ತಿಯಿಂದ ಗೆದ್ದಿತು". ನಿರ್ಬಲ ಕಾಗೆಯು ಕರಿ ನಾಗನ ಕಾಟದಿಂದ ತಪ್ಪಿಸಿಕೊಳ್ಳಲು ಹೊನ್ನಿನ ಸರವನ್ನು ಅದರ ಹುತ್ತದೊಳಗೆ ಹಾಕಿ ಅದರ ನಾಶಕ್ಕೆ ಕಾರಣವಾದ ಕತೆಯನ್ನು ಸ್ಮರಿಸುತ್ತ ಮಾತನಾಡದೆ ಕುದುರೆಯೇರಿ ಹೊರಟೆ.