ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೪)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೪)

ಬರಹ

*****ಭಾಗ ೪

ನಾನು ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ತಿನ್ನಲೇನು ಸಿಕ್ಕಲಿಲ್ಲ. ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡಿದೆ. ನಾನು ಎಲ್ಲರ ಪಾಲಿಗೆ ಸತ್ತು ಹೋಗಿದ್ದೆ. ನಾನು ಕಳುಹಿಸಿದ ಓಲೆ ಮನೆ ಸೇರಿತ್ತೋ ಇಲ್ಲವೋ ಒಂದೂ ತಿಳಿಯದು. ಇನ್ನೂ ಸ್ವಲ್ಪ ಕತ್ತಲಾಗುವವರೆಗೆ ಕಾಯ್ದು ಮನೆ ಕಡೆ ಕುದುರೆ ತಿರುಗಿಸಿದೆ. ಸ್ವಲ್ಪ ದೂರದಲ್ಲೇ ಕುದುರೆಯನ್ನು ಕಟ್ಟಿ ಹಾಕಿ ಮನೆಯವರೆಗೆ ನಡೆದೇ ಹೋದೆ. ಮನೆಯಲ್ಲಿ ಯಾರಿರುವರು ಏನೂ ತಿಳಿಯದು. ಯಾರಿಗಾದರೂ ಕಾಣಿಸಿದರೆ? ನಾನು ಮಹಾರಾಜನ ಬೇಟೆ ತಪ್ಪಿಸಿದಾಗ ನನಗೆ ಗಡ್ಡ ಮೀಸೆಗಳಿರಲಿಲ್ಲ. ಈಗ ಪೂರ್ಣ ಗಡ್ಡ ಮೀಸೆಗಳಿದ್ದವು. ತಲೆಯ ಮೇಲಿದ್ದ ಜಟೆ ಈಗ ಹೋಗಿ ತಲೆ ತುಂಬ ಕೂದಲಿತ್ತು. ಎಂದೂ ತಲೆಗೆ ಪೇಟ ಧರಿಸದವ ಈಗ ಪೇಟ ಧರಿಸಿದ್ದೆ. ಯಾರೂ ನನ್ನನ್ನು ಗುರುತು ಹಿಡಿಯುವಂತೆ ಇರಲಿಲ್ಲ. ಆದರೂ ಮನೆಯೊಳಗೆ ಹೋಗಲು ಹೆದರಿ ಮರೆಯಲ್ಲೇ ಕಾಯ್ದು ನಿಂತೆ.

ಸ್ವಲ್ಪ ಹೊತ್ತಿನಲ್ಲಿ ಮನೆಯ ಕದ ತೆರೆದು ಅಮ್ಮ ಆಚೆ ಬಂದರು. ನಾನು ಮರೆಯಿಂದ ಇಳಿದು ಅಮ್ಮನ ಕಡೆ ನಡೆದೆ.

"ಯಾರಲ್ಲಿ" ಅಮ್ಮ ಕೂಗಿದರು.

"ನಾನು... ಅಮ್ಮ" ಎಂದು ಹತ್ತಿರಹೋದೆ.

"ಯಾರಪ್ಪ ನೀನು.... ಸೂರ್ಯ" ಅಮ್ಮ ಆಶ್ಚರ್ಯಪಟ್ಟರು.

"ಹೌದು, ನಾನೆ" ನಾನು ಹೇಳಿದೆ.

"ಏನಾಯಿತು? ಹೇಗೆ ತಪ್ಪಿಸಿಕೊಂಡೆ? ಈಗ ಎಲ್ಲಿರುವೆ? ಏನೀವೇಷ?" ಒಟ್ಟಿಗೆ ಪ್ರಶ್ನೆಗಳ ಸುರಿಮಳೆ ಮಾಡಿದರು

"ಒಂದೊಂದಾಗಿ ಹೇಳುವೆ. ನಾನು ತಪ್ಪಿಸಿಕೊಳ್ಳಲಿಲ್ಲ, ನನ್ನನ್ನು ಬಿಟ್ಟರು. ಇಷ್ಟು ದಿನ ಊರಿನಲ್ಲಿರಲಿಲ್ಲ ಇಂದು ಬಂದೆ. ನನಗಾವ ಅಪಾಯವೂ ಇಲ್ಲ ಹೆದರಬೇಡ. ನನ್ನ ಕಾಯಕಕ್ಕಾಗಿ, ಯಾರಿಗೂ ಗುರುತು ಸಿಗಬಾರದೆಂದು ಈ ವೇಷ" ನಾನೂ ಎಲ್ಲ ಒಟ್ಟಿಗೆ ಉತ್ತರಿಸಿದೆ.

"ಕಾಯಕಕ್ಕೆ ವೇಷವೇ? ಏನು ಕಾಯಕ? ಕಳ್ಳನಾಗಿರುವೆಯಾ?" ಪ್ರಶ್ನಿಸಿದರು

"ಇಲ್ಲ ಅಮ್ಮ, ನಾನು ಕಳ್ಳನಲ್ಲ. ದೇಶಸೇವೆಯ ಕೆಲಸ, ಆದರೆ ಗುಪ್ತ ಈಗ ಹೇಳಲಾರೆ" ಎಂದು ಉತ್ತರಿಸಿದೆ

"ಇದೇಕೆ ಹೀಗೆ? ಒಳಗೆ ಬಾ. ಮನೆಯವರನ್ನೆಲ್ಲ ನೋಡುವುದಿಲ್ಲವೆ?" ಅಮ್ಮ ಕೇಳಿದರು

"ನೋಡುವೆ, ಆದರೆ ಈಗಲ್ಲ. ನಾನು ಈಗ ಬೇರೆಲ್ಲೋ ಹೋಗಬೇಕು. ಯಾರಿಗೂ ನನ್ನ ಬಗ್ಗೆ ಹೇಳಬೇಡ" ಎಂದೆ.

"ಇಷ್ಟು ದಿನದ ಮೇಲೆ ಬಂದಿರುವೆ, ಇಷ್ಟು ಬೇಗ ಹೊರಟೆಯಾ?" ಎಂದರು

"ನಾನು ಕಳಿಸಿದ ಓಲೆ ಸಿಕ್ಕಿತೋ ಇಲ್ಲವೋ?" ನಾನು ಪ್ರತಿ ಪ್ರಶ್ನಿಸಿದೆ.

"ಸಿಕ್ಕಿತು, ಆದರೆ ಅದರಲ್ಲಿ ಏನೂ ವಿವರಣೆ ಇರಲಿಲ್ಲ. ಅದೊಂದೆ ನಮ್ಮಿಬ್ಬರಿಗೂ ಆಶಾಜನಕವಾಗಿತ್ತು. ಈಗಲಾದರೂ ನಿಜ ಸಂಗತಿ ಹೇಳು" ಎಂದು ಹೇಳಿದರು

"ಅಮ್ಮ, ತುಂಬಾ ಹೊಟ್ಟೆ ಹಸಿವಾಗಿದೆ. ತಿನ್ನಲು ಏನಾದರೂ ಇದೆಯೆ?" ಎಂದು ಕೇಳಿದೆ ಮಾತು ಮರೆಸಲು.

ಅಮ್ಮ ಒಳಗೆ ಹೋಗಿ ಬಟ್ಟೆಯಲ್ಲಿ ಕಟ್ಟಿ ಏನೋ ಬುತ್ತಿ ತಂದರು. ನಾನು ನಮ್ಮ ತಂದೆಯವರ ಬಗ್ಗೆ ವಿಚಾರಿಸಿದೆ. "ಅಪ್ಪ ಎಲ್ಲಿದ್ದಾರೆ ಹೇಗಿದ್ದಾರೆ?"

"ಒಳಗಿದ್ದಾರೆ. ನಾನು ಹಸು ನೋಡುವ ನೆಪ ಮಾಡಿ ಬಂದಿರುವೆ" ಎಂದರು

ಮತ್ತೆ ಪುಟ್ಟ ಹುಡುಗನೆನಿಸಿತು. ಅಮ್ಮ ತಂದ ಬೋಸಿ ನೀರಲ್ಲಿ ಕೈತೊಳೆದು, ಬುತ್ತಿ ತೆಗೆದೆ. ಅಮ್ಮ ತಮ್ಮ ಕೈಯಿಂದಲೇ ತಿನ್ನಿಸಿದರು. ಇಬ್ಬರೂ ಸ್ವಲ್ಪ ಕಾಣ್ಣೀರು ಹಾಕಿದೆವು. ಸ್ವಲ್ಪ ಹೊತ್ತಿನ ಬಳಿಕ ಊಟ ಮುಗಿಸಿ ಕೈತೊಳೆದು ಹೇಳಿದೆ.

"ಅಪ್ಪನಿಗೆ ತಿಳಿದರೂ ಯಾವಕಾರಣಕ್ಕೂ ಬೇರೆಯಾರುಗೂ ತಿಳಿಯಬಾರದು, ನಾನಿನ್ನು ಹೊರಡಬೇಕು" ಎಂದು ಎದ್ದೆ.

ಅಷ್ಟು ಹೊತ್ತಿಗೆ ಅಪ್ಪ ದೀಪ ಹಿಡಿದು ಬಾಗಿಲಾಚೆ ಬಂದರು. "ಯಾರು...? ಯಾರಲ್ಲಿ...?"

ನಾನು ಅಮ್ಮನ ಚರಣ ಸ್ಪರ್ಶಿಸಿ, ಬೇಗನೇ ಅಪ್ಪನ ಬಳಿ ಹೋಗಿ "ನಾನು ಸೂರ್ಯ, ಅಮ್ಮನಿಗೆ ಎಲ್ಲ ವಿಷ್ಯ ಹೇಳಿರುವೆ, ಯಾವಕಾರಣಕ್ಕೂ ನನ್ನ ಹೆಸರು ಕೂಗಬೇಡಿ ನಾನೀಗಲೇ ಹೋಗಬೇಕು" ಎಂದು ಹೇಳಿ ಅವರ ಚರಣ ಸ್ಪರ್ಶಿಸಿ, ಕುದುರೆಯ ಕಡೆ ಓಡಿ ಹೊರಟು ಹೋದೆ.

"ಅವನು ನಮ್ಮ ಸೂರ್ಯ! ನೋಡಿದೆಯಾ? ನಾನು ಹೇಳುತ್ತಿರಲಿಲ್ಲವೇ? ನಮ್ಮ ಸೂರ್ಯ....." ಎಂದು ಅಪ್ಪ ಅಮ್ಮನಿಗೆ ಹೇಳುತ್ತಿದ್ದದ್ದು ನಾನು ಓಡುತ್ತಿದ್ದಂತೆ ಕುಂದುತ್ತಿತ್ತು.