ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?

ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?

ಬರಹ

ಕನ್ನಡ ಜನರ ಓದು ಅಭ್ಯಾಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನನ್ನ ಮಾತುಗಳು ಕೊಂಚ ವಿಚಿತ್ರವಾಗಿ ಕೇಳಿಸಬಹುದು. ಆದರೂ ತಾಳ್ಮೆಯಿಂದ ಓದಿ ಚರ್ಚೆ ಮಾಡುತ್ತೀರೆಂದುಕೊಂಡಿದ್ದೇನೆ.
ಪುಸ್ತಕಗಳನ್ನು ಸಂಗ್ರಹಿಸುವುದು, ಜೋಪಾನವಾಗಿ ಇಟ್ಟುಕೊಳ್ಳುವುದು ವ್ಯರ್ಥ ಎಂದು ಅನಿಸುತ್ತಿದೆ. ನಮ್ಮ ಅಪ್ಪನ ಕಾಲದಿಂದ ಮತ್ತು ನಾನು ಓದ ತೊಡಗಿದಾಗಿನಿಂದ ಸಂಗ್ರಹಗೊಂಡ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಅನಗತ್ಯ ಹೊರೆ ಅನಿಸತೊಡಗಿದೆ.
೧. ಮತ್ತೆ ಮತ್ತೆ ಓದಲು ಬಯಸುವ ಪುಸ್ತಕಗಳ ಸಂಖ್ಯೆ ನನಗೆ ಗೊತ್ತಿರುವ ಭಾಷೆಗಳನ್ನೆಲ್ಲ ಸೇರಿಸಿದರೂ ಐನೂರು ಮೀರಲಾರದು. ಮತ್ತೆ ಯಾಕೆ ಈ ಪುಸ್ತಕ ರಾಶಿ?
೨. ನಮ್ಮ ಯಾರದೇ ಸಂಗ್ರಹದಲ್ಲಿರುವ ಪುಸ್ತಕಗಳಲ್ಲಿ ಶೇ ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ಎರಡನೆಯ ಬಾರಿಗೆ ತೆರೆದು ನೋಡುವುದೇ ಇಲ್ಲ. ಮತ್ತೆ ಯಾಕೆ ಅವನ್ನೆಲ್ಲ ಇಟ್ಟುಕೊಂಡಿರುತ್ತೇವೆ?
೩. ಹೆಣ್ಣುಮಕ್ಕಳು ಇಡೀ ಜೀವಮಾನದಲ್ಲಿ ಹತ್ತು ಬಾರಿ ಕೂಡ ಉಡದ ಬೆಲೆ ಬಾಳುವ ಜರಿ ಸೀರೆಗಳನ್ನು ಸಂಗ್ರಹಿಸುವ ಹಾಗೆ ಪುಸ್ತಕಗಳನ್ನೂ ನಾನು ಸಂಗ್ರಹಿಸಿಕೊಂಡಿದ್ದೀನಾ?
೪. ಓದಿದ್ದು ಮನಸ್ಸಿಗೆ ಇಳಿದು ನನ್ನ ವ್ಯಕ್ತಿತ್ವದ ಭಾಗವೇ ಅಗುವುದಾದರೆ ನಿರ್ಜೀವ ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು? ನನಗೆ ಹಾಗೆ ಓದಲು ಅಗಿಲ್ಲ ಎಂದೇ?
೫. ವರ್ತಮಾನದಲ್ಲಿ ಬದುಕುವುದು ಮುಖ್ಯ ಅನ್ನುವುದಾದರೆ ಭೂತಕಾಲದ ಭಾವ-ವಿಚಾರ ವಸ್ತು ಸಂಗ್ರಹಾಲಯದಂತಿರುವ ಪುಸ್ತಕಗಳನ್ನು ಯಾಕೆ ಕೂಡಿಟ್ಟುಕೊಳ್ಳಬೇಕು?
೬. ಬರೆಯುವ ಕೆಲಸದಲ್ಲಿರುವವರಿಗೆ ರೆಫರೆನ್ಸ್‌ಗೆ ಬೇಕು ಅನ್ನುವ ವಾದ ಇದ್ದೀತು. ಆದರೆ ಅದಕ್ಕೆ ಈಗ ಅಂತರ್ಜಾಲ ಇದೆ, ಲೈಬ್ರರಿ (ಎಷ್ಟೇ ಕೆಟ್ಟ ವ್ಯವಸ್ಥೆಯವಾದರೂ) ನಮ್ಮಲ್ಲಿವೆ. ಖಾಸಗಿ ಪುಸ್ತಕ ಸಂಗ್ರಹ ಏಕೆ ಬೇಕು?
೭. ದುಡ್ಡು ಕೂಡಿಡುವುದಕ್ಕೆ, ಒಡವೆಗಳನ್ನು ಮಾಡಿಸಿ ಬ್ಯಾಂಕಿನ ಲಾಕರ್‌ನಲ್ಲಿ ಇಡುವುದಕ್ಕೆ, ಇರುವ ಒಂದು ಮನೆಯಲ್ಲದೆ ಹಲವು ಮನೆ ಸೈಟುಗಳನ್ನು ಮಾಡಿಕೊಳ್ಳುವುದಕ್ಕೆ ಇತ್ಯಾದಿ ಚಟುವಟಿಕೆಗಳಿಗೆ ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಯಾವ ವ್ಯತ್ಯಾಸವಿದೆ?