ಪೂಜಿಸಲೆಂದೆ.... ಹೂಗಳ ತಂದೆ!!
ಹೂವು ಸೃಷ್ಠಿಯ ಸೌಂದರ್ಯಕ್ಕೆ ಸಾಕ್ಷಿ. ರಸಿಕರ ಕಂಗಳ ಸೆಳೆಯುವ ಬೆಡಗಿ. ಮಗುವಿನ ಮತ್ತೊಂದು ಹೆಸರು. ಜೀವ ವೈವಿಧ್ಯದ ಉಸಿರು. ಪ್ರಕೃತಿದತ್ತ ಏರ್ ಪ್ರೆಶ್ನರ್!!.
ಹೂವು ರಸಾನುಭವದ ಸೆಲೆ. ಭಗವಂತನ ಕಲೆಯ ಬಲೆ. ಆದ್ದರಿಂದಲೇ ಆಸ್ತಿಕವಾದ ಸಾತ್ವಿಕ ಮನಸ್ಸು ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಭಗವಂತನ ಕಾಣಿಕೆಯಾದ ಹೂವನ್ನು ಅವನಿಗೇ ಸಮರ್ಪಿಸುವುದರ ಮೂಲಕ ಧನ್ಯತಾಭಾವವನ್ನು ಹೊಂದುತ್ತದೆ. ಹೂವಿಲ್ಲದ ದೇವರಪೂಜೆ ನೀರಿಲ್ಲದ ಸ್ನಾನದಂತೆ!!
ನಮ್ಮ ತಂದೆ ದೇವಸ್ಥಾನವೊಂದರಲ್ಲಿ ಅರ್ಚಕರಾಗಿದ್ದ ಕಾಲ. ಆ ದೇವಸ್ಥಾನವು ಊರಿನ ಮಧ್ಯಭಾಗದಲ್ಲಿರುವ ಬೆಟ್ಟವೊಂದರ ಮೇಲಿದೆ. ದೇವಸ್ಥಾನಕ್ಕೆ ಬರಬೇಕೆಂದರೆ ಸುಮಾರು 170 ಮೆಟ್ಟಿಲುಗಳನ್ನು ಹತ್ತಬೇಕು. ಸಹಜವಾಗಿ ಭಕ್ತರ ಸಂಖ್ಯೆ ಕಡಿಮೆ. ಅದು ಮುಖ್ಯವಾಗಿ ಈಶ್ವರನ ದೇವಸ್ಥಾನ. ಜೊತೆಗೆ ಅವನ ಕುಟುಂಬದ ಸದಸ್ಯರೆಲ್ಲರ ಸಣ್ಣಗುಡಿಗಳು ಸುತ್ತಲೂ ಹರಡಿಕೊಂಡಿದ್ದು ನಮ್ಮ ತಂದೆ ಗಣಪತಿಯ ಅರ್ಚಕರಾಗಿದ್ದರು. ದೇವಸ್ಥಾನದ ವತಿಯಿಂದ ಬರುತ್ತಿದ್ದ ಸಂಬಳ ಕಡಿಮೆಯಿದ್ದು, ಭಕ್ತರು ಸಲ್ಲಿಸುವ ದಾನ- ದಕ್ಷಿಣೆಗಳಿಂದಲೇ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ. ಆದರೆ ಈಶ್ವರನೇ ಮುಖ್ಯದೇವರಾಗಿದ್ದರಿಂದ ಭಕ್ತರ ಕಾಣಿಕೆಗಳು ಹೆಚ್ಚಾಗಿ ಈಶ್ವರನ ಅರ್ಚಕರಿಗೇ ದೊರಕುತಿತ್ತು. ಅಲ್ಲಿ ಈಶ್ವರನ ಮಂಗಳಾರತಿಗೆ ಒಂದು ರೂಪಾಯಿ ಹಾಕಿದರೆ ಇಲ್ಲಿ ಗಣಪತಿಯ ಮಂಗಳಾರತಿಗೆ ನಾಲ್ಕಾಣೆ ಹಾಕುತ್ತಿದ್ದರು!!. ನಮ್ಮ ದೊಡ್ಡಸಂಸಾರವನ್ನು ತೂಗಿಸಲು, ಬರುವ ಆದಾಯವನ್ನು ಹೆಚ್ಚಿಸಿಕೊಳ್ಳಲೇ ಬೇಕಾಗಿತ್ತು. ನಮ್ಮ ತಂದೆ ಅದಕ್ಕೊಂದು ಉಪಾಯ ಹೂಡಿದರು. ಅವರಿಗೆ " ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ" ಎಂಬ ಮಾತಿನಲ್ಲಿ ಧೃಡನಂಬಿಕೆಯಿತ್ತು. ಉಳಿದ ಅರ್ಚಕರಿಗಿಂತ ಮುಂಚಿತವಾಗಿ ತಮ್ಮ ದೇವಸ್ಥಾನದ ಬಾಗಿಲು ತೆರೆದು, ಗಣಪತಿಯನ್ನು ವಿವಿಧ ಜಾತಿಯ ಬಣ್ಣ ಬಣ್ಣದ ಹೂವುಗಳಿಂದ ಬಹಳ ಆಕರ್ಷಣೀಯವಾಗಿ ಅಲಂಕರಿಸಿ ಪೂಜೆ ಮಾಡುತಿದ್ದರು. ಹೇಗಿದ್ದರೂ ಗಣಪತಿಗೇ ಅಗ್ರಪೂಜೆಯಷ್ಟೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳೆಲ್ಲರಿಗೂ " ಪ್ರಥಮದಲ್ಲಿ ಗಣಪತಿಯ ದರ್ಶನ ಮಾಡಿ, ತದನಂತರ ಈಶ್ವರನ ದರ್ಶನ ಮಾಡಬೇಕು!!" ಎಂದು ಹೇಳತೊಡಗಿದರು. ಗಣಪತಿಯ ಅಲಂಕಾರ ಮತ್ತು ನಮ್ಮ ತಂದೆಯ ಸ್ನೇಹಪೂರ್ವಕ ನಡವಳಿಕೆಯಿಂದ ಭಕ್ತರೂ ಸಂತೋಷಗೊಂಡು ಹೆಚ್ಚಿನ ದಕ್ಷಿಣೆ ನೀಡಲು ಆರಂಭಿಸಿದರು. ಆದರೆ ಇಲ್ಲೊಂದು ಬಹುದೊಡ್ದ ತೊಡಕಿತ್ತು. ಅದೆಂದರೆ ಪ್ರತಿದಿನವೂ ಅಷ್ಟೊಂದು ಬಗೆಯ ಹೂವುಗಳನ್ನು ಸಂಗ್ರಹಿಸುವ ಕೆಲಸ. ದೇವಸ್ಥಾನದ ಮುಂಭಾಗದಲ್ಲಿ ಹೂದೋಟವಿತ್ತು. ಅಲ್ಲಿ ದಾಸವಾಳ, ಬೆಟ್ಟದ ತಾವರೆ, ಕಣಗಿಲೆ,ಕರವೀರ, ಪಾರಿಜಾತ, ಗೊರಟೆ, ಮಲ್ಲಿಗೆ, ಗುಲಾಬಿ, ಸೇವಂತಿಗೆ, ಶಂಖಪುಷ್ಪ, ಕನಕಾಂಬರ, ನಂಜಬಟ್ಟಲು, ಗೌರಿ, ತುಂಬೆ ಇನ್ನೂ ಹತ್ತು ಹಲವು ಗಿಡಗಳು, ಸಂಪಿಗೆ ಮತ್ತು ನಾಗಸಂಪಿಗೆಯಂತಹ ಮರಗಳು ಇದ್ದವು. ನಮ್ಮ ತಂದೆಯವರಿಗೆ ಗಂಗೆ-ಗಂಧ ಇತ್ಯಾದಿ ಪೂಜೆಗೆ ಅಣಿಮಾಡುವಷ್ಟರಲ್ಲಿ ಸಮಯ ಮೀರುತಿತ್ತು. ಆದ್ದರಿಂದ ಹೂಗಳನ್ನು ಬಿಡಿಸಿಕೊಂಡು ಬರುವ ಕೆಲಸವನ್ನು ನಮಗೆ, ಅಂದರೆ ಮೂವರು ಮಕ್ಕಳಿಗೆ ವಹಿಸಿದ್ದರು. ಕೆಲಸ ಹೇಳಿದರೆ ನೆಪ ಹೇಳಿ ತಪ್ಪಿಸಿಕೊಳ್ಳುವ ನಮ್ಮ ಕಳ್ಳಬುದ್ಧಿ ಅವರಿಗೆ ಚೆನ್ನಾಗಿ ಅರಿವಿತ್ತು. ಆದ್ದರಿಂದ ಹೆಚ್ಚು ಹೂಗಳನ್ನು ತಂದವರಿಗೆ ಎರಡು ರೂಪಾಯಿಯ ನಗದು ಬಹುಮಾನವನ್ನು ಘೋಷಿಸಿದ್ದರು. ದುಡ್ದಿನ ಆಸೆಗಾಗಿ ನಾವು ಚಳಿ-ಮಳೆ ಲೆಕ್ಕಿಸದೇ ಬೆಳಕು ಹರಿಯುವ ಮುನ್ನವೇ ಕಪಿಸೈನ್ಯ ನುಗ್ಗಿದಂತೆ ಹೂದೋಟಕ್ಕೆ ದಾಂಗುಡಿಯಿಡುತ್ತಿದ್ದೆವು. ಉದ್ದವಾದ ಬಿದಿರಿನ ದೋಟಿಯಿಂದ ಎತ್ತರವಾದ ಸಂಪಿಗೆ ಮರದ ಹೂಗಳನ್ನು ಕೀಳುತ್ತಿದ್ದೆವು. ಉದ್ದವಾದ ಬಳುಕುವ ದೋಟಿಯಿಂದ ತಲೆ ಎತ್ತಿಕೊಂಡು ಹೂ ಕೀಳುವುದು ಬಹುಸುಲಭದ ಕೆಲಸವೇನಲ್ಲ. ರಟ್ಟೆ-ಕುತ್ತಿಗೆ ನೋವಾಗುತ್ತಿದ್ದರೂ ಎರಡು ರೂಪಾಯಿಯ ಮುಂದೆ ಲೆಕ್ಕವಿರುತ್ತಿರಲಿಲ್ಲ. ಒಮ್ಮೊಮ್ಮೆ ನಮ್ಮಲ್ಲೇ ಪೈಪೋಟಿ ಹೆಚ್ಚಾಗಿ ಯಾವ ಹೂವನ್ನೂ ಗಿಡದಲ್ಲಿ ಉಳಿಸದೇ ಕೀಳುತ್ತಿದ್ದೆವು.ಆಗೆಲ್ಲಾ ಈಶ್ವರನ ಅರ್ಚಕರು ನಮ್ಮ ತಂದೆಯ ಬಳಿ ಹೂಗಳನ್ನು ಕೇಳಿ ಪಡೆದುಕೊಳ್ಳುತ್ತಿದ್ದರು. ಹೀಗೆ ಹೂ ಬಿಡಿಸುವ ಪೈಪೋಟಿಯಲ್ಲಿ ಸಮಯ ಸರಿದದ್ದೇ ತಿಳಿಯದೆ ಕೊನೆಗೆ ಶಾಲೆಗೆ ತಡವಾಯಿತೆಂದು ನಾಲ್ಕು ತಂಬಿಗೆ ನೀರು ಸುರಿದುಕೊಂಡು ಸ್ನಾನದ ಶಾಸ್ತ್ರ ಮುಗಿಸಿ ಸಂಧ್ಯಾವಂದನೆಯನ್ನು ಮಾಡದೇ ಓಡುತ್ತಿದ್ದೆವು. ನಮ್ಮ ಅಜ್ಜಿ ” ಏಯ್! ಮಕ್ಳೇ ಮೂರ್ಅರ್ಘ್ಯನಾದ್ರೂ ಬಿಟ್ಟು, ಯಾರಾದ್ರೂ ಮನೆದೇವ್ರಿಗೆ ನಾಲ್ಕು ಸೌಟು ನೀರ್ಹಾಕಿ ಎರಡು ಹೂನಾದ್ರು ಏರುಸ್ರೋ!!” ಎಂದು ಗದರಿಸುತ್ತಿದ್ದರೂ ನಾವ್ಯಾರೂ ಕೇರ್ಮಾಡುತ್ತಿರಲಿಲ್ಲ. ಕೊನೆಗೆ ಮನೆದೇವರ ಪೂಜೆಯ ವಿಷಯ ನಮ್ಮ ತಂದೆಯರಿಗೆ ತಿಳಿದು ನಮಗೆ ಅಷ್ಟೋತ್ತರ ಸೇವೆ ಸಲ್ಲುತಿತ್ತು. ಆದರೂ ಹೂಗಳನ್ನು ಬಿಡಿಸಿ ಸಂಗ್ರಹಿಸುವದರಲ್ಲಿದ್ದ ಸಂತೋಷ, ದುಡ್ಡಿನ ಕಾರಣದ ಹೊರತಾಗಿಯೂ, ಪೂಜೆ ಮಾಡುವಾಗ ಸಿಕ್ಕುತ್ತಿರಲಿಲ್ಲ!!!
ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು, ಮದುವೆಯೂ ಆಗಿ ನಾನೇ ಮನೆಯ ಯಜಮಾನನಾದಾಗ ದೇವರಪೂಜೆಯ ಹೊಣೆಗಾರಿಕೆಯಿಂದ ಮೊದಲಿನಂತೆ ತಪ್ಪಿಸಿಕೊಳ್ಳುವಂತಿರಲಿಲ್ಲ. ಮೊದಲು ನಾವಿದ್ದ ಬಾಡಿಗೆ ಮನೆಯಲ್ಲಿ ತುಳಸಿಕಟ್ಟೆಗೂ ಜಾಗವಿರಲಿಲ್ಲ. ಪ್ರತಿದಿನವೂ ಇಪ್ಪತ್ತು ರೂಪಾಯಿಯ ಬಿಡಿಹೂಗಳನ್ನು ಮಾರುಕಟ್ಟೆಯಿಂದ ತರುತ್ತಿದ್ದೆ. ಅವುಗಳಾದರೋ ಬಾಡಿಹೋಗಿ ದಳಗಳು ಉದುರುತ್ತಿದ್ದವು. ಅವುಗಳನ್ನು ದೇವರಿಗೆ ಏರಿಸಲು ಮನಸ್ಸಿಗೆ ಕಷ್ಟವಾಗುತಿತ್ತು.
ನಂತರ ಮನೆಬದಲಾಯಿಸುವಾಗ ದೊಡ್ಡ ಆವರಣದಲ್ಲಿ ಹೂಗಿಡಗಳಿದ್ದ ಮನೆಯೇ ದೊರಕಿ, ಊರಿಗೇ ಮರಳಿದಷ್ಟು ಖುಷಿಯಾಗಿತ್ತು. ಮೊದಲೆನೆಯ ದಿನವೇ ನಾಲ್ಕಾರು ಹೂಗಳನ್ನು ಬಿಡಿಸಿಕೊಂಡು ಬಂದು ಪೂಜೆ ಮಾಡಿದಾಗ ಮನಸ್ಸು ಹಗುರಾಗಿತ್ತು. ಆದರೆ ಅಂದೇ ಸಂಜೆ ಮನೆಯ ಮಾಲೀಕ ಹೂಗಳನ್ನು ಯಾವ ಬಾಡಿಗೆದಾರರೂ ಕೀಳಬಾರದೆಂಬ ತನ್ನ ಶಾಸನವನ್ನು ತಿಳಿಸಿ ಎಚ್ಚರಿಕೆ ನೀಡಿ ಹೊರಟುಹೋದ. ಪುನಃ ನಾನು ಹೂಗಳನ್ನು ಕೊಳ್ಳತೊಡಗಿದೆ.
ಇದಾಗಿ ಎರಡು ವರ್ಷದೊಳಗೇ ಮತ್ತೆ ಮನೆ ಬದಲಾಯಿಸುವ ಪರಿಸ್ಥಿತಿ ಬಂದೊದಗಿತು. ಈ ಬಾರಿ ನೆಲಮಹಡಿಯ ಕಾರ್ನರ್ಹೌಸ್ಸಿಕ್ಕಿತು. ಮನೆಯ ಮಾಲೀಕರು ವಿದೇಶದಲ್ಲಿದ್ದು ಮೊದಲೆನೆಯ ಮಹಡಿಯಲ್ಲೂ ಬಾಡಿಗೆದಾರರೇ ಇದ್ದುದರಿಂದ ನಮಗೆ ಯಾವ ಕಿರಿಕ್ಕುಗಳೂ ಇರಲಿಲ್ಲ. ಆದರೆ ಆವರಣದ ಒಳಗೆ ಬಿಸಿಲು ಸರಿಯಾಗಿ ಬೀಳುತ್ತಿರಲಿಲ್ಲವಾಗಿ ಕುಂಡಗಳಲ್ಲಿ ಹೂಗಿಡ ಬೆಳೆಸುವ ನಮ್ಮ ಪ್ರಯತ್ನ ಫಲಿಸಲಿಲ್ಲ. ಅಲ್ಲದೇ ಟೆರೇಸ್ಗೆ ಹೋಗಲು ಮೊದಲನೆಯ ಮಹಡಿಯ ಮನೆಯೊಳಗಿಂದಲೇ ಮೆಟ್ಟಿಲುಗಳಿದ್ದು ನಮಗೆ ನೇರ ಪ್ರವೇಶ ಸಾಧ್ಯವಿರಲಿಲ್ಲ. ಆದರೆ ಆವರಣದ ಹೊರಗೆ ಎರಡೂ ರಸ್ತೆಯ ಬದಿಗಳಲ್ಲಿ ಗಿಡನೆಡಲು ಸಾಕಷ್ಟು ಜಾಗವಿತ್ತು. ನಾವು ಅಲ್ಲಿ ಕರವೀರ, ಕಣಗಿಲೆ, ರತ್ನಗಂಧಿ ಮುಂತಾಗಿ ನಾಲ್ಕಾರು ಗಿಡಗಳನ್ನು ನೆಟ್ಟೆವು. ನನ್ನ ಹೆಂಡತಿ ದಿನವೂ ನೀರು ಹಿಡಿದು ಗೊಬ್ಬರ ತರಿಸಿಹಾಕಿ ಚೆನ್ನಾಗಿ ಆರೈಕೆ ಮಾಡಿದಳು. ಎಲ್ಲಾ ಗಿಡಗಳು ಬೆಳೆದುನಿಂತು ಹೂ ಬಿಡಲು ಪ್ರಾರಂಭಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ!. ನನ್ನವಳು ನಾನು ಹೂವಿಗಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಪಾಕೆಟ್ಮನಿಯಾಗಿ ಅವಳಿಗೆ ಕೊಡಬೇಕೆಂದು ಆಗ್ರಹಿಸಿದಳು. ನನಗಾದರೋ ಕಳೆದುಹೋದ ಅಮೂಲ್ಯ ಶ್ಯಮಂತಕಮಣಿ ದೊರಕಿದಷ್ಟು ಆನಂದವಾಗಿತ್ತು. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ನಾನು ಬೆಳಿಗ್ಗೆ ಏಳು ಗಂಟೆಗೆ ಎದ್ದು ಹೂ ಕೀಳಲು ಹೊರಟರೆ ಎಲ್ಲಾ ಹೂಗಳು ಮಾಯವಾಗಿರುತ್ತಿದ್ದವು!!. ಇದರ ಬಗ್ಗೆ ಪತ್ತೆದಾರಿಕೆ ನೆಡಸಲೇಬೇಕೆಂದು ನಿಶ್ಚಯಿಸಿ, ಒಂದು ದಿನ ಬೆಳಗಿನ ಜಾವ ನಾಲ್ಕು ಗಂಟೆಗೇ ಎದ್ದು, ಮನೆಯೊಳಗಿನ ದೀಪವಾರಿಸಿ ಕಿಟಕಿಯಿಂದಲೇ ಹೊರಗೆ ಗಮನಿಸತೊಡಗಿದೆ. ಸ್ವಲ್ಪ ಹೊತ್ತಿಗೆ ಯಾರೋ ಹೂ ಕೀಳುತ್ತಿರುವುದು ಅಸ್ಪಷ್ಟವಾಗಿ ಕಂಡುಬಂತು. ಸೂಕ್ಷ್ಮವಾಗಿ ಗಮನಿಸಿದಾಗ ಯಾರದೋ ಮನೆಗೆಲಸದ ಹೆಂಗಸಿನಂತೆ ತೋರಿತು. ನಾನು ನಿಧಾನವಾಗಿ ಬಾಗಿಲು ತೆರೆದು” ಯಾರ್ರೀ... ನೀವು?” ಎನ್ನುತ್ತಿದ್ದಂತೆ ಓಟ ಕಿತ್ತಳು!. ಮತ್ತೆ ಬಾಗಿಲು ಮುಚ್ಚಿ ಕಾಯತೊಡಗಿದೆ. ಸ್ವಲ್ಪ ಸಮಯಕ್ಕೆ ಮತ್ತೆ ಶಬ್ದವಾಯಿತು. ನೋಡಿದರೆ ಬಿಳೀ ಪಂಚೆಯನ್ನುಟ್ಟುಕೊಂಡ ವೃದ್ಧರೊಬ್ಬರು ಬಹಳ ಕಷ್ಟದಿಂದ ಗಿಡವನ್ನು ಬಗ್ಗಿಸಿ ಹೂ ಕೀಳುತ್ತಿದ್ದರು. ನಾನು ಹೊರಗೆ ಬಂದು” ಸ್ವಾಮಿ, ಯಾಕೆ ಹೂ ಕೀಳ್ತೀರಾ?” ಎಂದೆ. ಅವರು ಯಾವುದೇ ಕಸಿವಿಸಿಯಿಲ್ಲದೇ ನಿಧಾನವಾಗಿ “ ದೇವರ ಪೂಜೆಗಪ್ಪ, ನಿಮಗೂ ಪುಣ್ಯ ಬರುತ್ತೆ!!” ಎಂದರು. ನಾನು” ನಮ್ಮ ಮನೆದೇವರ ಪೂಜೆಗೂ ನಾಲ್ಕು ಹೂ ಉಳಿಸಿ, ನಿಮಗೂ ಪುಣ್ಯ ಬರುತ್ತೆ” ಎಂದೆ. ಅವರ ಕೈಯಲ್ಲಿರುವ ಬುಟ್ಟಿಯ ತುಂಬಾ ಹೂಗಳಿದ್ದವು. ಅವರು “ಇವಿಷ್ಟೂ ನಿಮ್ಮದೇನಲ್ಲವಪ್ಪ! ಬೇರೆ ಮನೆಯವರ ಗಿಡದಿಂದಲೂ ಬಿಡಿಸಿಕೊಂಡು ಬಂದಿದ್ದೇನೆ” ಎನ್ನುತ್ತಾ ಹೊರಟುಹೋದರು. ನಾನು ಮತ್ತೆ ಒಳಗೆ ಬಂದು ಬಾಗಿಲುಹಾಕಿಕೊಂಡು ಕಾಯುತ್ತಾ ಕುಳಿತೆ. ಕತ್ತಲು ಬೆಳಕಿಗೆ ಡ್ಯೂಟಿ ಹ್ಯಾಂಡೋವರ್ಮಾಡುತಿತ್ತು. ಆಗ ಮಧ್ಯವಯಸ್ಕರೊಬ್ಬರು ಅವಸರದಲ್ಲಿ ಬಂದು ಸರಸರನೆ ಹೂ-ಮೊಗ್ಗು ಎಲ್ಲವನ್ನೂ ರೆಂಬೆ ಸಹಿತ ಕೊಯ್ಯತೊಡಗಿದರು. ನಾನು ಕೋಪದಿಂದ “ ರ್ರೀ, ಪರ್ಮಿಶನ್ಇಲ್ದೆ ಹೀಗೆ ಹೂ ಕೀಳಕ್ಕೆ ನಾಚಿಕೆಯಾಗಲ್ವೆ?” ಎಂದು ಬೊಗಳಿದೆ!. ಅವರು ಬಹುಶಃ ಸರ್ಕಾರಿ ನೌಕರರಿರಬೇಕು. ಗಿಡಗಳು ಆವರಣದ ಹೊರಗಿರುವುದರಿಂದ ಅವು ಸಾರ್ವಜನಿಕ ಸ್ವತ್ತೆಂದೂ, ನನಗೆ ಕೇಳುವ ಅಧಿಕಾರವಿಲ್ಲವೆಂದೂ ದಬಾಯಿಸಿ ನನ್ನನ್ನು ಬೈಯುತ್ತಾ ಮುನ್ನೆಡೆದರು!! ನನಗೆ ತಲೆ ನೋಯತೊಡಗಿತು. ಬಿಸಿ ಕಾಫಿ ತರಿಸಿಕೊಂಡು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಮತ್ತೆ ಸದ್ದಾಯಿತು. ಹೊರಗೆ ಬಂದು ನೋಡಿದರೆ ಪಕ್ಕದ ಮನೆಯ ರಾಮಾಚಾರ್ಯರ ಹೆಂಡತಿ. ನನ್ನನ್ನು ಕಂಡಕೂಡಲೇ “ ಏನು, ಇವತ್ತು ಬಹಳ ಬೇಗ ಎದ್ದಿದ್ದೀರಿ? ಊರಿಗೆ ಹೊರಟಿರಾ?” ಎಂಬಿತ್ಯಾದಿ ಹಲವು ಪ್ರಶ್ನೆಗಳನ್ನು ಕೇಳುತ್ತಲೇ ಬಹಳ ಸಮಾಧಾನದಿಂದ ಇದ್ದ ಎಲ್ಲಾ ಹೂಗಳನ್ನೂ ಬಿಡಿಸಿಕೊಂಡು ಹೋದರು. ನನ್ನ ಹೆಂಡತಿ ದಿನವೂ ಸಂಜೆ ಅವರೊಂದಿಗೆ ಹರಟೆ ಕೊಚ್ಚುತಿರುತ್ತಾಳೆ. ನಾನು ಇವಳಿಗೆ ವಿಷಯ ತಿಳಿಸಿ ಅವರಿಗೆ ನಮಗೂ ಸ್ವಲ್ಪ ಹೂಗಳನ್ನು ಉಳಿಸುವಂತೆ ತಿಳಿಹೇಳು ಎಂದೆ. ಇವಳು” ನಾನಂತೂ ಅವ್ರ ಹತ್ರ ಮುಖ ಕೆಡಿಸಿಕೊಳ್ಲಲ್ಲ. ಶುಕ್ರವಾರ, ಮಂಗಳವಾರ, ವ್ರತ-ಕತೆ ಅಂತ ಕುಂಕುಮಕ್ಕೆ ಕರೆದು ಬಾಗಿನ-ಚರ್ಪಿನ ಜೊತೆಗೆ ಐವತ್ತೋ-ನೂರೋ ರುಪಾಯಿ ಇಟ್ಟುಕೊಡ್ತಾರೆ. ನೀವ್ಕೊಡೋ ಹೂವಿನ್ಬಾಬ್ತಿಗಿಂತ ಅದೇ ಜಾಸ್ತಿ!! ನೀವ್ಬೇಕಾದ್ರೆ ಮಾರ್ಕೆಟ್ನಿಂದ ಹೂ ತಗೊಂಡ್ಬನ್ನಿ” ಎಂದೆನ್ನಬೇಕೇ!!
ಈಗ ನಾನು ಹೂ ಬೇಕಾದರೆ ನಾಲ್ಕು ಗಂಟೆಗೆ ಮುಂಚಿತವಾಗಿ ಏಳಬೇಕಾಗಿತ್ತು. ಅದು ನನ್ನ ಜಾಯಮಾನಕ್ಕೆ ಒಗ್ಗುವ ಸಂಗತಿಯಲ್ಲ!. ಬದಲಾಗಿ ಬೇರೊಂದು ಮಾಂತ್ರಿಕ ಉಪಾಯ ಹೂಡಿದೆ. ಅಮಾವಾಸ್ಯೆಯ ರಾತ್ರಿ ಒಂದು ನಿಂಬೆಹಣ್ಣು ಮತ್ತು ನಾಲ್ಕಾರು ಹಸಿಮೆಣಸಿನಕಾಯಿಗಳನ್ನು ದಾರಕ್ಕೆ ಪೋಣಿಸಿ ದಾರಿಹೋಕರ ಕಣ್ಣಿಗೆ ಬೀಳುವಂತೆ ಗಿಡವೊಂದಕ್ಕೆ ಕಟ್ಟಿದೆ!. ಮರುದಿನ ನಿಧಾನವಾಗಿ ಎದ್ದು ನೋಡಿದರೆ ಗಿಡಗಳ ತುಂಬಾ ಮುತ್ತಿಕೊಂಡಿದ್ದ ಹೂಗಳು ನನ್ನತ್ತ ತುಂಟನಗೆ ಚೆಲ್ಲಿದವು!
ಹೂವನ್ನು ಹಂಚಿ ಮುಡಿಯಬೇಕೆನ್ನುವುದು ಹಿರಿಯರ ಹಿತವಚನ. ಅಂದಮೇಲೆ ನಾನು ಜನರ ಮೌಡ್ಯವನ್ನು ದುರುಪಯೋಗ ಪಡಿಸಿಕೊಂಡು ಸಂಗ್ರಹಿಸಿದ ಹೂಗಳಿಂದ ನೆರವೇರಿಸಿದ ದೇವರ ಪೂಜೆ ನಿಜವಾಗಿಯೂ ಸಾರ್ಥಕವೆಂತಾಯಿತು? ನಾನು ಮಾಡಿದ್ದು ಸರಿಯೇ? ಎಂಬ ಜಿಜ್ನಾಸೆ ನನ್ನ ಒಳಗೆ ಇನ್ನೂ ಕಾಡುತ್ತಲೇ ಇದೆ. ಅಲ್ಲಿ ಹೊರಗೆ ನಿಂಬೆಹಣ್ಣು-ಮೆಣಸಿನಕಾಯಿಗಳು ಕೊಳೆಯುತ್ತಿವೆ.
Comments
ಉ: ಪೂಜಿಸಲೆಂದೆ.... ಹೂಗಳ ತಂದೆ!!
In reply to ಉ: ಪೂಜಿಸಲೆಂದೆ.... ಹೂಗಳ ತಂದೆ!! by makara
ಉ: ಪೂಜಿಸಲೆಂದೆ.... ಹೂಗಳ ತಂದೆ!!
ಉ: ಪೂಜಿಸಲೆಂದೆ.... ಹೂಗಳ ತಂದೆ!!
In reply to ಉ: ಪೂಜಿಸಲೆಂದೆ.... ಹೂಗಳ ತಂದೆ!! by nagarathnavina…
ಉ: ಪೂಜಿಸಲೆಂದೆ.... ಹೂಗಳ ತಂದೆ!!