ಪೂರ್ಣತೆಯಲ್ಲೂ ಶೂನ್ಯತೆಯ ಕಾಣುವ ಖಿನ್ನತೆ

ಪೂರ್ಣತೆಯಲ್ಲೂ ಶೂನ್ಯತೆಯ ಕಾಣುವ ಖಿನ್ನತೆ

ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬರುವಷ್ಟು ವೇಗ ಪಡೆದಿರುವುದು ಮನಸ್ಸು ಮಾತ್ರ. ಭೂಮಿಯ ಯಾವುದೋ ಮೂಲೆಯಲ್ಲಿದ್ದ ಮನುಷ್ಯ ಚಂದ್ರಯಾನ, ಮಂಗಳಯಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಮತ್ತೆ ಬಂದು ಸ್ವಸ್ಥಾನವನ್ನು ಸೇರಿಬಿಡುತ್ತಾನೆ. ಈ *ಮನಸ್ಸು ಸರಿಯಾಗಿದ್ದರೆ ಸ್ವರ್ಗವನ್ನೇ ಸೃಷ್ಟಿಸಬಲ್ಲದು; ಕೆಟ್ಟರೆ ಘೋರ ನರಕವನ್ನೇ ಸೃಷ್ಟಿಸುತ್ತದೆ.* ಅದಕ್ಕೇ ಆಂಗ್ಲ ಬರಹಗಾರ ಮಿಲ್ಟನ್ ಹೇಳುತ್ತಾರೆ. *The mind in its own place and itself can make a heaven of hell and hell of heaven* ಎಂದು. ಎಲ್ಲ ಸುಖ, ಸಂತೋಷ, ನೆಮ್ಮದಿ, ಪ್ರೀತಿಯ ಮಹಾಪೂರವನ್ನೇ ಹರಿಸುವ ಬಂಧು ಬಳಗದವರು ಇದ್ದರೂ ಏನೂ ಇಲ್ಲ,  ಯಾರೂ ನನ್ನವರಲ್ಲ ಎಂಬ ಭಾವದಲ್ಲಿ ನರಳುವ ಅದೆಷ್ಟೋ ಜನ ನಮ್ಮ ನಡುವೆ ಇದ್ದಾರೆ. ಅವರಿಗೆ ಎಲ್ಲವೂ ಶೂನ್ಯವಾಗಿ ಕಾಣಿಸುತ್ತಾರೆ. ಇನ್ನು ಕೆಲವರು ಕಷ್ಟ ಕೋಟಲೆಗಳನ್ನೇ ಹಾಸಿ ಹೊದ್ದು, ಬಂಧು ಬಳಗವೇ ಇಲ್ಲದ ಏಕಾಂಗಿಯಾಗಿದ್ದರೂ ತನ್ನೊಡನಾಡಿಗಳೇ ಬಂಧು ಬಾಂಧವರು ಆ ಕಷ್ಟ ಕೋಟಲೆಗಳೇ ತನ್ನ ಜೀವನದ ದಾರಿ ದೀವಿಗೆಗಳು ಎಂದುಕೊಳ್ಳುತ್ತ ಸದಾ ಹುಮ್ಮಸ್ಸಿನಿಂದಿರುತ್ತಾರೆ. ಇಂತಹವರು ಶೂನ್ಯತೆಯಲ್ಲಿಯೂ ಪೂರ್ಣತೆಯನ್ನು  ಕಾಣುತ್ತಾರೆ‌. ಶೂನ್ಯ ಪೂರ್ಣವಾಗುವುದು ಹಾಗೂ ಪೂರ್ಣ ಶೂನ್ಯವಾಗಿ ಕಾಣುವುದಕ್ಕೆ ಅವರವರ ಮನಸ್ಸೇ ಕಾರಣ. ಪೂರ್ಣತೆಯಲ್ಲಿ ಶೂನ್ಯ ಕಾಣುವವರೆಂದರೆ ನಿರಾಶಾವಾದಿಗಳು. ಖಿನ್ನತೆಯಿಂದ ಬಳಲುವವರು.  

ಖಿನ್ನತೆಯಿಂದ ಬಳಲುವವರು ಅದೆಷ್ಟೇ  ವಿದ್ಯಾವಂತರಾಗಿದ್ದರೂ ವಿಶ್ವಾಸ, ವಿವೇಕ, ವಿವೇಚನೆಯನ್ನೇ ಕಳೆದುಕೊಂಡಿರುತ್ತಾರೆ. ಅದೇ ಆಶಾವಾದಿಯಾಗಿ ಲವಲವಿಕೆಯಿಂದಿರುವವರು ಅವಿದ್ಯಾವಂತನಾಗಿದ್ದರೂ ವಿವೇಕ, ವಿವೇಚನೆಯಿಂದ ನಡೆದುಕೊಳ್ಳುವ ವಿಶ್ವಾಸಯೋಗ್ಯ ವ್ಯಕ್ತಿಯಾಗಿರುತ್ತಾನೆ. *ಬದುಕೆಂದರೆ ಹಾವು ಏಣಿಯ ಆಟದಂತೆ* ಎನ್ನುವುದನ್ನು ಅರಿತು ನಡೆದರೆ ಮನಸ್ಸು ಖಿನ್ನಗೊಳ್ಳಲು ಸಾಧ್ಯವೇ ಇಲ್ಲ. 

*ಅರಿತು ನಡೆ ಅರಿತು ನಡೆ*

*ಅರಿಗಳ ಮಾತ ಮರೆತು ನಡೆ*

*ಅರಿಗಳೇ ಬದುಕ ಪಾಠ ಕಲಿಸುವ*

*ಹರಿಗಳೆಂದು ತಿಳಿದು ನಡೆ*

ಈ ರೀತಿ ತಿಳಿದು ನಡೆವ ಯಾವ ವ್ಯಕ್ತಿಯೇ ಆಗಲಿ ಖಿನ್ನತೆಗೆ ಒಳಗಾಗಲು ಸಾಧ್ಯವಿಲ್ಲ. ಅದನ್ನು ಬಿಟ್ಟು ತಮ್ಮನ್ನು  ಖಿನ್ನತೆಗೆ ಒಳಪಡಿಸಿದರೆ ಅದು ಅವರ ಸುಂದರ  ಬದುಕನ್ನು ಕುರೂಪಗೊಳಿಸಿ ಅವರನ್ನು ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಆದ್ದರಿಂದ *ಬದುಕು ಹಸಿರು ಪಾಚಿಯಂತೆ. ಜಾಗರೂಕನಾಗಿ ಕಾಲಿಟ್ಟರೆ ಅದನ್ನು ದಾಟಿ ಮುಂದಿನ ಸುಂದರತೆಯನ್ನು ಸವಿಯಬಹುದು. ಸ್ವಲ್ಪ ಎಚ್ಚರ ತಪ್ಪಿದರೂ  ಅನಾಹುತ  ತಪ್ಪಿದ್ದಲ್ಲ. 

ಮನಸ್ಸು ಅದೆಷ್ಟು ಸೂಕ್ಷ್ಮ ಎಂದರೆ ಪ್ರತಿಕ್ಷಣದ ಗ್ರಹಿಕೆ, ಚಿಂತನೆ ಸ್ವತಃ ಅದಕ್ಕೂ ನಿಲುಕದ್ದಾಗಿರುತ್ತದೆ. ಮನಸ್ಸಿನ ಪರಿವರ್ತನೆ ಪಲ್ಲಟ ಎಲ್ಲವೂ ಅತ್ಯದ್ಭುತ. ಇದರ ನಿಗೂಢತೆಯ ಆಳ ವಿಜ್ಞಾನಕ್ಕೆ ಇನ್ನೂ ಸವಾಲು ಎಸೆದು ನಿಂತಿದೆ. ಮನಸ್ಸಿನಾಳಕ್ಕೆ ಇಳಿದ ವಿಷಯಗಳು ಕನಸ ಕನವರಿಕೆಗಳಾಗಿ ಬದುಕನ್ನು ರೂಪಿಸಲೂಬಲ್ಲುದು, ಕಸಿದುಕೊಳ್ಳಲೂ ಬಲ್ಲುದು.

ಮನಸ್ಸು ವಯೋಮಾನಕ್ಕನುಗುಣವಾಗಿ ಇರುತ್ತದೆ.  ಆದರೆ ಸಮಸ್ಯೆಗಳ ಆಳ ಮಾತ್ರ ಅವರವರ ಯೋಚನಾ ಶಕ್ತಿಗನುಗುಣವಾಗಿರುತ್ತದೆ. *ಸಮಸ್ಯೆಗಳಿಲ್ಲದ ಜೀವನವೇ ಇಲ್ಲ.* ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ ಸಮಸ್ಯೆ ಎದುರಾದಾಗ ತಮ್ಮರಿವಿಗೆ ಬರುವ ಮೊದಲೇ ಖಿನ್ನತೆಗೆ ಜಾರಿರುತ್ತಾರೆ. ಅದಕ್ಕೆ  ಸಮಸ್ಯೆಗಳನ್ನು ಎದುರಿಸುವ ಬಗ್ಗೆ ಇರುವ ಭಯ ಆತಂಕ. ಪರಿಹಾರ ತಿಳಿದಿದ್ದರೂ ಕೂಡ ಆ ಸಮಯದಲ್ಲಿ ಅದು ನೆನಪಿಗೆ ಬರುವುದೂ ಇಲ್ಲ. ಅದೂ ಅಲ್ಲದೇ ಖಿನ್ನತೆಗೆ ಒಳಗಾಗುವುದು ಪರಿಹರಿಸಲಾಗದ ಭಯಂಕರ ಸಮಸ್ಯೆಗಳೂ ಅಲ್ಲ. ಕೇವಲ ಕ್ಷುಲ್ಲಕ ಕಾರಣಗಳು. ಕಛೇರಿಯಲ್ಲಿ ಅಧಿಕಾರಿಗಳು ಬೈದರೆಂದೋ.... ಸಹೋದ್ಯೋಗಿಗಳು ಅವಹೇಳನ ಮಾಡಿದರೆಂದೋ..... ಇತ್ಯಾದಿ. ಕೆಲವೊಮ್ಮೆ ಆತ್ಮೀಯರ ಅಗಲಿಕೆಯೂ ಕೂಡ ಭರಿಸಲಾಗದ ನಷ್ಟ ಎನ್ನುವ ಭಾವದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಸಾಗಿಬಿಡುತ್ತಾರೆ. ಆ ಕ್ಷಣ ಮನಸ್ಸು ಚಂಚಲಗೊಂಡು ಏನೂ ತೋಚದಂತಾಗಿ ವಿದ್ಯಾವಂತನೂ ಮೂರ್ಖನಂತೆ ವರ್ತಿಸುತ್ತಾನೆ. ಖಿನ್ನತೆಗೆ ಒಳಗಾದ ವ್ಯಕ್ತಿ ಸದಾ ಒಂಟಿಯಾಗಿರಲು ಬಯಸುತ್ತಾನೆ. ಯಾರೊಡನೆಯಾದರೂ ಮಾತನಾಡುವುದಾಗಲೀ, ಸಭೆ ಸಮಾರಂಭಗಳಿಗೆ ಹೋಗುವುದಾಗಲೀ ಆತ ಇಷ್ಟಪಡಲಾರ. ಸದಾ ಕಿರಿಕಿರಿ ಅನುಭವಿಸುತ್ತಿರುತ್ತಾನೆ. ತಾನೇನು ಮಾಡುತ್ತಿರುವೆನೆಂಬುದರ ಬಗ್ಗೆ ಅರಿವೂ ಆತನಿಗಿರುವುದಿಲ್ಲ. ಮರೆವು ಸಹಜವಾಗುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಸಿಟ್ಟಿಗೇಳುವುದು, ತನ್ನಿಂದ ಯಾವ ಕೆಲಸವೂ ಮಾಡಲಾಗದು, ತಾನೊಬ್ಬ ಅಪ್ರಯೋಜಕ ಎಂದುಬ ತಿಳಿದುಕೊಳ್ಳುವುದು ಇತ್ಯಾದಿ ಖಿನ್ನತೆಯ ರೋಗ ಲಕ್ಷಣಗಳು. ಇದನ್ನು ಕ್ರಮೇಣ ಹಾಗೇ ಬಿಟ್ಟರೆ ಸಮಾಜಕಂಟಕರಾಗಿ ಮಾರ್ಪಡುತ್ತಾರೆ ಅಥವಾ ತಮ್ಮ ಹತ್ಯೆ ತಾವೇ ಮಾಡಿಕೊಳ್ಳುತ್ತಾರೆ

ಕಷ್ಟಗಳೆನ್ನುವುದು ಒಂದು ಕಗ್ಗಂಟಿದ್ದಂತೆ. ಬಿಡಿಸಲು ಹೋದಷ್ಟೂ ಗೋಜಲಾಗುತ್ತದೆ ನಿಜ. ಹಾಗೆಂದು ಭಯ‌ ಪಡುವ ಅಗತ್ಯವಿಲ್ಲ. ಏಕೆಂದರೆ *ಸಮಸ್ಯೆಗಳು ಮಂಜುಗಡ್ಡೆಯಂತೆ; ವಿವೇಚನೆಯ ಶಾಖ ತಗುಲಿದಂತೆ ಅದು ನೀರಾಗಿ ಹರಿದು ತಂಪನ್ನು ನೀಡುತ್ತದೆ.* ಆದ್ದರಿಂದ ಖಿನ್ನತೆಗೆ ಒಳಗಾಗುವ ಸಂಭವ ನಿಮ್ಮ ಅರಿವಿಗೆ ಬರುತ್ತಿದ್ದಂತೆ ಸಾಧ್ಯವಾದಷ್ಟು ನಿಮ್ಮ ಆಸಕ್ತಿಯ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ಚಿತ್ರಕಲೆ, ಸಂಗೀತ, ಬರವಣಿಗೆ ಇತ್ಯಾದಿ. ಆಪ್ತ ರೊಡನೆ ಸಮಾಲೋಚನೆ ನಡೆಸಿ, ದೂರ ಪ್ರಯಾಣ ಬೆಳೆಸಿ......  ನಗಲು ಸಾಧ್ಯವಾಗದಿದ್ದರೂ ನಗಲು ಪ್ರಯತ್ನಿಸಬೇಕು. ಉತ್ಸಾಹಭರಿತ ವ್ಯಕ್ತಿಗಳೊಡನೆ ಬೆರೆತು ನೀವು ಅವರ ಉತ್ಸಾಹದಲ್ಲಿ ಭಾಗಿಯಾಗಲು ಪ್ರಯತ್ನಿಸಬೇಕು. ಹೀಗೆ ಖಿನ್ನತೆಗೆ ನಾವೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರೆ ಅದರಿಂದ ಹೊರಬರಲು ಸಾಧ್ಯವಿದೆ.  

*ಕಷ್ಟಗಳೆಂಬ ಕಗ್ಗಂಟ ಕಂಡು ತತ್ತರಿಸಿದರೆ*

*ಭಯಗೊಂಡ ಮನಸ್ಸು ಮುಗ್ಗರಿಸುತ್ತದೆ*

*ಕಷ್ಟಗಳೆಂಬ ಕಗ್ಗಂಟ ಎದುರಿಸಿದರೆ*

*ಯಶೋಲಕ್ಷ್ಮಿ ಜೊತೆಯಾಗುತ್ತಾಳೆ*  

ಕಷ್ಟಗಳ ಕಗ್ಗಂಟು ದಾರಿದೀವಿಗೆಯ ಕಗ್ಗವಾಗಲಿ. ಯಶೋಲಕ್ಷ್ಮಿ ಸದಾ ಜೊತೆಯಾಗಿರಲಿ.

*ಜಯಶ್ರೀ ರಾಜು*