ಮದ್ರಾಸ್ ವಿಶ್ವವಿದ್ಯಾಲಯವು ಪತ್ರಿಕೋದ್ಯಮದಲ್ಲಿ ಸ್ಮಾರ್ಟ್‌ಫೋನ್ ಬಳಸುವ ಬಗ್ಗೆಯೇ ಸ್ನಾತಕೋತ್ತರ ಪದವಿ ನೀಡುವ ಕೋರ್ಸನ್ನು ಆರಂಭಿಸಿದೆ.ಸ್ಮಾರ್ಟ್‌ಪೋನುಗಳಲ್ಲಿ ಮಾತನ್ನು ದಾಖಲಿಸಲು ಸಾಧ್ಯ.ಇದರಲ್ಲಿ ಕ್ಯಾಮರಾ ಇದೆ.ವಿಡಿಯೋ ರೆಕಾರ್ಡಿಂಗ್ ಸವಲತ್ತು ಬಳಸಿಕೊಳ್ಳಬಹುದು.ಮಿಂಚಂಚೆ ಬಳಸಿ ಒಡನೆಯೇ ಕಚೇರಿಗೆ ವರದಿಯೊಪ್ಪಿಸಬಹುದು.ಸಂಭಾಷಿಸಿ,ಸಂದರ್ಶನ ಮಾಡಬಹುದು.ಇಷ್ಟೆಲ್ಲಾ ಸುಲಭ ಸಾಧ್ಯವಾದಾಗ,ಪತ್ರಕರ್ತರಿಗೆ ಸ್ಮಾರ್ಟ್‌ಪೋನ್ ಒಂದು ಪ್ರಬಲ ಸಾಧನವಾಗಲಾರದೇ?ಹಾಗಾಗಿ ಇದನ್ನು ಬಳಸುವ ಬಗ್ಗೆ ತಿಳಿಸುವುದೇ ಈ ಕೋರ್ಸನ್ನು ಆರಂಭಿಸಿದ ಉದ್ದೇಶವಾಗಿದೆ.ಇನ್ನಿದನ್ನು ಗೂಡಚರ್ಯೆಗೆ ಬಳಸುವುದು,ಬೇರೆ ಬಗೆಗಳಲ್ಲಿ ಬಳಸಿಕೊಳ್ಳುವುದು ಸ್ಮಾರ್ಟ್‌ಫೋನಿನಲ್ಲಿ ಲಭ್ಯವಿರುವ ಸೌಕರ್ಯಗಳು ಮತ್ತು ಅನುಸ್ಥಾಪಿಸಿರುವ ತಂತ್ರಾಂಶಗಳನ್ನು ಅವಲಂಬಿಸಿದೆ.ಓರ್ವ ಸೃಜನಶೀಲ ಪತ್ರಕರ್ತ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗೆಯನ್ನು ತಾನೇ ನಿರ್ಧರಿಸಬಲ್ಲ,ಏನಂತೀರಿ?
-------------------------------------------
ಐಪ್ಯಾಡ್:ಭಾರತಕ್ಕೂ ಲಗ್ಗೆಯಿಟ್ಟಿದೆ
ಹೊಸ ಐಪ್ಯಾಡ್ ನಮ್ಮಲ್ಲೂ ಸಿಗುತ್ತಿದೆ.ರೆಟಿನಾ ತೆರೆಯ ಮೂಲಕ ಅತ್ಯಧಿಕ ಸ್ಪಷ್ಟತೆ,ಐಪ್ಯಾಡಿನ ಹೈಲೈಟ್ ಎನ್ನುವುದು ನಿಮಗೆ ತಿಳಿದಿರಬಹುದು.ವೈ-ಫೈ ಸೌಕರ್ಯವಿರುವ ಐಪ್ಯಾಡ್ ಹದಿನಾರು ಜಿಬಿ ಸ್ಮರಣಸಾಮರ್ಥ್ಯದೊಂದಿಗೆ ಮೂವತ್ತೊಂದು ಸಾವಿರ ರೂಪಾಯಿಗೆ ಬೆಲೆಗೆ ಲಭ್ಯ.ಇಂತಹುದ್ದೆ ಮೂವತ್ತೆರಡು ಜೀಬಿ ಸಾಮರ್ಥ್ಯದ್ದು ಮೂವತ್ತೇಳು ಸಾವಿರಕ್ಕೂ,ಅರುವತ್ತನಾಲ್ಕು ಜೀಬಿಯದ್ದಕ್ಕೆ ನಲುವತ್ತಮೂರು ಸಾವಿರ ಬೆಲೆಯಲ್ಲೂ ಲಭ್ಯವಿದೆ.4ಜಿ ಸಾಮರ್ಥ್ಯದ್ದು ಬೇಕೆಂದಾದರೆ,ಇನ್ನೂ ಹೆಚ್ಚು ಬೆಲೆ ತೆರಬೇಕು.ಹೆಚ್ಚಿನವರು ಐಪ್ಪಾಡ್ ಬಗ್ಗೆ ಕೇಳಿ ಸಂತಸ ಪಡಬಹುದೇ ವಿನ: ಖರೀದಿಸಿ ಬಳಸಲು ಸಾಧ್ಯವಿಲ್ಲ.
ಮೊಬೈಲ್ ಪೋನುಗಳ ಮಾರಾಟದಲ್ಲಿ ಆಪಲ್ ಕಂಪೆನಿ ಮಾರುಕಟ್ಟೆ ನಾಯಕ ಸ್ಥಾನದಲ್ಲಂತೂ ಇಲ್ಲ.ಅದು ಸದ್ಯ ಮಾರುಕಟ್ಟೆಯ ಶೇಕಡಾ ಹತ್ತು ಭಾಗ ಮಾರಾಟ ಸಾಧಿಸಿದೆ.ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿ ನಾಲ್ಕರಲ್ಲಿ ಒಂದು ಮೊಬೈಲ್ ಪೋನ್ ಸ್ಯಾಮ್‌ಸಂಗ್ ಕಂಪೆನಿಯದ್ದು-ಹಾಗಾಗಿ ಅದು ಮೊದಲನೆಯ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.ನೋಕಿಯಾ ಕಂಪೆನಿ ವರ್ಷಗಟ್ಟಲೆಯಿಂದ ಮಾರಾಟದಲ್ಲಿ ಮುಂದಿದ್ದದ್ದು,ಈಗ ಎರಡನೆಯ ಸ್ಥಾನಕ್ಕೆ ಜಾರಿದೆ.ಸ್ಯಾಮ್‌ಸಂಗ್ ಕಂಪೆನಿಯು ಸುಮಾರು ಹತ್ತು ಕೋಟಿ ಹ್ಯಾಂಡ್‌ಸೆಟ್‌ಗಳನ್ನು ಮಾರಿದ್ದರೆ,ನೋಕಿಯಾ ಒಂಭತ್ತು ಕೋಟಿ ಹ್ಯಾಂಡ್‌ಸೆಟ್ ಮಾರಿದೆ.ಭಾರತದಲ್ಲಿ ಮಾರಾಟದಲ್ಲಿನ್ನೂ ನೋಕಿಯಾ ಅಗ್ರಸ್ಥಾನದಲ್ಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
---------------------------------------------------
ಬ್ಯಾಂಕ್ ಖಾತೆ ವರ್ಗಾವಣೆ ಅನುಕೂಲ ಕಲ್ಪಿಸಿ:ಆರ್‌ಬಿಐ
ಬ್ಯಾಂಕ್ ಖಾತೆಯು ಯಾವ ಶಾಖೆಯಲ್ಲಿದೆ ಎನ್ನುವುದು ಕಂಪ್ಯೂಟರ್ ಯುಗದಲ್ಲಿ ಅರ್ಥ ಕಳೆದುಕೊಂಡಿದೆ.ಒಂದು ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಖಾತೆಯಿರಲಿ,ಅದರ ವಿವರಗಳು ಬ್ಯಾಂಕಿನ ಸರ್ವರ್‌ನಲ್ಲಿರುತ್ತದೆ.ಸರ್ವರ್‌ನ್ನು ಸಂಪರ್ಕಿಸಿ,ಇಂಟರ್‌ನೆಟ್ ಮೂಲಕ ಬ್ಯಾಂಕ್ ಸೇವೆಗಳನ್ನು ಪಡೆಯುವ ಕೋರ್ ಬ್ಯಾಂಕ್ ಸೇವೆಗಳನ್ನು ಪಡೆಯುವುದೀಗ ಸಾಮಾನ್ಯ.ಹೀಗಿರುವಾಗ,ಖಾತೆಯೊಂದನ್ನು ಶಾಖೆಗೆ ಥಳಕು ಹಾಕುವುದು ಅನಗತ್ಯವೆನ್ನುವುದು ವಾಸ್ತವ.ರಿಸರ್ವ್ ಬ್ಯಾಂಕ್ ಇದನ್ನು ಮನಗಂಡು,ಗ್ರಾಹಕ ಬಯಸಿದರೆ,ಆತನ ಶಾಖೆಯನ್ನು ಬಯಸಿದ ಶಾಖೆಗೆ ವರ್ಗಾಯಿಸುವ ಸೇವೆಯನ್ನು ಒದಗಿಸಲು ಸೂಚಿಸಿದೆ.ಶಾಖೆಯೊಂದರಲ್ಲಿ ಹೊಸ ಖಾತೆ ತೆರೆಯದೆ,ಹಳೆಯ ಖಾತೆಯನ್ನು ಬಯಸಿದ ಜಾಗದ ಬ್ಯಾಂಕ್ ಶಾಖೆಗೆ ವರ್ಗಾಯಿಸಲು ಸಾಧ್ಯವಾಗಿಸಿ,ಎಂದು ಬ್ಯಾಂಕುಗಳಿಗೆ ಆರ್‌ಬಿಐ ವಿಧಿಸಿದೆ.ಇದರಿಂಗ ಹೊಸತಾಗಿ ಖಾತೆ ತೆರೆಯಲು ದಾಖಲೆಗಳನ್ನು ನೀಡುವ ತೊಂದರೆ ಗ್ರಾಹಕನಿಗೆ ತಪ್ಪುತ್ತದೆ.ಕೋರ್ ಬ್ಯಾಂಕ್ ಸವಲತ್ತಿನ ಮೂಲಕ ಚೆಕ್ ವಟಾಯಿಸುವ ಸೇವೆ ಪಡೆದಾಗ,ಖಾತೆ ಇರುವ ಶಾಖೆಯ ಜಾಗದಲ್ಲಿ ಮಾತ್ರಾ ಉಚಿತ ಸೇವೆ,ಇತರೆಡೆ ಶುಲ್ಕ ನೀಡ ಬೇಕಾಗುತ್ತದೆ ಎಂದು ವಿಧಿಸುವ ಬ್ಯಾಂಕುಗಳಿಗೆ ಇದರಿಂದ ಒಳ್ಳೆಯ ಪಾಠವಾಗಿದೆ.
-----------------------------------------------
ಗೂಗಲ್ ಡ್ರೈವ್:ಸಂಶಯ ಹುಟ್ಟಿಸಿದ ನಿಯಮಾವಳಿಗಳು
ಗೂಗಲ್ ಇದೀಗ ಕ್ಲೌಡ್ ಸೇವೆಯ ಮೂಲಕ ಇಂಟರ್‌ನೆಟ್‌ನಲ್ಲಿ ಸ್ಮರಣ ಸಾಮರ್ಥ್ಯ ಲಭ್ಯವಾಗಿಸಿದೆ.ಐದು ಜೀಬಿ ಸಾಮರ್ಥ್ಯದ ಸೇವೆ ಉಚಿತವಾಗಿದೆ.ಗೂಗಲ್ ಡ್ರೈವ್ ಎಂಬ ಹೆಸರಿನ ಸೇವೆಯನ್ನು ಗೂಗಲ್ ಆರಂಭಿಸಿರುವುದರೊಂದಿಗೆ ಇದು ಸಾಧ್ಯವಾಗಿದೆ.ಇಂಟರ್‌ನೆಟ್ ಮೂಲಕ ಎಲ್ಲಿಂದಲೂ ಗೂಗಲ್ ಡ್ರೈವಿನಲ್ಲಿ ಶೇಖರಿಸಿದ ಚಿತ್ರ,ಕಡತಗಳನ್ನು ಮತ್ತು ವಿಡಿಯೋಕ್ಲಿಪ್‌ಗಳನ್ನು ಬಳಸಲು,ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.ಮೈಕ್ರೋಸಾಫ್ಟ್ ಕಂಪೆನಿಯ ಸ್ಕೈಡ್ರೈವ್ ಇದೇ ತೆರನ ಸೇವೆ ಒದಗಿಸುತ್ತಾ ಇದೀಗಲೇ ಜನಪ್ರಿಯವಾಗಿದೆ.ಡ್ರಾಪ್‌ಬಾಕ್ಸ್ ಇಂತಹುದ್ದೇ ಸವಲತ್ತು ನೀಡುವ ಇನ್ನೊಂದು ಸೇವೆಯಾಗಿದೆ.ಹಾಗೆ ಹೇಳಬೇಕೆಂದರೆ ಗೂಗಲ್ ಈ ಸೇವೆಯನ್ನು ತಡವಾಗಿ ಆರಂಭಿಸಿದೆ.ನೂರು ಜೀಬಿ ಸಾಮರ್ಥ್ಯ ಬೇಕೆಂದರೆ,ಇಪ್ಪತ್ತು ಡಾಲರು ಪ್ರತಿ ತಿಂಗಳೂ ಶುಲ್ಕ ನೀಡಬೇಕು.ಇನ್ನೂರು ಡಾಲರನ್ನು ಪಾವತಿಸಿದರೆ,ಸೇವೆಯನ್ನು ಒಂದು ವರ್ಷಕಾಲ ಪಡೆಯಬಹುದು.
ಡ್ರಾಪ್‌ಬಾಕ್ಸ್ ಮತ್ತು ಸ್ಕೈಡ್ರೈವ್‌ಗಳಿಗಿಂತ ಉತ್ತಮ ಸೇವೆಯೆನಿಸಲು ಗೂಗಲ್ ತನ್ನ ಶೋಧ ಸೇವೆಯನ್ನು ಬಳಸಿಕೊಳ್ಳಲಿದೆ.ಬಳಕೆದಾರರು ಮುದ್ರಿತ ಪತ್ರಿಕೆ ಅಥವಾ ಹಾಳೆಯಲ್ಲಿನ ಚಿತ್ರವನ್ನು ಸ್ಕ್ಯಾನ್ ಮಾಡಿ,ಅದರಲ್ಲಿರುವ ಪಠ್ಯ ಅಥವಾ ಚಿತ್ರವನ್ನು ಬಳಸಿಕೊಂಡು,ಗೂಗಲ್ ಡ್ರೈವ್‌ನಲ್ಲಿ ಇಂತಹುದ್ದು ಇದೆಯೇ ಎಂದು ಶೋಧಿಸಬಹುದು.
ಗೂಗಲ್ ಡ್ರೈವ್ ಸೇವೆಯನ್ನು ಯಾವುದೇ ಆಪರೇಟಿಂಗ್ ವ್ಯವಸ್ಥೆಯನ್ನು ಪಡೆಯುವ ಕಂಪ್ಯೂಟರಿನಿಂದಲೂ ಪಡೆಯಲು ಸಾಧ್ಯವಿದೆ.ಈ ಸ್ಪರ್ಧೆಯನ್ನು ಎದುರಿಸಲೋ ಎನ್ನುವಂತೆ ಸ್ಕೈಡ್ರೈವ್ ಬಳಸುವವರಿಗೆ ಲಭ್ಯವಾಗುವ ಸ್ಥಳಾವಕಾಶವನ್ನು ಮೈಕ್ರೋಸಾಫ್ಟ್ ಹೆಚ್ಚಿಸಿದೆ.ಈಗ ಆ ಸೇವೆಯನ್ನು ಐಪ್ಯಾಡ್,ವಿಂಡೋಸ್ ಫೋನುಗಳ ಮುಖಾಂತರವೂ ಪಡೆಯಲು ಸಾಧ್ಯವಾಗಲಿದೆ.ಇದುವರೆಗೆ ಕ್ಲೌಡ್ ಸೇವೆಗಳನ್ನು ಒದಗಿಸದ ಪೇಸ್‌ಬುಕ್ ಈಗ ಪೇಚಿಗೆ ಸಿಕ್ಕಿದೆ.ಡ್ರಾಪ್‌ಬಾಕ್ಸ್ ಅಂತಹ ಜನಪ್ರಿಯ ಸೇವೆಯನ್ನು ತನ್ನದಾಗಿಸಿಕೊಂಡು,ಈ ಹಿನ್ನಡೆಯನ್ನು ಸರಿದೂಗಿಸಲು ಫೇಸ್‌ಬುಕ್ ಯೋಚಿಸುತ್ತಿದೆ ಎನ್ನುವ ಸುದ್ದಿಯೀಗ ಚಾಲ್ತಿಯಲ್ಲಿದೆ.ಡ್ರಾಪ್‌ಬಾಕ್ಸ್ ತನ್ನ ಬಳಕೆದಾರರು ತಮ್ಮಲ್ಲಿರುವ ಕಡತಗಳನ್ನು ಇತರರಿಗೆ ಇ-ಮೇಲ್ ಮೂಲಕ ಹಂಚಿಕೊಳ್ಳಲು ಸಾಧ್ಯವಾಗಿಸಿದೆ.ಗೂಗಲ್ ಡ್ರೈವ್ ಸ್ಪರ್ಧೆ ಎದುರಿಸಲದು ಡ್ರಾಪ್‌ಬಾಕ್ಸ್ ಬಳಕೆದಾರರಿಗೆ ಮೂರು ಜೀಬಿ ಹೆಚ್ಚು ಸ್ಥಳಾವಕಾಶ ನೀಡಲಿದೆ.ಕಂಪ್ಯೂಟರು ಅಥವಾ ಕ್ಯಾಮರಾದಲ್ಲಿರುವ ಚಿತ್ರಗಳನ್ನು ಡ್ರಾಪ್‌ಬಾಕ್ಸಿಗೆ ಕಳುಹಿಸುವುದು ಚಿಟಿಕೆ ಹೊಡೆದಷ್ಟೇ ಸುಲಭವಾಗಲಿದೆ.
ಗೂಗಲ್ ಡ್ರೈವ್ ಸೇವೆಯನ್ನು ಪಡೆಯುವಾಗ,ಒಪ್ಪಿಕೊಳ್ಳಬೇಕಾದ ನಿಯಮಾವಳಿಗಳನ್ನು ಗಮನಿಸಿದ ಬಳಕೆದಾರರು ನಿಯಮಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ.ನಿಯಮಗಳ ಪ್ರಕಾರ,ಬಳಕೆದಾರ ಶೇಖರಿಸಿದ ಕಡತಗಳು ಗೂಗಲ್‌ನದ್ದಾಗುತ್ತದೆ.ಇದರ ಬಗ್ಗೆ ಗೂಗಲ್ ಕಂಪೆನಿಯ ವಕ್ತಾರ ಸ್ಪಷ್ಟನೆ ನೀಡಿ,ಈ ನಿಯಮದ ಬಗ್ಗೆ ಬಳಕೆದಾರರು ಅನಗತ್ಯವಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.ಗೂಗಲ್ ಕಂಪೆನಿಯ ಇತರ ಸೇವೆಗಳನ್ನು ಪಡೆಯುವಾಗ,ಈ ನಿಯಮ ಗೂಗಲ್ ಸಹಾಯಕ್ಕೆ ಬರುತ್ತದೆ.ಅನುವಾದ ಸೇವೆ,ವಿಡಿಯೊವನ್ನು ಇತರ ಬಳಕೆದಾರರಿಗೆ ನುಡಿಸುವ ಸೇವೆ ನೀಡುವಾಗ,ಕಡತವು ಗೂಗಲ್ ಕಂಪೆನಿಯದ್ದಾಗಿರ ಬೇಕು ಎನ್ನುವುದು ಸದ್ಯದ ನಿಯಮಗಳ ಪ್ರಕಾರ ಅನಿವಾರ್ಯ.ಇದನ್ನು ಸಾಧ್ಯವಾಗಿಸಲೋಸುಗ ವಿವಾದಿತ ನಿಯಮವನ್ನು ಸೇರಿಸಲಾಗಿದೆ.ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ ಎಂದು ಗೂಗಲ್ ವಕ್ತಾರ ಬಳಕೆದಾರರಿಗೆ ತಿಳಿಹೇಳಿದ್ದಾರೆ.ಇಂತಹ ವಿವಾದವನ್ನು ಹುಟ್ಟುಹಾಕುವುದು ಅನಗತ್ಯ ಎಂದು ಗೂಗಲ್ ನಿಲುವಾಗಿದೆ.
---------------------------------------------------------
ಸೂರ್ಯನನ್ನು ಸುತ್ತುವ ಕೃತಕ ಉಪಗ್ರಹ
ಬ್ರಿಟಿಷ್ ವಿಜ್ಞಾನಿಗಳು ಸೂರ್ಯನನ್ನು ಸುತ್ತುವ ಕೃತಕ ಉಪಗ್ರಹವನ್ನು ಬಾನಿಗೇರಿಸಿ,ಅದನ್ನು ಸೂರ್ಯನ ಸುತ್ತ ಸುತ್ತುವಂತೆ ಮಾಡಲಿದ್ದಾರೆ.ಈ ಉಪಗ್ರಹವು ಸೂರ್ಯನ ಅತ್ಯಂತ ಸಮೀಪ ಸಾಗಿದ ಉಪಗ್ರಹವೆನಿಸಲಿದೆ.ಸೂರ್ಯನನ್ನು ಸುತ್ತುವ ಸೋಲಾರ್ ಓರ್ಬಿಟರ್ ಉಪಗ್ರವಾದ ಕಾರಣ,ಇದನ್ನು ಸೋಲೋ ಎಂದು ಕರೆಯಲಾಗಿದೆ.ಈ ಯೋಜನೆಗೆ ಸೋಲಾಗದಿರಲು,ಉಪಗ್ರಹವು ಶಾಖನಿರೋಧಕವಾಗಿವುದು ಮುಖ್ಯ.ಸೂರ್ಯನನ್ನು ಸುತ್ತುವ ಈ ಉಪಗ್ರಹವು ಸೂರ್ಯನಿಂದ ನಲುವತ್ತು ದಶಲಕ್ಷ ಕಿಲೋಮೀಟರ್ ದೂರದಿಂದಲೇ ಪ್ರದಕ್ಷಿಣೆ ಬರಬೇಕಾಗುತ್ತದೆ.ಹತ್ತಿರ ಸರಿದರೆ, ಇದು ಉರಿದು ಭಸ್ಮವಾಗಲಿದೆ.ಸೂರ್ಯನಿಗೂ ಪರಿಸರಕ್ಕೂ ಇರುವ ಸಂಬಂಧವನ್ನು ಅಧ್ಯಯನ ಮಾಡುವುದು ಉಪಗ್ರಹದ ಪ್ರಮುಖ ಉದ್ದೇಶವಾಗಿದೆ.
UDAYAVANI
Udayavaniepaper
ಅಶೋಕ್‌ಕುಮಾರ್ ಎ
ಪೆನ್ನಿಗಿಂತ ಸ್ಮಾರ್ಟ್‌ಫೋನು ಹರಿತ!
ಪೆನ್ನಿಗಿಂತ ಸ್ಮಾರ್ಟ್‌ಫೋನು ಹರಿತ!