ಪೆನ್ ಡ್ರೈವ್ ಕೇಸ್: ನಿಷ್ಪಕ್ಷಪಾತ ತನಿಖೆಯಾಗಲಿ

ಪೆನ್ ಡ್ರೈವ್ ಕೇಸ್: ನಿಷ್ಪಕ್ಷಪಾತ ತನಿಖೆಯಾಗಲಿ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಇಡೀ ನಾಡನ್ನೇ ತಲೆತಗ್ಗಿಸುವಂತೆ ಮಾಡಿರುವುದು ದುರಂತ. ಸಂಸದ ಪ್ರಜ್ವಲ್ ರೇವಣ್ಣ ಎಸಗಿದರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಈಗಾಗಲೇ ವಿಚಾರಣೆ ಹಂತದಲ್ಲಿದ್ದು, ಇದೊಂದು ಘನಘೋರ ಅಪರಾಧ ಎನ್ನುವ ಭಾವನೆ ಜನಸಾಮಾನ್ಯರೊಳಗೆ ಹುಟ್ಟಿರುವುದಂತೂ ವಾಸ್ತವ. ಈ ಕಾರಣಕ್ಕೇ ಸಂಸದ ಪ್ರತಿನಿಧಿಸುವ ಪಕ್ಷವೂ ಸಹಿತ ಯಾರೂ ಇದರ ಸಮರ್ಥನೆಗೂ ಇಳಿಯದಿರುವುದು ಒಂದು ರೀತಿಯಲ್ಲಿ ಸೂಕ್ತವೇ ಆಗಿದೆ.

ಜನಸೇವೆಗಾಗಿ ಆಯ್ಕೆಯಾದಂಥ ಒಬ್ಬ ಜನಪ್ರತಿನಿಧಿಗೆ ಸಮಾಜದಲ್ಲಿ ತಾನು ಆದರ್ಶವಾಗಿ ನಡೆದುಕೊಳ್ಳಬೇಕು ಎನ್ನುವ ಪ್ರಜ್ಞೆಯೇ ದಿವಾಳಿಯಾತ್ತಿರುವಂಥ ದಿನಗಳಲ್ಲಿ ನಾಗರಿಕ ಸಮಾಜತಲೆತಗ್ಗಿಸುವಂಥ ಈ ಘನಘೋರ ಪ್ರಕರಣ ನಡೆದಿದೆ. ಇಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿಯ ಅಧಿಕಾರ ಅಥವಾ ದಬ್ಬಾಳಿಕೆಗೆ ಹೆದರಿ ಹಲವು ಸಂಖ್ಯೆಯ ಮಹಿಳೆಯರು ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಆರು ತಿಂಗಳ ಹಿಂದೆಯೇ ಮುನ್ಸೂಚನೆ ಕೊಟ್ಟಂತಹ ಪ್ರಕರಣವನ್ನು ಆರಂಭದಲ್ಲಿಯೇ ಚಿವುಟದ ಈ ಪರಿ ಬೆಟ್ಟವಾಗಲು ಬಿಟ್ಟಿರುವ ವ್ಯವಸ್ಥೆಯ ಮಹಾಮೌನ ಇಂದು ಸಂತ್ರಸ್ಥೆಯರ ಕುಟುಂಬಗಳನ್ನು ದ್ಯುಃಖ ಮತ್ತು ಆತಂಕದಲ್ಲಿ ಮುಳುಗುವಂತೆ ಮಾಡಿರುವುದು ನಿಜಕ್ಕೂ ನಾಚಿಕೆಗೇಡು.

ಆರೋಪಿ ಇಲ್ಲಿ ದೌರ್ಜನ್ಯ ಎಸಗಿದ್ದಲ್ಲದೆ, ಸ್ವಚಿತ್ರೀಕರಣದ ಮೂಲಕ ದಾಖಲಿಸಿಕೊಂಡ ಮನಃಸ್ಥಿತಿ ಅತ್ಯಂತ ಹೀನವಾಗಿ ತೋರುತ್ತಿದೆ. ಇಲ್ಲಿ ಆರೋಪಿ ತೋರಿರಬಹುದಾದ ಮೃಗೀಯ ವರ್ತನೆ ಎಷ್ಟು ಕ್ರೌರ್ಯವೋ, ಆ ಅಶ್ಲೀಲ ವಿಡಿಯೋಗಳು ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಬೀರುವ ಪರಿಣಾಮಗಳನ್ನೂ ಲೆಕ್ಕಿಸದೆ ಅವುಗಳನ್ನು ವ್ಯಾಪಕವಾಗಿ ಹರಿದಾಡಿಸಿದ ಕಾಣದ ಕೈಗಳ ಕೃತ್ಯವೂ ಅಷ್ಟೇ ಗಂಭೀರ ಅಪರಾಧ. ಫಾರ್ವರ್ಡ್ ಮಾಡಿದ ಒಂದು ಸಂಗತಿ ಅಥವಾ ಚಿತ್ರ ಅಥವಾ ವಿಡಿಯೋ ಕೇವಲ ಒಂದು ಮೊಬೈಲ್ ನಿಂದ ಮತ್ತೊಂಬು ಮೊಬೈಲಿಗೆ ಹೋಗಿ ಅಲ್ಲಿಯೇ ಅಂತ್ಯಗೊಳ್ಳುವುದಿಲ್ಲ ಎಂಬ ಸಾಮಾನ್ಯ ಅರಿವೂ ಇವರಿಗೆ ಇರಲಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇಡೀ ಊರಿಗೆ, ಇಡೀ ನಾಡಿಗೆ, ಇಡೀ ದೇಶಕ್ಕೆ ವಿಡಿಯೋಗಳು ಪ್ರಸರಣವಾದರೆ, ನಾಳೆ ದಿನ ಆ ಸಂತ್ರಸ್ಥೆಯರು ಅವರ ಕುಟುಂಬದವರು ನೆಮ್ಮದಿಯಿಂದ ಬಾಳ್ವೆ ನಡೆಸುವುದಾದರೂ ಹೇಗೆ? ಅಂತಿಮವಾಗಿ ಈ ರಾಜಕೀಯ ಮೇಲಾಟದ ಪ್ರಕರಣದಲ್ಲಿ ಬಲಿಪಶುವಾಗಿರುವುದು ಮಹಿಳೆಯೇ ಎನ್ನುವುದು ವಿಷಾದದ ಸಂಗತಿ.

ನಾನಾ ಕಾರಣಗಳಿಂದಾಗಿ ಸಂತ್ರಸ್ತೆಯರು ಇಲ್ಲಿ ನೋವು ನುಂಗಿಕೊಂಡಿದ್ದಾರೆ. ಗೌರವಯುತ ಬದುಕು ಕಟ್ಟಿಕೊಳ್ಳುವ  ಅತಿದೊಡ್ಡ ಸವಾಲು ಇವರೆಲ್ಲರ ಮುಂದಿದೆ. ಎಲ್ಲ ರಾಜಕೀಯ ಉದ್ದೇಶಗಳನ್ನು ಬದಿಗಿಟ್ಟು ಈ ಬಗ್ಗೆ ವ್ಯವಸ್ಥೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿದೆ. ದೌರ್ಜನ್ಯ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ತನಿಖಾ ತಂಡಕ್ಕೆ ಸರಕಾರ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಲಿ, ದೌರ್ಜನ್ಯ ಎಸಗಿರುವುದು ತನಿಖೆಯಿಂದ ಸಾಬೀತಾದರೆ, ನಿರ್ದಾಕ್ಷಿಣ್ಯ ಕಠಿಣ ಕ್ರಮ ಜರುಗಿಸಲಿ. ಇದರೊಂದಿಗೆ ದೌರ್ಜನ್ಯವನ್ನು ಜಾಹೀರು ಮಾಡಿದ ಮನಃಸ್ಥಿತಿಗಳಿಗೂ ತಕ್ಕ ಶಿಕ್ಷೆಯಾಗಲಿ. ಸಂತ್ರಸ್ತೆಯರಿಗೆ ನ್ಯಾಯ ದಕ್ಕಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೨-೦೫-೨೦೨೪ 

ಚಿತ್ರ ಕೃಪೆ: ಇಂಟರ್ನೆಟ್ ತಾಣ