ಪ್ಯಾರಾಚ್ಯೂಟ್ ತಯಾರಿಕೆ ಮತ್ತು ಸುರಕ್ಷತೆ
ಕಳೆದ ಜೂನ್ ತಿಂಗಳಲ್ಲಿ ನಾನು ಪ್ಯಾರಾಚ್ಯೂಟಿನ ಆವಿಷ್ಕಾರದ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮೊದಲಿಗೆ ಪ್ಯಾರಾಚ್ಯೂಟ್ ಯಾರು ಕಂಡು ಹಿಡಿದರು? ನಂತರದ ದಿನಗಳಲ್ಲಿ ಅದರಲ್ಲಿ ಆದ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೆ. ಇಂದಿನ ಲೇಖನದಲ್ಲಿ ನಾನು ಪ್ಯಾರಾಚ್ಯೂಟ್ ನ ಭಾಗಗಳು, ಅದರ ತಯಾರಿಕೆ ಮತ್ತು ಸುರಕ್ಷಿತ ಇಳಿಕಾ ಕ್ರಮಗಳ ಬಗ್ಗೆ ಚುಟುಕಾದ ಮಾಹಿತಿ ನೀಡಲಿರುವೆ.
ಪ್ಯಾರಾಚ್ಯೂಟಿನ ಭಾಗಗಳನ್ನು ನಾವು ಗಮನಿಸಲು ಹೋದರೆ, ನೀವು ಕೊಡೆಯನ್ನು ನೋಡಿಯೇ ಇರುತ್ತೀರಿ. ಅದರಲ್ಲಿ ಒಂದು ಮರದ ಅಥವಾ ಲೋಹದ ಕೋಲಿನ ಸುತ್ತ ಬಿಲ್ಲಿನಾಕಾರದ ಹಲವಾರು ಲೋಹದ ಕಡ್ಡಿಗಳನ್ನು ಜೋಡಣೆ ಮಾಡಿರುತ್ತಾರೆ. ಇವನ್ನೆಲ್ಲಾ ಒಂದು ತಂತಿಯ ಸಹಾಯದಿಂದ ಕೋಲಿಗೆ ಸೇರಿಸಿರುತ್ತಾರೆ. ಕೊಡೆಯನ್ನು ಬಿಚ್ಚಿದಾಗ ಈ ಕಡ್ಡಿಗಳು ಅರ್ಧ ಗೋಲಾಕೃತಿಯಲ್ಲಿ ಹರಡಿಕೊಳ್ಳುತ್ತವೆ. ಈ ಕಡ್ಡಿಗಳ ಮೇಲೆ ನೀರು ಒಳಬಾರದ ಬಟ್ಟೆ ಅಥವಾ ಪ್ಲಾಸ್ಟಿಕ್ ರೀತಿಯ ವಸ್ತುವನ್ನು ಸೇರಿಸಿ ಹೊಲಿದಿರುತ್ತಾರೆ. ಇದೇ ರೀತಿ ಕೋಲಿಲ್ಲದ ಕೊಡೆಯನ್ನು ನೀವು ಊಹಿಸಿಕೊಂಡರೆ ಹೇಗೆ ಕಾಣುವುದೋ ಅದೇ ಪ್ಯಾರಾಚ್ಯೂಟ್.
ಪ್ಯಾರಾಚ್ಯೂಟಿನ ಭಾಗಗಳಲ್ಲಿ ಮೊದಲನೆಯದ್ದು ಮತ್ತು ಮುಖ್ಯವಾದದ್ದು ಅದರ ಕೊಡೆ ಅಥವಾ ಮೇಲಿನ ಚಾವಣಿಯಂತಹ ರಚನೆ. ಎರಡನೆಯದ್ದು ಆಸನ ವ್ಯವಸ್ಥೆ. ಇವೆರಡಕ್ಕೂ ಸಂಪರ್ಕ ಕಲ್ಪಿಸಲು ತೂಗುವ ಹಗ್ಗಗಳು ಇರುತ್ತವೆ. ಮೇಲಿನ ಕೊಡೆಯಂತಹ ರಚನೆ ವಿವಿಧ ರೀತಿಯಲ್ಲಿ ಇರುತ್ತದೆ. ಕೆಲವು ವೃತ್ತಾಕೃತಿಯಲ್ಲೂ, ತ್ರಿಕೋನ, ಚೌಕ ಅಥವಾ ತಟ್ಟೆಯ ಆಕಾರದಲ್ಲಿಯೂ ಇರುತ್ತದೆ. ಛತ್ರಿಯಂತಹ ವಿನ್ಯಾಸ ಬಹಳ ಸುರಕ್ಷಿತವೂ ಹಾಗೂ ಜನಪ್ರಿಯವೂ ಆಗಿದೆ. ಈ ಕೊಡೆಯ ಕೆಲಸವೆಂದರೆ ಗಾಳಿಯನ್ನು ಎತ್ತಿ ಹಿಡಿದು ಮನುಷ್ಯ ನಿಧಾನವಾಗಿ ಕೆಳಗೆ ಇಳಿಯುವಂತೆ ಮಾಡುವುದು.
ಈ ಕೊಡೆಯನ್ನು ಪ್ರಾರಂಭದಲ್ಲಿ ಹತ್ತಿಯ ಬಟ್ಟೆ, ಕ್ಯಾನ್ವಾಸ್, ರೇಷ್ಮೆ, ರಯಾನ್ ಮೊದಲಾದ ವಸ್ತುಗಳಿಂದ ತಯಾರಿಸುತ್ತಿದ್ದರು. ಆದರೆ ಸಮಯ ಕಳೆದಂತೆ ನೈಲಾನ್ ಬಟ್ಟೆಯನ್ನು ಬಳಸಲು ಪ್ರಾರಂಭಿಸಿದರು. ಇದು ಹಗುರವೂ ಹೌದು, ಬೇಗನೇ ಹರಿದೂ ಹೋಗುವುದಿಲ್ಲ. ನಾವೀಗ ಪ್ಯಾರಾಚ್ಯೂಟ್ ತಯಾರಿಕೆಯತ್ತ ಗಮನ ಹರಿಸುವ.
ಗುಂಡನೆಯ ಅಥವಾ ವೃತ್ತಾಕಾರದ ಬಟ್ಟೆಯೊಂದನ್ನು ಕಲ್ಪಿಸಿಕೊಳ್ಳಿ (ಚಿತ್ರ ೧-ಅ). ಬಟ್ಟೆಯ ಸುತ್ತಳತೆಯ ಮೇಲೆ ಸಮಾನಾಂತರದಲ್ಲಿ ಬಿಂದುಗಳನ್ನು ಗುರುತಿಸಿ (ಚಿತ್ರ ೧-ಆ). ಈ ಬಿಂದುಗಳನ್ನು ದಪ್ಪನೆಯ ದಾರಗಳ ಮೂಲಕ ಬಟ್ಟೆಯ ಕೇಂದ್ರಕ್ಕೆ ಸೇರಿಸಿ (ಚಿತ್ರ ೧-ಇ). ಈಗ ಬಟ್ಟೆಯನ್ನು ಅನೇಕ ತ್ರಿಕೋನಾಕಾರದ ತುಂಡುಗಳನ್ನಾಗಿ ಭಾಗ ಮಾಡಿದಂತಾಯಿತು. ಆದರೆ ಪ್ಯಾರಾಚ್ಯೂಟ್ ತಯಾರಿಕೆಯಲ್ಲಿ ಈ ಕ್ರಮವು ತಲೆಕೆಳಗಾಗಿರುತ್ತದೆ. ಅನೇಕ ತ್ರಿಕೋನಾಕಾರದ ಬಟ್ಟೆಯ ತುಂಡುಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದಿರುತ್ತಾರೆ. ಈ ರೀತಿ ಬಂದ ವೃತ್ತಾಕಾರದ ಬಟ್ಟೆಯೇ ಮೇಲ್ಛಾವಣಿಯ ಮೇಲ್ಭಾಗ. ಈ ತ್ರಿಕೋನಗಳು ಒಂದಕ್ಕೊಂದು ಸೇರುವ ಜಾಗದಲ್ಲಿ ತೆಳುವಾದ ಆದರೆ ಗಟ್ಟಿಯಾದ ದಾರವೊಂದನ್ನು ಸೇರಿಸಿರುತ್ತಾರೆ. ಈ ದಾರ ವೃತ್ತ ಪರಿಧಿಯವರೆಗೂ ಬಂದಿರುವುದಲ್ಲದೇ ಇನ್ನೂ ಮುಂದುವರಿದಿರುತ್ತದೆ. ಈಗ ಟ್ರಪೀಜಿಯಂ ಆಕಾರದ ಬಟ್ಟೆಯ ತುಂಡುಗಳನ್ನು ಕತ್ತರಿಸುತ್ತಾರೆ. ಇವುಗಳನ್ನು ಒಂದಕ್ಕೊಂದು ಸೇರಿಸಿ ಉಂಗುರದ ಆಕಾರ ಬರುವಂತೆ ಹೊಲೆಯುತ್ತಾರೆ (ಚಿತ್ರ ೨- ಅ,ಆ). ಈ ಉಂಗುರಗಳನ್ನು ಒಂದರ ಕೆಳಗಡೆ ಇನ್ನೊಂದನ್ನಿಟ್ಟು ಹೊಲೆದರೆ ನಾಯಿಕೊಡೆಯ ಆಕಾರವಾಗುತ್ತದೆ. ವೃತ್ತ ಕೇಂದ್ರದಿಂದ ಹೊರಟ ದಾರಗಳು ಈ ಟ್ರಪೀಜಿಯಂಗಳ ಎಡ ಮತ್ತು ಬಲಭಾಗದಲ್ಲಿ ಹಾಯ್ದು ಮೇಲ್ಛಾವಣಿಯ ಪರಿಧಿಯವರೆಗೂ ಮುಂದುವರಿಯುತ್ತವೆ. ಕೆಲವು ಬಾರಿ ಮೇಲ್ಛಾವಣಿಯ ಪರಿಧಿಯ ಸುತ್ತಲೂ ಒಂದು ಲಾಡಿಯನ್ನು ಸೇರಿಸಿ ಹೊಲಿದಿರುತ್ತಾರೆ. ದಾರಗಳನ್ನು ಈ ಲಾಡಿಗಳಿಗೆ ಗಂಟುಹಾಕಲಾಗುತ್ತದೆ. ಇಲ್ಲಿಂದ ಮುಂದುವರಿಯುವ ಹಗ್ಗಗಳೇ ತೂಗು ಹಗ್ಗಗಳು. ಈ ತೂಗು ಹಗ್ಗಗಳನ್ನು ಆಸನ ವ್ಯವಸ್ಥೆಗೆ ಸೇರಿಸಿರುತ್ತಾರೆ. ಮೊದಮೊದಲಿನ ಪ್ಯಾರಾಚ್ಯೂಟ್ ಗಳಲ್ಲಿ ಆಸನ ವ್ಯವಸ್ಥೆ ಇರಲಿಲ್ಲ. ಇವುಗಳು ಪ್ರಾರಂಭದ ದಿನದ ಪ್ಯಾರಾಚ್ಯೂಟ್ ತಯಾರಿಕೆಯ ವಿಧಾನಗಳು. ನಂತರದ ದಿನಗಳಲ್ಲಿ ಬಹಳಷ್ಟು ಸುಧಾರಣೆಯಾಗಿ ಈಗ ಬಹಳಷ್ಟು ಸುರಕ್ಷಿತ ಪ್ಯಾರಚ್ಯೂಟ್ ಗಳು ಲಭ್ಯವಿದೆ.
ಮೇಲಿನಿಂದ ಹಾರುವ ವ್ಯಕ್ತಿ ಮೇಲ್ಛಾವಣಿಯಂತಿರುವ ಬಟ್ಟೆಗೆ ಹಟ್ಟಿದ ಹಗ್ಗಗಳನ್ನು ಕೈಗಳಲ್ಲಿ ಭದ್ರವಾಗಿ ಹಿಡಿದು ಜೋತಾಡುತ್ತಿದ್ದ. ಇದು ಬಹು ಪ್ರಯಾಸದ ಕೆಲಸ. ಇದರ ಬದಲಾಗಿ ಇಂದು ಪ್ಯಾರಾಚ್ಯೂಟಿನಲ್ಲಿ ಅವನು ಕುಳಿತುಕೊಳ್ಳಲು ಸುಖಕರವಾದ ಮೆತ್ತನೆಯ ಆಸನ ಅಥವಾ ಜೀನಿನ ವ್ಯವಸ್ಥೆ ಇರುತ್ತದೆ. ಇದರ ಮೇಲೆ ಕುಳಿತರೆ ಸಾಲದು. ಗಾಳಿಯಲ್ಲಿ ಇಳಿಯುವಾಗ ಅದು ಅವನನ್ನು ಹಾರಿಸಿಕೊಂಡು ಹೋಗಬಹುದು. ಇದನ್ನು ತಡೆಯಲು ಆಸನದ ಜೊತೆ ಅನೇಕ ಅಡ್ಡ-ಉದ್ದ ಪಟ್ಟಿಗಳಿರುತ್ತವೆ. ಈ ಪ್ಯಾರಾಚ್ಯೂಟ್ ಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಮಡಿಸಿ, ತೂಗು ಹಗ್ಗಗಳ ಜೊತೆಗೆ ಸಣ್ಣಗೆ ಸುತ್ತಿ ಪ್ಯಾಕ್ ಮಾಡಿರುತ್ತಾರೆ. ಈ ಪ್ಯಾಕನ್ನು ಇಂದು ಸಣ್ಣ ಚೀಲದಲ್ಲಿ ತುಂಬಿರುತ್ತಾರೆ. ಈ ಚೀಲವನ್ನು ಅವನು ಬೆನ್ನಿಗೆ ಅಥವಾ ಎದೆಗೆ ಕಟ್ಟಿಕೊಂಡಿರುತ್ತಾನೆ. ತನ್ನ ಸೊಂಟದ ಹತ್ತಿರವಿರುವ ಕಬ್ಬಿಣದ ಹಿಡಿಯನ್ನು ಎಳೆದಾಗ (ರಿಪ್ ಕಾರ್ಡ್) ಮೊದಲು ‘ಪೈಲೆಟ್ ಪ್ಯಾರಾಚ್ಯೂಟ್' ಎಂಬ ಒಂದು ಸಣ್ಣ ಪ್ಯಾರಾಚ್ಯೂಟ್ ಪ್ಯಾಕ್ ನಿಂದ ಹೊರಗೆ ಬರುತ್ತದೆ. ನಂತರ ಅದರ ಹಿಂದೆ ಮುಖ್ಯ ಪ್ಯಾರಾಚ್ಯೂಟ್ ಅಥವಾ ದೊಡ್ಡ ಪ್ಯಾರಾಚ್ಯೂಟ್ ಮೇಲೆ ಬಂದು ನಿಧಾನವಾಗಿ ಹರಡಿಕೊಳ್ಳುತ್ತದೆ (ಚಿತ್ರ ೩).
ವಿಮಾನವು ಭೂಮಿಗೆ ಬಹಳ ಸಮೀಪದಲ್ಲಿರುವಾಗ ಪ್ಯಾರಚ್ಯೂಟ್ ಬಳಕೆ ಸಾಧ್ಯವಿಲ್ಲ. ಏಕೆಂದರೆ ಪ್ಯಾರಾಚ್ಯೂಟ್ ಬಿಡಿಸಿಕೊಳ್ಳಲು ಸಮಯಾವಕಾಶಬೇಕು. ತೀರಾ ಕೆಳಗಿದ್ದರೆ ಪ್ಯಾರಾಚ್ಯೂಟ್ ಬಿಡಿಸಿಕೊಳ್ಳುವ ಮೊದಲೇ ಅವನು ವೇಗವಾಗಿ ನೆಲಕ್ಕೆ ಅಪ್ಪಳಿಸಿರುತ್ತಾನೆ. ಸೇನಾ ವಿಮಾನಗಳಲ್ಲಿ ಅನೇಕ ತುರ್ತು ವ್ಯವಸ್ಥೆಗಳು ಇರುತ್ತವೆ. ಆದರೂ ಅವುಗಳು ಭೂಮಿಯ ಸಮೀಪದಲ್ಲಿ ಅವಘಡಕ್ಕೆ ತುತ್ತಾದಾಗ ಪ್ಯಾರಾಚ್ಯೂಟ್ ಸಹಾಯದಿಂದ ಕೆಳಗೆ ಇಳಿಯುವುದು ಕಷ್ಟ. ಈ ಅಂಶಗಳನ್ನು ಗಮನಿಸಿದ ಜೇಮ್ಸ್ ಮಾರ್ಟಿನ್ ಎಂಬಾತ ಚಾಲಕರಿಗಾಗಿಯೇ ಒಂದು ವಿಶೇಷ ಆಸನ ವ್ಯವಸ್ಥೆಯನ್ನು ರೂಪಿಸಿದ. ಅದನ್ನು ‘ಚಿಮ್ಮುವ ಆಸನ' ಎಂದು ಕರೆಯುತ್ತಾರೆ. ಮುಂದಿನ ಲೇಖನದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.
ಮಾಹಿತಿ ಮತ್ತು ಚಿತ್ರ ಕೃಪೆ : ‘ಪ್ಯಾರಾಚ್ಯೂಟ್’ ಪುಸ್ತಕ (ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು)