ಪ್ರಕೃತಿಯೊಳು ನೀನಿರು ಮನವೇ...
ಕವನ
ಉತ್ಕರ್ಷದೊಡಲಲಿ ನಲುಗುಡುಗಿದ ಮನವೆ
ಸ್ವಾನುಭವಕೆ ನೀ ತೆರೆದು ಬಿಡು ಪ್ರಕೃತಿಯಂತೆ॥
ಸ್ತುತಿ ತೆಗಳಿಕೆಗಳನು ಪರಿಗಣಿಸದಾ ಭಾನು
ತಾ ಮೂಡಣದಲಿ ಕರ್ತವ್ಯ ಪ್ರಜ್ಞೆಯೊಳರಳಿ
ಉದಯಿಸಿ ಜೀವಸಂಕುಲಕೆ ಚೈತನ್ಯ ಬೀರಿ
ಪಡುವಣದಲಿ ಕೆಂಪಡರಿ ಮುಳುಗುವಂತೆ॥
ಬೆಳಕು ನೆರಳಾಗಿ ಕತ್ತಲೆಯೆಲ್ಲೆಡೆ ಹರಡಿರಲು
ಲೋಕಚಾಕರಿಗೆ ಮೈಕೊಡವಿ ತಾನೆದ್ದು ನಗುತ
ಹಾಲ್ ಬೆಳಕ ಹುಣ್ಣಿಮೆಯ ಖಳೆಯ ನೀಡಿ
ಮೂಡು ಬೆಳಕಿಗೆ ಮುಳುಗು ಚಂದ್ರಮನಂತೆ॥
ಗಿರಿ ಶಿಖರಗಳಲಿ ನದಿಯದು ತಾ ಉದ್ಭವಿಸಿ
ಭೋರ್ಗರೆವ ಜಲಪಾತವಾಗಿ ನೆಲಕೆ ಧುಮುಕಿ
ಶಾಂತಚಿತ್ತದಲಿ ತಾ ಭೂರಮೆಯನು ತಣಿಸಿ
ಸದ್ದುಗದ್ದಲವಿರದೆ ತಾ ಸಾಗರವ ಸೇರುವಂತೆ॥
ಜೀವ ಜಲವೆನಿಸಿ ತಾ ರವಿಯ ಕೋಪಕೆ ಕರಗಿ
ಸೋತು, ಕಾಣದ ಆವಿಯೊಲು ತಾ ಮೇಲೇರಿ
ಆ ನಭದೋಳ್ ಸ್ವಚ್ಛಂದದಲಿ ತಾ ತೇಲಾಡಿ
ವರ್ಷಾಧಾರೆಯ ಸುರಿಪ ಆ ಮೋಡಗಳಂತೆ॥
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
