ಪ್ರಕೃತಿಯ ಮಡಿಲಲ್ಲಿ ಕಾಫಿ ಮತ್ತು ....
ಕಾಡ ಅಂಚಿನ ಮನೆ. ಆಗ ತಾನೆ ಭೋರ್ಗರೆವ ಮಳೆ ಬಂದು ನಿಂತು ಈಗ ತುಂತುರು ಹನಿಗಳು ಚಿಮುಕಿಸುತ್ತಿದೆ. ಮನೆಯ ಮುಂದೆ ನಿಂತು ನೋಡಿದರೆ ಪಶ್ಚಿಮ ಘಟ್ಟಗಳ ಮಲೆಯ ಮಾರುತ, ಆ ಬೆಟ್ಟ ಸಾಲಿಗೆ ದಟ್ಟ ಮೋಡಗಳು ಅಪ್ಪುತ್ತಾ ಸಾಗುತ್ತಿದೆ. ಅಪರೂಪಕ್ಕೊಮ್ಮೆ ಸೂರ್ಯನ ದರ್ಶನ ಮತ್ತು ಮರೆಯಾಗುವ ಆಹ್ಲಾದಕರ ಜೂಟಾಟ. ದೂರದಲ್ಲಿ ಆನೆಗಳ ಘೀಳಿಡುವ ಭಯಂಕರ ಶಬ್ದ, ಹತ್ತಿರದಲ್ಲೇ ಜೀರುಂಬೆಗಳ ಗುಂಯ್ ಗುಡುವ ಧ್ವನಿ, ಸ್ವಲ್ಪ ದೂರದಲ್ಲಿ ದನಕರುಗಳೊಂದಿಗೆ ತುಂತುರು ಮಳೆಯಲ್ಲಿ ತಲೆಯ ಮೇಲೆ ಹೊದಿಕೆಯಿಂದ ಮುಚ್ಚಿದ ಮಹಿಳೆಯೊಬ್ಬರು ಬಿರಬಿರನೆ ನಡೆಯುತ್ತಿರುವರು, ಪಕ್ಕದಲ್ಲೇ ಮಳೆಯ ಗುಡುಗು ಸಿಡಿಲಿಗೆ ಬೆಚ್ವಿದ ನಾಯಿಗಳು ಮೂಲೆಯಲ್ಲಿ ಕಂಬಳಿಯ ಮೇಲೆ ಮುದುಡಿ ಕುಂಯ್ ಗುಡುವ ಶಬ್ದ...
ಮನೆಯ ಮುಂದಿನ ಕಾಡ ಹೂವುಗಳ ಮೇಲಿನ ಹನಿಗಳು ನಿಧಾನವಾಗಿ ತೊಟ್ಟಿಕ್ಕುತ್ತಿದೆ. ಮಾವು ತೆಂಗು ಬಾಳೆ ಅಡಿಕೆಯ ಮರಗಳು ಮಳೆಯ ಘಮಲನ್ನು ಆಸ್ವಾದಿಸುತ್ತಿರುವಂತಿವೆ. ಕೈಯಲ್ಲಿರುವ ಬಿಸಿಬಿಸಿಯಾದ ಕಾಫಿಯ ಲೋಟದ ಹಬೆಯನ್ನು ಒಮ್ಮೆ ನೋಡಿ ತುಟಿಗೆ ತಾಗಿಸುಬೇಕೆನ್ನುವಷ್ಟರಲ್ಲಿ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ನೆನಪಾದಳು ನೋಡಿ ಆ ಚೆಲುವೆ...
ಚೆಲುವೆ ಎಂದರೆ, ನೀವು ಸಿನಿಮಾಗಳಲ್ಲಿ ನೋಡುವ ಆ ಕೃತಕ ಬಣ್ಣಗಳ, ಶ್ರೀಮಂತ ವೇಷಭೂಷಣದ ಚೆಲುವೆಯಲ್ಲ. ಒಂದು ದಿನ ನಮ್ಮ ಪಶ್ಚಿಮ ಘಟ್ಟಗಳ ಅಪರೂಪದ ಮತ್ತು ಸಾಮಾನ್ಯರು ನಡೆದು ಹೋಗಲು ತುಂಬಾ ಕಷ್ಡವಾದ ಘಟ್ಟದ ಕೆಳಗಿನ ಅತ್ಯಂತ ದುಸ್ತರ ಪ್ರದೇಶದ ಜಲಪಾತದಂತ ನೀರು ಧುಮ್ಮಿಕ್ಕುವ ಸ್ಥಳವನ್ನು ನೋಡಲು ನನ್ನ ಹಳ್ಳಿಯವರೊಂದಿಗೆ ಹೋಗಿದ್ದೆ. ಆ ಜಲಪಾತದ ಬಂಡೆಗಳ ಮೇಲೆ ಕಾಲನ್ನು ನೀರಿನಲ್ಲಿ ಇಳಿಬಿಟ್ಟು ನೀರಿನ ನೊರೆಯಲ್ಲಿ ಮಕ್ಕಳಾಟವಾಡುತ್ತಿದ್ದೆ. ಸ್ವಲ್ಪ ಸಮಯದಲ್ಲಿ ಅಲ್ಲಿನ ಕೊರಕಲಿನಲ್ಲಿ ಮನುಷ್ಯಾಕೃತಿಯೊಂದು ಚಲಿಸಿದಂತಾಯಿತು. ತಟ್ಟನೆ ಎದ್ದು ಅದನ್ನು ಹಿಂಬಾಲಿಸಿದೆ. ಆಗ ಕಾಣಿಸಿದಳು ನೋಡಿ ಆ........
ನನ್ನನ್ನೇ ನೇರವಾಗಿ ಮುಗ್ದತೆಯಿಂದ ಶಾಂತವಾಗಿ ದಿಟ್ಟಿಸುತ್ತಾ ಇದ್ದ ಕಪ್ಪು ಬಿಳುಪಿನ ಕಣ್ಣ ಪಾಪೆಗಳು, ಚಲಿಸದೆ ನಿಂತ ಕಣ್ಣ ರೆಪ್ಪೆಗಳು, ತನ್ನ ಇರುವನ್ನೇ ಮರೆತ ಮೂಗಿನ ಹೊಳ್ಳೆಗಳು, ಭಾವುಕ ಕೆನ್ನೆಗಳು, ನಗುವಿನಂಚಿಗೆ ಬಂದು ನಿಂತಂತಿರುವ ತುಟಿಗಳು, ಸಮತಟ್ಟತೆಯ ಗಲ್ಲ, ಜಲಪಾತದ ತುಂತುರು ಹನಿಗಳಿಂದ ಚದುರಿದ ಕೂದಲಿನಿಂದ ಹಣೆಯ ಮೇಲೆ ಇಳಿಯುತ್ತಿದ್ದ ಶುಭ್ರ ಹನಿಗಳು, ಅದರಿಂದಾಗಿ ಸಣ್ಣಗೆ ಚದುರಿದಂತೆ ಆಕೆಯ ಮುಖದಲ್ಲಿ ಮೂಡಿದ ಸಂಭ್ರಮದ ಹೊನಲು, ಆ ಪ್ರಕೃತಿಯ ಸೌಂದರ್ಯದಲ್ಲಿ ಆಕೆಯ ಸೊಬಗು ನನ್ನ ಕಣ್ಣಲ್ಲಿ ಸೆರೆಯಾಗಿ ಹೃದಯದಲ್ಲಿ ನೆಲೆಯಾಯಿತು.
ಸ್ವಲ್ಪ ಸಮಯದ ನಂತರ ಆಕೆ ಅಲ್ಲಿಂದ ಚಲಿಸಿ ಮರೆಯಾದಳು. ಆದರೆ ನನ್ನ ಸ್ಮೃತಿ ಪಟಲದಲ್ಲಿ ಸದಾ ಕಾಡುತ್ತಾಳೆ. ಅದರಲ್ಲೂ ಈ ಮಳೆ ನಿಂತ ಸಂಜೆಯ ವಾತಾವರಣದಲ್ಲಿ ಆಕೆಯ ನೆನಪು ಮತ್ತೆ ಮತ್ತೆ ನನ್ನಲ್ಲಿ ಹಾದು ಹೋಗುತ್ತದೆ. ಕಾಡ ನಡುವಿನ ಪ್ರಕೃತಿಯ ಶಿಶುವಿನ ಸಹಜ ಸೌಂದರ್ಯ ಮತ್ತು ಅಂದಿನ ಆ ನಿರ್ಜನ ಪ್ರದೇಶದ ಆಕೆಯ ನೋಟ ಮಾತ್ರ ನನ್ನಲ್ಲಿ ಸೌಂದರ್ಯ ಪ್ರಜ್ಞೆ ಶಾಶ್ವತವಾಗಿ ಉಳಿಸಿದೆ.
ಮಳೆಯ ನಡುವಿನ ಕಾಲ್ನಡಿಗೆ ಏನೇನೋ ಹುಚ್ಚು ಕಲ್ಪನೆಗಳನ್ನು ಮನದಲ್ಲಿ ಮೂಡಿಸುತ್ತಿದೆ. ಮಾನವೀಯ ಮೌಲ್ಯಗಳಲ್ಲೇ ಬಹುಶಃ ಅತ್ಯಂತ ಪ್ರಭಾವಶಾಲಿ ಪ್ರೀತಿ. ಅದು ಪ್ರಕೃತಿಯ ಮಡಿಲಲ್ಲಿ ಹುಟ್ಟಿದರೆ ಮತ್ತಷ್ಟು ಪ್ರಭಾವಶಾಲಿ. ಪ್ರಕೃತಿಯೊಂದಿಗಿನ ಬದುಕು ಮತ್ತು ಮಾನವೀಯ ಮೌಲ್ಯಗಳ ನಡುವೆ ಅವಿನಾಭಾವ ಸಂಬಂಧವಿದೆ. ಪ್ರಕೃತಿಯ ನಾಶದೊಂದಿಗೆ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಕೇವಲ ಕಾಕತಾಳೀಯವಲ್ಲ. ಮತ್ತೊಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ...
- ಜ್ಞಾನ ಭಿಕ್ಷಾ ಪಾದಯಾತ್ರೆಯ 254 ನೆಯ ದಿನ ಚಿಕ್ಕಮಗಳೂರು ಜಿಲ್ಲೆಯ ಜಾವಳಿ ಗ್ರಾಮದಿಂದ ಸುಮಾರು 33 ಕಿಲೋಮೀಟರ್ ದೂರದ ಕಳಸ ತಾಲ್ಲೂಕು ತಲುಪಿ ಅಲ್ಲಿ ವಾಸ್ತವ್ಯ ಹೂಡಿತು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ