ಪ್ರತಿಭಾವಂತ ಶಿಲ್ಪ ಕಲಾವಿದ -ಗಣೇಶ್ ವಿಶ್ವಕರ್ಮ

ಪ್ರತಿಭಾವಂತ ಶಿಲ್ಪ ಕಲಾವಿದ -ಗಣೇಶ್ ವಿಶ್ವಕರ್ಮ

ಇಲ್ಲಿರುವ ಮಣ್ಣಿನ ಶಿಲ್ಪಗಳನ್ನು ನೋಡಿದಾಗ ನಿಮಗೆ ಇದರ ಕಲಾವಿದ ಯಾರೆಂದು ತಿಳಿಯುವ ಕುತೂಹಲ ಇರಬಹುದಲ್ಲವೇ? ಮಣ್ಣಿನಲ್ಲಿ ಶಿಲ್ಪವನ್ನು ಮಾಡುವುದೊಂದು ಅಪರೂಪದ ಕಲೆ. ಈ ಕಲೆಗಳ ಕಲಾವಿದ ಗಣೇಶ್ ವಿಶ್ವಕರ್ಮ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ್ ಜಿಲ್ಲೆಯ ಯಬರಟ್ಟಿ ಎಂಬ ಊರಿನವರಾದ ಇವರು ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವರು. 

ಗಣೇಶ ಇವರಿಗೆ ಅಪ್ಪ ಅಮ್ಮ ಇಟ್ಟ ಹೆಸರು ಗಜಾನನ, ಆದರೆ ಗೆಳೆಯರ ಬಾಯಿಯಲ್ಲಿ ಅದು ಗಣೇಶ ಆಗಿ ಬಿಟ್ಟಿದೆ. ಶ್ರೀ ವೀರಭದ್ರಪ್ಪ ಹಾಗೂ ಗಂಗವ್ವ ದಂಪತಿಯ ಐದು ಮಂದಿ ಮಕ್ಕಳಲ್ಲಿ ಕೊನೆಯವರು ಗಣೇಶ್. ನಾಲ್ಕು ಗಂಡು ಒಂದು ಹೆಣ್ಣು ಇದ್ದ ಕುಟುಂಬ ಇವರದ್ದು. ಬಾಲ್ಯದಿಂದಲೂ ತಮ್ಮ ತಂದೆಯವರಾದ ವೀರಭದ್ರಪ್ಪವನರು ಕಲ್ಲಿನಲ್ಲಿ ಮಾಡುತ್ತಿದ್ದ ಶಿಲ್ಪಕಲೆಯನ್ನು ಕಂಡು ಇವರಲ್ಲಿ ಆಸಕ್ತಿ ಬೆಳೆಯಿತು. ಹೀಗೆ ಗಣೇಶ್ ಅವರಿಗೆ ಬಾಲ್ಯದಿಂದಲೇ ಶಿಲ್ಪ ಕಲೆಯ ಬಗ್ಗೆ ಒಲವು ಮೂಡಿತು. ತಂದೆಯವರ ಹಾಗೂ ಎರಡನೇ ಅಣ್ಣನವರ ಒಡನಾಟದಿಂದ ಶಿಲ್ಪ ಕಲೆಯಲ್ಲಿನ ಹಲವಾರು ಪಟ್ಟುಗಳನ್ನು ಕಲಿತರು. ಆದರೆ ಇವರಿಗೆ, ಇವರ ಕುಟುಂಬಕ್ಕೆ ಬರಸಿಡಿಲು ಬಡಿದದ್ದು ಇವರ ಅಣ್ಣನವರ ಅಕಾಲ ಮರಣ. ಅಣ್ಣನವರ ಮರಣದ ಇವರ ತಂದೆಯವರ ಮನಸ್ಸೂ ದುಃಖಿತವಾಗಿ ಬಿಟ್ಟಿತು. ಅದೇ ದುಃಖದಲ್ಲಿ ಕೊರಗಿ ಕೊರಗಿ ನಾಲ್ಕು ವರ್ಷಗಳ ಹಿಂದೆ ತಂದೆಯವರೂ ಮರಣ ಹೊಂದಿದರು.

ಗಣೇಶ್ ಅವರೂ ತಮ್ಮ ತಂದೆಯಂತೆ ಬಾಲ್ಯದಲ್ಲಿ ಕಲ್ಲಿನಲ್ಲಿ ಹೆಸರು ಕೆತ್ತುವ ಕೆಲಸ ಕಲಿತರು. ಮನೆಯ ಎದುರು ಶಿಲೆಯಲ್ಲಿ ಹೆಸರು ಬರೆಸುತ್ತಾರಲ್ಲ, ಅದನ್ನು ತಯಾರು ಮಾಡುವ ಕಲೆ ಇವರಿಗೆ ಒಲಿಯಿತು. ಮೊದಲು ಕಂಪ್ಯೂಟರ್ ಇಲ್ಲದಿದ್ದಾಗ ಕೈಯಲ್ಲೇ ಅಕ್ಷರಗಳನ್ನು ಬರೆಯುತ್ತಿದ್ದರು. ನಂತರ ಅದನ್ನು ಕೆತ್ತಿ, ಅದಕ್ಕೆ ಬಣ್ಣಗಳನ್ನು ತುಂಬುತ್ತಿದ್ದರು. ಕಟ್ಟಡದ ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಕಾರ್ಯಕ್ರಮಗಳಿಗೆ ಅಮೃತ ಶಿಲೆಯಲ್ಲಿ, ಗ್ರಾನೈಟ್ ಗಳಲ್ಲಿ ಹೆಸರುಗಳನ್ನು ಕೆತ್ತಿ ಕೊಡುತ್ತಿದ್ದರು. ಕ್ರಮೇಣ ಕಂಪ್ಯೂಟರ್ ಬಂದಾಗ ಅಕ್ಷರಗಳನ್ನು ಅದರಲ್ಲಿ ಮೂಡಿಸಿ, ನಂತರ ಕಲ್ಲಿನಲ್ಲಿ ಕೆತ್ತುವುದನ್ನು ಕಲಿತರು. ಈಗ ತಕ್ಕಮಟ್ಟಿಗೆ ಕಂಪ್ಯೂಟರ್ ನಲ್ಲಿ ಫೋಟೋಶಾಪ್ ಕಲಿತಿರುವುದರಿಂದ ಕೆಲಸ ಸರಾಗವಾಗಿ ನಡೆಯುತ್ತಿದೆ. ಇಲ್ಲಿರುವ ಚಿತ್ರದಲ್ಲಿ ಇರುವ ಮರದ ರಥವನ್ನು ಗಮನಿಸಿ. ಇದನ್ನು ಗಣೇಶ ಅವರು ತಮ್ಮ ಅಣ್ಣನ ಜೊತೆ ಸೇರಿ ತಯಾರು ಮಾಡಿದ್ದು. ಇದರಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಒಂದು ಸರಪಳಿ ಕಾಣಿಸುತ್ತದೆ. ಅದು ಒಂದು ಮರದ ತುಂಡಿನಲ್ಲಿ ನಾಜೂಕಾಗಿ ಕೆತ್ತಿ ತಯಾರಿಸಿದ್ದು. ಕಲ್ಲಿನ ಶಿಲ್ಪಗಳಲ್ಲಿ ಹೇಗೆ ಒಂದೇ ಕಲ್ಲಿನಲ್ಲಿ ಕೆತ್ತುತ್ತಾರೋ ಹಾಗೆಯೇ ತಮ್ಮ ಅಣ್ಣನ ಸಲಹೆಯಂತೆ ಗಣೇಶ್ ಸರಪಳಿ ಮಾಡಿದ್ದಾರೆ. ಈ ಕಾರಣದಿಂದಲೇ ಗಣೇಶ್ ತಮ್ಮ ಅಣ್ಣನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಕ್ರಮೇಣ ಇವರು ದೇವಸ್ಥಾನದ ಗೋಪುರಗಳ ಸಿಮೆಂಟ್ ಕಲಾಕೃತಿಗಳನ್ನು ತಯಾರಿಸಿ, ಅದಕ್ಕೆ ಬಣ್ಣ ತುಂಬುವ ಕೆಲಸ ಮಾಡುತ್ತಾ ಅದರಲ್ಲಿ ಪರಿಣತಿಯನ್ನು ಪಡೆದರು.

ರಾಯಭಾಗದ ಶ್ರೀ ವಿವೇಕಾನಂದ ಕಲಾ ಮಂದಿರದಲ್ಲಿ ಶಿಲ್ಪ ಕಲೆಯಲ್ಲಿ ಡಿಪ್ಲೋಮಾ ತರಭೇತಿಯನ್ನೂ ಪಡೆದರು. ನಂತರ ಬೆಂಗಳೂರಿಗೆ ಬಂದು ಕೆಲಸದ ಹುಡುಕಾಟದಲ್ಲಿದ್ದಾಗ ಅವರಿಗೆ ಒಬ್ಬರು ಕರೆದು ಕೆಲಸ ಕೊಟ್ಟರಂತೆ. ಆದರೆ ಅವರು ಗಣೇಶ್ ಅವರಿಗೆ ಮಣ್ಣಿನಲ್ಲಿ ಶಿಲ್ಪ ಕಲೆ ಮೂಡಿಸುವ ಬಗ್ಗೆ ಸರಿಯಾಗಿ ಕಲಿಸಲೇ ಇಲ್ಲವಂತೆ. ಸಂಬಳವೂ ಸರಿಯಾಗಿ ಕೊಡದೇ ಸತಾಯಿಸಿದರಂತೆ. ಎರಡು ತಿಂಗಳು ಅಲ್ಲಿ ಕೆಲಸ ಮಾಡಿ ನಂತರ ಬೇರೆ ಕೆಲಸ ಹುಡುಕಿದರು. ನಂತರ ಗಾಜಿನ ಕಾರ್ಖಾನೆಯಲ್ಲಿ ಕಲಾವಿದನಾಗಿ ಕೆಲಸ ಮಾಡುತ್ತಾರೆ. ಅಲ್ಲಿ ಗಾಜಿನ ಮೇಲೆ ಚಿತ್ರ ಬಿಡಿಸುವ ಕಲೆಯನ್ನು ಕಲಿಯುತ್ತಾರೆ. ನಂತರ ಮಣ್ಣಿನ ಶಿಲ್ಪ ಕಲಾವಿದರೊಬ್ಬರು ತಮ್ಮ ಬಳಿ ಕೆಲಸ ಮಾಡುವಂತೆ ಕರೆದಾಗ, ಗಣೇಶ್ ಅವರು ಅಲ್ಲಿ ಕೆಲಸಕ್ಕೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. 

ಈಗ ಗಣೇಶ್ ಅವರು ‘ಮ್ಯೂರಲ್ ಆರ್ಟ್' ಅಥವಾ ಬಿತ್ತಿ ಚಿತ್ರಕಲೆಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಗೋಡೆಗೆ ತೂಗು ಹಾಕುವ ಪ್ರತಿಕೃತಿಯನ್ನು ಮೂಡಿಸುವ ಕಲೆ ಇದು. ನಿಮ್ಮ ಮನೆಯ ಮುಂದುಗಡೆ ಒಂದು ದೇವರ ಮೂರ್ತಿ, ಅದರ ಜೊತೆ ಮನೆಯ ಹೆಸರು ಬರಬೇಕೆಂದು ಇದ್ದರೆ ಈ ಶಿಲ್ಪ ಕಲೆಯನ್ನು ಬಳಸುತ್ತಾರೆ. ಅದರಲ್ಲಿ ಮೊದಲು ಶಿಲ್ಪವನ್ನು ಮಣ್ಣಿನಲ್ಲಿ ಮಾಡಿ ನಂತರ ಅದಕ್ಕೆ ಪ್ಲಾಸ್ಟರ್ ನೀರು ಹಾಕಿ ಅದರ ಪಡಿಯಚ್ಚು ತೆಗೆಯುತ್ತಾರೆ. ಅದಕ್ಕೆ ಫೈಬರ್ ಕೆಮಿಕಲ್ಸ್ ಹಾಕಿ ತೆಗೆದಾಗ ಮಣ್ಣಿನಲ್ಲಿ ಮಾಡಿದ ಆಕೃತಿಯೇ ಫೈಬರ್ ನಲ್ಲಿ ಮೂಡಿ ಬರುತ್ತದೆ. ಇದು ಸುಮಾರು ೨೦-೨೫ ವರ್ಷ ಹಾಳಾಗದೇ ಬಾಳಿಕೆ ಬರುತ್ತದೆ. ಆಕ್ರಲಿಕ್ ಬಣ್ಣಗಳನ್ನು ಬಳಸಿರುವುದರಿಂದ ಬೇಗ ಅಂದ ಕೆಡುವುದಿಲ್ಲ. 

ಗಣೇಶ್ ಅವರು ಕೆಂಪು ಮಣ್ಣು ಬಳಕೆ ಮಾಡುತ್ತಾರೆ. ಗಣೇಶನ ಪೂಜಾ ವಿಗ್ರಹಗಳನ್ನೂ ತಯಾರಿಸುತ್ತಾರೆ. ಮ್ಯೂರಲ್ ಆರ್ಟ್ ಗೆ ಬೆಂಗಳೂರಿನಲ್ಲಿ ಉತ್ತಮ ಬೆಲೆ ಇದೆ ಎನ್ನುತ್ತಾರೆ. ಆದರೆ ಇಲ್ಲೂ ಕಳಪೆ ಗುಣಮಟ್ಟದ ಆಕೃತಿಗಳನ್ನು ಹಣದ ಆಶೆಗೆ ಮಾಡಿಕೊಡುವರಿದ್ದಾರೆ ಎಂಬುದೇ ಈ ಕಲಾವಿದ ಅಳಲು. ಆಗ ನಿಜವಾದ ಕಲಾವಿದನಿಗೆ ಸಿಗುವ ಬೆಂಬಲ ಸಿಗುವುದಿಲ್ಲ.  

ಇವರೀಗ ಬೆಂಗಳೂರಿನಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಚಿತ್ರ ಕಲೆಯನ್ನು ಕಲಿಸುತ್ತಾರೆ. ಥರ್ಮಾಕೋಲ್ ನಿಂದಲೂ ಆಕೃತಿಗಳನ್ನು ಮೂಡಿಸುತ್ತಾರೆ. ಸಂಕ್ರಾಂತಿ, ದೀಪಾವಳಿ ಸಮಯದಲ್ಲಿ ಕೆಲವು ಕಡೆ ಸಕ್ಕರೆ, ಎಳ್ಳು ಗೊಂಬೆಗಳನ್ನು ತಯಾರಿಸುತ್ತಾರೆ. ಗಣೇಶ ಅವರು ಈ ಗೊಂಬೆಗಳನ್ನು ತಯಾರಿಸಲು ಬೇಕಾದ ಅಚ್ಚುಗಳನ್ನು ತಯಾರು ಮಾಡಿ ಕೊಡುತ್ತಾರೆ. (ಚಿತ್ರವನ್ನು ಗಮನಿಸಿ). ಆನೆ, ಕುದುರೆ, ಬಾಳೆ ಹಣ್ಣು ಮುಂತಾದ ಆಕೃತಿಗಳು ಇವರ ಕೈಯಲ್ಲಿ ಮೂಡುತ್ತವೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ಕ್ಯಾಂಡಿಮೆಂಟ್ಸ್ ಮುಂತಾದ ಸಿಹಿತಿಂಡಿಗಳ ಅಂಗಡಿಯವರು ಸಕ್ಕರೆ, ಎಳ್ಳು ಗೊಂಬೆಗಳನ್ನು ಗಣೇಶ್ ಅವರು ತಯಾರಿಸಿದ ಅಚ್ಚಿನಿಂದ ತಯಾರು ಮಾಡುತ್ತಾರೆ. ಗಣೇಶ್ ಅವರು ತಮ್ಮ ಬಿಡುವಿನ ಸಮಯದಲ್ಲಿ ಚುಟುಕು ಕವನಗಳನ್ನು ರಚಿಸುತ್ತಾರೆ. ಉತ್ತಮ ಸಂಗೀತ ಆಲಿಸುವುದು ಇವರ ಹವ್ಯಾಸ. ಕೊರೋನಾ ಕಾರಣದಿಂದಾಗಿ ಸದ್ಯಕ್ಕೆ ತಮ್ಮ ಊರಾದ ರಾಯಭಾಗದಲ್ಲಿದ್ದಾರೆ. ಬೇಗದಲ್ಲೇ ಬೆಂಗಳೂರು ಸೇರಿಕೊಳ್ಳುವ ತವಕ ಇದೆ ಅವರಲ್ಲಿ.

ಈ ಸಮಾಜದಲ್ಲಿ ಕಲಾವಿದನ ಶ್ರಮಕ್ಕೆ ಬೆಲೆ ಕಡಿಮೆ. ಒಂದು ಕಲಾಕೃತಿ ತಯಾರಾಗಬೇಕಾದರೆ ಅದಕ್ಕೆ ತುಂಬಾ ತಾಳ್ಮೆ, ಶ್ರಮ, ಏಕಾಗ್ರತೆ ಬೇಕಾಗುತ್ತದೆ. ಅವೆಲ್ಲವೂ ಗಣೇಶ್ ವಿಶ್ವಕರ್ಮ ಇವರಲ್ಲಿ ಇದೆ. ಜನರು ಇವರಂತಹ ಪ್ರತಿಭಾವಂತ ಕಲಾವಿದನನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ. ಇಲ್ಲಿರುವ ಮಣ್ಣಿನ ಶಿಲ್ಪಕಲೆಯನ್ನು ಗಮನಿಸಿದಾಗ ನಿಮಗೆ ಗಣೇಶ್ ಅವರಲ್ಲಿರುವ ಕಲಾವಿದನ ಪರಿಚಯವಾಗುತ್ತದೆ. ಗಣೇಶ್ ಅವರ ಕಲಾ ಭವಿಷ್ಯ ಉಜ್ವಲವಾಗಲಿ, ಅವರ ಕಲೆಯನ್ನು ಇನ್ನಷ್ಟು ಬೆಳೆಸುವ ಅವಕಾಶಗಳು ಬರಲಿ ಎಂಬುದೇ ನಮ್ಮ ಹಾರೈಕೆ. 

ಗಣೇಶ್ ವಿಶ್ವಕರ್ಮ ಇವರ ಸಂಪರ್ಕಕ್ಕೆ: ೮೩೧೦೫೩೭೧೩೮

 

ಚಿತ್ರಗಳ ವಿವರ: ೧. ಮಣ್ಣಿನಿಂದ ಶಿಲ್ಪ ತಯಾರಿಸಿ ಅಚ್ಚಿನಿಂದ ಫೈಬರ್ ನಲ್ಲಿ ತಯಾರಿಸಿ ಪೈಂಟ್ ಮಾಡಿರುವುದು

೨. ಮೇಲಿನ ಚಿತ್ರದ ಮಣ್ಣಿನ ಅಚ್ಚು .

೩. ಮಣ್ಣಿನಿಂದ ಮಾಡಿದ ಗಣಪತಿಯ ಅಚ್ಚು .

೪. ರಥದಲ್ಲಿ ಒಂದೇ ಮರದ ತುಂಡಿನಿಂದ ಮಾಡಿದ ಸರಪಳಿಯನ್ನು ಗಮನಿಸಿ.

೫. ಎಡಗಡೆ ಎಳ್ಳಿನ ಸಿಹಿತಿಂಡಿ- ಬಲಗಡೆ ಅದರ ಅಚ್ಚು .

೬. ಗಣೇಶ್ ವಿಶ್ವಕರ್ಮ.