ಪ್ರವಾಹ ಸಂತ್ರಸ್ತರ ತೀರದ ಗೋಳು
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ವರ್ಷಧಾರೆ ಹೆಚ್ಚಿದೆ. ವಿಪರೀತ ಮಳೆ ಬಿದ್ದಾಗ ಉಂಟಾಗುವ ಅನಾಹುತಗಳಿಗೆ ಎಣೆಯೇ ಇಲ್ಲ. ರಾಜ್ಯದಲ್ಲಿ ೨೦೧೯ ರಿಂದ ೨೦೨೨ ರವರೆಗೆ ಬರೋಬ್ಬರಿ ೨.೪೫ ಲಕ್ಷ ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಪುನರ್ನಿರ್ಮಾಣ ಆರಂಭಿಸಿದ ೯೨,೯೪೯ ಮನೆಗಳ ಪೈಕಿ ಶೇಕಡ ೩೨ರಷ್ಟು ಮನೆಗಳು ಕೂಡಾ ಪೂರ್ಣವಾಗಿ ನಿರ್ಮಾಣವಾಗಿಲ್ಲ. ಶೇಕಡ ೬೦ರಷ್ಟು ಮನೆಗಳ ಗೋಡೆ, ಛಾವಣಿ ಹಂತದಲ್ಲಿಯೇ ಕಾಮಗಾರಿ ಸ್ಥಗಿತಗೊಂಡಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡು ಮೂರು ವರ್ಷವಾದರೂ ೧೫ ಸಾವಿರ ಕುಟುಂಬಗಳಿಗೆ ಸ್ವಂತ ಸೂರು ಇನ್ನೂ ಕನಸಾಗಿಯೇ ಉಳಿದಿದೆ. ಈಗಿನ ವಿಧಾನಸಭೆ ಅಧಿಕಾರ ಅವಧಿ ಮುಗಿಯುವ ಹಂತದಲ್ಲಿದೆ. ಚುನಾವಣೆ ಸಿದ್ಧತೆಯಲ್ಲಿರುವ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಭರವಸೆಗಳಿಗೆ ಲೆಕ್ಕವೇ ಇಲ್ಲ. ಆದರೆ ಅಧಿಕಾರಸ್ಥ ರಾಜಕೀಯ ಪಕ್ಷಗಳಿಗೆ ಆಡಳಿತಾವಧಿ ಕಾಲದಲ್ಲೇ ದೋಷಗಳನ್ನು ಸಾಕ್ಷಿ ಸಮೇತ ತೋರಿಸಿ, ನಾಯಕರನ್ನು ಉತ್ತರದಾಯಿಗಳಾಗಿಸಿ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿಸುವ ಯಾವ ವ್ಯವಸ್ಥೆಯೂ ಇಲ್ಲ. ಹೀಗಾಗಿ ಮಾಡಲೇಬೇಕಾದ ಕಾರ್ಯಗಳು, ಜಾರಿಯಾಗಬೇಕಾದ ಯೋಜನೆಗಳು ನೆನೆಗುದಿಗೆ ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ಮನೆ ಕಳೆದುಕೊಂಡವರಿಗೆ ಮರಳಿ ಸೂರು ಕಲ್ಪಿಸುವ ಯೋಜನೆಯ ಪರಿಸ್ಥಿತಿ ಹೀಗಾದರೆ, ರಿಪೇರಿ ಮಾಡಿಸಿಕೊಳ್ಳಬೇಕಾದವರಿಗೆ ಅಗತ್ಯವಾದ ಹಣಕಾಸು ನೆರವು ಕೂಡ ಪರಿಣಾಮಕಾರಿಯಾಗಿಲ್ಲ. ಕೋವಿಡ್ ನಂತರ ಹಣದುಬ್ಬರ ಹೇಗೆ ಹೆಚ್ಚಿದೆಯೋ ಅದೇರೀತಿ ಕಟ್ಟಡ ನಿರ್ಮಾಣ ಕೂಲಿಕಾರರ ಕೂಲಿ ಎರಡು ಪಟ್ಟು ಹೆಚ್ಚಿದೆ. ಸ್ಟೀಲ್, ಸಿಮೆಂಟ್, ಕಲ್ಲು, ವಿದ್ಯುತ್ ಉಪಕರಣ, ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಈ ಏರಿಕೆ ಗತಿಯನ್ನು ಲೆಕ್ಕ ಹಾಕಿ ಪರಿಹಾರವನ್ನು ಕೊಡುವ ವ್ಯವಸ್ಥೆ ಇಲ್ಲ. ಇದನ್ನು ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿಸುವಷ್ಟು ನಮ್ಮ ಅಧಿಕಾರ ಶಾಹಿ ಸಂವೇದಾನಾಶೀಲವಾಗಿಲ್ಲ. ಹೀಗಾಗಿ ಸರಕಾರದಿಂದ ಅಲ್ಪ ಮೊತ್ತ ಪಡೆದ ನೆರೆ ಸಂತ್ರಸ್ತರು ಬಾಡಿಗೆ ಮನೆಗಳಲ್ಲಿ ತೊಳಲಾಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಮರಳು ಕೊರತೆಯಿಂದ ಮನೆ ಬಾಕಿ ಇದ್ದರೆ, ಉತ್ತರ ಕರ್ನಾಟಕದಲ್ಲಿ ಪರಿಹಾರದ ಗೊಂದಲದಿಂದಾಗಿ ಮನೆಗಳು ಅಪೂರ್ಣ ಸ್ಥಿತಿಯಲ್ಲಿ ಉಳಿದಿವೆ.
ಪದೇಪದೇ ಪ್ರವಾಹ ಎದುರಾಗುವ ಗ್ರಾಮಗಳನ್ನು ಸ್ಥಳಾಂತರ ಮಾಡುವ ಬಗ್ಗೆ ೨೦೧೯ರ ಪ್ರವಾಹದ ಬಳಿಕ ರಾಜ್ಯ ಸರಕಾರ ಪ್ರಸ್ತಾವ ಸ್ವೀಕರಿಸಿತ್ತು. ಬೆಳಗಾವಿ ಜಿಲ್ಲೆ ಒಂದರಲ್ಲಿಯೇ ೧೩ ಗ್ರಾಮಗಳನ್ನು ಸ್ಥಳಾಂತರಿಸುವ ಬೇಡಿಕೆಯಿದ್ದರೂ, ಇದುವರೆಗೆ ಯಾವ ಪ್ರಗತಿಯೂ ಆಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ, ಸಕ್ರಮ ಗಲಾಟೆಯಲ್ಲಿ ಕೆಲವು ಸಂತ್ರಸ್ತರು ಸಿಲುಕಿದ್ದಾರೆ, ಕಾರವಾರ- ಅಂಕೋಲಾ ಭಾಗದಲ್ಲಿ ಸೀಬರ್ಡ್ ನೌಕಾನೆಲೆ ಯೋಜನೆ ವಿಸ್ತರಣೆ ಭೀತಿಯಲ್ಲಿ ಕೆಲಮನೆ ಅರ್ಧಕ್ಕೆ ನಿಂತಿವೆ. ಕದ್ರಾದಲ್ಲಿ ಜಲಾಶಯಗಳ ಮುಳುಗಡೆ ಪ್ರದೇಶದಿಂದ ಹೊರಬಂದು ಅನಧಿಕೃತ ಜಾಗದಲ್ಲಿ ನೆಲೆ ಕಂಡುಕೊಂಡಿದ್ದ ಅನೇಕ ಸಂತ್ರಸ್ತ ಕುಟುಂಬಗಳು ಮನೆ ಪರಿಹಾರಕ್ಕಾಗಿ ಈಗಲೂ ಪರಿತಪಿಸುತ್ತಿವೆ. ಸಮಸ್ಯೆಗಳನ್ನು ಗುರುತಿಸಿ ಅದನ್ನು ಪರಿಹರಿಸುವ ವಿಧಿವಿಧಾನಗಳಲ್ಲಿ ಕ್ರಾಂತಿಕಾರ ಪರಿವರ್ತನೆಯಾಗುವ ತನಕ ಪರಿಸ್ಥಿತಿ ಇದ್ದಂತೆ ಇರುತ್ತದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ,ದಿ: ೨೧-೧೨-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ