ಪ್ರಶ್ನೆಗಳು...

ಪ್ರಶ್ನೆಗಳು...

ಕವನ

ತ್ಯಾಗವಿದೆ ಶಾಂತಿಯಿದೆ ನನ್ನೆಲ್ಲ ಸುತ್ತಲೂ

ಭಾವವಿದೆ ಪ್ರೀತಿಯಿದೆ ಹೊತ್ತಗೆಯ ಪದದಲೂ 

ಹುಡುಕುವೆನು ನಾನಿಂದು ಕತ್ತಲಿನ ನಡುವೆಯೇ

ಮನಸೆಲ್ಲಿದೆ?.. ಮನುಷ್ಯತ್ವವೆಲ್ಲಿದೆ?

 

ಒಟ್ಟಿಗೇ ಕಲಿತರು ತಿಂದುಂಡು ಮಲಗಿದರು

ಅನ್ಯೋನ್ಯ ಬಾಂಧವ್ಯ ನಮ್ಮುಸಿರು ಎಂದರು

ತಿಳಿಯಾದ ತಂಪಲ್ಲಿ ವಿಷಗಾಳಿ ಹರಡಿರಲು

ಖುಷಿಯೆಲ್ಲಿದೆ?.. ನೆಮ್ಮದಿಯೆಲ್ಲಿದೆ?..

 

ಅವರಿವರ ಮಾತುಗಳು ವೈರತ್ವ ಹುಟ್ಟಿಸಲು

ಮೊಗದಲ್ಲಿ ಕಿಚ್ಚಿನಾ ಕಿಡಿಗಳದು ಉರಿದಿದೆ

ಮರೆಯಾಗಿ ಗೆಳೆತನವು ಸಿದ್ಧಾಂತ ಮೆರೆಯುತಿರೆ

ಸ್ನೇಹವೆಲ್ಲಿದೆ?.. ಆ ಪ್ರೀತಿಯೆಲ್ಲಿದೆ?..

 

ಪಿಸುಮಾತು ಒಳಗೊಳಗೆ ಸಂಚುಗಳ ರೂಪಿಸಲು

ಸೌಹಾರ್ದ ಮಾತುಗಳು ಮೌನದಲಿ ಮಲಗಿದೆ

ಪಂಥಗಳ ಕಲಹಗಳು ಶಿಕ್ಷಣದಿ ಬರುತಿರಲು

ಜ್ಞಾನವೆಲ್ಲಿದೆ?.. ನಮ್ಮ ಬುದ್ಧಿಯೆಲ್ಲಿದೆ?..

 

ಅರಿವಿರುವ ಮಸ್ತಕದಿ ಮೆರೆಯುತಿರೆ ವೈಷಮ್ಯ

ಸೌಖ್ಯದಾ ಮಾತೆಲ್ಲಿ ಮನದೊಳಗೆ ನೋವೇ

ಒಂದೊಮ್ಮೆ ಯೋಚಿಸಲು ನಮ್ಮೊಳಗೆ ಸ್ನೇಹವನು

ನೋವೆಲ್ಲಿದೆ?.. ದ್ವೇಷ ಭಾವವೆಲ್ಲಿದೆ?..

 

-’ಮೌನರಾಗ’ ಶಮೀರ್ ನಂದಿಬೆಟ್ಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್