ಪ್ರಶ್ನೆಯಿಲ್ಲದ ಉತ್ತರ ಅವಳು...
ನಸು ಬೆಳಕಿನ, ಸವಿ ಸಂಜೆಯ ಮೌನವನ್ನು ಮುನಿಸುವಂತೆ ಮಾಡಿತ್ತು ಆ ಕರೆ. ಏಕಾಂತದ ಏಕತಾನತೆಯನ್ನು ದೂರವಾಗಿಸಿತ್ತು ಫೋನಿನ ಮೆಲುದನಿ. ಅದೆಷ್ಟೋ ದಿನಗಳ ನಂತರ ಅದರಲ್ಲಿ ಮೂಡಿಬಂದಿತ್ತು ಅವಳ ನಗುಮೊಗ. ಒಂದು ಕ್ಷಣ, ಹಾಗೇ ಮನಸು ಜಾರಿತ್ತು ನೆನೆಪಿಗೆ. ಮಾತು ನೆಪಕ್ಕಷ್ಟು ಮಾತ್ರ, ಮನಸಿತ್ತು ನೆನಪಿನಾಚಿನ ಕನಸ ಹತ್ತಿರ.
ಹತ್ತಿರ ಹೆಚ್ಚಾದಷ್ಟೂ `ದೂರ’ ಹತ್ತಿರವಾಗುವುದಂತೆ. ಕೆಲವೊಮ್ಮೆ ದೂರವಿದ್ದರೂ, ಸಿಹಿನೆನಪುಗಳು ಹತ್ತಿರಮಾಡಿಸಿಬಿಡುತ್ತವೆ, ಮನ-ಮನವನ್ನು ಬೆಸೆದು ಬಿಡುತ್ತದೆ. ಆ ನಂಬಿಕೆ ಅವನಲ್ಲೂ ಇತ್ತು. ಅವಳನ್ನು, ಆ ನಂಬಿಕೆಯನ್ನು ನಂಬಿ ಅವನ ಬದುಕೂ ಬದುಕಿತ್ತು, ಉಸಿರ ಹಸಿರೂ ಚಿಗುರಿತ್ತು.
ಚಿಗುರಿತ್ತು ಮೊದಲ ಋತುಮಾನದ ಬರಕೆ ಗಿಡ-ಮರ, ತರುಲತೆ ಸಂಕುಲ. ಚೈತ್ರದನುರಣನೆ ತುಂಬು ಜಗದಗಲ. ತಳಿರು ತುಂಬಿ ನಳನಳಿಸುವ ಹಸಿ ಹಸಿರು ಎಲೆ. ಜೊತೆಗೆ, ಸಾಕುತಾಯಿಯೂ ದೂರಮಾಡಿದ ಒಬ್ಬಂಟಿ ಕೋಗಿಲೆ. ಜೊತೆಗಿರುವ ಮುಗಿಯದ ಅಶ್ರುಮಾಲೆ. ಅಲ್ಲಿ ಅವನು ಮತ್ತು ಸುತ್ತ ಹರಡಿರುವ ಮಬ್ಬುಗತ್ತಲೆ. ದೂರವಾಗುತ್ತಿತ್ತು ಅಲ್ಲಿ, ಅವನ ಬಾಳಲ್ಲಿ ಆ ಹಗಲು, ಮೆಲ್ಲಗೆ ಬಣ್ಣ ಬದಲಾಯಿಸುತ್ತಿತ್ತು ಅಲ್ಲಿ ಕತ್ತಲು.
ಕತ್ತಲು. ಮತ್ತೊಮ್ಮೆ ಹಗಲು ಹಾಸಿಗೆ ಸೇರಿತ್ತು. ಕತ್ತಲ ಹೊದಿಕೆ ಜಗಕೆಲ್ಲ ಹೊದೆಸಿ, ರಾತ್ರಿ ಆಗಲೇ ತಯಾರಾಗಿತ್ತು. ನಿದ್ದೆ ಮಾಡುತ್ತಾ ನಿಂತಿದ್ದ ಸ್ಟ್ರೀಟ್ಲೈಟ್ಗಳನ್ನೆಲ್ಲ ಒದ್ದು ನಿದ್ದೆಯಿಂದ ಎಬ್ಬಿಸಿತ್ತು. ಕಣ್ಣು ಉಜ್ಜುತ್ತಾ ಮನೆಯೊಳಗೂ ದೀಪಗಳು ಕಣ್ಣು ತೆರೆದಿತ್ತು. ದೂರ ಬಾನಿನಲ್ಲಿ ಚುಕ್ಕಿ-ತಾರೆಗಳು, ಮರ-ಗಿಡದ ಮೈಮೇಲೆ ಮಿಂಚುಹುಳಗಳು. ಎಲ್ಲೆಡೆಯೂ ಇರುಳ ದೂಡುವ ಕಾಯಕ ಕಾಣುತಿತ್ತು. ಆದರೂ, ಅಲ್ಲೆಲ್ಲ ಕತ್ತಲು ತುಂಬಿಯೇ ಇತ್ತು. ಕಾರಿರುಳ ಕರಿನೆರಳು ನಡೆಯುತಾ ಇತ್ತು. ಗಡಿಯಾರದ ಮುಳ್ಳಿನೊಟ್ಟಿಗೇ, ಮೆಲ್ಲ ಮೆಲ್ಲಗೆ... ಹೊಸತು ನಾಳೆಯೆಡೆಗೆ.
ನಾಳೆಯೆಡೆಗೆ ನಡೆವ ದಿನದ ನಡಿಗೆ ನಿರಂತರ. ಅಲ್ಲಿಲ್ಲ ಯಾವುದೂ ಅಡ್ಡಿ, ಆತಂಕ, ಅಂತರ. ಕಾಲದ ಕಾಲಡಿ ಬಿದ್ದು ನಲುಗಿ, ಕಮರುವ ಜೀವಗಳೆಷ್ಟೋ..! ಪತರಿ, ಕಾತರಿಸುವ ಕಣ್ಣುಗಳೆಷ್ಟೋ..! ಹೆದರಿ, ನಿಲ್ಲುವ ಹೃದಯಗಳೆಷ್ಟೋ..!
ಎಷ್ಟೋ ದಿನಗಳ ಮತ್ತೆ ಅವನ ಕಣ್ಣುಗಳಲ್ಲಿ ಮಿಂಚು ಇಣುಕಿತ್ತು, ಧಮನಿಯೊಳಗೊಂದು ಸಂಚಲನ ಮೂಡಿತ್ತು, ಆ ಕರೆಗೆ, ಅವಳ ಮಾತಿಗೆ. ಕ್ಷಣಕಾಲ ಮಾತು ಮರೆತಂತಾಯ್ತು ಅವಳ ಮೌನಕೆ. ಮಾತ ಮರೆತವ ಮತ್ತೆ ತೊದಲಿದಂತೆ, ಆನಂದತುದಲಿತನಾಗಿ ಧ್ವನಿ ನಡುಗಿದಂತೆ, ಒಂದೇ ಉಸಿರಲ್ಲಿ ಮಾತಾಡಿದ. ಕಳೆದ ಕಹಿ-ಕಾರಣಗಳ ಮರೆತು ಮೊದಲಿನಂತಿರಲಾಗದೇ... ಎಂದು ಅಂಗಲಾಚಿದ. ಅರೆಕ್ಷಣ ಗದ್ಗದಿತನಾದ. ಮನದಲ್ಲೇ ಕ್ಷಮೆ ಕೋರಿದ, ಮಾತಲ್ಲದನು ಹೇಳಲಾಗದಾದ.
ಹೇಳಲಾಗದ ಮಾತ, ಅವಳೊಂದಿಗೆ ಹಂಚಿಕೊಳ್ಳಲಾರದ ಕನಸ ಪರದೆ ಸರಿಸಿದ್ದ ಅಂದೇ. ಅದೂ ಮಳೆಗಾಲದ ಇಂಥದೇ ಒಂದು ಮುಸ್ಸಂಜೆ. ಆದರೆ, ಅವನ ಆ ಮುಗ್ಧ ಮನಸಿಗೆ, ಕಣ್ಣ ಕನಸಿಗೆ ಅವಳಲ್ಲೂ ಜಾಗವಿರಲಿಲ್ಲ. ಮಳೆಯಲ್ಲಿ ನೆನೆದ ಕಣ್ಣೀರೂ ಕಾಣಲಿಲ್ಲ. ಕಾಲವೂ ಕೈಹಿಡಿಯಲಿಲ್ಲ, ಅವನನ್ನು ಸೋಲೂ ಅರ್ಥೈಸಲಿಲ್ಲ.
ಅರ್ಥೈಸಲಾಗದ ಪ್ರಶ್ನೆಗೆ ಉತ್ತರ ಪಡೆಯ ಹೊರಟವನವನು, ಅವಳಲ್ಲಿ ಅರ್ಥ ಹುಡುಕಿದ್ದ. ಮಳೆಬಿಲ್ಲ ಬಣ್ಣ ಕಂಡಿದ್ದ. ವಾಸ್ತವದ ಇರುವ ಮರೆತಿದ್ದ. ಪರರ ಪ್ರಶ್ನೆಯ ಉತ್ತರ ಸ್ವಂತವಾಗಿತ್ತು. ತನ್ನ ಪ್ರಶ್ನೆಯು ಅಲ್ಲಿ ಪ್ರಶ್ನೆಯಾಗೇ ಉಳಿದಿತ್ತು. ಪ್ರಶ್ನೆ ಇಲ್ಲದ ಉತ್ತರ ಅವಳಾಗಿದ್ದಳು. ಮತ್ತಿನ ಪ್ರಶ್ನೆಯೇ ಮರೆತಿದ್ದ. ಕೊನೆಗೂ ತನ್ನಯ ಗೆಲುವ ತಾನೇ ಸೋತಿದ್ದ..! ಉತ್ತರದ ಒಳಗಿರುವ ಪ್ರಶ್ನೆಯ ನಗುವಿನ ದುಃಖಕ್ಕೆ ಜೊತೆಯಾದ. ಜೊತೆಯಾಗಿಯೇ ಉಳಿದ. ಮತ್ತೆ ಅವಳ ನಗುಮೊಗವ ಕಾಯುತ ಕಣ್ಣ ಮುಚ್ಚಿದ್ದ.
ಮುಚ್ಚಿದ್ದ ಕಣ್ಣೆವೆಗಳನ್ನು ಬಲವಂತವಾಗಿ ತೆರೆದ. ಪಾರ್ಕ್ನ ಬಾಗಿಲು ಮುಚ್ಚುವ ಹೊತ್ತು. ಅಲ್ಲಿನ ಕಾವಲುಗಾರ ಎದುರು ನಿಂತಿದ್ದ. ಏರುದನಿಯಲ್ಲಿ ಎಲ್ಲರನ್ನೂ ಹೊರಹೋಗಲು ಹೇಳುತ್ತಿದ್ದ. ಚಾರ್ಜ್ ಮುಗಿದ ಫೋನ್ ಆಗಲೇ ನಿಶ್ಕ್ರಿಯವಾಗಿತ್ತು. ಅದಕೆ ಜೊತೆಯಾಯ್ತು ಅವನ ಕಳೆದ ದಿನಗಳ ಯೋಚನಾಲಹರಿ ಮತ್ತು ಪಾರ್ಕ್ನ ಒಳಗಿರುವ ದೀಪಕ್ಕೆ ಮುತ್ತುವ ಹಾತೆಗಳ ಕಿರಿಕಿರಿ...
Comments
ಉ: ಪ್ರಶ್ನೆಯಿಲ್ಲದ ಉತ್ತರ ಅವಳು...
ಪ್ರಶ್ನೆ ಇಲ್ಲದೆ ಉತ್ತರ ಎಲ್ಲಿದ್ದೀತು? ಉತ್ತರವಿಲ್ಲದ ಪ್ರಶ್ನೆ ಇರಬಹುದು!
In reply to ಉ: ಪ್ರಶ್ನೆಯಿಲ್ಲದ ಉತ್ತರ ಅವಳು... by kavinagaraj
ಉ: ಪ್ರಶ್ನೆಯಿಲ್ಲದ ಉತ್ತರ ಅವಳು...
ಅವಳು ಅವನ ಆಂತರ್ಯದ ಅನುಭಾವಗಳಿಗೆ ದನಿಯಾದವಳು, ಪ್ರಶ್ನೆಗೂ ಅತೀತವಾದವಳು, ಹಾಗಾಗಿ ಪ್ರಶ್ನೆಯ ಪ್ರಶ್ನೆ ಅವಳಿಗೆಲ್ಲಿ..?!