ಪ್ರಾಚೀನ ಭಾರತದ ಜ್ಞಾನಖಜಾನೆ: 64 ಕಲೆಗಳು

ಪ್ರಾಚೀನ ಭಾರತದ ಜ್ಞಾನಖಜಾನೆ: 64 ಕಲೆಗಳು

ಪ್ರಾಚೀನ ಭಾರತ ನೂರಾರು ಜ್ಞಾನ ಶಾಖೆಗಳ ತವರು. ಪ್ರತಿಯೊಂದು ಜ್ಞಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್)

ಸಂಗೀತ, ನೃತ್ಯ, ನಾಟ್ಯ, ಚಿತ್ರಕಲೆ, ಶಿಲ್ಪಕಲೆ,  ವಾಸ್ತುಕಲೆ - ಇಂತಹ ಹತ್ತಾರು ಕಲೆಗಳು ಸಾವಿರಾರು ವರುಷಗಳ ಅವಧಿಯಲ್ಲಿ ಪ್ರಾಚೀನ ಭಾರತದಲ್ಲಿ ವಿಕಾಸ ಹೊಂದಿದವು. ಇದಕ್ಕೆ ಪ್ರಧಾನ ಕಾರಣ ಇಲ್ಲಿನ ತಪಸ್ವಿಗಳ ಮೇಧಾಶಕ್ತಿ ಮತ್ತು ತ್ಯಾಗ. ಮನುಷ್ಯನ ವಿಕಾಸಕ್ಕೆ ಅಗತ್ಯವಾದ ಹಲವಾರು ಕಲೆಗಳನ್ನು ಗುರುಗಳೂ ಸಾಧಕರೂ ಉತ್ತುಂಗಕ್ಕೆ ಒಯ್ದರು. ಮಾತ್ರವಲ್ಲ, ಅವನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಲಿಕ್ಕಾಗಿ ಪರಿಣಾಮಕಾರಿ ಶಿಕ್ಷಣ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದರು. ಇದರಿಂದಾಗಿಯೇ ಭಾರತದ ನಳಂದಾ, ತಕ್ಷಶಿಲಾ ಇತ್ಯಾದಿ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯಗಳೆಂದು ಹೆಸರು ಗಳಿಸಿದವು. ಇಲ್ಲಿ ಅಧ್ಯಯನ ಮಾಡಲಿಕ್ಕಾಗಿ ಹಲವಾರು ವಿದೇಶಗಳಿಂದ ಪ್ರತಿ ವರುಷವೂ ಸಾವಿರಾರು ಜ್ನಾನಾಕಾಂಕ್ಷಿಗಳು ಭಾರತಕ್ಕೆ ಆಗಮಿಸುತ್ತಿದ್ದರು.

ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲದಲ್ಲಿ ಹರಡಿದ್ದ ಸಾವಿರಾರು ಗುರುಕುಲಗಳಲ್ಲಿ ಗುರು-ಶಿಷ್ಯ ಪರಂಪರೆಯಲ್ಲಿ ಗುರುಗಳು ತಮ್ಮ ಜ್ನಾನವನ್ನು ಎಲ್ಲ ವಿದ್ಯಾರ್ಥಿಗಳಿಗೂ ಧಾರೆ ಎರೆಯುತ್ತಿದ್ದರು. ಮೌಖಿಕ ಪರಂಪರೆ ಮೂಲಕ ಮತ್ತು ತಾಳೆಗರಿಗಳ ಗ್ರಂಥಗಳ ಮೂಲಕ ಪ್ರಾಚೀನ ಭಾರತದ ಅಗಾಧ ಜ್ನಾನಭಂಡಾರ ಇಲ್ಲಿಯ ವರೆಗೆ ಉಳಿದು ಬಂದಿದೆ ಎಂಬುದನ್ನು ಗಮನಿಸಿ. ಅಂದರೆ, "ಜ್ನಾನ" ಎಂಬುದು ಅಳಿವಿಲ್ಲದ ಸಂಪತ್ತು ಮತ್ತು ಮುಂದಿನ ತಲೆಮಾರುಗಳಿಗೆ ಅತ್ಯಗತ್ಯವಾದ ಸಾಧನ ಎಂಬುದನ್ನು ನಮ್ಮ ಪೂರ್ವಿಕರು ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ, ಈ ಜ್ನಾನವನ್ನು ದುಷ್ಟ ಮತ್ತು ಅಸೂಯಾ ಮನೋಭಾವದ ಯಾವುದೇ ಧಾಳಿಕೋರರಿಗೆ ನಾಶಪಡಿಸಲು ಸಾಧ್ಯವಾಗದಂತೆ ಅದರ ಸಂರಕ್ಷಣೆಗಾಗಿ ವ್ಯವಸ್ಥೆಗಳನ್ನು ರೂಪಿಸಿದ್ದರು. ಅದು, ನಮ್ಮ ಪೂರ್ವಿಕರ “ಸರ್ವೇಜನಾಃ ಸುಖಿನೋಭವಂತು” ಎಂಬ ಉದಾತ್ತ ಚಿಂತನೆಯ ಫಲ.

ಒಬ್ಬ ಮನುಷ್ಯ ಸುಸಂಸ್ಕೃತನಾಗದಿದ್ದರೆ ಆತನ ಸಮಾಜಕ್ಕೆ, ದೇಶಕ್ಕೆ ಮತ್ತು ಇಡೀ ಜಗತ್ತಿಗೆ ಆತ ಹೇಗೆ ಕಂಟಕಪ್ರಾಯ ಆಗಬಲ್ಲ ಎಂಬುದನ್ನು ಕಳೆದ ಒಂದು ಸಾವಿರ ವರುಷಗಳ ಚರಿತ್ರೆಯಲ್ಲಿ ನಾವು ಮತ್ತೆಮತ್ತೆ ಕಾಣುತ್ತಿದ್ದೇವೆ. ಹಾಗಾದರೆ, ಒಬ್ಬ ವ್ಯಕ್ತಿ ಸುಸಂಸ್ಕೃತ ನಾಗರಿಕನಾಗಿ ಬೆಳೆದು, ಸಮಾಜದ ಒಳಿತಿಗಾಗಿ ಬದುಕಿ, ತನ್ನ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಆತ/ ಆಕೆಯಲ್ಲಿ ವಿಶಾಲ ಮನೋಭಾವದ ಉದಾತ್ತ ಚಾರಿತ್ರ್ಯದ ವ್ಯಕ್ತಿತ್ವ ಅರಳಿಸುವಂತಹ ಶಿಕ್ಷಣ ನೀಡಬೇಕು. ಅಂತಹ ಶಿಕ್ಷಣವು 64 ಕಲೆಗಳನ್ನು ಒಳಗೊಂಡಿರಬೇಕು ಎಂದು ಮಹಾಮುನಿ ವಾತ್ಸಾಯನ ದಾಖಲಿಸಿದ್ದಾರೆ.

ಈ ಎಲ್ಲ ಕಲೆಗಳ ಮಹತ್ವವನ್ನು ತಿಳಿಯಬೇಕಾದರೆ, ಮಧ್ಯಪ್ರದೇಶದ ಭೀಮ್-ಬೇಟಿಕಾ ಎಂಬಲ್ಲಿ ಗುಹೆಗಳಲ್ಲಿರುವ 10,000 ವರುಷ ಹಿಂದಿನ ಚಿತ್ರಗಳನ್ನು ಕಾಣಬೇಕು. ಹರಪ್ಪಾ - ಮೊಹಂಜೋದಾರದಲ್ಲಿ ಸಾವಿರಾರು ವರುಷಗಳ ಮುಂಚೆ ಉತ್ತುಂಗಕ್ಕೆ ಏರಿದ್ದ ನಾಗರಿಕತೆಯ ಪುರಾವೆಗಳನ್ನು ಪರಿಶೀಲಿಸಬೇಕು. ಅಂತರಿಕ್ಷಜ್ನಾನ, ಜ್ಯೋತಿಷ್ಯ ಶಾಸ್ತ್ರ, ಗಣಿತ, ಆಯುರ್ವೇದ ಮತ್ತು ಯೋಗಗಳಲ್ಲಿ ಪ್ರಾಚೀನ ಭಾರತ ಸಾಧಿಸಿದ್ದ ಅದ್ಭುತ ಪ್ರಗತಿಯ ಬಗ್ಗೆ ಅಧ್ಯಯನ ಮಾಡಬೇಕು. ಅಜಂತಾ, ಎಲ್ಲೋರಾ, ಬೇಲೂರು, ಹಳೆಬೀಡು, ಹಂಪೆ, ಮಧುರೆ, ಮಹಾಬಲಿಪುರ ಇತ್ಯಾದಿ ನೂರಾರು ಸಾಂಸ್ಕೃತಿಕ ಕೇಂದ್ರಗಳಲ್ಲಿ ಇಂದಿಗೂ ಉಳಿದಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿ ಜಗತ್ತಿನಲ್ಲೇ ಸರಿಸಾಟಿಯಿಲ್ಲದ ಮಾದರಿಗಳನ್ನು ಕಣ್ಣಾರೆ ಕಾಣಬೇಕು. ಸಂಗೀತ ಮತ್ತು ನೃತ್ಯ ಕಲೆಗಳ ಹಾಗೂ ಭಾರತದ ಉದ್ದಗಲದಲ್ಲಿ ವ್ಯಾಪಿಸಿರುವ ಸಾವಿರಾರು ಜನಸಮುದಾಯಗಳ ಸಮೃದ್ಧ ಜಾನಪದ ಕಲೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ತಿಳಿದುಕೊಳ್ಳಬೇಕು.

ಎಂತಹ ಜ್ನಾನಸಂಪನ್ನ ದೇಶ ನಮ್ಮದು! ಹತ್ತೊಂಬತ್ತನೇ ಶತಮಾನದಿಂದೀಚೆಗೆ ಭಾರತದಲ್ಲಿ ಜರಗಿದ ಹಲವಾರು ವಿದ್ಯಮಾನಗಳಿಂದಾಗಿ ಈ ಅಮೂಲ್ಯ ಜ್ನಾನಭಂಡಾರ ಹಿನ್ನೆಲೆಗೆ ಸರಿಯಿತು. "ಗುಲಾಮಿ" ಮನೋಭಾವದ ಕೆಲಸದಾಳುಗಳನ್ನು ಬೆಳೆಸಲಿಕ್ಕಾಗಿ ನಮ್ಮ ಮೇಲೆ ಹೇರಲಾದ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ಸಾವಿರಾರು ವರುಷಗಳ ಪರಂಪರೆಯ ಜ್ನಾನಭಂಡಾರದ ಬಗ್ಗೆ ನಮಗೆ ಮಾಹಿತಿಯೇ ಇಲ್ಲವಾಯಿತು. 1947ರಲ್ಲಿ ನಾವು ಸ್ವಾತಂತ್ರ್ಯ ಗಳಿಸಿದ ನಂತರವೂ ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿಯ ಪುನರುಜ್ಜೀವನ ಆಗಲಿಲ್ಲ.

ಕೊಲ್ಹಾಪುರದ ಕನೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಗಳು ನಡೆಸುತ್ತಿರುವ ಗುರುಕುಲದ 250 ವಿದ್ಯಾರ್ಥಿಗಳಿಗೆ (100 ಹೆಣ್ಣುಮಕ್ಕಳ ಸಹಿತ) ಈ 64 ಕಲೆಗಳನ್ನು ಕಲಿಸಲಾಗುತ್ತಿದೆ ಎಂಬುದು ನಾವೆಲ್ಲರೂ ಗಮನಿಸಬೇಕಾದ ಸಂಗತಿ. ಆ ವಿದ್ಯಾರ್ಥಿಗಳು ಆಯುರ್ವೇದ, ಖಗೋಲಶಾಸ್ತ್ರ ಸಹಿತ 64 ಕಲೆಗಳಲ್ಲಿ ಪರಿಣತರಾಗುತ್ತಿದ್ದಾರೆ. ಅಲ್ಲಿನ 14 - 15 ವರುಷ ವಯಸ್ಸಿನ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಾ ಏಳು ಗಂಟೆಗಳ ಅವಧಿ ಅಂತಾಕ್ಷರಿ ನಡೆಸಬಲ್ಲರು ಎಂದು ಸ್ವಾಮಿಗಳು ಅಭಿಮಾನದಿಂದ ಹೇಳುತ್ತಾರೆ. (ಅದು 29ನೆಯ ಕಲೆ)

ಇನ್ನಾದರೂ, ನಮ್ಮ ಮಕ್ಕಳಿಗೆ ಬದುಕನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಶಿಕ್ಷಣ ನೀಡಲು ತಯಾರಾಗೋಣ. ಜ್ನಾನಸಂಪನ್ನರಾಗಿ ಆತ್ಮವಿಶ್ವಾಸದಿಂದ ಬದುಕಲು ಕಲಿಸೋಣ. ಮನುಷ್ಯರನ್ನು ವಿಶಾಲ ಮನೋಭಾವದ ಮತ್ತು ಉದಾತ್ತ ಚಾರಿತ್ರ್ಯದ ನಾಗರಿಕರನ್ನಾಗಿ ರೂಪಿಸುವ ಜ್ನಾನವನ್ನು ನಮ್ಮ ಮಕ್ಕಳಿಗೆ ಧಾರೆ ಎರೆಯಲು ಮುಂದಾಗೋಣ. ಆ ಮೂಲಕ ಮುಂದಿನ ತಲೆಮಾರಿನವರು, ಭಾರತದ ಪ್ರಾಚೀನ ಜ್ನಾನಖಜಾನೆಯ ಒಂದು ಭಾಗವನ್ನಾದರೂ ತಮ್ಮದಾಗಿಸಿಕೊಂಡು, ಅದನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಲು ಸಂಕಲ್ಪ ತೊಡುವಂತಾಗಲಿ.

ಫೋಟೋ: ಪ್ರಾಚೀನ ಭಾರತದ ಗುರುಕುಲದಲ್ಲಿ ಅಧ್ಯಯನ … ಕೃಪೆ: ಲಿಂಕ್‌ಡ್ ಇನ್