ಪ್ರಾಣಿ ಜೀವನ

ಪ್ರಾಣಿ ಜೀವನ

ಪುಸ್ತಕದ ಲೇಖಕ/ಕವಿಯ ಹೆಸರು
ಎ. ನಾರಾಯಣ ರಾವ್
ಪ್ರಕಾಶಕರು
ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು - ೫೭೦೦೦೬
ಪುಸ್ತಕದ ಬೆಲೆ
೨೫ ಪೈಸೆ, ಮುದ್ರಣ: ೧೯೮೩

ಮಾನಸಗಂಗೋತ್ರಿ, ಮೈಸೂರು ಇದರ ಪ್ರಸಾರಾಂಗ ವಿಭಾಗದವರು ‘ಪ್ರಚಾರ ಪುಸ್ತಕ ಮಾಲೆ' ಎಂಬ ಹೆಸರಿನಲ್ಲಿ ಉತ್ತಮ, ಮಾಹಿತಿದಾಯಕ ಸರಣಿ ಪುಸ್ತಕಗಳನ್ನು ಹೊರತರುತ್ತಿದ್ದರು. ಈ ಮಾಲೆಯ ೧೧ ನೇ ಪ್ರಕಟಣೆಯೇ ಎ. ನಾರಾಯಣ ರಾವ್ ಅವರು ಬರೆದ ‘ಪ್ರಾಣಿ ಜೀವನ' ಎಂಬ ಪುಸ್ತಕ. ಪುಸ್ತಕ ಸುಮಾರು ೪ ದಶಕಗಳಷ್ಟು ಹಿಂದಿನದಾದರೂ ಬಹಳಷ್ಟು ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ. 

ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳಾದ ಇ ಜಿ ಮೆಕಾಲ್ಪೈನ್ ಅವರು ತಮ್ಮ ಮುನ್ನುಡಿಯಲ್ಲಿ ಈ ರೀತಿಯಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ -” ಈ ಪ್ರಚಾರ ಪುಸ್ತಕ ಮಾಲೆ ಮೂರು ವರ್ಷಗಳ ಹಿಂದೆ (೧೯೮೦) ಪ್ರಾರಂಭವಾಯಿತು. ಅತಿ ಸುಲಭವಾದ ಬೆಲೆಯಿಟ್ಟು ಇಂಥ ಪುಟ್ಟ ಪುಸ್ತಕಗಳನ್ನು ಹೊರಡಿಸಿದರೆ, ಅವನ್ನು ಓದಿ ಮೆಚ್ಚುವವರು ಮೈಸೂರಿನ ಜನರಲ್ಲಿ ಬಹುವಾಗಿ ದೊರೆಯುವರೆಂಬ ಭರವಸೆಯೇ ಈ ಪ್ರಯತ್ನಕ್ಕೆ ಪ್ರೇರಕ. ಮೊಟ್ಟಮೊದಲು ಮೈಸೂರು ವಿಶ್ವವಿದ್ಯಾನಿಲಯ ಕೈಗೊಂಡ ಈ ಹೊಸ ಮಾರ್ಗದ ಉದ್ಯಮವು ಅದನ್ನು ಏರ್ಪಡಿಸಿದವರ ಅತ್ಯಂತ ನಿರೀಕ್ಷೆಯನ್ನೂ ಮೀರಿ ಫಲಕಾರಿಯಾಗಿದೆಯೆಂದು ದಿಟವಾಗಿ ಹೇಳಬಹುದು. ಈ ಮೂರು ವರ್ಷಗಳಲ್ಲಿ ೩೪ ಪುಸ್ತಕಗಳು ಪ್ರಕಟವಾಗಿವೆ.”

ವಿಷಯಾನುಕ್ರಮಣೆಯಲ್ಲಿ ಒಳಪುಟಗಳ ಹೂರಣವನ್ನು ನೀಡಿದ್ದಾರೆ. ಜೀವವೆಂದರೆ ಏನು?, ಪ್ರಾಣಿಗಳ ಸಮಾಜಜೀವನ, ಪ್ರಾಣಿ ಜೀವನದಲ್ಲಿ ಆತ್ಮಸಂರಕ್ಷಣೆ, ಪ್ರಣಿಗಳ ಪ್ರಪಂಚ ಒಂದು ವಿಶಾಲ ಕುಟುಂಬ, ಪ್ರಾಣಿಶಾಸ್ತ್ರವೂ ಜನಜೀವನವೂ ಎಂಬೆಲ್ಲಾ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಕೆಲವು ವಿಷಯಗಳು ಹಳೆಯ ಕಾಲದ ಸಂಗತಿಯಾಗಿದ್ದರೂ, ಇಂದಿಗೆ ಪ್ರಸ್ತುತ ಅಲ್ಲವೆನಿಸಿದರೂ ಅಂದಿನ ಕಾಲದ ವಿಷಯಗಳನ್ನು ಅರಿಯಲು ಹಾಗೂ ತುಲನೆ ಮಾಡಿಕೊಳ್ಳಲು ಈ ಪುಸ್ತಕ ಸಹಕಾರಿ. ೫೬ ಪುಟಗಳ ಈ ಪುಸ್ತಕದಲ್ಲಿ ಓದುಗರ ಅನುಕೂಲಕ್ಕಾಗಿ ಪುಟ್ಟ ಪುಟ್ಟ ರೇಖಾಚಿತ್ರಗಳನ್ನು ನೀಡಲಾಗಿದೆ.