ಪ್ರೀತಿಯೇ ಈ ಜಗತ್ತಿನ ಶಕ್ತಿ
ಕೌಶಿಕ ಎಂಬ ಸಾಧಕನು ಬ್ರಹ್ಮಚಾರಿಯಾಗಿದ್ದು, ಹಲವು ವಿಧದ ಶಾಸ್ತ್ರಗಳಲ್ಲಿ ಪರಿಣಿತನಾಗಿದ್ದ. ಮಾತ್ರವಲ್ಲ, ಸಾಧನೆಯಲ್ಲಿ ಉನ್ನತ ಮಟ್ಟ ತಲುಪಿದ್ದ. ಆದರೆ ಅವನಲ್ಲಿ ಒಂದು ದೌರ್ಬಲ್ಯವಿತ್ತು. ಆತ ಬೇರೆಯವರ ಮೇಲೆ ಬಹು ಬೇಗನೇ ಕೋಪ ಮಾಡಿಕೊಳ್ಳುತ್ತಿದ್ದ.
ಒಮ್ಮೆ ಮರವೊಂದರ ಅಡಿ ಕುಳಿತು ಧ್ಯಾನ ಮಾಡುತ್ತಿದ್ದಾಗ, ಮರದ ಮೇಲಿದ್ದ ಒಂದು ಕಾಗೆ ಕೂಗಿತು. ತನ್ನ ಧ್ಯಾನಕ್ಕೆ ಭಂಗ ತಂದ ಆ ಕಾಗೆಯನ್ನು ಆತ ಕೋಪದಿಂದ ದಿಟ್ಟಿಸಿ ನೋಡಿದ್ದೇ ತಡ, ಆ ಕಾಗೆ ಸುಟ್ಟು ಹೋಯಿತು,
ಆ ನಂತರ ಆತ ಸಮೀಪದ ಗ್ರಾಮವೊಂದಕ್ಕೆ ಭಿಕ್ಷೆ ಪಡೆಯುವ ಉದ್ದೇಶದಿಂದ ಮನೆಯೊಂದರ ಬಳಿ ನಿಂತುಕೊಂಡ. ಆ ಮನೆಯ ಗೃಹಿಣಿಯು ಮನೆಕೆಲಸದಲ್ಲಿ ನಿರತಳಾಗಿದ್ದಳು. ಇನ್ನೇನು ಕೌಶಿಕನಿಗೆ ಆಹಾರ ನೀಡಬೇಕೆನ್ನುವಷ್ಟರಲ್ಲಿ, ಆಕೆಯ ಪತಿಯು ಮನೆಗೆ ಬಂದ. ದಣಿದು ಬಂದಿದ್ದ ಆತನಿಗೆ ಆಹಾರವನ್ನು ನೀಡುವಾಗ ತುಸು ವಿಳಂಬವಾಯಿತು. ಆಕೆಯ ಪತಿ ಆಹಾರ ಸೇವಿಸಿದ ನಂತರ, ಕೌಶಿಕನ ಬಳಿ ಬಂದು ‘ಕ್ಷಮಿಸಬೇಕು, ತುಸು ವಿಳಂಬವಾಯಿತು' ಎಂದಳು.
ಆಗ ಕೌಶಿಕನು ‘ನಾನು ಆಗಿನಿಂದ ಇಲ್ಲಿ ಕಾಯುತ್ತಿದ್ದೇನೆ. ಎಂಬುದರ ಕುರಿತು ನಿನಗೆ ಗಮನವೇ ಇಲ್ಲವೇ? ನಾನು ಯಾರೆಂದು ಗೊತ್ತೇ?’ ಎಂದು ಕೋಪದಿಂದ ನುಡಿದ.
ಆಗ ಆಕೆಯು ‘ಸ್ವಾಮಿ, ದಯವಿಟ್ಟು ಕೋಪಮಾಡಿಕೊಳ್ಳ ಬೇಡಿ. ನಾನು ನನ್ನ ಪತಿಗೆ ಆಹಾರ ನೀಡುತ್ತಿದ್ದೆ. ಅದು ನನ್ನ ಕರ್ತವ್ಯ. ಆ ರೀತಿ ಕೋಪದಿಂದ ನನ್ನನ್ನು ನೋಡಬೇಡಿ. ಅದರಿಂದ ನನಗೇನೂ ಆಗುವುದಿಲ್ಲ. ಏಕೆಂದರೆ ನಾನು ಆ ಬಡಪಾಯಿ ಕಾಗೆ ಅಲ್ಲ! ಎಂದಳು.
ಕೌಶಿಕನಿಗೆ ಆಶ್ಚರ್ಯವಾಯಿತು. ತನ್ನ ಕೋಪದ ದೃಷ್ಟಿಯಿಂದ ಸತ್ತು ಹೋದ ಕಾಗೆಯ ವಿಷಯ ಈಕೆಗೆ ಹೇಗೆ ತಿಳಿಯಿತು? ಕೌಶಿಕನು ತಕ್ಷಣ ಕೋಪದಿಂದ ಹೊರಗೆ ಬಂದು ‘ತಾಯಿ, ನಿನ್ನ ಮಾತಿಗೆ ಮೆಚ್ಚಿದೆ. ನನ್ನ ಕೋಪವು ಕೆಲವು ಬಾರಿ ಅತಿ ಅನಿಸುವುದುಂಟು. ಇರಲಿ. ಇದು ನಿನಗೆ ಹೇಗೆ ತಿಳಿಯಿತು? ಈ ವಿಚಾರದಲ್ಲಿ ನನಗೆ ಮಾರ್ಗದರ್ಶನ ನೀಡು' ಎಂದು ಕೇಳಿಕೊಂಡ.
‘ತಮಗೆ ಮಾರ್ಗದರ್ಶನ ನೀಡುವಷ್ಟು ನನ್ನಲ್ಲಿ ಜ್ಞಾನವಿಲ್ಲ. ನೀವು ಮಿಥಿಲೆಯಲ್ಲಿರುವ ಧರ್ಮವ್ಯಾಧನೆಂಬ ಮಹನೀಯರ ಬಳಿ ಮಾರ್ಗದರ್ಶನ ಪಡೆಯಬಹುದು' ಎಂದಳು.
ಕೌಶಿಕ ಮಿಥಿಲಾ ನಗರಕ್ಕೆ ಹೋಗಿ, ಧರ್ಮವ್ಯಾಧನನ್ನು ಹುಡುಕಿದ. ಧರ್ಮವ್ಯಾಧನು ತನ್ನ ಕಾಯಕದಲ್ಲಿ ನಿರತನಾಗಿದ್ದ. ಆತನು ವೃತ್ತಿಯಲ್ಲಿ ಕಟುಕ. ಕೌಶಿಕನು ಆತನ ಬಳಿ ಮಾತನಾಡಬೇಕು ಎಂದಾಗ ‘ಸ್ವಾಮಿ, ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಜನರು ತಮ್ಮ ಆಹಾರಕ್ಕಾಗಿ ಕಾಯುತ್ತಿದ್ದಾರೆ. ಇವರೆಲ್ಲರ ಬಯಕೆ ಪೂರೈಸಿದ ನಂತರವಷ್ಟೇ ನಾನು ಮಾತನಾಡಬಹುದು' ಎಂದ ಧರ್ಮವ್ಯಾಧ. ಧರ್ಮವ್ಯಾಧನು ತನ್ನ ವೃತ್ತಿಯ ಜವಾಬ್ದಾರಿಯನ್ನು ಮುಗಿಸಿದ ನಂತರ, ಇಬ್ಬರೂ ಧರ್ಮವ್ಯಾಧನ ಮನೆಗೆ ಹೋದರು. ಅದೊಂದು ಸುಖೀ ಕುಟುಂಬ. ಧರ್ಮವ್ಯಾಧನು ಮೊದಲು ತನ್ನ ವೃದ್ಧ ತಂದೆ ತಾಯಿಯರಿಗೆ ನಮಸ್ಕರಿಸಿ, ಕೌಶಿಕನ ಬಳಿ ಮಾತಿಗೆ ಕುಳಿತುಕೊಂಡ.
‘ಸ್ವಾಮಿ, ತಮ್ಮನ್ನು ಆ ಗೃಹಿಣಿ ಇಲ್ಲಿಗೆ ಕಳಿಸಿರಬೇಕಲ್ಲವೇ? ನಮ್ಮ ಕುಟುಂಬದ ವೃತ್ತಿಯಾದ ಕಟುಕನ ಕೆಲಸ ನನ್ನ ಮೊದಲ ಆದ್ಯತೆ. ನಾನು ಬೇರೆಯವರ ಮನನೋಯಿಸುವುದಿಲ್ಲ. ವ್ಯಾಪಾರದಲ್ಲಿ ಮೋಸ ಮಾಡುವುದಿಲ್ಲ. ಅನವಶ್ಯಕ ಕೋಪ ಮಾಡಿಕೊಳ್ಳುವುದಿಲ್ಲ. ಮನೆಯವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ತಂದೆತಾಯಿಯವರನ್ನು ನೋಡಿಕೊಳ್ಳುವುದೇ ನನ್ನ ಮೊದಲ ಆದ್ಯತೆ. ನಾನು ವೃತ್ತಿಗೆಂದು ಹೊರಗೆ ಹೋದಾಗ ನನ್ನ ಪತ್ನಿ ನನ್ನ ತಂದೆ ತಾಯಿಯವರನ್ನು ನೋಡಿಕೊಳ್ಳುತ್ತಾಳೆ.’ ಎಂದ. ಆ ಕುಟುಂಬದಲ್ಲಿ ನೆಲೆಸಿದ್ದ ಪ್ರೀತಿ, ವಿಶ್ವಾಸವನ್ನು ಕಂಡು ಕೌಶಿಕನಿಗೆ ಜ್ಞಾನೋದಯವಾಯಿತು.
‘ಧರ್ಮವ್ಯಾಧ, ನಿನ್ನ ಮಾತುಗಳಿಂದ ಮತ್ತು ಆ ಗೃಹಿಣಿಯ ಮಾತುಗಳಿಂದ ನನಗಿಂದು ಹೊಸ ವಿಷಯ ತಿಳಿಯಿತು. ಪ್ರೀತಿಯೇ ಈ ಜಗತ್ತಿನ ಶಕ್ತಿ. ನಾನು ಜ್ಞಾನಾರ್ಜನೆಯ ಉದ್ದೇಶದಿಂದ ಊರಿನಲ್ಲಿ ನನ್ನ ವೃದ್ಧ ತಂದೆ ತಾಯಿಯರನ್ನು ಬಿಟ್ಟು ಬಂದಿರುವೆ. ಅಪಾರ ಜ್ಞಾನ ಸಂಪಾದಿಸಿದೆ. ಆದರೆ ನನ್ನ ತಂದೆ ತಾಯಿಯರನ್ನು ಏನು ಮಾಡುತ್ತಿದ್ದಾರೆ ಎಂಬುದನ್ನು ಮರೆತೆ. ಈಗಿಂದೀಗಲೇ ನನ್ನ ಊರಿಗೆ ಹೋಗಿ, ಅವರ ಯೋಗಕ್ಷೇಮ ನೋಡಿಕೊಳ್ಳುತ್ತೇನೆ. ಮತ್ತು ಅವರ ಜತೆಯಲ್ಲಿದ್ದು, ಸುತ್ತಲಿನ ಜನರಿಗೆ ಕೈಲಾದ ಮಾರ್ಗದರ್ಶನ ಮಾಡುತ್ತೇನೆ' ಎಂದ ಕೌಶಿಕನು ತನ್ನ ಊರಿನ ದಾರಿ ಹಿಡಿದ.
-ಶಶಾಂಕ್ ಮುದೂರಿ
(ಕೃಪೆ: ವೇದಾಂತಿ ಹೇಳಿದ ಕಥೆ- ವಿಶ್ವವಾಣಿ ಪತ್ರಿಕೆ)
ಚಿತ್ರ ಕೃಪೆ: ಅಂತರ್ಜಾಲ ತಾಣ