ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ...

ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ...

ಕನಸಿನ ಲೋಕದೊಳಗಿಳಿದು ಒಂದು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಮತ್ತು ಹೃದಯದೊಳಗೆ ಒಂದು ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ.

ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು: ಎಲ್ಲರಿಗೂ ನಮಸ್ಕಾರ, ಇದು ಭಾರತ ದೇಶ. ನಾವೆಲ್ಲರೂ ಭಾರತೀಯರು. ಹಿಂದೆ ಯಾವ ಕಾರಣ ಮತ್ತು ಉದ್ದೇಶದಿಂದ ವರ್ಣಾಶ್ರಮ ವ್ಯವಸ್ಥೆ ರೂಪಗೊಂಡಿದೆಯೋ ಅದರ ಬಗ್ಗೆ ಇನ್ನು ಮುಂದೆ ಚರ್ಚಿಸಲು ಮತ್ತು ಪಾಲಿಸಲು ಹೋಗುವುದಿಲ್ಲ. 

ಈಗ 2022 ರ ಈ ಕ್ಷಣಗಳಲ್ಲಿ ಇತಿಹಾಸದ ಮತ್ತು ಅನುಭವದ ಆಧಾರದಲ್ಲಿ ನಮಗೆ ತಿಳಿದಿರುವಂತೆ ಜಾತಿ ಎಂಬುದು ಒಂದು ದೊಡ್ಡ ಮೂಢನಂಬಿಕೆ ಮತ್ತು ಅಮಾನವೀಯ ಅಸಮಾನತೆ. ಅದನ್ನು ನಮ್ಮ ಇಡೀ ಸಮುದಾಯ ಒಕ್ಕೊರಲಿನಿಂದ ತಿರಸ್ಕರಿಸುತ್ತದೆ. ಹಿಂದೆ ಆಗಿರುವುದಕ್ಕೆ ನಾವು ಹೊಣೆಯಲ್ಲ. ಇಂದಿನಿಂದ ನಮ್ಮ ಜಾತಿ ಭಾರತೀಯತೆ. ಯಾವುದೇ ಶಾಸ್ತ್ರ ಸಂಪ್ರದಾಯ  ಮದುವೆ ಆಚರಣೆಗಳಲ್ಲಿ ನಾವು ಯಾವುದೇ ಅಸಮಾನತೆಗಳನ್ನು  ಒಪ್ಪುವುದಿಲ್ಲ. ಯಾವುದೇ ಮಂದಿರಗಳಲ್ಲಿ ಸಭೆ ಸಮಾರಂಭಗಳಲ್ಲಿ ಯಾವ ರೀತಿಯ ಪ್ರತ್ಯೇಕತೆ ಇರುವುದಿಲ್ಲ. ನಾವೆಲ್ಲರೂ ಭಾರತೀಯರು ಮಾತ್ರ. ಆಹಾರ ಉಡುಗೆ ತೊಡುಗೆ ವಿಷಯಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಿಕ ಹಕ್ಕುಗಳನ್ನು ಗೌರವಿಸಿ ಅವರವರ ಇಚ್ಚೆಗೆ ಬಿಡುತ್ತೇವೆ. ಇನ್ನು ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಒಂದು ಸಮ ಸಮಾಜದ ಮೇಲೆ ನಿಲ್ಲುವ ವಿಶ್ವಗುರುವಾಗಲು ನಾವು ಶ್ರಮ ಪಡುತ್ತೇವೆ. ಇದು ಕೇವಲ ಬಾಯಿ ಮಾತಿನ ಘೋಷಣೆಯಲ್ಲ. ನಮ್ಮ ಆತ್ಮಸಾಕ್ಷಿಯ ನುಡಿಗಳು.

ಒಕ್ಕಲಿಗರು ಮತ್ತು ಲಿಂಗಾಯತ ಜಾತಿಯ ಸಂಘ ಸಂಸ್ಥೆಗಳು ಮತ್ತು ಅದರ ಮುಖ್ಯಸ್ಥರು: ಕರ್ನಾಟಕ ರಾಜ್ಯದ ಎರಡು ಆರ್ಥಿಕ ಮತ್ತು ಸಾಮಾಜಿಕ ಪ್ರಬಲ ಸಮುದಾಯಗಳ ಒಂದು ಹೇಳಿಕೆ. ಜಾತಿ ಎಂಬುದು  ಮಾನವೀಯತೆಗೆ ಅಂಟಿದ ಒಂದು ದೊಡ್ಡ ಶಾಪ. ಯಾವುದೇ ಅರ್ಥವಿಲ್ಲದ ತಡಬುಡವಿಲ್ಲದ ಭ್ರಮೆ. ವೃತ್ತಿ ಆಧಾರದಲ್ಲಿ ಪ್ರಾರಂಭವಾದ ಈ ಜಾತಿ ಈಗ ಸಾಮಾಜಿಕ ವಿಷವಾಗಿ ಪರಿವರ್ತನೆ ಹೊಂದಿ ದೇಶದ ಐಕ್ಯತೆಗೆ ದೊಡ್ಡ ಸಮಸ್ಯೆಯಾಗಿದೆ. ನಾವು ಭಾರತೀಯ ಕನ್ನಡಿಗರು ಎಂಬುದು ಮಾತ್ರ ವಾಸ್ತವ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನಾವು ಲಿಂಗಾಯತ ಮತ್ತು ಒಕ್ಕಲಿಗ ಜಾತಿಯವರಾಗಿ ಉಳಿಯುವುದಿಲ್ಲ. ಭಾರತೀಯ ಮನುಷ್ಯರೆಂದು ನಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ. ರಾಜಕೀಯವೇ ಇರಲಿ ಸಾಂಸ್ಕೃತಿಕ ಉತ್ಸವಗಳೇ ಇರಲಿ, ಮಠ ಮಾನ್ಯಗಳೇ ಇರಲಿ ಕೇವಲ ಭಾರತೀಯ ಮನುಷ್ಯರು ಎಂದೇ ಪರಿಗಣಿಸಿ ‌ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ‌ಪಾಲಿಸುತ್ತೇವೆ. ವಿಶ್ವಮಾನವ ‌ಪ್ರಜ್ಞೆ ಮತ್ತು ಸಮ ಸಮಾಜದ ಕನಸನ್ನು ನನಸು ಮಾಡಲು ನಾವು‌ ಕಾಯಾ ವಾಚಾ ಮನಸಾ ಶ್ರಮಿಸುತ್ತೇವೆ.

ಕುರುಬ - ವಾಲ್ಮೀಕಿ ಮತ್ತು ಎಲ್ಲಾ ಹಿಂದುಳಿದ ಜಾತಿಗಳ ಸಂಘ ಸಂಸ್ಥೆಗಳ ಮುಖ್ಯಸ್ಥರು: ಬ್ರಾಹ್ಮಣ ಲಿಂಗಾಯತ ಒಕ್ಕಲಿಗರ ಸಮುದಾಯಗಳ ನಾಯಕರು ಹೇಳಿದ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರು ಪ್ರಜ್ಞಾಪೂರ್ವಕವಾಗಿ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ನೀಡಿದ ಸಲಹೆಗಳನ್ನು ನಾವು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಪಾಲಿಸುತ್ತೇವೆ. ನಮಗೆ ಇಲ್ಲಿಯವರೆಗೂ ಇದ್ದ ಜಾತಿಯ ಕೀಳರಿಮೆ ತೊಲಗಿಸಲು ಸಿಕ್ಕಿರುವ ಈ ಅವಕಾಶವನ್ನು ಖಂಡಿತ ಉಪಯೋಗಿಸಿಕೊಂಡು ನಾವೆಲ್ಲರೂ ಭಾರತೀಯರು ಎಂಬ ಭಾವನೆಯಲ್ಲಿ ಒಂದು ಗೂಡುತ್ತೇವೆ. ಜಾತಿಯ ಕಾರಣದಿಂದ ಆಗುತ್ತಿರುವ ಭ್ರಷ್ಟಾಚಾರ ಚುನಾವಣಾ ಅಕ್ರಮ ಮುಂತಾದ ದುಷ್ಟ ಶಕ್ತಿಯನ್ನು ಇಲ್ಲವಾಗಿಸಿ ಸಮೃದ್ಧ  ಸಮಗ್ರ ದೇಶದ ಅಭಿವೃದ್ಧಿಗೆ ನಾವು ಹೆಗಲು ನೀಡುತ್ತೇವೆ. ಇದು ಅತ್ಯಂತ ಮಾನವೀಯ ಬೆಳವಣಿಗೆ. ನಮಗೆ ಬಹಳ ಸಂತೋಷವಾಗಿದೆ.

ಅಸ್ಪೃಶ್ಯರು ಅಥವಾ ದಲಿತರು ಅಥವಾ ಜಾತಿ ವ್ಯವಸ್ಥೆಯ ಶೋಷಿತರು: ಇದು ನಿಜವೇ ? ಇದು ಸಾಧ್ಯವೇ ? ಒಂದು ಇಡೀ ಸಮುದಾಯವನ್ನು ಪ್ರಾಣಿಗಳಿಗಿಂತ ಕಡೆಯಾಗಿ ದುಡಿಸಿಕೊಂಡು ಊರ ಹೊರಗೆ ಮುಟ್ಟಿಸಿಕೊಳ್ಳದವರಾಗಿ ಶತಶತಮಾನಗಳಿಂದ ಬೆಳೆಸಿಕೊಂಡು ಬಂದಿದ್ದ ಒಂದು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ ಹುಟ್ಟಿನಿಂದ ಮನುಷ್ಯರೆಲ್ಲರೂ ಒಂದೇ ಮತ್ತು ಸಂವಿಧಾನಾತ್ಮಕವಾಗಿ ನಾವೆಲ್ಲರೂ ಭಾರತೀಯ ಎಂಬ ಭಾವನೆಯಲ್ಲಿ ಹೊಸ ಸಮಾಜದ ಪರಿಕಲ್ಪನೆ ಮೇಲಿನ ಎಲ್ಲರಿಂದಲೂ ಪ್ರಸ್ತಾಪ ಬಂದಿರುವಾಗ ಖಂಡಿತ ನಮ್ಮ ಎಲ್ಲಾ ನೋವುಗಳನ್ನು ಮರೆತು ಇದನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ನೆನಪಿಡಿ ಜಾತಿ ಪದ್ದತಿಯ ಅತ್ಯಂತ ದೊಡ್ಡ ಬಲಿಪಶುಗಳು ನಾವು. ಹಿಂದಿನವರು ಹೆಚ್ಚಾಗಿ ದೈಹಿಕವಾಗಿ ಹಿಂಸೆ ಅನುಭವಿಸಿದರೆ ನಾವು ಅಪಾರ ಮಾನಸಿಕ ಹಿಂಸೆಗೆ ಒಳಗಾಗಿದ್ದೇವೆ. ಒಂದು ವೇಳೆ ಇದು ವಾಸ್ತವವಾದರೆ ನಮಗೆ ನಿಜವಾದ ಸ್ವಾತಂತ್ರ್ಯ 2022 ರಲ್ಲಿ ಸಿಕ್ಕಂತೆ ಆಗುತ್ತದೆ. ನಾವು ಮನುಷ್ಯರು ಮತ್ತು ಭಾರತೀಯರು ಎಂಬುದಕ್ಕೆ ಸಂಪೂರ್ಣ ಸಹಕಾರವಿದೆ. ಜಾತಿ ಪದ್ದತಿಯೇ ಸಂಪೂರ್ಣ ನೆಲ ಮಟ್ಟದಲ್ಲಿ ನಿರ್ಮೂಲನೆಯಾದರೆ ನಮಗೆ ಯಾವುದೇ ಜಾತಿ ಮೀಸಲಾತಿಯ ಅವಶ್ಯಕತೆಯೇ ಇರುವುದಿಲ್ಲ. ಸ್ವಾಭಿಮಾನದಿಂದ ನಾವು ಎಲ್ಲರೊಂದಿಗೂ ಸ್ಪರ್ಧೆಗೆ ಸಿದ್ದ. ಮದುವೆಗಳು ಸಹ ಜಾತಿ ಮುಕ್ತವಾಗಿರಬೇಕು.

ಮುಸ್ಲಿಂ ಸಂಘ ಸಂಸ್ಥೆಗಳು ಮತ್ತು ಅಲ್ಲಿನ ಎಲ್ಲಾ ರೀತಿಯ ನಾಯಕರುಗಳು: ಜಾತಿ ಮತ್ತು ಧರ್ಮದ ಸಂಘರ್ಷ ಭಾರತದ ಪ್ರಗತಿಗೆ ಅಡ್ಡಿಯಾಗಿದೆ. ಯಾವುದೇ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳು ಖಾಸಗಿಯಾದದ್ದು. ದೇಶವೇ ಅತಿಮುಖ್ಯ. ನಾವು ಹೊರಗಿನವರು ಎಂಬ ಕೆಲವರ ಅಪ ಪ್ರಚಾರದಿಂದಾಗಿ ಒಂದಷ್ಟು ಅಸಮಾಧಾನ ಆಗಿರುವುದು ನಿಜ. ಆದರೆ ಭಾರತದ ಬಹುಸಂಖ್ಯಾತ ಜನ ಮೂಲಭೂತವಾಗಿ ಜಾತ್ಯಾತೀತ ನಿಲುವು ಹೊಂದಿರುವವರು. ಮುಸ್ಲಿಮರಲ್ಲಿ ಧಾರ್ಮಿಕ ನಂಬಿಕೆಗಳು ‌ಆಳವಾಗಿ ಬೇರೂರಿರುವುದರಿಂದ ದೇಶಕ್ಕಿಂತ ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ ಎಂಬುದನ್ನು ‌ಸುಳ್ಳುಮಾಡಿ ನಾವು ಮೊದಲು ಭಾರತೀಯರು ಮತ್ತು ನಮ್ಮ ನಿಷ್ಠೆ ಭಾರತ ದೇಶಕ್ಕೆ ಮಾತ್ರ. ಇದನ್ನು ಇಡೀ ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ಒಪ್ಪಿಕೊಳ್ಳುತ್ತದೆ. ಸಂವಿಧಾನವೇ  ನಮ್ಮ ನಿಜವಾದ ‌ಧರ್ಮ. ಆಧುನಿಕತೆಗೆ ನಾವು ಮುಕ್ತವಾಗಿದ್ದೇವೆ. ಮಾನವೀಯತೆಯೇ ನಿಜವಾದ ಧರ್ಮ ಎಂಬುದು ನಮ್ಮೆಲ್ಲರ ನಿಲುವು.

ಕ್ರಿಶ್ಚಿಯನ್ ಧರ್ಮದ ಎಲ್ಲಾ ‌ನಾಯಕರು ಮತ್ತು ‌ಧಾರ್ಮಿಕ ಮುಖಂಡರು: ಸೇವೆಯೇ ನಮ್ಮ ಮೂಲ‌ ಆಶಯ. ಹೌದು ನಮ್ಮಲ್ಲಿ ಅನೇಕ ಕಾರಣ ಮತ್ತು ಪ್ರಭಾವಗಳಿಂದಾಗಿ  ಕೆಲವು ಕಡೆಗಳಲ್ಲಿ ಮತಾಂತರ ನಡೆಯುತ್ತಿದ್ದುದು ನಿಜ. ಹಿಂದೂ ಸಮಾಜದ ಅಸಮಾನತೆಯನ್ನು ನಾವು ಸದುದ್ದೇಶದಿಂದ ದುರುಪಯೋಗ ಪಡಿಸಿಕೊಂಡಿರಬಹುದು. ಆದರೆ  ಈಗ ಅದಕ್ಕಾಗಿ ವಿಷಾದ ವ್ಯಕ್ತಪಡಿಸಿ ಭಾರತ ನಮ್ಮ ತಾಯ್ನಾಡು. ಈ ಧರ್ಮ ಜಾತಿಗಳ ವಿಭಜನೆ ಖಂಡಿತ ದೇಶದ ಪ್ರಗತಿಗೆ ಮಾರಕ. ಅದನ್ನು ತಿರಸ್ಕರಿಸಿ ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ನಮ್ಮ ಸೇವೆ ಮನುಷ್ಯರಿಗೆ ಮಾತ್ರ. ಯಾವುದೇ ಧಾರ್ಮಿಕ ನಂಬಿಕೆಗಳನ್ನು ಯಾರ ಮೇಲೂ ಹೇರದೇ ಎಲ್ಲರ ಸ್ವಾತಂತ್ರ್ಯ ಎತ್ತಿಹಿಡಿಯುತ್ತೇವೆ.

ಬೌದ್ದ ಜೈನ‌ ಸಿಖ್ ಮುಂತಾದ ಧರ್ಮಗಳ ನಾಯಕರು: ಮೇಲೆ ಹೇಳಿದ ಎಲ್ಲಾ ‌ವಿಷಯಗಳಿಗೂ ನಮ್ಮ ಯಾವುದೇ ಆಕ್ಷೇಪವಿಲ್ಲ. ಇದನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಅನುಸರಿಸುತ್ತೇವೆ. ನಾವೆಲ್ಲರೂ ಭಾರತೀಯರು. ಧರ್ಮಗಳು ನಮ್ಮ ನಮ್ಮ ಮನೆಯೊಳಗೆ ಮಾತ್ರ ಸೀಮಿತ. ಇದು ಕನಸೇ ಆದರೂ ನಿಜ ಮನುಷ್ಯರು ನನಸು ಮಾಡಬೇಕಾದ ಜವಾಬ್ದಾರಿ ಇದೆ. ಏಕೆಂದರೆ, ಕೆಲವರು ಈ ಜಗತ್ತೇ ವೈವಿಧ್ಯಮಯವಾಗಿ ಸೃಷ್ಟಿಯಾಗಿದೆ. ಆ ವೈವಿಧ್ಯಮಯ ಭಿನ್ನತೆಗಳೇ ತುಂಬಾ ಉತ್ತಮವಾಗಿದೆ. ಅದನ್ನು ಉಳಿಸಿಕೊಳ್ಳುವುದೇ ಉತ್ತಮ. ಇಲ್ಲದಿದ್ದರೆ ಎಲ್ಲವೂ ಏಕತಾನತೆಯಾಗುತ್ತದೆ. ಬದುಕಿನಲ್ಲಿ ಯಾವುದೇ ಸ್ವಾರಸ್ಯ ಇರುವುದಿಲ್ಲ. ಜಾತಿ ವ್ಯವಸ್ಥೆ ಇರಲಿ ಆದರೆ ಜಾತಿಯ ತಾರತಮ್ಯ ಬೇಡ ಎಂದು ಅಭಿಪ್ರಾಯ ಪಡುತ್ತಾರೆ.

ಇಲ್ಲಿ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿರುವುದು ಪ್ರಕೃತಿಯ‌‌ ತಾರತಮ್ಯ ಅತ್ಯಂತ ಸಹಜ ಸ್ವಾಭಾವಿಕ ಮತ್ತು ಅನಿವಾರ್ಯ. ಆದನ್ನು ಎಲ್ಲರೂ ಒಪ್ಪಿಕೊಳ್ಳುವುದು ಅನಿವಾರ್ಯ. ಆದರೆ ಜಾತಿ ಧರ್ಮ ಲಿಂಗ ಅಸಮಾನತೆ, ಆರ್ಥಿಕ ಸಾಮಾಜಿಕ ಅಸಮಾನತೆ ಎಲ್ಲವೂ ಮನುಷ್ಯರ ಸ್ವಾರ್ಥ ಸೃಷ್ಟಿ. ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿ ಅದನ್ನು ಒಂದು ಶೋಷಣೆಯ ಅಸ್ತ್ರವಾಗಿ ಉಪಯೋಗಿಸುತ್ತಿದ್ದಾರೆ. ಅದನ್ನು ನಿರ್ಮೂಲನೆ ಮಾಡಿ ಹೊಸ ಸಮ ಸಮಾಜ ನಿರ್ಮಿಸಲು ಪ್ರಯತ್ನಿಸೋಣ. ಕನಿಷ್ಠ ಒಂದಷ್ಟು ಪ್ರಯತ್ನಗಳಾದರೂ ನಮ್ಮ ಕಾಲದಲ್ಲಿ ಪ್ರಾರಂಭವಾಗಲಿ ಎಂಬ ಕನಸನ್ನು ನಿಮ್ಮೊಳಗೆ ಬಿತ್ತುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ