ಪ್ರೀತಿಯ ವಿದ್ಯಾರ್ಥಿನಿಗೊಂದು ಪತ್ರ.

ಪ್ರೀತಿಯ ವಿದ್ಯಾರ್ಥಿನಿಗೊಂದು ಪತ್ರ.

 ಪ್ರೀತಿಯ ವಿದ್ಯಾರ್ಥಿನಿಗೊಂದು ಪತ್ರ.

ಪ್ರೀತಿಯ ಪೂರ್ಣಿಮಾ,

"ವಿದ್ಯೆಯೆಂಬ ಹೂವಿಗೆ ವಿದ್ಯಾರ್ಥಿಯು ದುಂಬಿಯಾಗಬೇಕು".
 
                                ನಾನು ಇಲ್ಲಿ ನನ್ನ ವೃತ್ತಿಯೊಂದಿಗೆ,ಮನೆಯವರೊಂದಿಗೆ ಆರಾಮವಾಗಿದ್ದೇನೆ. ನಿನ್ನ ಮತ್ತು ರೇಣುಕಾಳ ಆರೋಗ್ಯ ಹಾಗೂ ಅಭ್ಯಾಸದ ಬಗ್ಗೆ ಜರೂರ ಪತ್ರ ದ ಮೂಲಕ ತಿಳಿಸು. ಮೇಲೆ ಹೇಳಿದ ಮಾತುಗಳಂತೆ ವಿದ್ಯೆ ಕಲಿಯುವಲ್ಲಿ ಶ್ರದ್ಧಾ ಮನೋಭಾವನೆ ಸದಾ ನಿಮ್ಮಿಬ್ಬರಲ್ಲಿ ತುಂಬಿರಲಿ. ಸರಿಯಾಗಿ ಓದಿ ನಿಮ್ಮ ಗುರಿ ಸಾಧಿಸಬೇಕು.ದೇವರ ಕೃಪೆ ಮತ್ತು ನನ್ನ ಶುಭ ಹಾರೈಕೆಗಳು ಸದಾ ನಿಮ್ಮ ಜೋತೆಗಿರುತ್ತವೆ.
                                                                                                  ಇಂತಿ,
                                                                                            ಕೆ.ಎಸ್.ಭಜಂತ್ರಿ
 
                        ಇದೇನು ಪತ್ರ? ಕೇವಲ ನಾಲ್ಕೈದು ಸಾಲುಗಳು? ಇದರಲ್ಲೇನಿದೆ? ಎಂದು ನಿಮಗೆಲ್ಲ ಅನಿಸಬಹುದು. ಆದರೆ ಈ ನಾಲ್ಕೈದು ಸಾಲುಗಳು ಒಬ್ಬ ಆದರ್ಶ ಶಿಕ್ಷಕರ ತಮ್ಮ ಮುದ್ದು ವಿದ್ಯಾರ್ಥಿಗಳಿಗೆ ಹೇಳಿದ ಪ್ರೇರೇಪಣೆಯ ಮಾತುಗಳು,ಅದೂ ಪತ್ರದ ಮೂಲಕ. ಶಿಕ್ಷಕರ ದಿನಾಚರಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಪ್ರೀತಿಯ ಗುರುಗಳ ಪತ್ರ ಪ್ರಸ್ತಾಪಿಸುವ ಮನಸ್ಸಾಯಿತು.
 
                ಇಲ್ಲಿ ನಾನು ಹೇಳಹೊರಟಿರುವುದು ಇಬ್ಬರು ಹೆಮ್ಮೆಯ ಶಿಕ್ಷಕರ ಬಗ್ಗೆ. ಶಿಕ್ಷಕ ವೃತ್ತಿಯನ್ನು ಮನಸಾರೆ ಆಯ್ದುಕೊಂಡು, ಅದಕ್ಕೆ ಒಂದು ಅರ್ಥ ಕಲ್ಪಿಸಿಕೊಟ್ಟು, ನೂರಾರು ಮಕ್ಕಳ ಕನಸು ನನಸಾಗಿಸಿ, ಅವರ ಮುಖದಲ್ಲಿ ಸಂತೋಷದ ಹೊನಲು ಹರಿಸಿದ ನಮ್ಮ ಅಚ್ಚುಮೆಚ್ಚಿನ ಗುರುಗಳ ಬಗ್ಗೆ. ಎಲ್ಲ ಶಿಕ್ಷಕರಿಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು ಮಾದರಿ,ಆದರ್ಶ ಮತ್ತು ಮಾರ್ಗದರ್ಶಕರು.ಎಲ್ಲರು ಅವರನ್ತಗಬೇಕೆಂದು ಬಯಸುತ್ತಾರೆ. ನಮ್ಮ ಗುರುಗಳು ಅವರಂತೆ ದೇಶದ ಮಾದರಿ ಶಿಕ್ಷಕರೆನಿಸದಿದ್ದರೂ ನಮ್ಮ ಊರಿಗೆ,ಸುತ್ತಮುತ್ತಲ ಹಳ್ಳಿಗಳಿಗೆ ಆದರ್ಶಪ್ರಾಯರು.ಕೊಂಚವೂ ಸ್ವಾರ್ಥವಿಲ್ಲದೆ ತಮ್ಮ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರು.ಅವರ ಕೈಯಲ್ಲಿ ಕಲಿತ ಎಲ್ಲರೋ ಇಗ ಇಂಜಿನಿಯರ್,ಡಾಕ್ಟರ್,ಟೀಚರ್. ಪ್ರಸ್ತುತ ನಮ್ಮ ಗುರುಗಳು ಸರಕಾರೀ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲ್ಲಿಸುತ್ತಿದ್ದಾರೆ.
ನಮ್ಮದು ಸಣ್ಣ ಹಳ್ಳಿ,ಸುತ್ತಮುತ್ತಲೂ ನಮ್ಮ ತರಹದ್ದೇ ಸಣ್ಣ ಸಣ್ಣ ಹಳ್ಳಿಗಳು. ಕಾಲ್ನಡಿಗೆಯಲ್ಲಿಯೇ ಹೋಗಿ ಬರಬಹುದು.ನಮ್ಮೂರಿನಲ್ಲಿ ಒಂದು ಸರಕಾರೀ ಶಾಲೆಯಿತ್ತು.ಎಲ್ಲ ವ್ಯವಸ್ಥೆಯಿದ್ದರೂ ಶಿಕ್ಷಕರ ವೃತ್ತಿಪರತೆಯ ಕೊರತೆ.ಹೆಸರಿಗೆ ಮಾತ್ರ ಶಾಲೆ,ಶಾಲೆ ತುಂಬಾ ಮಕಾಲು ಶಿಕ್ಷಕರು.ಆದರೆ ಯಾರಿಗೂ ಅಷ್ಟು ಮನವಿದ್ದನ್ತಿರಲಿಲ್ಲ. ಮೊದಲೇ ಹಳ್ಳಿಗಳಲ್ಲಿ ಶಿಕ್ಷಣದ ಬಗ್ಗೆ ತಿಳುವಳಿಕೆ ಕಮ್ಮಿ,ಅದೂ ೧೩ ವರ್ಷಗಳ ಹಿಂದೆ.ಆಗಲೇ ನಮ್ಮ ಊರಿನ ಶಿಕ್ಷಣದ ಬಗ್ಗೆ ಕಾಳಜಿಯುಳ್ಳ ಮಹಾನುಭಾವರೊಬ್ಬರು ಒಂದು ಖಾಸಗಿ ಶಾಲೆ ಪ್ರಾರಂಭಿಸಿದರು.ಹೆಸರು"ಪಾರ್ವತಿ ಮಹಿಳಾ ವಿದ್ಯಾ ಕೇಂದ್ರ". ತಿಂಗಳಿಗೆ ೧೫ ರೂಪಾಯಿ ಫೀಜು.ಸೂಜಿಗವೆನಿಸುತ್ತದೆ ಅಲ್ಲವೇ! ಅದು ನಿಜ. ಅಷ್ಟೇ ಜಾಸ್ತಿಯಾಗಿತ್ತು ಆವಾಗ. ಅದೂ ಕೆಲವರು ಕೊಡುತ್ತಿದ್ದರು ಇನ್ನು ಕೆಲವರು ಇಲ್ಲ. ಆದರೆ ವಿದ್ಯಾರ್ಜನೆ ಮಾತ್ರ ನಿರಂತರವಾಗಿ ಸಾಗುತ್ತಿತ್ತು. 
 
                    ಇಂಥಹ ಶಾಲೆಗೇ ಮೂರನೇ ಶಿಕ್ಷಕರಾಗಿ ಬಂದವರು ನಮ್ಮ ಭಜಂತ್ರಿ ಗುರುಗಳು. ಸ್ವಲ್ಪ  ದಿನಗಳ ಮೇಲೆ ಲೋಣಿ ಗುರುಗಳು ಅವರ ಜೊತೆಯಾದರು.ಅವರ ಸಂಬಳ ಕೇವಲ ೧೫೦ ರೂಪಾಯಿಗಳು ತಿಂಗಳಿಗೆ. ಯಾವತ್ತು ಹಣಕ್ಕೆ ಬೆಲೆ ಕೊಟ್ಟವರಲ್ಲ ನಮ್ಮ ಗುರುಗಳು. ವಿದ್ಯಾ ದಾನವೊಂದೆ ಅವರ ಗುರಿಯಾಗಿತ್ತು. ಪ್ರತಿದಿನ ನಾಲ್ಕು ಕಿಲೋ ಮೀಟರ್ ದೂರದಿಂದ ನಡೆದುಕೊಂಡು ಬಂದು ಪಾಠ ಮಾಡುತ್ತಿದ್ದರು.ನಾನು ಕೆಲವೇ ದಿನಗಳ ಹಿಂದೆ ಒಂದನೇ ತರಗತಿಗೆ ಸೇರಿಕೊಂಡಿದ್ದೆ. ಆಗ ಕೇವಲ ಮೂರು ಜನ ಹುಡುಗಿಯರು. ಎರಡನೇ ತರಗತಿಗೆ ಬಂದಾಗ ಉಳಿದವಳು ನಾನೊಬ್ಬಳೆ, ಕೊನೆಯವರೆಗೂ.
 
                    ಮೊದಲು ಹತ್ತು ಹದಿನೈದು ವಿದ್ಯಾರ್ಥಿಗಳಿಂದ ಕೂಡಿದ್ದ ಶಾಲೆ ಬರುಬರುತ್ತಾ ನೂರಕ್ಕೆರಿತು.ಅದರಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಮಕ್ಕಳು. ನಮ್ಮ ಶಾಲೆ ಶುರುವಾದದ್ದು ಪೋಸ್ಟ್ ಆಫೀಸಿನ ಒಂದು ಸಣ್ಣ ಕೋಣೆಯಲ್ಲಿ.ಮುಂದೆ ಮುಂದುವರೆದಿದ್ದು  ಒಂದು ದೇವರ ಗುಡಿ ಮತ್ತು ಸರಕಾರೀ ನ್ಯಾಯಬೆಲೆ ಅಂಗಡಿಯಲ್ಲಿ. ಸ್ಥಳ ಯಾವುದಾದರೇನು,ಅದೇ ನಮಗೆ ವಿದ್ಯಾ ದೇಗುಲವಾಗಿತ್ತು. ಇಬ್ಬರು ಗುರುಗಳು ನಾಲ್ಕು ತರಗತಿಗಳಿಗೆ ಪಾಠ ಮಾಡುತ್ತಿದ್ದರು.ಒಂದು ಕೋಣೆಯಲ್ಲಿ ಎರಡು ತರಗತಿಗಳು ನಡೆಯುತ್ತಿದ್ದವು. ದೇವರ ಗುಡಿಯಲ್ಲಿ ಬಹುಶಃ ದೇವರೇ ಮಕ್ಕಳಿಗೆ ಪಾಠ ಮಾಡುತ್ತಿದ್ದನೇನೋ ಎಂದು ಅನಿಸುತ್ತದೆ.
 
                 ಅದು ಹೇಗೆ ಅವರು ನಮಗೆ ವಿದ್ಯೆ ಕಲಿಸಿದರೋ ನಾಕಾಣೆ.ಅವರಲ್ಲಿದ್ದ ನಿಸ್ವಾರ್ಥ ಮನೋಭಾವ,ನಮ್ಮೆಲ್ಲರಲ್ಲಿದ್ದ ಶೃದ್ಧೆ ಇವೆಲ್ಲವುಗಳ ಸಮಾಗಮವೇ ಇಂದಿನ ಇಂಜಿನಿಯರ್, ಡಾಕ್ಟರ್. ಟೀಚರ್. ಈಗಲೂ ಅನೇಕ ಆದರ್ಶ ಶಿಕ್ಷಕರಿದ್ದಾರೆ.ಆದರೆ ನಮ್ಮ ಗುರುಗಳು ಪ್ರಸ್ತುತ ಅತೀ ಎತ್ತರದ ಸ್ಥಾನ ಪಡೆಯುತ್ತಾರೆಂಬ ಅನಿಸಿಕೆ ನನ್ನದು. ಕೆವೆಲ ನನ್ನದಷ್ಟೇ ಅಲ್ಲ ಅವರ ಮಾರ್ಗದರ್ಶನದಲ್ಲಿ ಅರಳಿದ ಎಲ್ಲ ಕುಸುಮಗಳದ್ದು.ಕೇವಲ ನಾಲ್ಕು ವರ್ಷ ಅವರ ಕೈಯಲ್ಲಿ ಕಲಿತರೂ ನಾಲ್ಕು ಜನ್ಮಕ್ಕಾಗುವಸ್ತು ವಿದ್ಯೆ ಜ್ಞಾನ ನಮ್ಮಲ್ಲಿ ತುಂಬಿದವರು ನಮ್ಮ ಗುರುಗಳು.ಅವರು ನಮ್ಮನ್ನು ಬಿಟ್ಟು ಹೋದಾಗ ಆದ ಸಂಕಟ ಇನ್ನು ಮಾಸಿಲ್ಲ.  ಮರೆಯಲು ಬಹುಶಃ ಈ ಜೀವ ಮಣ್ಣಾಗಬೇಕಷ್ಟೇ.:)
ನಮ್ಮನ್ನೆಲ್ಲ ಬಿಟ್ಟು ಹೋದರು ನಮ್ಮ ಬಗೆಗಿನ ಕಾಳಜಿ ಮಾತ್ರ ಕಮ್ಮಿಯಾಗಲಿಲ್ಲ ಬೇಸಿಗೆ ರಜೆಯಲ್ಲಿ ಎಲ್ಲರನ್ನು ಕೂಡಿಸಿ ಮನೆಪಾಠ ಹೇಳುತ್ತಿದ್ದರು.
 
                ಈ ನನ್ನ ಪುಟ್ಟ ಲೇಖನ ಅದೆಷ್ಟು ಇಂಥಹ ಎಲೆ ಮರೆಯ ಕಾಯಿಯಂತಿರುವ ಆದರ್ಶ ಗುರುಗಳ ಮತ್ತು ನಮ್ಮೆಲ್ಲರ ಅಚ್ಚುಮೆಚ್ಚಿನ ಗುರುಗಳಾದ ಭಜಂತ್ರಿ ಹಾಗು ಲೋಣಿ ಗುರುಗಳ ಪಾದದಡಿಗಳಿಗೆ ಸಮರ್ಪಣೆ.
 
ರೇಣುಕಾ.ಬ.ಬಿರಾದಾರ.

Comments