ಪ್ರೀತಿ - ಭಕ್ತಿ
ಸಖೀ,
ನಾನು ಹಗಲೆಲ್ಲಾ ರವಾನಿಸೋ ಪ್ರೀತಿಯ ಸಂದೇಶಗಳಿಗೆ,
ನಾನು ಆಗಿಂದಾಗ್ಗೆ ನಿನಗೆ ನೀಡುವ ಆ ಎಲ್ಲಾ ಹುಸಿಕರೆಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ, ನನಗೆಳ್ಳಷ್ಟೂ ಬೇಸರವಿಲ್ಲ;
ಪ್ರೀತಿ ಎನ್ನುವುದು ದೇವರ ಮೇಲಿರುವ ನಮ್ಮ ಭಕ್ತಿಯಂತೆ,
ಈ ಸಂದೇಶ ಮತ್ತು ಹುಸಿಕರೆಗಳು ನಮ್ಮ ಪ್ರಾರ್ಥನೆಯಂತೆ;
ದೇವರ ಪ್ರತಿಕ್ರಿಯೆಗೆ ಅಲ್ಲಿ ಯಾರೂ ಎಂದೂ ಕಾಯುವುದಿಲ್ಲ,
ನಿನ್ನ ಪ್ರತ್ಯುತ್ತರಕ್ಕಾಗಿ ನಾನೂ ಇಲ್ಲಿ ಎಂದೂ ಕಾಯುವುದಿಲ್ಲ;
ದೇವರು ನಮ್ಮನ್ನೆಲ್ಲಾ ಕಾಪಾಡುತ್ತಾರೆಂಬ ದೃಢ ನಂಬಿಕೆ ಅಲ್ಲಿ,
ನೀನು ಸದಾ ನನಗಾಗಿಯೇ ಕಾಯುತ್ತಿರುವೆ ಎಂಬ ನಂಬಿಕೆ ಇಲ್ಲಿ;
ಭಕ್ತಿ ಪ್ರೀತಿಗಳೆರಡೂ ನಂಬಿಕೆಯ ಮೇಲೆ ಭದ್ರವಾಗಿ ನಿಂತಿವೆ,
ಹಾಗಾಗಿಯೇ ಮಾನವೀಯತೆ ಇನ್ನೂ ಛಿದ್ರವಾಗದೆ ಉಳಿದಿದೆ;
ಹಾಗಾಗಿಯೇ ಸಖೀ,
ನಾನು ಹಗಲೆಲ್ಲಾ ರವಾನಿಸೋ ಪ್ರೀತಿಯ ಸಂದೇಶಗಳಿಗೆ,
ನಾನು ಆಗಿಂದಾಗ್ಗೆ ನಿನಗೆ ನೀಡುವ ಆ ಎಲ್ಲಾ ಹುಸಿಕರೆಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ, ನನಗೆಳ್ಳಷ್ಟೂ ಬೇಸರವಿಲ್ಲ;
******************************
-ಆತ್ರಾಡಿ ಸುರೇಶ ಹೆಗ್ಡೆ