ಪ್ರೇಮಿಗಳ ದಿನದಲ್ಲೊಂದು ಪ್ರೇಮಧ್ಯಾನ

ಪ್ರೇಮಿಗಳ ದಿನದಲ್ಲೊಂದು ಪ್ರೇಮಧ್ಯಾನ

ಎಂದಿನಂತೆ ಪ್ರೇಮಿಗಳ ದಿನ ಬಂದಿದೆ. ಪ್ರೇಮಿಗಳಿಗೆ ಉಲ್ಲಾಸಭರಿತ ಸಮಯ. ಕೆಲವರಿಗೆ ಆಚರಿಸುವ ಮನಸ್ಸಿಲ್ಲದಿದ್ದರೂ ತಮ್ಮ ಪ್ರೇಮಿಯನ್ನು ಮೆಚ್ಚಿಸುವ ಅನಿವಾರ್ಯತೆ. ಪ್ರೇಮವ್ಯಕ್ತತೆಗೆ ಒಂದು ದಿನ. ಇದು ಫೆಬ್ರವರಿ 7ರಂದು ಪ್ರಾರಂಭವಾಗಿ ಫೆಬ್ರವರಿ 13ರವರೆಗೆ ನಡೆದು, ಫೆಬ್ರವರಿ 14ರಂದು ಮುಕ್ತಾಯಗೊಳ್ಳುತ್ತದೆ. ಪ್ರೇಮ ನಿವೇದನೆ ನಡೆದು, ಪರಸ್ಪರ ಒಪ್ಪಿಕೊಂಡು ಒಂದು ಬಂಧನಕ್ಕೆ ಒಳಗಾಗಲು ಮಾನಸಿಕವಾಗಿ ಸಿದ್ಧರಾಗುವ ದಿನ. ಜೀವ ಇರುವವರೆಗೂ ಪ್ರೇಮ ಉಳಿದಿದ್ದರೆ ಅದೊಂದು ಅದ್ಬುತ, ಇಲ್ಲ ಮತ್ತೆ ಯಾರಲ್ಲಿಯೂ ಪ್ರೇಮ ನಿವೇದನೆ. ಮೊದಲು ಪ್ರೇಮ ನಿವೇದನೆ,ಒಪ್ಪಿಗೆ, ವಿರಹ, ಸರಸ, ಬೇಸರ, ಕೋಪ, ತಾಪ, ಜಗಳ, ಅಳು, ಮೌನ, ಅಸಹನೆ ಎಲ್ಲಾ ದಾಟಿ ಒಂದು ಪಕ್ವತೆ ಬರುವಹೊತ್ತಿಗೆ ಮೊದಲಿಗೆ ತಮ್ಮ ತಮ್ಮ ಪ್ರೇಮಿಗಳಲ್ಲಿ ಕಂಡ ಗುಣಗಳು ಹೇಗೆ ಕಾಣುಸುತ್ತವೆಯೋ ತಿಳಿಯದು. ಒಂದು ಬಂಧನಕ್ಕೆ ಒಳಗಾದ ಮೇಲೆ, ಬಾಳು, ಸಂಸಾರ, ಮಕ್ಕಳು, ವೃತ್ತಿ, ಪ್ರವೃತ್ತಿ ಹೀಗೆ ಎದುರಾಗಿ ಪ್ರೇಮ, ಪ್ರೀತಿ ಎಲ್ಲಿಹೋಯಿತು ಎಂದು ಹುಡುಕದಿದ್ದರೆ ಸಾಕು.

ಗಂಡಸರು ಎಷ್ಟೇ ಒಳ್ಳೆಯವರಾಗಿದ್ದರೂ ಹೆಣ್ಣಿನ ಸೌಂದರ್ಯದ ಸೆಳೆತ ಉಂಟೇ ಉಂಟಾಗುತ್ತದೆ, ಅದು ಪ್ರಕೃತಿ ದತ್ತ. ಒಳ್ಳೆಯವರು ಎಂದು ಅನಿಸಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟಪಡಬಹುದೇನೋ ಆದರೆ ಒಳಹೊಕ್ಕು ನೋಡಿದರೆ ಹೆಣ್ಣಿನ ಸೌಂದರ್ಯ ಸಂತೋಷದ ಅಲೆಗಳನ್ನು ಎಬ್ಬಿಸಿಯೇ ಎಬ್ಬಿಸುತ್ತವೆ. ಇಲ್ಲದಿದ್ದರೆ ಸಿನೆಮಾಗಳಲ್ಲಿ ನಟನೆ ಮುಖ್ಯವಾದರೆ. ಸುಂದರ ನಾಯಕಿಯರು ಯಾಕೆ ಬೇಕು. ಎಲ್ಲಾ ವಿಕಾರವಾಗುವುದು ಅತಿರೇಖಕ್ಕೆ ಹೋದಾಗ, ಇಲ್ಲ ಹೆಣ್ಣಿನ ಇಷ್ಟದ ವಿರುದ್ಧಹೋದಾಗ ಮಾತ್ರ.

ತನ್ನನು ಒಬ್ಬ ಪುರುಷ ಗಮನಿಸುವುದು ಹೆಣ್ಣಿಗೆ ತಿಳಿದೇ ತಿಳಿಯುತ್ತದೆ. ಪುರುಷ ಇಷ್ಟದವನಾಗಿದ್ದರೆ ಸಂತೋಷವೂ, ಇಷ್ಟವಿಲ್ಲದಿದ್ದರೆ ಮುಜುಗರುವೂ ಆಗುತ್ತದೆ. ಕೆಲವು ಸಲ ಏನನ್ನೂ ವ್ಯಕ್ತಪಡಿಸದ ಕಲೆ ಹೆಣ್ಣಿಗೆ ಸಿದ್ಧಿಸಿರುತ್ತದೆ. ಒಳಗೆ ಎಂತಹ ತರಂಗಳು ಏಳಿದರೂ ಅವು ಮನಸಿನಾಚೆಗೆ ಸುಳಿಯುವುದಿಲ್ಲ. ಗಂಡಿಗಿಂತ ಹೆಣ್ಣು ಹೆಚ್ಚು ಸೂಕ್ಷ್ಮಳೂ, ಬುದ್ಧಿವಂತಳೂ ಆಗಿರುತ್ತಾಳೆ. ಹೆಣ್ಣಿಗೆ ಸಂದರ್ಭಗಳನ್ನು ನಿಭಾಯಿಸುವ ಶಕ್ತಿ ಹೆಚ್ಚು ಇರುತ್ತದೆ. ತನ್ನ ದೈಹಿಕ ಶಕ್ತಿಯಿಂದ ಎಷ್ಟೋ ಸಲ ಗಂಡು ಹೆಣ್ಣನ್ನು ಗೆಲ್ಲಲು ಯತ್ನಿಸುತ್ತಾನೆ, ಏಕೆಂದರೆ ಹೆಣ್ಣಿನ ಮಾನಸಿಕ ಶಕ್ತಿಯ ಮುಂದೆ ತಾನು ಬಲಹೀನ ಎಂದು ಗಂಡಿಗೆ ತಿಳಿದಿರುತ್ತದೆ. ಹೆಣ್ಣಿನ ಪರಿಸರ ಪ್ರಜ್ಞೆ ಗಂಡಿಗೆ ಇರುವುದಿಲ್ಲ. ಮಕ್ಕಳ ಸಲಹುವ ಸೂಕ್ಶ್ಮತೆ ಹೆಣ್ಣಿಗೆ ಅಂತರ್ಗತವಾಗಿರುತ್ತದೆ, ಆದ್ದರಿಂದ ಮಕ್ಕಳನ್ನು ಜತನದಿಂದ ನೋಡಿಕೊಳ್ಳುತ್ತಾಳೆ. ಹಿಂದಿನಿಂದ ಹೆಣ್ಣಿಗೆ ಗಂಡಿಗೆ ಸಿಕ್ಕ ಅವಕಾಶಗಳು ಸಿಕ್ಕಿದ್ದಿದ್ದರೆ ಇಂದು ಹೆಣ್ಣು ಇನ್ನೂ ಎತ್ತರಕ್ಕೆ ಏರುವುದಲ್ಲದೆ ಪ್ರಪಂಚವನ್ನು ಇನ್ನೂ ಹೆಚ್ಚು ಸುಂದರವಾಗಿರಿಸುತ್ತಿದ್ದಳು. ಮನೆಯಲ್ಲಿ ಹೆಣ್ಣಿನ ಇರುವಿಕೆಯೇ ನೆಮ್ಮದಿ. ತನ್ನ ಪ್ರೀತಿ, ಮಮತೆ,ಕರುಣೆ ಹಾಗು ಸೌಂದರ್ಯದಿಂದ ಹೆಣ್ಣು ಗಂಡಿನ ಬಾಳನ್ನು ಸುಖಮಯವಾಗಿಸಿದ್ದಾಳೆ.

ಹೆಣ್ಣು ಒಂದು ನದಿಯಂತೆ, ನದಿಯೂ ತನ್ನಲ್ಲಿ ಅನೇಕ ಭಾವನೆಗಳನ್ನು, ನೋವನ್ನು ಏಳಿರಿಳಿತದಲಿ ಹಿಡಿದು ಸಾಗಿದಂತೆ, ಹೆಣ್ಣು ತನ್ನ ನೋವನ್ನು ನುಂಗಿಕೊಂಡು ಮುಗುಳ್ನಗುತ್ತಾಳೆ. ಇಬ್ಬರ ಮೌನ ಅನೇಕ ಅರ್ಥಗಳನ್ನು ಧ್ವನಿಸುತ್ತದೆ, ಆಲಿಸುವ ಮನಗಳು ಇಲ್ಲದಿದ್ದರೆ, ವಿಕೋಪ ಕಾಣಬೇಕಾಗುತ್ತದೆ. ನದಿಗೆ ಸಾಗರಸಂಗಮದಲ್ಲಿ ಸುಖ ಕಂಡುಕೊಂಡರೆ, ಹೆಣ್ಣು ತನ್ನ ಪತಿ, ಮಕ್ಕಳ ಸಂತೋಷಕ್ಕೆ ಬಾಳೆರೆದು ಸುಖ ಕಂಡುಕೊಳ್ಳುತ್ತಾಳೆ. ನದಿಗೂ, ಹೆಣ್ಣಿಗೂ ಜೀವನದ ಕೊನೆಯಲ್ಲಿ ತನ್ನ ಇರುವಿಕೆ ಎಲ್ಲಿ ಎಂದು ಹುಡುಕಬೇಕಾಗುತ್ತದೆ. ಪ್ರಕೃತಿಯಂತೆ, ಹೆಣ್ಣೂ ತನ್ನನ್ನು ಆಲಿಸಲು ಸ್ವಲ್ಪ ಸಮಯ ಕೊಡುತ್ತಾಳೆ, ಕೇಳದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಪ್ರಕೃತಿಯ ಮಾತನ್ನು ಕೇಳದಿರುವುದಕ್ಕೆ ಅತೀವೃಷ್ಟಿ, ಅನಾವೃಷ್ಟಿಯ ಸ್ಥಿತಿ ನಿರ್ಮಾಣವಾಗಿದೆ. ಹೆಣ್ಣಿನ ಮಾತನ್ನು ಈಗಲಾದರೂ ಕೇಳದಿದ್ದರೆ ಮಾನವನ ಇರುವಿಕೆ ಮುಂದೆ ಭೂಮಿಯಲ್ಲಿ ಪಳುವಳಿಕೆ ಆಗುತ್ತದೆ.

ಗಂಡು ಹೆಣ್ಣಿನ ನಡುವೆ ಇರಬೇಕಾಗಿರುವುದು ಪ್ರೀತಿ, ಗೌರವ, ಅಭಿಮಾನ, ಹೆಮ್ಮೆ ಮತ್ತು ನಂಬಿಕೆ;ಪ್ರೀತಿ ಹೇಗೆ ವ್ಯಕ್ತಪಡಿಸುವುದು, ಯಾವುದನ್ನು ಪ್ರೀತಿ ಎನ್ನುವುದು, ಕಾಮವನ್ನು ಪ್ರೀತಿ ಅಂಗಳದಿಂದ ಹೊರಗಡೆ ಇಟ್ಟರೆ, ಈ ಪ್ರೀತಿ ಯಾವುದಿರಬಹುದು, ಒಬ್ಬರಿಗೊಬ್ಬರ ನೋವಿಗೆ ಮಿಡಿಯುವುದು ಪ್ರೀತಿ ಎನ್ನಬಹುದೇ?, ಬಹುಶ ಹೆಣ್ಣೇ ಹೆಚ್ಚು ಪ್ರೀತಿ ವ್ಯಕ್ತಪಡಿಸುವುದಲ್ಲವೇ, ಏಕೆಂದರೆ ಅವಳ ಪ್ರಪಂಚ, ಮನೆ, ಗಂಡ, ಮಕ್ಕಳೇ ಅಲ್ಲವೇ? ಹೆಣ್ಣು ಪ್ರಪಂಚ ಗೆದ್ದರೂ ಕೊನೆಗೆ ಯೋಚಿಸುವುದು ತನ್ನ ಕುಟುಂಬದ ಬಗ್ಗೆ ಮಾತ್ರ, ಇನ್ನು ಪರಸ್ಪರ ಗೌರವ ಸಿಗಬೇಕಾದರೆ, ಇಬ್ಬರೂ ಗೌರವ ತರುವಂತೆ ನಡೆದುಕೊಳ್ಳಬೇಕು, ನೀನು ಎಲ್ಲಾ ಹೆಂಗಸರಂತೆ ಅಥವಾ ನೀನು ಎಲ್ಲಾ ಗಂಡಸರಂತೆ ಎಂದು ಪರಸ್ಪರ ಹೇಳಿಕೊಳ್ಳುವ ಪ್ರಸಂಗ ಬರಬಾರದು, ಅಭಿಮಾನ ಮತ್ತು ಹೆಮ್ಮೆಎನ್ನುವುದು ನಾವು ಹೇಗೆ ಮನೆಯನ್ನು ನಿಭಾಯಿಸುತ್ತೇವೆ, ಹೇಗೆ ನಮ್ಮ ಕಾರ್ಯಗಳಲ್ಲಿ ಸಕ್ಸಸ್ ಆಗುತ್ತೇವೆ ಎನ್ನುವುದರಿಂದ ಆಗುತ್ತದೆ. ಇನ್ನು ನಂಬಿಕೆ ಇಲ್ಲದಿದ್ದರೆ ಜೊತೆಗೆ ಇರುವುದಾದರೂ ಹೇಗೆ?.

ಒಂದು ಹೆಣ್ಣು ಒಂದು ಗಂಡಿಗೆ ಆಕರ್ಷಿತಳಾಗುವುದಕ್ಕೂ, ಒಂದು ಗಂಡು ಒಂದು ಹೆಣ್ಣಿಗೆ ಆಕರ್ಷಿತನಾಗುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ. ಹೆಣ್ಣು ಸೋಲುವುದು ಗಂಡಿನ ಸೌಂದರ್ಯಕ್ಕೆ ಅಲ್ಲ, ಅವನ ವ್ಯಕ್ತಿತ್ವಕ್ಕೆ, ಒಳ್ಳೆಯ ಗುಣಕ್ಕೆ, ಮಾತುಗಾರಿಕೆಗೆ, ಆದರೆ ಗಂಡಿಗೆ ಹೆಣ್ಣಿನ ಸೌಂದರ್ಯವೇ ಮುಖ್ಯ. ಮೊದಲು ಸೋಲುವುದು ಬಾಹ್ಯ ಸೌಂದರ್ಯಕ್ಕೆ, ಹೆಣ್ಣನ್ನು ನೋಡಲು ಬರುವ ಗಂಡಿಗೆ ಕಾಣಿಸಬೇಕಾಗಿರುವುದು ಹೆಣ್ಣಿನ ಸೌಂದರ್ಯ ಮಾತ್ರ, ಅದಕ್ಕೆ ಅಷ್ಟು ಅಲಂಕಾರ ಮಾಡಿ ಹೆಣ್ಣನ್ನು ತೋರಿಸುವುದು. ಗಂಡಿನ ಬಗ್ಗೆ ಒಂದೇ ಮಾತು,ಹುಡುಗ ಒಳ್ಳೆಯವನು ಅಂತ. ಹುಡುಗನ ಒಳ್ಳೆಯತನ ಗೊತ್ತಾಗುವುದು ಅವನಿಗೆ ತುಂಬಾ ಹತ್ತಿರವಾದಾಗ ಮಾತ್ರ. ಅದಕ್ಕೆ ಅವನ ಪ್ರೇಯಸಿಯೋ, ಹೆಂಡತಿಯೋ ಆಗಿರಬೇಕು. ಯಾರು ಏನೇ ಹೇಳಿದರೂ ಇಬ್ಬರು ತುಂಬಾ ಹತ್ತಿರವಾಗುವವರೆಗೂ ಪರಸ್ಪರರ ಸ್ವಭಾವ ತಿಳಿಯುವುದಿಲ್ಲ.

ಹಾಗಾದರೆ ಪ್ರೀತಿ ಎಂದರೇನು?: ಇನ್ನೊಬ್ಬರನ್ನು ಹೇಗಿದ್ದಾರೋ ಹಾಗೆ, ಅವರ ಒಪ್ಪು ತಪ್ಪುಗಳನ್ನೂ ಸೇರಿಸಿ ಇಷ್ಟಪಡುವುದೇ ಪ್ರೀತಿ. ನೀನು ಹೀಗಿದ್ದರೆ ಮಾತ್ರ ನಾ ನಿನ್ನ ಪ್ರೀತಿಸುವೆ ಎನ್ನುವುದು ಪ್ರೀತಿಯಲ್ಲ. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ, ಅದನ್ನು ತನ್ನವರಿಗಾಗಿ ಸ್ವಲ್ಪ
ಬದಲಾಯಿಸಿಕೊಂಡರೂ ಮೂಲ ಹಾಗೆ ಇರುತ್ತದೆ. ಅದು ಯಾವುದೋ ಒಂದು ಸಂಧರ್ಭದಲ್ಲಿ ಹೊರಬರುತ್ತದೆ. ಆಗ ನಮ್ಮ ಹತ್ತಿರದವರಿಗೆ ಭ್ರಮನಿರಸನವಾಗುತ್ತದೆ. ಅರೆ ಇವನು ಹಾಗೆ ಅಥವಾ ಇವಳು ಹೀಗೆ ಎಂದುಕೊಂಡಿದ್ದೆನಲ್ಲಾ ಎಂದು. ಎಂಬತ್ತು ಪ್ರತಿಶತ ಒಳ್ಳೆಯ ಗುಣಗಳಿಗಾಗಿ ಒಪ್ಪಿಕೊಂಡವರವನ್ನು ಅವರ ಇಪ್ಪತ್ತು ಪ್ರತಿಶತ ಅವಗುಣಗಳನ್ನೂ ಒಪ್ಪಿಕೊಳ್ಳಬೇಕು. ನಮ್ಮವರನ್ನೂ, ನಮ್ಮ ಸಂಗಾತಿಗಳನ್ನು ನಾವು ಆರ್ಡರ್ ಮಾಡಿ ಪಡೆಯುವುದಕ್ಕೆ ಆಗುವುದಿಲ್ಲ. ಅವರು ಹೇಗಿದ್ದರೂ ನಮ್ಮವರೇ, ಇದು ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಮ್ಮ ಸಂಗಾತಿಯಲ್ಲಿ ಯಾವುದೋ ನಮಗೆ ಒಪ್ಪಿಗೆಯಾಗದ ಗುಣ ಇರುತ್ತದೆ ಎಂದು ಒಪ್ಪಿಕೊಳ್ಳಬೇಕು, ಹಾಗೆ ಒಪ್ಪಿಕೊಂಡಾಗ ಅದು ಹೊರ ಬಂದಾಗ ಬೇಸರ, ಗಾಬರಿ ಆಗುವುದಿಲ್ಲ.

ಪ್ರೇಮಿಗಳ ದಿನದಂದು ತಮ್ಮ ಪ್ರೇಮಿಗಳಲ್ಲದೆ, ಸಮಾಜ, ಪ್ರಕೃತಿ, ಎಲ್ಲ ಜನರ ಮೇಲೂ ಪ್ರೀತಿ ಉಕ್ಕಲಿ, ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು

-ಎಂ.ವಿ. ಶಶಿಭೂಷಣ ರಾಜು, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ