ಪ್ರೇಮಿಗಳ ದಿನಾಚರಣೆಯ ಸುತ್ತ...
ಫೆಬ್ರವರಿ ೧೪ ಬಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ. ನಮ್ಮ ಭಾರತ ದೇಶ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು, ನೈತಿಕ ಮೌಲ್ಯಗಳು, ಸಂಬಂಧಗಳ ಕಟ್ಟುಪಾಡುಗಳು, ಬದುಕಿನ ಹಾದಿಯಲಿ ಹಾಸುಹೊಕ್ಕಾಗಿ ಬಂದಂತಹ ಆಚರಣೆಗಳಾಗಿವೆ. ಪೀಳಿಗೆಯಿಂದ ಪೀಳಿಗೆಗೆ ಇದು ಹರಿದು ಬಂದಿದೆ. ಪ್ರೀತಿ, ಪ್ರೇಮ ಎಂದಾಕ್ಷಣ ಹದಿಹರೆಯದ ಹುಡುಗ ಹುಡುಗಿಯತ್ತ ನಮ್ಮ ಮನಸ್ಸು ಹೋಗುವುದು ಸಹಜ. ಆದರೆ ಅಮ್ಮ ಮಕ್ಕಳನ್ನು, ಅಪ್ಪ ಅಮ್ಮನನ್ನು, ಅಮ್ಮ ಅಪ್ಪನನ್ನು, ಮಕ್ಕಳು ಹೆತ್ತವರನ್ನು, ಬಂಧುಗಳನ್ನು, ಸಾಕುವ ಪ್ರಾಣಿಗಳನ್ನು, ಅಕ್ಕ ತಂಗಿಯರನ್ನು, ಒಡಹುಟ್ಟಿದವರನ್ನು ಪ್ರೀತಿ, ಪ್ರೇಮ, ವಾತ್ಸಲ್ಯದಿಂದ ನೋಡಬಹುದಲ್ಲ. ಪ್ರೇಮಿಗಳೇ ಆಗಬೇಕೆಂದಿಲ್ಲ.
ಪ್ರೇಮಿಗಳ ದಿನದ ಸ್ವೇಚ್ಛಾಚಾರದಿಂದ ಆಗುವ ಅನಾಹುತಗಳು ಬಹಳಷ್ಟು. ಕುಡಿದು ಕುಪ್ಪಳಿಸುವುದು, ಹೆಣ್ಣು ಗಂಡೆಂಬ ಅರಿವಿಲ್ಲದೆ, ಹೊತ್ತು ಗೊತ್ತಿಲ್ಲದೆ ಮನೆ ಸೇರುವುದು ಇದೆಲ್ಲ ಆಚರಣೆಯ ಪ್ರಭಾವ ಒಂದೆಡೆಯಾದರೆ, ಹಿರಿಯರ ಹೆದರಿಕೆ ಇಲ್ಲದಿರುವುದು ಇನ್ನೊಂದೆಡೆ. ‘ನಾನು ಮಾಡುವುದೇ ಸರಿ, ನನಗಾರು ಹೇಳುವವರು ಕೇಳುವವರಿಲ್ಲ ಎಂಬ ಧೋರಣೆ ಸಹ’.
ಇಂದಿನ ಪ್ರಸಕ್ತ ಕಾಲಕ್ಕೆ ಆಚರಣೆ ಬೇಕೆಂದು ವಾದವಿದೆ, ಆದರೆ ಅದು ಕೇವಲ ವ್ಯವಹಾರದ ದೃಷ್ಟಿಯೂ ಇರಬಹುದಲ್ಲವೇ? ಒಂದಷ್ಟು ಪ್ರೇಮಿಗಳ ಪ್ರೇಮದ ಸಂಕೇತ ಕೆಂಪು ಗುಲಾಬಿ, ಉಡುಗೊರೆಗಳ ವಿನಿಮಯಕ್ಕಾಗಿ ಖರ್ಚು, ಹಣ ಮಾಡುವ ದಾರಿ ಅಷ್ಟೆ. ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿ, ಸತ್ಪ್ರಜೆಗಳನ್ನಾಗಿ ರೂಪಿಸೋಣ. ಇತ್ತೀಚೆಗೆ ಆಗುವ ಎಲ್ಲಾ ಅತ್ಯಾಚಾರ, ಅನಾಚಾರ, ಸುದ್ಧಿ ಇಲ್ಲದೆ ಮನೆಬಿಟ್ಟು ಹೋಗುವುದು, ಆತ್ಮಹತ್ಯೆಗಳು ಇದೆಲ್ಲವೂ ಆಗಲು ನೈತಿಕತೆ, ತೆರೆದ ಸ್ವೇಚ್ಛಾಚಾರವೇ ಕಾರಣ. ಸ್ವಾತಂತ್ರ್ಯ ಬೇಕು, ಹಾಗೆಂದು ಸ್ವೇಚ್ಛಾಚಾರ ಸಲ್ಲದು. ನಾನೇ ನೆಟ್ಟು ಬೆಳೆಸಿದ ಗಿಡಮರ ಎಂದು ಮೊದಲೊಬ್ಬ ತೋಟಕ್ಕೆ ಹೋಗಿ ಕೈಬೀಸಿಕೊಂಡು ನಡೆದನಂತೆ. ಪರಿಣಾಮ ಕೈಗಳು ಗಿಡಮರ ತಾಗಿ ಗಾಯಗೊಂಡಿತಂತೆ. ಹಾಗೆಯೇ ಆಗಬಹುದು. ‘ವಿವೇಚನೆ ಇಲ್ಲದಲ್ಲಿ ಅಪಾಯ ಖಂಡಿತ’.
ಮನೆಮನೆಗಳಲ್ಲಿ ಇಂದು ಪರಸ್ಪರ ಜೊತೆಯಾಗಿ ಕುಳಿತು ಮಾತನಾಡುವವರು ಕಡಿಮೆ. ಮೊದಲೆಲ್ಲ ಊಟಮಾಡುವಾಗ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಇತ್ತೀಚೆಗೆ ಅದೂ ಇಲ್ಲ. ‘ಮನೆಯಲ್ಲಿಯೇ ಕೆಲಸ’ ಬಂದ ಮೇಲೆ ಊಟ ತಿಂಡಿ ಸಹ ಇದ್ದಲ್ಲಿಗೆ ಕೊಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನಬಹುದು. ದೂರದರ್ಶನದ ಕಾರ್ಯಕ್ರಮಗಳನ್ನು ಒಟ್ಟಿಗೆ ಕುಳಿತು ನೋಡುವಂತಹ ಗುಣಮಟ್ಟಗಳಿಲ್ಲ. ಕಥೆಯಂತೂ ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ. ಸಣ್ಣ ಮಕ್ಕಳ ಪ್ರಶ್ನೆಗಳಿಗೆ ದೊಡ್ಡವರಿಗೆ ಉತ್ತರಿಸಲಾಗುತ್ತಿಲ್ಲ. ಮತ್ತೆ ಪ್ರೀತಿ, ಸ್ನೇಹ ಇದಕ್ಕೆಲ್ಲ ಎಲ್ಲಿ ಹೋಗಲಿ. ಈ ಕಾರಣಗಳಿಂದಲೂ ಸ್ನೇಹ ಅರಸುತ್ತಾ ಹೋದವರಿರಬಹುದು. ಪ್ರೀತಿಯ ಮಾತುಗಳ ಕೊರತೆ, ಸಾಂತ್ವನಗಳ ಧ್ವನಿ ಇಲ್ಲದಾಗ ಸ್ವಾಭಾವಿಕವಾಗಿ ಅರಸುವುದು ಸಹಜವಲ್ಲವೇ?
ತಮ್ಮ ಮನೆಯ ಹಿರಿಯರನ್ನು, ಸಾಕುಪ್ರಾಣಿಗಳನ್ನು, ಹೂಗಿಡಗಳನ್ನು ಪ್ರೀತಿಸಬಹುದಲ್ಲವೇ? ಮನೆಯಲ್ಲಿರುವ ಹಿರಿಯರಿಗೂ ಸ್ವಲ್ಪ ಸಮಯ ಕೊಡಬಹುದು. ಮಕ್ಕಳೊಂದಿಗೆ ಬೆರೆಯಬಹುದು. ತಿಂಗಳಿಗೊಮ್ಮೆ ಎಲ್ಲಿಯಾದರೂ ಹತ್ತಿರದ ನೋಡ ತಕ್ಕ ಸ್ಥಳಗಳಿಗೆ ಮನೆಮಂದಿಯೆಲ್ಲ ಭೇಟಿಕೊಡಬಹುದು. ಎರಡು ವರ್ಷದಿಂದ ಹೊರಗಿನ ಭೇಟಿ ಕಷ್ಟ. ಇದೇನು ಶಾಶ್ವತವಲ್ಲವಲ್ಲ. ಪ್ರೇಮಿಗಳ ದಿನದ ಆಫರ್ ಎಂದು ವ್ಯಾಪಾರ ತಂತ್ರವನ್ನು ನೋಡ್ತಾ ಇದ್ದೇವೆ. ಹಲವಾರು ದರಕಡಿತದ ಮಾಹಿತಿಗಳು ಮಾಧ್ಯಮಗಳಲ್ಲಿ, ಮೊಬೈಲ್ ನಲ್ಲಿ ಬರುತ್ತಿದೆ. ಇದೂ ವ್ಯವಹಾರದ ಗುಟ್ಟು. ರಿಯಾಯಿತಿ ಎಂದ ತಕ್ಷಣ ಜನ ಮುಗಿಬೀಳುವುದು ಸಹಜ.
ಇತ್ತೀಚೆಗೆ ನಾವು ನೋಡಿದಂತೆ ೬೦ರ ಆಸುಪಾಸಿನವರು, ಅದರಲ್ಲೂ ಮಹಿಳೆಯರು (ಜಾಗ್ರತೆ ಬೇಡವೇ?) ಸಿಕ್ಕಿ ಸಿಕ್ಕಿದವರೊಂದಿಗೆ ತಿರುಗಾಡುವುದು, ದೂರವಾಣಿ ಸಂಭಾಷಣೆಗಳು, ಫೇಸ್ಬುಕ್ ಹೇಳಿ ಸುಖವಿಲ್ಲದಂತಾಗಿದೆ. ಕಾಣ್ತೇವೆ, ಕೇಳ್ತೇವೆ. ಯಾರ ಹೆದರಿಕೆಯೂ ಇಲ್ಲ. ಮೊದಲೆಲ್ಲ ಸಮಾಜದ ಭಯವಿತ್ತು, ನಾಚಿಕೆ, ಸಂಕೋಚಗಳಿತ್ತು. ಈಗ ಅದೂ ಇಲ್ಲ. ‘ಈಗ ಎಲ್ಲವೂ ತೆರೆದ ಪುಸ್ತಕದಂತೆ’. ಇದಕ್ಕೆಲ್ಲ ಕಡಿವಾಣ ಬೇಡವೇ? ಇತಿಮಿತಿ ಬೇಡವೇ?
ಶಾಲೆಗಳತ್ತ ಎಲ್ಲರ ಚಿತ್ತ ಸರಿ ಒಪ್ಪಿಕೊಳ್ಳೋಣ, ಆದರೆ ಅಲ್ಲಿಯ ಶಿಕ್ಷಕರಿಗೆ ಶಿಕ್ಷೆ ನೀಡುವ ವಿಷಯದಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲ. ಮತ್ತೆ ಹೇಗೆ? ತಪ್ಪುಗಳ ತಿದ್ದಿ ಹೇಳಿದರೆ ಏನಾಗುವುದೆಂದು ಗೊತ್ತಿದೆ. ಮೊಬೈಲ್ ನೋಡಬೇಡ, ಓದು ಎಂದು ಹೆತ್ತವರು ಮಕ್ಕಳಿಗೆ ಹೇಳಲು ಸಾಧ್ಯವಾಗದ ಕಾಲ. ಅಂಧಾನುಕರಣೆ, ವಿದೇಶಿ ಸಂಸ್ಕೃತಿ ನಮಗೆ ಬೇಡ.
‘ಪ್ರೇಮಿಗಳ ದಿನ’ ವೆಂದು ಹುಚ್ಚುಕೋಡಿ ಮನಸ್ಸನ್ನು ಎಲ್ಲೆಂದರಲ್ಲಿ ಹರಿಯ ಬಿಡದೆ, ಪ್ರೀತಿ ಎಂಬ ಎರಡಕ್ಷರದ ವಿಶಾಲ ಅರ್ಥವನ್ನು ಅರ್ಥೈಸಿಕೊಂಡು, ಸ್ವೇಚ್ಛೆಗೆ ಕಡಿವಾಣ ಹಾಕಿ ಮುಂದುವರಿಯೋಣ. ಹುಟ್ಟಿಗೆ ಸಾರ್ಥಕ್ಯವಿರಲಿ. ಅಲ್ಪಾಯುಷ್ಯ ಮನೆ ಬಾಗಿಲಿಗೆ ಬಾರದಿರಲಿ. ಇರುವ ಮನುಷ್ಯ ಜನ್ಮ ಅನೇಕ ಪುಣ್ಯಗಳಿಂದ ಬಂದದಂತೆ. ಅನುಭವಿಸೋಣ ಆರೋಗ್ಯವಾಗಿ. ಶುಭಾಶಯಗಳು.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ನ್ಯೂಸ್ ಫಸ್ಟ್ ಕನ್ನಡ ಜಾಲ ತಾಣ