ಪ್ರೊ.ಏ.ಏನ್.ಮೂರ್ತಿರಾಯರ, ತೆರೆದ ಮನ, ಇಂದಿಗೂ ನನಗೆ ಮುದಕೊಡುವ ಪ್ರಬಂಧಗಳಲ್ಲೊಂದು !
ನನ್ನ ಪುಸ್ತಕ ಭಂಡಾರದಲ್ಲಿ ಅತ್ಯಂತ ಕಾಳಜಿಯಿಂದ ಶೇಖರಿಸಿಟ್ಟಿರುವ ಪುಸ್ತಕಗಳಲ್ಲಿ, ಡಾ. ಎ.ಎನ್.ಮೂರ್ತಿಯವರ ಪುಸ್ತಕ, ಸಮಗ್ರ ಲಲಿತ ಪ್ರಬಂಧಗಳು ಎನ್ನುವ ಸರಳ ಸುಂದರ ಪುಸ್ತಕವನ್ನು ತೆರೆದಾಗಲೆಲ್ಲಾ ನನ್ನನ್ನು ಅತಿಯಾಗಿ ಆಕರ್ಷಿಸುವ ಶೀರ್ಷಿಕೆ, 'ತೆರೆದ ಮನ.' ಒಟ್ಟು ೩೮೯ ಪುಟಗಳ ಈ ಪುಸ್ತಕದಲ್ಲಿ ಹಲವಾರು ವಿಷಯಗಳನ್ನೂ ಕುರಿತು ಬರೆದಿದ್ದಾರೆ. ಪ್ರತಿ ಪ್ರಬಂಧವು ಓದುಗರಿಗೆ ಒಂದು ಸವಿರುಚಿಯ ಪಕ್ವಾನ್ನ ವಿದ್ದಂತೆ. ಅತಿ ಸರಳ. ಹೇಳಬೇನ್ನುವ ವಿಷಯವನ್ನು ಇಷ್ಟು ಸುಲಭವಾಗಿ ಪುಸ್ತಕದಲ್ಲಿ ದಾಖಲಿಸಲು ಸಾಧ್ಯವೇ ಎಂದು ನಮ್ಮನ್ನು ನಾವೇ ಪ್ರಶ್ನಿಸುವ ತರಹ !
ಹಗಲುಗನಸುಗಳು :
ಗೌರಜ್ಜಿ,
ಹೂಗಳು,
ಗಾಡಿಯ ಪ್ರಯಾಣ,
ಕುರುಡ,
ಲಲಿತೆಯ ವಿದ್ಯಾಭ್ಯಾಸ,
ಪ್ರಣಯ ಯಾತ್ರೆ,
ಅಲೆಯುವ ಮನ :
ಕೆನ್ಸಿಂಗ್ ಟ ನ್ ಪಾರ್ಕ್,
ಹೋಟೆಲುಗಳು,
ಹೆಂಡತಿಯ ಹೆಸರು,
ದಿವಾನ ಖಾನೆಯ ಅಂದ ಚೆಂದ,
ಹರಕೆಗಳು,
ಕ್ಲಿಷಾ ಪ್ರವೀಣರ ಸಾಕ್ಷ್ಯ
ವ್ಯಾಘ್ರಗೀತೆ,
ಕಾರ್ ರಿಪೇರಿ ನೀನೆ ಮಾಡಿ ನೋಡು,
ಮಹಾರಾಜ ಕಾಲೇಜ್ ನ ಕಾಮನ್ ರೂಂ,
ಟೆಲೆಫೋನ್,
ಸಾಹಿತಿಯ ಚಹರೆ,
ಸಣ್ಣ ಕಥೆಗಳ ಹಾವಳಿ,
ನಿಲ್ಲುವುದಕ್ಕೆ ನೆರಳಾಗಿ ಸಣ್ಣದೊಂದು ಗುಡಿಸಲು,
ಅಕ್ಕಿ ಹೆಬ್ಬಾಳು,
ಮಿನುಗು ಮಿಂಚು :
ಹರಟೆಯ ಮಲ್ಲ,
ಹರಟೆ ಮತ್ತು ಪ್ರಬಂಧ,
ದೆವ್ವಗಳನ್ನು ಕುರಿತು,
ಗೊಣಗುವ ಚಟ,
ಬೇಡದ ಅತಿಥಿಗಳು,
ಬೆಂಗಳೂರು,ಗಾಂಪ ರೊಡೆಯರ ಸಂಘ, -ವಿಧಾನ ಸಭೆಯಲ್ಲಿ,
ಡಾ.ವಿಶ್ವೇಶ್ವರಯ್ಯ-ವ್ಯಕ್ತಿ ಮತ್ತು ಐತಿಹ್ಯ,
ಗಾನ ಪ್ರಪಂಚದ ಅಪೂರ್ಣ ಪ್ರಜ್ಞರು,
ಸಂಸ್ಕೃತಿ ಮತ್ತು ಸಾಹಿತ್ಯ,
ರೇಡಿಯೋ ನಾಟಕ ಮತ್ತು ರಂಗ ಭೂಮಿ,
ತೆರೆದ ಮನ,
ನೀಳಕಂಠ,
ಸಂಕಲಿತ ಪ್ರಬಂಧಗಳು :
ಟಿ.ಎಸ್.ವೆಂಕಣ್ಣಯ್ಯನವರು,
ಎಂ.ಆರ್, ಶ್ರೀನಿವಾಸ ಮೂರ್ತಿ-ನೆನೆಪುಗಳು,
ಪ್ರೊ.ಆರ್.ಎಲ್.ನರಸಿಂಹಯ್ಯನವರು,
ಬಿ.ಎಂ.ಶ್ರೀ.
ನಾನು ಮತ್ತು ಓದು,
ಪೋಲಿಸಿನವರು -ಅವರ ಪರಿಚಯವೇ ಇಲ್ಲದವನ ದೃಷ್ಟಿಯಲ್ಲಿ,
ಮಾಸ್ತರಿಕೆಯ ಅನುಭವಗಳು,
ಸಾರ್ಥಕ ಬಾಳು ಸಾವಿರ ಗ್ರಂಥ ಕ್ಕೂ ಮಿಗಿಲು,
ಲೇಖಕನಾಗಿ ನನ್ನ ಅನುಭವ,
ಅನುಬಂಧ -೧,
ಮುನ್ನುಡಿಗಳು,
ಅನುಬಂಧ- ೨
ಏ.ಏನ್.ಮೂರ್ತಿರಾವ್- ಕೃತಿಗಳು,
ಅನುಬಂಧ -೩
ಏ.ಏನ್.ಮೂರ್ತಿರಾವ್ ಬದುಕಿನ ವಿವರಗಳು,
ಅನುಬಂಧ- ೪
ಕನ್ನಡ ಸಂಘದ ಪ್ರಕಟಣೆಗಳು
’ತೆರೆದ ಮನವೆಂದರೇನು ?
ಇದಕ್ಕೆ ಎರಡು ಬಗೆಯ ಅರ್ಥಮಾಡುವುದು ಸಾಧ್ಯ. ಆವೆರಡು ಅರ್ಥಗಳಿಗೂ ಸಂಬಂಧವಿದೆ. ಎರಡೂ ಕೆಲವು ಸಂದರ್ಭಗಳಿಗೆ ಒಟ್ಟಿಗೆ ಅನ್ವಯಿಸಬಹುದು. ಆದರೂ ಅವು ಬೇರೆ ಬೇರೆ ಅರ್ಥಗಳೆಂದೇ ಪರಿಗಣಿಸುವುದು ಉತ್ತಮ. ಮೊದಲನೆಯದಾಗಿ ’ನಿಮ್ಮ ಮನಸ್ಸು ತೆರೆದಿರಲಿ’ ಎನ್ನುವಾಗ ನಮ್ಮ ಅಭಿಪ್ರಾಯ ಹೇಗಿರಬಹುದು : ನಾವು ಯಾವುದೊಂದು ವಿಷಯದಲ್ಲಾಗಲಿ ತೀರ್ಮಾನಕ್ಕೆ ಬರುವ ಮುನ್ನ, ಅಥವಾ ಯಾವುದಾದರೂ ತತ್ವವನ್ನು ಪೂರ್ಣರೂಪಕ್ಕೆ ತರುವ ಮುನ್ನ, ಆ ಸಂಬಂಧದಲ್ಲಿ ಪರಿಶೀಲಿಸಬೇಕಾದ ಅಂಶ ಗಳೆಲ್ಲಕ್ಕೂ ನಮ್ಮ ಮನಸ್ಸಿನಲ್ಲಿ ಸ್ಥಳ ಕೊಡಬೇಕು. ಯಾವ ಸಮಸ್ಯೆಯೇ ಆಗಲಿ ಅದಕ್ಕೆ ಹತ್ತು ಮುಖಗಳಿರುತ್ತವೆ ; ಅವೆಲ್ಲವನ್ನೂ ನೋಡಬೇಕು. ನಮ್ಮ ಮನಸ್ಸಿನಲ್ಲಿ ಅದುವರೆಗೆ ಶೇಖರವಾಗಿರುವ ಅಂಶಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಬಿಡಿಸಹೋಗಬಾರದು, ತತ್ವವನ್ನು ಪ್ರತಿಪಾದಿಸಬಾರದು, ತೀರ್ಮಾನಕ್ಕೆ ಬರಬಾರದು. ಸಾಕ್ಷವೆಲ್ಲಾ ಬರುವವರೆಗೆ ಕಾದಿದ್ದು ಅನಂತರ ಅವೆಲ್ಲವನ್ನೂ ಪರಿಶೀಲಿಸಿ ತೀರ್ಮಾನಕೊಡಬೇಕು. ನಮ್ಮ ಆತ್ಮದ ಕಿಟಕಿಗಳೆಲ್ಲವನ್ನೂ ತೆರೆದಿಡೋಣ ; ಎಂಟು ದಿಕ್ಕುಗಳಿಂದಲೂ ಗಾಳಿ ಬೀಸಿ ಹೊಸ ಅನುಭವಗಳನ್ನು ಹೊಸಭಾವಗಳನ್ನೂ ಹೊತ್ತು ತಂದು ನಮ್ಮಲ್ಲಿ ತುಂಬಲಿ: ಅವುಗಳೆಲ್ಲದರ ಸಮನ್ವಯದಿಂದ ನಮ್ಮ ವ್ಯಕ್ತಿತ್ವವೂ ಆಲೋಚನಾಶಕ್ತಿಯೂ ಪುಷ್ಟಿಯಾಗಲಿ.
'ತೆರೆದ ಮನ'ದ ಮತ್ತೊಂದು ಅರ್ಥ, ಹೊಸ ಅನುಭವಾಂಶಗಳ ಪ್ರವೇಶಕ್ಕೆ ಮನಸ್ಸನ್ನು ತೆರೆದಿಡುವುದಷ್ಟೇ ಅಲ್ಲ; ನಮಗೆ ದೊರಕಿರುವ ಮತ್ತು ಮುಂದೆ ದೊರಕಬಹುದಾದ ಅನುಭವಾಂಶಗಳನ್ನು ನಿಷ್ಪಕ್ಷ ಪಾತವಾದ ದೃಷ್ಟಿ ಯಿಂದ ನೋಡತಕ್ಕದ್ದು. ಪೂರ್ವಾಗ್ರಹಗಳೂ ಸಂಕುಚಿತ ಭಾವನೆಗಳೂ ತೊಲಗಲೆಂದು ಅ ಮನಸ್ಸಿನ ದ್ವಾರಗಳನ್ನು ತೆರೆದಿಡುವುದು. ಆದರೆ ಕಾಕದೃಷ್ಟಿಯಿಂದ ನೋಡಬಾರದಷ್ಟೆ. ಒಂದಲ್ಲ ಒಂದುಸಲ ನಾವೆಲ್ಲಾ ಒಂದುವಿಧದಲ್ಲದಿದ್ದರೆ ಮತ್ತೊಂದು ವಿಧದಲ್ಲಿ ಪೂರ್ವಗ್ರಹಗಳಿಗೆ ವಶವಾಗುತ್ತೇವೆ. ನಮ್ಮ ಜೀವನದ ಕಹಿ, ಇಲ್ಲವೇ, ನಿರಾಶೆಯ ಪ್ರಸಂಗವೊಂದು ಬದುಕಿನ ಹಲವು ಕಾರ್ಯಗಳ ವಿಷಯದಲ್ಲಿ ನಮ್ಮ ನಿರ್ಣಯಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ ಪ್ರಸಂಗ.. ನಮಗಿಷ್ಟವಾದವರು ಮಾಡಿದ ಅಪರಾಧಗಳನ್ನು ಕ್ಷಮಾರ್ಹವೆಂದು ಬೇರೊಬ್ಬನ ಅಲ್ಪಪ್ರಮಾಣದ ದೋಷವನ್ನು ಬೆಟ್ಟದಷ್ಟು ಮಾರ್ಪಡಿಸುವ ಹಂತದಲ್ಲಿ 'ತೆರೆದ ಮನ' ದ ಪಾತ್ರ ಬರುತ್ತದೆ. ಇಂತಹ ದೋಷಗಳನ್ನು ತೊಲಗಿಸಲು ಸಹಾಯಮಾಡುತ್ತದೆ.
ನಮಗೆ ಕೇಡುಮಾಡಿದವ ಬಗ್ಗೆಯೂ ಸಹನೆ, ಅನುಕಂಪ, ತೋರಿಸುವ ಮನೋಭಾವವೇ ತೆರೆದ ಮನಕ್ಕೆ ಒಂದು ಅತ್ಯುತ್ತಮವಾದ ಉದಾಹರಣೆ. ಕೇಡನ್ನು ಸ್ಪಷ್ಟವಾಗಿ ಗುರುತಿಸಿದಮೇಲೂ ಅದನ್ನು ಮಾಡಿದ ವ್ಯಕ್ತಿಯನ್ನು ದ್ವೇಷಿಸದಿರುವ ಪ್ರಕ್ರಿಯೆ. ತೆರೆದ ಮನವೆಂದರೆ, ಇದಕ್ಕೆ ಅನುಕೂಲವಾಗುವಂತಹದು ! ಮನುಷ್ಯನ ಕೆಟ್ಟ ಪ್ರವೃತ್ತಿಗಳನ್ನು ಗುರುತಿಸಿ, ತಿಳಿಯಹೇಳಿ ಸರಿಪಡಿಸುವುದು ಅತಿ ಮುಖ್ಯ. ವ್ಯಕ್ತಿಯನ್ನು ಖಂಡಿಸಿ ಅವನ ವ್ಯಕ್ತಿತ್ವವನ್ನು ನಿಷ್ಕ್ರಿಯಮಾಡುವುದಲ್ಲ ! ಪೂರ್ವಾಗ್ರಹಗಳು ರಾಕ್ಷಸರಾದರೆ, ಪ್ರೀತಿ ಮತ್ತು ಅದಕ್ಕೆ ಸಂಬಂಧಪಟ್ಟ ಅನುಕಂಪ ಇತ್ಯಾದಿ ಗುಣಗಳು ದೇವತೆಗಳು.
’ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ’ ನಮ್ಮ ಮನವನ್ನು ತೆರೆದಿಡೋಣ, ಎನ್ನುತ್ತಾರೆ ಶತಾಯುಷಿಗಳಾದ ದಿವಂಗತ, ಮೂರ್ತಿರಾಯರು !
'ತೆರೆದ ಮನ'ವೆಂಬ ಹಣೆಬರಹವನ್ನು ಬಳಸಿ ರಚಿಸಿದ ಪುಸ್ತಕ :
ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜ್ ನ ಪ್ರಾಂಶುಪಾಲರಾಗಿದ್ದ, ದಿವಂಗತ, ಪ್ರೊ. ಎಚ್.ಎನ್. ಸಹ ಇದೇ ತಲೆಬರಹವನ್ನು ಆರಿಸಿಕೊಂಡು ಒಂದು ಪುಸ್ತಕವನ್ನೇ ಬರೆದಿದ್ದಾರೆ. ತೆರೆದ ಮನವೆಂದರೆ, ನಮ್ಮ ದಿನನಿತ್ಯದ ಆಚಾರ ವ್ಯವಹಾರಗಳಲ್ಲಿ ವೈಚಾರಿಕತೆ ಇರಬೇಕು. ನಮ್ಮ ನಂಬಿಕೆ ಒಂದು ಕಡೆ, ಮತ್ತು ವಿದ್ಯಾವಂತರಾದಂತೆ, ಪ್ರತಿ ಕಾರ್ಯವೂ ಕಣ್ಣುಮುಚ್ಚಿ ಮಾಡದಂತೆ, ನಿಗಾವಹಿಸಬೇಕು. ಅವೈಜ್ಞಾನಿಕ ವಾಗಿರಬಾರದು. ಅಂಧ ಶ್ರದ್ಧೆ ಸಲ್ಲದು. ಇಲ್ಲಿ ತೆರೆದ ಮನದ ಬಳಕೆ ಆಗುವ ರೀತಿ ಅನನ್ಯ !
ಪುಸ್ತಕದ ಸಂಪಾದಕ, ಚಿ.ಶ್ರೀನಿವಾಸ ರಾಜು, ಪುಸ್ತಕದ ಹೊರಕವಚದ (ಎರಡು ಕಡೆ) ಮೇಲೆ ವಿವರಣೆಯನ್ನು ಕೊಟ್ಟು ಪರಿಚಯಿಸಿದ್ದಾರೆ. ಡಾ. ನರಸಿಂಹಯ್ಯನವರ ವಿಚಾರ, ನೆನೆಪುಗಳ ಹಾಗೂ ಲಲಿತ ಪ್ರಬಂಧಗಳ ಸಂಕಲನ. ಶಾಲೆ-ಕಾಲೇಜುಗಳಲ್ಲಿ ಕಲಿಯುತ್ತಿರುವ ತರಣ ತರುಣಿಯರಿಗೆ ವೈಜ್ಞಾನಿಕ ಮನೋಧರ್ಮ, ಜಾತ್ಯಾತೀತತೆ, ಸಮಾಜಸೇವೆ ಮುಂತಾದ ಮೌಲ್ಯಗಳನ್ನು ಕಲಿಸಲು ಇದಕ್ಕಿಂತ ಉತ್ತಮವಾದ ಮತ್ತೊಂದು ಪುಸ್ತಕದೊರೆಯಲಾರದು. ಸರಳವಾದ ಸ್ಪಷ್ಟವಾದ ವೈಚಾರಿಕತೆ ಇಲ್ಲಿನ ಎಲ್ಲ ಲೇಖನಗಳ ಮುಖ್ಯಗುಣ. ಆಚರಣೆಗೆ ತರಲಾಗದ ಯಾವ ಉಪದೇಶವನ್ನೂ ಅವರು ನೀಡುವುದಿಲ್ಲ. ಅರ್ಥವಾಗದ ಮಾತುಗಳನ್ನು ಅಡುವುದಿಲ್ಲ.