ಪ್ಲಾಸ್ಟಿಕ್ ಪರಿಸರ

ಪ್ಲಾಸ್ಟಿಕ್ ಪರಿಸರ

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್ ಎಸ್ ಅನುಪಮಾ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೨೩

ಪ್ಲಾಸ್ಟಿಕ್ ಎಂಬ ವಸ್ತು ನಮ್ಮ ಪರಿಸರವನ್ನು ಪೆಡಂಭೂತದಂತೆ ಕಬಳಿಸುತ್ತಾ ಹೋಗುತ್ತಿದೆ. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದರೂ ಪ್ಲಾಸ್ಟಿಕ್ ಮಾಡುವ ಹಾನಿಯ ಬಗ್ಗೆ ಹೇಳುವುದು ಇನ್ನೂ ಉಳಿದಿದೆ. ಈ ಕೃತಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಹೆಕ್ಕುವವರ ಬಗ್ಗೆ ಲೇಖಕಿ ಎಚ್ ಎಸ್ ಅನುಪಮಾ ಅವರು ಮಾಹಿತಿ ನೀಡುತ್ತಾ ಹೋಗಿದ್ದಾರೆ. ಅವರು ಈ ಕೃತಿಯ ಬಗ್ಗೆ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ. ಓದಿ…

“ನಾವೇ ಸೃಷ್ಟಿಸಿದ ಕಸದ ಬಗೆಗೆ ನಮಗೆ ಎಷ್ಟು ಅಸಡ್ಡೆಯೆಂದರೆ ಅದನ್ನು ಮುಟ್ಟಲೂ ಅಸಹ್ಯ. ಕಸ ಎತ್ತಲೆಂದೇ ಒಂದು ಜಾತಿಯನ್ನು ರೂಪಿಸಿದ ಭಾರತೀಯ ಸಮಾಜ ನಮ್ಮದು. ಕಸ ಎತ್ತಿ ನಮ್ಮನ್ನು ಆರೋಗ್ಯವಂತರನ್ನಾಗಿ, ಶುಚಿಯಾಗಿ ಇಟ್ಟವರ ಬಗೆಗೆ ಕೃತಘ್ನರಾಗಿ ಅವರನ್ನೇ ಹೊರಗಿಟ್ಟವರು ನಾವು. ಶುಚಿತ್ವವನ್ನು ಮಡಿಮೈಲಿಗೆಯೆಂದು ಅಪಾರ್ಥಗೊಳಿಸಿದವರು. ಹೀಗಿರುತ್ತ ದೇಶದ ಯಾವ ಭಾಗಕ್ಕೇ ಹೋದರೂ ಮೂಲೆಮೂಲೆಗಳೂ ತಿಪ್ಪೆಗುಂಡಿಯಂತೆ ಕಾಣುವುದರಲ್ಲಿ ಏನು ಆಶ್ಚರ್ಯವಿದೆ? ಹೊರಗಣ ಕಸದ ಬಗೆಗಿನ ಧೋರಣೆಯೇ ಮನದೊಳಗಿನ ಕಸಕ್ಕೂ ಮುಂದುವರಿದಿರುವುದು ಎದ್ದು ಕಾಣುವಂತಿದೆ.

ಜನಸಾಮಾನ್ಯರ ಮಾತು ಒಂದುಕಡೆಯಾದರೆ ದೇಶ, ಭಾಷೆ, ಜಾತಿ, ಮತ, ಧರ್ಮ, ಅಧ್ಯಾತ್ಮ, ರಾಜಕಾರಣ, ವಿಜ್ಞಾನ, ಅಭಿವೃದ್ಧಿ, ಸಂಶೋಧನೆ, ಸಾಹಿತ್ಯ, ಸೌಂದರ್ಯವೇ ಮೊದಲಾದ ಸಂಗತಿಗಳ ಬಗೆಗೆ ಗಹನವಾಗಿ ಯೋಚಿಸಿ, ಮಾತನಾಡುವ ಪ್ರಾಜ್ಞರೂ ಪರಿಸರ, ಕಸ, ಸ್ವಚ್ಛತೆಯ ವಿಷಯಕ್ಕೆ ಬಂದರೆ ಅಪಾರ ನಿರ್ಲಕ್ಷ್ಯ ತೋರಿಸುತ್ತಾರೆ. ಅದು ತಮಗೆ ಸಂಬಂಧಿಸಿದ್ದೇ ಅಲ್ಲ ಎನ್ನುವಂತೆ ಮೌನವಾಗುತ್ತಾರೆ. ಆದರೆ ಕೋಮುವಾದ, ಜಾತೀಯತೆ, ಅಸಮಾನತೆಗಳ ವಿರುದ್ಧ ಹೋರಾಟದಷ್ಟೇ ಪರಿಸರ ಉಳಿಸಿಕೊಳ್ಳುವ ಹೋರಾಟವೂ ಅಗತ್ಯವಿದೆ. ಇದನ್ನರಿತು ಅನಾದಿಯಿಂದ ಒಳಗಣ, ಹೊರಗಣ ಶುಚಿತ್ವದ ಬಗೆಗೆ ಒತ್ತು ಕೊಟ್ಟಿರುವ ಉದಾತ್ತ ಚಿಂತಕರು ನಮ್ಮಲ್ಲಿ ಆಗಿ ಹೋಗಿದ್ದಾರೆ. ಎಂದೇ ಸಫಾಯಿ ಕೆಲಸ ಮಾಡುವ ಸುಪಾಕನಿಂದ ಹಿಡಿದು ಧನಿಕ ಸುದತ್ತನವರೆಗೆ ಎಲ್ಲರನ್ನು ಸಮನಾಗಿ ಪ್ರೀತಿಸಿ ಪ್ರಭಾವಿಸಿದ ಬುದ್ಧ; ಸಕಲ ಜಾತಿಜನವರ್ಗಗಳ ಮನದ ಕಸ ಬಳಿದು ಸ್ವಚ್ಛಗೊಳಿಸಲೆತ್ನಿಸಿದ ಬಸವ-ಅಕ್ಕ-ಕನಕ-ಶರೀಫ; ಸಮಾಜದ ಒಳಹೊರಗಣ ಕೊಳೆ ಬಳಿದು ಲೋಕಹಿತವಾದಿಗಳಾದ ಸಾವಿತ್ರಿಬಾಯಿ-ಜೋತಿಬಾ; ಸಹಜೀವಿಗಳಲ್ಲಿ ಸ್ವಚ್ಛತೆಯ ಮಹತ್ವದ ಬಗೆಗೆ ಅರಿವು ಮೂಡಿಸಲು ಸ್ವತಃ ಪೊರಕೆ ಹಿಡಿದು ಚರಂಡಿ ಚೊಕ್ಕಗೊಳಿಸಿ ನಂತರ ಅಧ್ಯಾತ್ಮ ಚಿಂತನೆ ನಡೆಸುತ್ತಿದ್ದ ಮಹಾರಾಷ್ಟ್ರದ ಸಂತ ಗಾಡ್ಗೆ ಬಾಬಾ; ಕಾಂಗ್ರೆಸ್ ಅಧಿವೇಶನ ನಡೆಯುವ ಸ್ಥಳವಿರಲಿ, ಆಶ್ರಮವಿರಲಿ - ಹೇಸಿಗೆ, ಹಿಂಜರಿಕೆಗಳಿರದೇ ಹೇಲುಮಡಕೆಗಳನ್ನು, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಮುಂದಾಗುತ್ತಿದ್ದ ಗಾಂಧೀಜಿ; ಸ್ವಚ್ಛ ಮಾಡಲೊಂದು ಜಾತಿ ಸೃಷ್ಟಿಸಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸಮಾಜದ ನ್ಯಾಯಪ್ರಜ್ಞೆಯ ಕಣ್ಣು ತೆರೆಸಿದ ಬಾಬಾಸಾಹೇಬ್ ಅಂಬೇಡ್ಕರರಂತಹ ಚೇತನಗಳು ಮಹಾತ್ಮರೆಂದು ಗೌರವಿಸಲ್ಪಟ್ಟಿದ್ದಾರೆ.

ಈಗ ಕಸದ ಪಿಡುಗು ಹೊಸತೊಂದು ವಿಷವರ್ತುಲ ಪ್ರವೇಶಿಸಿದೆ. ಮೊದಲೆಲ್ಲ ಪಂಚಭೂತಗಳಲ್ಲಿ ವಿಲೀನವಾಗುತ್ತಿದ್ದ ಕಸವು ಪ್ಲಾಸ್ಟಿಕ್ ಬಂದಮೇಲೆ ಕರಗುವ ಪ್ರಶ್ನೆಯೇ ಇಲ್ಲದೆ ಭೂ ಗ್ರಹ ಬೃಹತ್ ತಿಪ್ಪೆರಾಶಿಯಾಗತೊಡಗಿದೆ. ನಮ್ಮ ಸುತ್ತಮುತ್ತಲ ಜೀವಿಗಳು, ಪರಿಸರದ ಮೇಲೆ ಊಹಿಸಲಾಗದ ದುಷ್ಪರಿಣಾಮ ಬೀರುವುದರ ಜೊತೆಗೆ ಮನುಷ್ಯರ ಆರೋಗ್ಯ, ಭವಿಷ್ಯಕ್ಕೂ ಮರಣಪ್ರಾಯವಾಗಿ ಸಂಭವಿಸಿದೆ. ಎಷ್ಟೊಂದು ಹೊಸ ಕಾಯಿಲೆಗಳು, ಎಷ್ಟೊಂದು ಅನೂಹ್ಯ ಆರೋಗ್ಯ ಸಮಸ್ಯೆಗಳು ಬಡವರು, ಸಿರಿವಂತರೆನದೆ, ಯುವಜನ ವೃದ್ಧರೆನದೆ ಬಾಧಿಸುವುದರ ಹಿಂದೆ ಪ್ಲಾಸ್ಟಿಕ್ ಕೆಲಸ ಮಾಡಿದೆ. ನಮ್ಮನ್ನು ನಾವು ತಿದ್ದಿಕೊಳ್ಳಲು 30 ವರ್ಷ ಕಾಲಾವಕಾಶ ಮಾತ್ರ ಇದೆ ಎಂದು ವಿಜ್ಞಾನಿಗಳು, ಪರಿಸರವಾದಿಗಳು ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದ್ದಾರೆ.

ಅದು ಎಷ್ಟು ಜನರಿಗೆ ಕೇಳಿಸಿದೆ? ಮಹಾ ಕಿವುಡು ಆವರಿಸಿರುವುದು ಸುತ್ತುಮುತ್ತನ್ನು ನೋಡಿದರೆ ತಿಳಿಯುತ್ತದೆ. ಇಂಥ ಹೊತ್ತಿನಲ್ಲಿ `ನಮ್ಮ ಕಸಕ್ಕೆ ನಾವೇ ಹೊಣೆ’ ಎಂಬ ಎಚ್ಚರ, ಪ್ಲಾಸ್ಟಿಕ್ ವಿಷದ ಬಗೆಗೆ, ಪರ್ಯಾಯಗಳ ಬಗೆಗೆ ಚಿಂತನ, ಮಂಥನ ಅಗತ್ಯವಾಗಿದೆ. ಎಂದೇ ಈ ಕಿರುಹೊತ್ತಗೆ ರೂಪುಗೊಂಡಿದೆ. ಇದರಲ್ಲಿ ನಮ್ಮ ಹಳ್ಳಿಯಲ್ಲಿ ನಾವು ನಡೆಸುತ್ತಿರುವ ಸಣ್ಣ ಜಾಗೃತಿಯ ಪ್ರಯೋಗವನ್ನೂ ಮುಂದಿಡಲಾಗಿದೆ. ಅದೇನು ಹೊಸದಲ್ಲ, ಯಾರೂ ಮಾಡದೇ ಇರುವಂಥದಲ್ಲ. ಕರ್ನಾಟಕದ ಕರಾವಳಿಯ ಸಣ್ಣ ಊರಿನಲ್ಲಿ ಕೆಲ ಬದ್ಧತೆಯ ಜೀವಗಳು ಒಂದೇಸಮ ನಡೆಸಿರುವ ಪ್ರಯತ್ನಗಳಿಗೆ ಇಂಬುಕೊಡುವ ವಂದನಾ ನಿರ್ಣಯದಂತೆ ಇದನ್ನು ಭಾವಿಸಬೇಕಾಗಿ ಕೋರುವೆ. ಇನ್ನು, ಈ ಬರಹವನ್ನೋದಿದವರ `ಪ್ಲಾಸ್ಟಿಕ್ ದುರಭ್ಯಾಸ’ ಕೊಂಚವಾದರೂ ತಗ್ಗಿದಲ್ಲಿ ಮನ್ನಣೆಯೆಂದು ಭಾವಿಸುವೆ.”