ಪ್ಲಾಸ್ಟಿಕ್ ಬಳಕೆ ವಿರುದ್ಧ ದೊಡ್ಡ ಅಭಿಯಾನದ ತುರ್ತು ಅಗತ್ಯ

ಹೋಟೇಲ್ ಗಳಲ್ಲಿ ಇಡ್ಲಿ ಮಾಡುವಾಗ ಬಳಸುವ ಪ್ಲಾಸ್ಟಿಕ್ ಹಾಳೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಕಂಡು ಬಂದ ಹಿನ್ನಲೆಯಲ್ಲಿ ಅವುಗಳ ಬಳಕೆ ಮೇಲೆ ನಿಷೇಧ ಹೇರಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ ನಿತ್ಯ ಹಲವು ರೀತಿಯಲ್ಲಿ ನಮ್ಮ ದೇಹ ಸೇರುತ್ತಿರುವ ಪ್ಲಾಸ್ಟಿಕ್ ಮೇಲೆ ನಿಯಂತ್ರಣಕ್ಕೆ ಈ ಸಣ್ಣ ಕ್ರಮ ಸಾಲದು. ಕಾರಣ, ಹೋಟೇಲ್, ಖಾಸಗಿ ಕಾರ್ಯಕ್ರಮಗಳಲ್ಲಿ ನೀಡುವ ಪೇಪರ್ ಗ್ಲಾಸ್, ಬೀದಿ ಬದಿ ಹೋಟೇಲ್ ಗಳಲ್ಲಿ ಆಹಾರ ವಿತರಣೆ ವೇಳೆ ಪ್ಲೆಟ್ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ, ಎಳನೀರು ಕುಡಿಯಲು ಬಳಸುವ ಸ್ಟ್ರಾ, ಹೋಟೇಲ್ ಗಳಲ್ಲಿ ಆಹಾರ ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಹಾಳೆ ಹೀಗೆ ಹಲವು ರೀತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಹೀಗಾಗಿ ಸರ್ಕಾರ ಕೇವಲ ಇಡ್ಲಿ ಮಾಡುವ ವೇಳೆ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದರೆ ಸಾಲದು. ಈ ವಿಷಯದಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಯಬೇಕು. ಈ ಕುರಿತ ಕಾನೂನುಗಳು ಈಗಾಗಲೇ ಇದೆಯಾದರೂ ಅದನ್ನು ಕಠಿಣವಾಗಿ ಜಾರಿಗೆ ತರುವ ಮನಸ್ಸು ಅಧಿಕಾರಿಗಳು ಮಾಡಬೇಕು. ಕೆಲ ತಿಂಗಳ ಹಿಂದೆ ಗೋಬಿಮಂಚೂರಿ, ಕಬಾಬ್ ಮತ್ತು ಕಾಟನ್ ಕ್ಯಾಂಡಿಯಲ್ಲಿ ಬಳಸುವ ಅಪಾಯಕಾರಿ ಬಣ್ಣಗಳ ಮೇಲೆ ಸರ್ಕಾರ ನಿಷೇಧ ಹೇರಿತು. ಆದರೆ ಈ ನಿಯಮ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬುದರ ಖಚಿತ ಮಾಹಿತಿ ಇಲ್ಲ.
ಭಾರತದಲ್ಲಿ ಪ್ರತಿವರ್ಷ ಕನಿಷ್ಟ ೧ ಕೋಟಿ ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಈ ಪೈಕಿ ಶೇ ೩೦ ಕ್ಕಿಂತ ಹೆಚ್ಚು ಭಾಗ ಸಂಸ್ಕರಣೆಯಾಗದೇ ನೇರವಾಗಿ ಪರಿಸರ ಸೇರುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಪರಿಸರ ಸೇರುವ ಪ್ಲಾಸ್ಟಿಕ್ ಮೈಕ್ರೋ ಪ್ಲಾಸ್ಟಿಕ್ ಸ್ವರೂಪ ಪಡೆದುಕೊಂಡು ಗಾಳಿ, ನೀರು, ಆಹಾರದ ಮೂಲಕ ನಮ್ಮ ದೇಹ ಸೇರುತ್ತಿದೆ. ಇತೀಚಿನ ಸಂಶೋಧನೆಯೊಂದರ ಪ್ರಕಾರ ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ೨ ಲಕ್ಷ ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ಆಹಾರ, ನೀರು, ಗಾಳಿಯ ಮೂಲಕ ತನ್ನ ದೇಹಕ್ಕೆ ಸೇರಿಸಿಕೊಳ್ಳುತ್ತಿದ್ದಾನೆ. ಪರಿಣಾಮ, ರಕ್ತ, ಮೆದುಳು, ಶ್ವಾಸಕೋಶ, ಹೃದಯ, ಯಕೃತ್ ಸೇರಿದಂತೆ ಮಾನವ ದೇಹದ ಅತ್ಯಮೂಲ್ಯ ಭಾಗಗಳಲ್ಲಿ ಪ್ಲಾಸ್ಟಿಕ್ ಕಣಗಳು ಸೇರಿ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.
ಹೀಗಾಗಿ ಸರ್ಕಾರ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿ, ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಯೋಜನೆ ರೂಪಿಸಬೇಕು. ಜನರು ಇಂಥ ವಸ್ತುಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ಭವಿಷ್ಯಕ್ಕೆ ಆರೋಗ್ಯವಂತ ಮನುಕುಲ, ಭೂಮಿ ಉಳಿಸಲು ಮುಂದಾಗಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೧-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ