ಫಲಶ್ರುತಿ

ಫಲಶ್ರುತಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಬಿ.ಜಿ.ಎಲ್. ಸ್ವಾಮಿ
ಪ್ರಕಾಶಕರು
ವಸಂತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೧೦/-

ವಿಶ್ವವಿಖ್ಯಾತ ಸಸ್ಯತಜ್ನರಾದ ದಿವಂಗತ ಡಾ. ಬಿ.ಜಿ.ಎಲ್. ಸ್ವಾಮಿಯವರು ಸಸ್ಯಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದುವುದೇ ಒಂದು ಖುಷಿ. ಯಾಕೆಂದರೆ, ಆ ಬರಹಗಳು ಸಸ್ಯಗಳ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ ಕತೆಗಳನ್ನು ಓದುವಾಗಿನ ಆನಂದವನ್ನು ನೀಡುತ್ತವೆ.

ಹಲವು ಮುದ್ರಣಗಳನ್ನು ಕಂಡಿರುವ ಅವರ ಸುಪ್ರಸಿದ್ಧ ಪುಸ್ತಕ "ಹಸುರು ಹೊನ್ನು”. ಅದರಂತೆಯೇ ಸರಾಗವಾಗಿ ಓದಿಸಿಕೊಂಡು ಹೋಗುವ ಸಸ್ಯಗಳ ಕುರಿತಾದ ಇನ್ನೊಂದು ಪುಸ್ತಕ ಇದು. “ಅನ್ಯದೇಶಗಳಿಂದ ಬಂದು ನಮ್ಮಲ್ಲಿ ನೆಲೆಸಿ, ನಮ್ಮ ದಿನ ಜೀವನದಲ್ಲಿ ಬೆರೆತಿರುವ ಗಿಡಮರಗಳು ಇನ್ನೂ ಅನೇಕ ಇವೆ. ಅವುಗಳನ್ನು ಕುರಿತ ಶಾಸ್ತ್ರ ಚರಿತವನ್ನೂ ಸಾಂಸ್ಕೃತಿಕ ಅಧ್ಯಯನವನ್ನೂ ಈಗಾಗಲೇ ಪ್ರಕಟವಾಗಿರುವ ಈ ಎರಡು ಪುಸ್ತಕಗಳಲ್ಲಿ ವಿವರವಾಗಿ ಕೊಟ್ಟಿದ್ದೇನೆ:
(೧) ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ     (೨) ಸಾಕ್ಷಾತ್ಕಾರದ ದಾರಿಯಲ್ಲಿ (೧೯೮೦)”
ಎಂದು ಅವರು ಈ ಪುಸ್ತಕದ “ಅರಿಕೆ"ಯಲ್ಲಿ ತಿಳಿಸಿದ್ದಾರೆ.

ಇದರಲ್ಲಿ ಹೂದೋಟ, ಫಲಾಹಾರ ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಲ್ಲಿ ೭೫ ಸಸ್ಯಗಳ ಬಗ್ಗೆ ಬರೆದಿದ್ದಾರೆ. ಸಸ್ಯಗಳನ್ನು ವಿವಿಧ ಸಂಸ್ಕೃತಿ ಹಾಗೂ ಜನಾಂಗಗಳಲ್ಲಿ ಆಹಾರವಾಗಿ, ಔಷಧಿಯಾಗಿ, ಅಲಂಕಾರಕ್ಕಾಗಿ ಮತ್ತು ಧಾರ್ಮಿಕ ವಿಧಿಗಳಿಗೆ ಬಳಸುವ ಬಗೆಗಳನ್ನು ತಿಳಿಸುತ್ತಾ, ಸಸ್ಯಗಳ ಬಗ್ಗೆ ಕುತೂಹಲ ಕೆರಳಿಸುವುದರಲ್ಲಿ ಅವರಿಗೆ ಅವರೇ ಸಾಟಿ. ಈ ಎಲ್ಲ ಮಾಹಿತಿಗಳು ಅವರ ಆಳವಾದ ಅಧ್ಯಯನ ಹಾಗೂ ಒಳನೋಟಗಳ ಪುರಾವೆ.

ಸೂರ್ಯಕಾಂತಿ ಬಗ್ಗೆ ಅವರು ತಿಳಿಸುವ, ನಮಗೆ ತಿಳಿದಿರದ, ಕೆಲವು ಸಂಗತಿಗಳು ಹೀಗಿವೆ: ಪೆರುದೇಶದ ಆದಿಜನಾಂಗ ಇದರ ಹೂವನ್ನು ಸೂರ್ಯನ ಪ್ರತಿಬಿಂಬವೆಂದು ನಂಬಿದ್ದರು. ಇಂಥ ಜನಾಂಗದ ದೇವಾಲಯಗಳಲ್ಲಿ ಹೂವಿನ ನಕಾಶೆಯನ್ನು ಕಲ್ಲಿನಲ್ಲಿ ಬಿಡಿಸಿದ್ದರು. ಇದೇ ಆಕೃತಿಯನ್ನು ಚಿನ್ನದಲ್ಲಿ ತಯಾರಿಸಿ ಪೂಜಕರೂ ಸೂರ್ಯಕನ್ಯೆಯರೂ ಮೈಮೇಲೆ ಧರಿಸಿದರು…
೧೯ನೇ ಶತಮಾನದ ಕೊನೆಗೆ ಇಂಗ್ಲೆಂಡ್ ಮತ್ತು ಯುರೋಪ್ ನಾಡುಗಳಲ್ಲಿ ಸೂರ್ಯಕಾಂತಿ ಕಲೆಗೂ ಸಾಹಿತ್ಯಕ್ಕೂ ಒಂದು ನವ್ಯ ಕಳೆ ತಂದಿತು. ಪ್ಯಾರಿಸ್ಸಿನಲ್ಲಿ ಜಗತ್ಪ್ರಸಿದ್ಧ ಕಲಾವಿದ ವಾನ್‌ಗೋ ಈ ಹೂವಿನ ಚಿತ್ರಣವನ್ನು ಶುರು ಮಾಡಿ, ೧೮೮೮ನೇ ಆಗಸ್ಟ್ ತಿಂಗಳೊಂದರಲ್ಲೇ ಆರು ಚಿತ್ರಗಳನ್ನು ಬಿಡಿಸಿದ; ಒಟ್ಟು ೧೩ ಚಿತ್ರಗಳಲ್ಲಿ ಈ ಹೂವಿನ ಬೇರೆಬೇರೆ ಭಾವಗಳನ್ನು ಮೂಡಿಸಿದ. ಸೂರ್ಯಕಾಂತಿಯ ಸುತ್ತು ಒಂದು ನವ್ಯ ಪ್ರಭೆ ಕಾಣಿಸಿಕೊಂಡು ಸಾಹಿತ್ಯ ಮತ್ತು ಕಲೆಗಳಿಗೆ ಹೊಸ ಮೌಲ್ಯಮೊಂದು ಲಭಿಸಿತು.

ಬಿ.ಜಿ.ಎಲ್. ಸ್ವಾಮಿಯವರು "ಹೂದೋಟ" ವಿಭಾಗದಲ್ಲಿ ಇತರ ಹಲವಾರು ಹೂಗಳ ಬಗ್ಗೆ ಇಂತಹ ಕುತೂಹಲದಾಯಕ ಮತ್ತು ಉಪಯುಕ್ತ ಮಾಹಿತಿ ನೀಡಿದ್ದಾರೆ. ಅವು: ಸುಗಂಧರಾಜ, ಸಂಜೆಮಲ್ಲಿಗೆ, ದವನ, ಚೆಂಡುಮಲ್ಲಿಗೆ, ಗೋರಂಟಿ, ಗುಲಾಬಿ, ಕಣಗಿಲೆ, ದೇವಕಣಗಿಲೆ, ಬೋಗನ್ ವಿಲ್ಲಿಯ, ಕ್ಯಾನ, ಗುಲ್‌ಮೊಹರ್, ಸೀಮೆ ಬಾಳೆ, ಡೇಲಿಯ, ರಂಗಮಾಲೆ, ನಾಗಲಿಂಗ ಮತ್ತು ಲಾಂಟಾನಾ.

ಹಾಗೆಯೇ “ಫಲಾಹಾರ" ವಿಭಾಗದಲ್ಲಿ ದಾಳಿಂಬೆ, ಸೇಬು, ಚಕ್ಕೋತ, ಅಂಜೂರ, ಮಂಗೋಸ್ತೀನ್, ಮರಸೇಬು, ಕಲ್ಲಂಗಡಿ, ಖರ್ಜೂರ, ದ್ರಾಕ್ಷಿ ಮತ್ತು ಕಿರುನೆಲ್ಲಿ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

“ಶಾಖಾಹಾರ" ವಿಭಾಗದಲ್ಲಿ ತೆಂಗು, ಬೆಂಡೆಕಾಯಿ, ಬಟಾಣಿ, ಈರುಳ್ಳಿ, ಬೆಳ್ಳುಳ್ಳಿ, ಸೀ ಕುಂಬಳ, ಬೂದುಕುಂಬಳ, ಕೆಂಪು ಮೂಲಂಗಿ, ಮೂಲಂಗಿ ಮತ್ತು ಗೋರಿಕಾಯಿ ಬಗೆಗಿನ ಮಾಹಿತಿ ತುಂಬಿಕೊಂಡಿದೆ.

“ಐತರೇಯ" ವಿಭಾಗದಲ್ಲಿ ಯೂಕಲಿಪ್ಟಸ್ ಸಸ್ಯದ ಬಗ್ಗೆ ಬರೆಯುತ್ತಾ ಬಿ.ಜಿ.ಎಲ್. ಸ್ವಾಮಿಯವರು ತಿಳಿಸುವ ಮಾಹಿತಿ: "ಕೆಲವು ವರ್ಷಗಳ ಹಿಂದೆ "ಮನೆಗೊಂದು ಯೂಕಲಿಪ್ಟಸ್ ನೆಡಿ” ಎಂದು ವನಮಹೋತ್ಸವ ಜಾಹೀರಾತು ಸರ್ಕಾರದಿಂದ ಹೊರಟಿತು. ಕೆಲವು ಗೃಹಸ್ಥರು ೧೫-೨೦ ಅಡಿ ಚದುರದ ಮನೆತೋಟಗಳಲ್ಲಿ ನೆಟ್ಟರು. ಅತಿ ವೇಗವಾಗಿ ಬೆಳೆದು ನಾಲ್ಕೈದು ವರ್ಷಗಳಲ್ಲಿ ಮನೆ ಛಾವಣಿಯ ಎರಡರಷ್ಟು ಎತ್ತರ ಬೆಳೆಯಿತು. ಆ ೧೫-೨೦ ಚದುರದಲ್ಲಿ ಬೇರಾವ ಗಿಡವನ್ನೂ ಬೆಳೆಸಲಾಗಲಿಲ್ಲ, ಎಂದರೆ ಈ ಯೂಕಲಿಪ್ಟಸ್ ಬೆಳೆಯಗೊಡಲಿಲ್ಲ! ನೆಲದ ತೇವವನ್ನೂ ಸಾರವನ್ನೂ ಇದೊಂದೇ ಹೀರಿಬಿಟ್ಟಿತು. ಗೃಹಸ್ಥ ಮರವನ್ನು ಕಡಿದು ಸೌದೆಯಾಗಿ ಉರಿಸಿದ. ಮೊದಲಿನಂತೆಯೇ ಹುಲುಸಾದ ತರಕಾರಿ ಗಿಡಗಳನ್ನು ಬೆಳೆಸಿದ.”

"ಕತ್ತಾಳೆ" ಗಿಡವನ್ನು ಅವರು ಪರಿಚಯಿಸುವ ಪರಿ: “ಈ ಗಿಡದ ಹೆಸರಿಗೆ ರೈಲು ಎಂಬ ವಿಶೇಷಣವನ್ನು ಸೇರಿಸುವ ರೂಢಿಯೂ ಉಂಟು. ದಕ್ಷಿಣ ಭಾರತದಲ್ಲಿ ರೈಲುದಾರಿಗಳು ಉದಯವಾಗುತ್ತಿದ್ದ ಕಾಲ ಅದು. ಹಳ್ಳಿಗಳನ್ನು ಹಾದು, ಹೊಲಗದ್ದೆಗಳೊಳಗೆ ನುಗ್ಗಿ, ಜನಸಂಚಾರವೂ ಪ್ರಾಣಿಗಳ ಓಡಾಟವೂ ನಿಬಿಡವಾಗಿದ್ದ ಪ್ರದೇಶಗಳ ನಡುವೆ ಹರಿದು ದಾರಿಯನ್ನು ನಿರ್ಮಿಸಬೇಕಾಗಿ ಬಂತು. ರೈಲು ಮಾರ್ಗದ ರಕ್ಷಣೆಗಾಗಿ ಈ ಕತ್ತಾಳೆಯನ್ನು ಇಕ್ಕೆಲಗಳಲ್ಲೂ ನೆಡಲಾಯಿತು. ಹೀಗಾಗಿ ಈ ಗಿಡಕ್ಕೆ ರೈಲು ಕತ್ತಾಳೆ ಎಂಬ ಪದ ರೂಢಿಗೆ ಬಂತು.”

ಬಿ.ಜಿ.ಎಲ್. ಸ್ವಾಮಿಯವರ ತಿಳಿಹಾಸ್ಯ ಈ ಪುಸ್ತಕದ ಬರಹಗಳಿಗೆ ಮೆರುಗು ನೀಡಿದೆ. ಉದಾಹರಣೆಗೆ ಬೇಯೋಬಾಬ್ (ಆನೆ ಹುಳಿ, ಬ್ರಹ್ಮಾಂಬಿಕಾ) ಸಸ್ಯದ ಬಗೆಗಿನ ಬರಹದ ಪೀಠಿಕೆ ಗಮನಿಸಿ: "ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಆಫ್ರಿಕ ಕತ್ತಲೆಯ ಖಂಡವೆಂದೂ ಅಲ್ಲಿ ಬೇಯೋಬಾಬ್ ಎಂಬ ಭೂತಾಕಾರದ ಮರ ಬೆಳೆಯುವುದೆಂದೂ ಭೂಗೋಳ ಪಾಠದಲ್ಲಿ “ಉರು" ಹಾಕಿ ಪರೀಕ್ಷೆಯಲ್ಲಿ ಗೆದ್ದೆ. ಬೆಂಗಳೂರಿನಲ್ಲೇ ನನ್ನ ವಿದ್ಯಾಭ್ಯಾಸ ನಡೆಯಿತಾದರೂ, ಅಲ್ಲೇ ಈ ಮರಗಳು ಹತ್ತಾರು ಬೆಳೆಯುತ್ತಿದ್ದುವಾದರೂ (ಈಗಲೂ ಇವೆ) ನನ್ನ ಉಪಾಧ್ಯಾಯರು ಆ ಸಂಗತಿಯನ್ನು ತಿಳಿಸಲೂ ಇಲ್ಲ, ಮರವನ್ನು ತೋರಿಸಲೂ ಇಲ್ಲ. ಆತನೂ ನನ್ನಂತೆಯೇ “ಉರು" ಹೊಡೆದು ಪ್ಯಾಸು ಮಾಡಿದ್ದಿರಬೇಕು!”

ಸಸ್ಯಗಳ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡಿರುವ ಬಿ.ಜಿ.ಎಲ್. ಸ್ವಾಮಿಯವರು “ಅರಿಕೆ"ಯಲ್ಲಿ ವಿನಯದಿಂದ ಹೀಗೆಂದು ಬರೆಯುತ್ತಾರೆ: “ಈ ಬರವಣಿಗೆಗೆ ನಾನು ಉಪಯೋಗಿಸಿಕೊಂಡಿರುವ ಶಾಸ್ತ್ರೀಯ ಆಕರಗಳು ನೂರಾರುಗಟ್ಟಲೆ ಇವೆ, ನಾನಾ ಭಾಷೆಗಳಲ್ಲಿವೆ, ನಾನಾ ದೇಶಗಳಿಂದ ಒದಗಿ ಬಂದಿವೆ. ಇವುಗಳಲ್ಲಿ ಎಷ್ಟೋ ಆಕರಗಳು ಭಾರತದ ಗ್ರಂಥಾಲಯಗಳಲ್ಲಿ ದೊರಕವು …. ಯಾವ ಹೇಳಿಕೆಗಾದರೂ ಆಕರವನ್ನು ತಿಳಿಯಲು ಬಯಸಿದರೆ ಅವನ್ನು ಒದಗಿಸಲು ಸಿದ್ಧನಾಗಿದ್ದೇನೆ.”

ಬಿ.ಜಿ.ಎಲ್. ಸ್ವಾಮಿ ಅವರೇ ಬರೆದಿರುವ ಅನೇಕ ಸಸ್ಯಗಳ ಚಿತ್ರಗಳು ಈ ಪುಸ್ತಕದ ವಿಶೇಷ. ಪುಸ್ತಕದ ಆರಂಭದಲ್ಲಿದೆ ಅವರು ಬರೆದಿರುವ “ಪೂರ್ವರಂಗ” ಎಂಬ ೧೦ ಪುಟಗಳ ವಿದ್ವತ್‌ಪೂರ್ಣ ಪ್ರಸ್ತಾವನೆ. ನಾಲ್ಕು “ಹೆಬ್ಬಾಗಿಲುಗಳ" ಮೂಲಕ, ವಿದೇಶಗಳ ಹಲವು ಸಸ್ಯಗಳು ನಮ್ಮ ದೇಶವನ್ನು ಹೇಗೆ ಪ್ರವೇಶಿಸಿದವು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ. ೧೯೯೧ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕದ ಪ್ರತಿಗಳು ಲಭ್ಯವಿರಲಿಲ್ಲ. ೨೫ ವರುಷಗಳ ನಂತರ ೨೦೧೭ರಲ್ಲಿ ಪ್ರಕಟವಾದ ಈ ಮುದ್ರಣ ಆಸಕ್ತರಿಗೆ ಬಿ.ಜಿ.ಎಲ್. ಸ್ವಾಮಿಯವರ ಅಪರೂಪದ ಸಸ್ಯಬರಹಗಳನ್ನು ಲಭ್ಯವಾಗಿಸಿದೆ.