ಫಾತಿಮಾ: ಮರೆತು ಹೋದ ಖಗೋಳಶಾಸ್ತ್ರಜ್ಞೆ !

ಫಾತಿಮಾ: ಮರೆತು ಹೋದ ಖಗೋಳಶಾಸ್ತ್ರಜ್ಞೆ !

'ಫಾತಿಮಾ' ಎಂಬ ಹೆಸರು ನಮಗೆ ಕೇಳಸಿಗುತ್ತಿದ್ದಂತೆ ನಾವು ಪ್ರವಾದಿ(ಸ) ಅವರ ಪವಿತ್ರ ಸುಪುತ್ರಿಯವರನ್ನು ನೆನೆಯುದರಲ್ಲಿ ಸಂದೇಹವಿಲ್ಲ. ಆದರೆ, ಇವರು 10 - 11ನೇ ಶತಮಾನದ ಸುತ್ತ ಸ್ಪೇನ್ ದೇಶದಲ್ಲಿ ವಾಸಿಸುತ್ತಿದ್ದ ಪ್ರಖ್ಯಾತ ಖಗೋಳಶಾಸ್ತ್ರಜ್ಞ ಮಸ್ಲಾಮಾ ಅಲ್-ಮಜ್ರಿತಿ ಅವರ ಏಕೈಕ ಸುಪುತ್ರಿ 'ಫಾತಿಮಾ'- ತಂದೆಯ ಸಂಶೋಧನೆಯನ್ನು ಮುಂದುವರಿಸಿ ಖಗೋಳಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿ ಕಣ್ಮರೆಯಾದ ಸುಪ್ರಸಿದ್ಧ ಖಗೋಳಶಾಸ್ತ್ರಜ್ಞೆ ಮತ್ತು ಗಣಿತಜ್ಞೆ! ಅವರು ತಂದೆಯೊಂದಿಗೆ, ಮುಹಮ್ಮದ್ ಇಬ್ನ್ ಮೂಸಾ ಅಲ್-ಖ್ವಾರಿಜ್ಮಿ ಅವರ ಖಗೋಳ ಕೋಷ್ಟಕಗಳನ್ನು (Astronomical Table) ಒಳಗೊಂಡಂತೆ ಹಲವಾರು ಖಗೋಳ ಮತ್ತು ಗಣಿತಶಾಸ್ತ್ರದ ಅರಿವುಕಲೆತ ಬೃಹತ್ ಗ್ರಂಥಗಳ ರಚನೆಯಲ್ಲಿ ನಿಸ್ವಾರ್ಥವಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದು ಇತಿಹಾಸದ ಪುಟಗಳಲ್ಲಿ ಕೆಡದಂತೆ ಸಂರಕ್ಷಿಸಲಾಗಿದೆ!

"Enciclopedia Universal Ilustrada Europeo-Americana" 1924ರ ಆವೃತ್ತಿಯು ಆಕೆಯ ಕುರಿತು ಸಂಕ್ಷೀಪ್ತವಾಗಿ ಪರಿಚಯಿಸಿದ್ದಾರೆ. 'ಫಾತಿಮಾ' ಅವರು ಬದುಕಿನ ನಡುವಿನ ದಿವಿಸಗಳಲ್ಲಿ ಸ್ಪೇನಿನ 'ಮ್ಯಾಡ್ರಿಡ್' ಶಹರದಲ್ಲಿ ನೆಲೆಸಿರುವುದರಿಂದ Encyclopaedia Britannica ಅವರನ್ನು 'ಫಾತಿಮಾ ಡಿ ಮ್ಯಾಡ್ರಿಡ್' ಅರ್ಥಾತ್ 'Fatima of Madrid' ಎಂದು ಗುರುತಿಸಿಕೊಂಡಿದೆ.

"ಫಾತಿಮಾದಿಂದ ತಿದ್ದುಪಡಿಗಳು" ಎಂದು ಕರೆಯಲ್ಪಡುವ ಅವರ ಅತ್ಯಂತ ಪ್ರಸಿದ್ಧವಾದ ಮೇರುಕೃತಿಯು ಖಗೋಳ ಮತ್ತು ಗಣಿತಶಾಸ್ತ್ರದ ಸರಣಿಯಲ್ಲಿ ಪ್ರಕಟಗೊಂಡ ಕೃತಿಯಾಗಿದೆ. ಅವಳು ತನ್ನ ತಂದೆಯೊಂದಿಗೆ "A Treatise on the Astrolabe" ಎನ್ನುವ ಬೃಹತ್ ಕೃತಿಯನ್ನು ರಚಿಸಿದ್ದಾರೆ; ಆ ಕೃತಿ 'ಆಸ್ಟ್ರೋಲೇಬ್‌'ಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಇಂದಿಗೂ, ಆ ಮೇರುಕೃತಿಯ ಹಸ್ತಪ್ರತಿಯನ್ನು ಎಲ್ ಎಸ್ಕೋರಿಯಲ್ (El Escorial) ಮಠದ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ.

ಅಲ್-ಖ್ವಾರಿಜ್ಮಿಯ ಖಗೋಳ ಕೋಷ್ಟಕಗಳನ್ನು ಸಂಪಾದಿಸಲು ಮತ್ತು ಹೊಂದಿಕೊಳ್ಳಲು ಫಾತಿಮಾ ತನ್ನ ತಂದೆಗೆ ನೆರವು ಒದಗಿಸಿದ್ದಳು; ಇಸ್ಲಾಮಿಕ್ (Lunar Calendar)ನೊಂದಿಗೆ ಅವನ ಮಾದರಿಗಳಲ್ಲಿ ಬಳಸಿದ ಪರ್ಷಿಯನ್ ಸೌರ ಕ್ಯಾಲೆಂಡರ್ (Solar Calendar) ಅನ್ನು ಬದಲಾಯಿಸಿ ಪ್ರತಿಸ್ಥಾಪಿಸಿದಳು. ಕಾರ್ಡೋಬಾ(Córdoba)ದ ಭೌಗೋಳಿಕ ಸ್ಥಳವನ್ನು ಮತ್ತು ಅದರ ಮೂಲಕ ಹಾದುಹೋಗುವ ಮೆರಿಡಿಯನ್(Meridian)ಅನ್ನು ಲೆಕ್ಕಹಾಕಲು ಅವಳು ಕೋಷ್ಟಕಗಳನ್ನು ಸರಿಪಡಿಸಿದ್ದಳು. ತನ್ನ ತಂದೆಯ ನೆರವಿನೊಂದಿಗೆ ಅವಳು ಪರ್ಷಿಯನ್ ಭಾಷೆಯ ಸಂಖ್ಯಾಶಾಸ್ತ್ರಗಳನ್ನು ಅರಬ್ ವರ್ಷಗಳಿಗೆ ಅನುವಾದಿಸಿ; ಅವಳು ಹಿಜ್ರಾ ದಿನದಂದು ಗ್ರಹಗಳ ಸ್ಥಾನಮಾನವನ್ನು ನಿರ್ಧಾರ ಮಾಡಿದಳು. ಫಾತಿಮಾ ಗ್ರಹಣಗಳ ಲೆಕ್ಕಾಚಾರದಲ್ಲಿ ತಪ್ಪುಗಳನ್ನು ಒಳಗೊಂಡಿದ್ದ ಪ್ಟೋಲೆಮಿಯ ಅಲ್ಮಾಜೆಸ್ಟ್ (Ptolemy's Almagest)ಅನ್ನು ಸರಿಪಡಿಸಲು ತನ್ನ ತಂದೆಗೆ ನೆರವು ಒದಗಿಸಿದಳು.

ಇವುಗಳೊಂದಿಗೆ, ಫಾತಿಮಾ ಇಸ್ಲಾಮಿಕ್ ಖಗೋಳಶಾಸ್ತ್ರದ ಒಂದು ವಿಧವಾದ ಜಿಝೆ 'zījes'- ಇದೊಂದು ಇಸ್ಲಾಮಿಕ್ ಖಗೋಳಶಾಸ್ತ್ರದ ಪುಸ್ತಕವಾಗಿದ್ದು ಅದು ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಗ್ರಹಗಳ ಸ್ಥಾನಮಾನಗಳ ಖಗೋಳ ಲೆಕ್ಕಾಚಾರಗಳಿಗೆ ಬಳಸಲಾಗುವ ನಿಯತಾಂಕಗಳನ್ನು ಪಟ್ಟಿ ಮಾಡುತ್ತದೆ. ಇದು ಕ್ಯಾಲೆಂಡರ್‌ಗಳು, ಗ್ರಹಗಳ ಎಫೆಮೆರೈಡ್‌(ephemerides)ಗಳು, ಸೂರ್ಯ ಮತ್ತು ಚಂದ್ರ, ಮತ್ತು ಸೌರ ಮತ್ತು ಚಂದ್ರ ಗ್ರಹಣಗಳು ಸೇರಿದಂತೆ ವಿಷಯಗಳನ್ನು ಒಳಗೊಂಡಿದೆ.

ಖಗೋಳಶಾಸ್ತ್ರದ ಕುರಿತಾದ ಸಂಶೋಧನೆ ಮತ್ತು ಕೊಡುಗೆಯ ಹೊರತು, ಫಾತಿಮಾ ಅವರು ಅರೇಬಿಕ್, ಸ್ಪ್ಯಾನಿಷ್, ಹೀಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಏಕ ಪ್ರಕಾರ ಹಿಡಿತವಿದ್ದು ಪಾಂಡಿತ್ಯ ಹೊಂದಿದ್ದಳು ಎಂದೂ ಗ್ರಂಥಗಳಲ್ಲಿ ವಿಶದಪಡಿಸಲಾಗಿದೆ!

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರಗಳು: ಇಂಟರ್ನೆಟ್ ತಾಣದಿಂದ