ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ

ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ

ಬರಹ

ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗಂಟೆಯಲ್ಲಿ ಹಸಿವು ಮಾಡಿಕೊಳ್ಳುತ್ತೇವೆ. ಮತ್ತೆ ತಿನ್ನುತ್ತೇವೆ. ಹತ್ತು ದಿನವಾದರೂ ಬಂದೀತೆಂದು ಭಾವಿಸಿಕೊಂಡಿದ್ದ ಎಂಟಿಆರ್, ಮೂರು ದಿನಗಳಲ್ಲಿ 'ಎಂಪ್ಟಿ'ಯಾಗಿತ್ತು. ಅದರ ರುಚಿ ಹಾಗಿತ್ತೆಂದೇನಲ್ಲ. ನಮ್ಮ ಭಾರತೀಯ ಹೊಟ್ಟೆಯ ಹಸಿವು ಫಾರಿನ್ ಲೊಕೇಶನ್ನಿನಲ್ಲಿ ಹಾಗಿತ್ತು.

ಒಂದೇ ಅಡುಗೆ ಎರಡು ದೇಶಗಳಲ್ಲಿ ಎರಡು ರುಚಿ ಪಡೆವ 'ರಸ'ಸ್ವಾದ ಆಶ್ಚರ್ಯಕರ! ಭಾರತದಲ್ಲಿ ಉಪ್ಪಿಟ್ಟಿನಂತೆ ಅನ್‌ವಾಂಟೆಡ್ ಆದ ಎಂಟಿಆರ್ ಅದೇ ಫಿನ್ಲೆಂಡಿನಲ್ಲಿ ಮೃಷ್ಟಾನ್ನ. ಕಳೆದ ವಾಕ್ಯದ ಕೊನೆಗೆ ಬರುವ ಫುಲ್‌ಸ್ಟಾಪ್‌ನ ಮುಂಚಿನ ಪದದ ಅರ್ಥ ನನಗೆ ಗೊತ್ತಿಲ್ಲದಿದ್ದರೂ ಎಂಟಿಆರ್ ಫಿನ್ಲೆಂಡಿನಲ್ಲಿ ಅದಾಗಿತ್ತು. ನಾನು ಮತ್ತು ನನ್ನ ಸ್ಡುಡಿಯೋ

ತಲಾ ನಮ್ಮ ತರ್ಟಿ-ಫಾರ್ಟಿ ಸೈಟಿನ ಅಳತೆಯ ಎರಡು ಸ್ಟುಡಿಯೊ. ಮಧ್ಯದಲ್ಲಿ ಕಾಮನ್ ಅಡುಗೆಮನೆ. ಹೆಲ್ಸಿಂಕಿಯ ವಿಯಟ್ನಾಮಿ ಅಂಗಡಿಯಲ್ಲಿ ಭಾರತೀಯ ದಿನಸಿ ಹಾಗೂ ಆಫ್ರಿಕನ್ ಅಂಗಡಿಯಲ್ಲಿ ಮಸಾಲೆಗಳನ್ನು ಕೊಂಡಿದ್ದೆ. ನಿಜವಾದ ಮಲ್ಟಿ ಕಲ್ಚರಲ್ ಎಂದರೆ ಇದೇ ಅಲ್ಲವೆ. ಅಡುಗೆ ಮಾಡಲು ಪ್ರಾರಂಭಿಸಿದೆ. ಆರಾರು ವರ್ಷಕಾಲ ನಮ್ಮ ಡೆಡ್‌ಬಾಡಿ ಡೆಡ್ಲಿಯಾಗಿದ್ದರೂ "ಕ್ಯಾರೆತುಮಾರೆ" ಎನ್ನದವರು ಫಿನ್ನಿಶ್ ಮಂದಿ ಎಂದು ಈಗಾಗಲೇ ನಿಮಗೆ ತಿಳಿಸಿರುವೆ. ಹಾಗಂತ ನನಗೆ ನಾನೇ ಹೇಳಿಕೊಂಡೆ ಕೂಡ-ಅಡುಗೆ ಮಾಡುವ ಮೊದಲು! ಏಕೆಂದರೆ ಅಡುಗೆ ಮನೆಯಲ್ಲಿ ಮತ್ತು/ಅಥವ ಸ್ಟುಡಿಯೊದಲ್ಲಿ ಸಿಗರೇಟು ಸೇದುವಂತಿಲ್ಲ. ಅದರ ಹೊಗೆ (ಯಾವ ಹೊಗೆಯಾದರೂ ಸರಿ) ಸೀದ ಹೊಗೆ-ಸೆನ್ಸರ್‌ಅನ್ನು ತಲುಪಿ ಅದು ಸೀದ ಅಗ್ನಿಶಾಮಕ ದಳಕ್ಕೆ ಬಿಸಿ ಮುಟ್ಟಿಸಿ ಅವರು ಸೀದ ನಮ್ಮ ಸ್ಟುಡಿಯೋಕ್ಕೆ ಬರುವುದು ವಾಡಿಕೆಯಾಗಿತ್ತು. ಏಕೆಂದರೆ ಪರದೇಶಿ ಕಲಾವಿದರು ರೂಲ್ಸ್ ಮುರಿಯುವಲ್ಲಿ ನಿಷ್ಣಾತರು. ದಂಡ ಭಾರತೀಯ ಕರೆನ್ಸಿಯಲ್ಲಿ ಕೇವಲ ಎಂಟು ಸಾವಿರ ರೂಪಾಯಿ. ಆದ್ದರಿಂದ ಹುಷಾರಾಗಿ ಅಡುಗೆ ಮಾಡತೊಡಗಿದೆ.

ಎಣ್ಣೆ ಹಾಕಿ, ಉರಿ ಜೋರು ಮಾಡಿ, ಒಂದಿಡೀ ಒಂದು ಹಿಡಿ ಸಾಸಿವೆಯನ್ನು ಬಾಣಲೆಯ ಮೇಲೆ ಎಸೆದೆ ಬ್ರೂಸ್ಲಿಯಂತೆ, ಮೂರಡಿ ದೂರದಿಂದ. ಸ್ವಲ್ಪ ಜೀರಿಗೆ ಹಾಕಿ, ಈರುಳ್ಳಿ ಚೂರು ಚೂರು ಮಾಡುತ್ತಿದ್ದೆ, ಕಣ್ಮುಚ್ಚಿಕೊಂಡು. ಬಾಣಲೆಯ ಉರಿ ಹಾಗೂ ಈರುಳ್ಳಿಯನ್ನು ಕಟ್ ಮಾಡಲು ಇರುವ ಕಣ್ತೆರೆಸುವ ಉಪಾಯವೆಂದರೆ ಕಣ್ಣು ಮುಚ್ಚಿಕೊಂಡುಬಿಡುವುದು. ಹೊರಗೆ ಯಾರದೋ ಹೆಜ್ಜೆಯ ಸಪ್ಪಳ. ಮನುಷ್ಯನೊಬ್ಬನ ಹೆಜ್ಜೆಯ ಸದ್ದು ಆ ಮುನ್ನೂರೂ ಚಿಲ್ಲರೆ ಸ್ಟುಡಿಯೋಗಳಿರುವ ಕಟ್ಟಡದಲ್ಲಿ ಒಂದು 'ಸುದ್ದಿ' ಎಂದರೆ ನಂಬುತ್ತೀರ? ಅಂತಹುದರಲ್ಲಿ ಇಬ್ಬರು ಮನುಷ್ಯರ ಹೆಜ್ಜೆ ಕೇಳಿ ಇದು 'ಬ್ರೇಕಿಂಗ್ ನ್ಯೂಸ್' ಎಂದು ತಮಾಷೆಯಾಗಿ ನನಗೆ ನಾನೇ ಹೇಳಿಕೊಂಡೆ.

ನನ್ನ ಸ್ಟುಡಿಯೋದ ಹೊರಗಿನ ದೃಶ್ಯಈ ಸುದ್ದಿಯನ್ನು ಇನ್ನೊಬ್ಬರಿಗೆ ಹೇಳಲು ಸಾಧ್ಯವಾದರೆ, ಹೀಗೆ ಹೇಳುವ ಸುದ್ದಿಯೇ ಒಂದು ಎಮರ್ಜೆನ್ಸಿ ನ್ಯೂಸ್ ಆಗಿಬಿಡಬಹುದು-ಎಂದೂ ನನಗೆ ನಾನೇ ಹೇಳಿಕೊಂಡೆ. ಯಾರೋ ಕ್ಷೀಣವಾಗಿ ಬಾಗಿಲು ತಟ್ಟಿದ ಸದ್ದು. ಹೆಲ್ಸಿಂಕಿಯ ಮುಖ್ಯ ರಸ್ತೆಯಲ್ಲಿ (ನಮ್ಮ ಎಂ.ಜಿ.ರೋಡಿನಂತಹದ್ದು) ಜೋರಾಗಿ ಹಾರನ್ ಬಾರಿಸುವ ಡ್ರೈವರ್ ಕಂಡರೆ ಆತನನ್ನು ರಷ್ಯನ್ ಅಥವ ಅನಾಗರೀಕ ಎಂದು ಕರೆಯುತ್ತಾರೆ ಜನ. ಅಂತಹ ಸೂಕ್ಷ್ಮವಂತರು ಫಿನ್ನಿಶ್ ಜನ. ಕಿವುಡರು ಹೇಗಪ್ಪಾ ಬದುಕುವುದು ಇಂತಹ ನಾಡಿನಲ್ಲಿ! ಹೋಗಿ ಬಾಗಿಲು ತೆಗೆದೆ.

ಹುಡುಗ ಆಗಲೇ ಮೊಬೈಲ್ ಚಾಲು ಮಾಡುತ್ತಿದ್ದ, ಬಾಯನ್ನು ಕರ್ಚೀಫಿನಲ್ಲಿ ಮುಚ್ಚಿಕೊಂಡೇ. ಹುಡುಗಿಯೂ ಬಾಯಿ ಮುಚ್ಚಿಕೊಂಡಿದ್ದಳು. ಕಣ್ಣೀರ ಧಾರೆ ಬೇರೆ. "ಮಿತಾಸ್ ಕೋಲೋ?" ಎಂದಳು. "ವಾಟ್" ಎಂದೆ. "ಬೆಂಕಿ ಹತ್ತಿದೆ ನಿನ್ನ ಕೋಣೆಗೆ" ಎಂದಳು. "ಒಹೋ, ಇಲ್ಲ, ಇಲ್ಲ. ಅಡುಗೆ ಮಾಡುತ್ತಿದ್ದೇನೆ. ಭಾರತೀಯ ಅಡುಗೆ" ಎಂದೆ. "ಎನೋ ಸೀದು ಹೋಗುತ್ತಿದೆ?!" ಎಂದಳು.

"ಸೀದು ಹೋಗುವುದನ್ನು ನಮ್ಮಲ್ಲಿ 'ಒಗ್ಗರಣೆ' ಎನ್ನುತ್ತೇವೆ. ಅಡುಗೆ ಪ್ರಾರಂಭವಾಗುವ ಮುಂಚಿನಿಂದಲೇ, ಮೂಗಿನಿಂದ ನಾವು ಅಡುಗೆಯನ್ನು ಆಸ್ವಾದಿಸಲು ತೊಡಗುವುದು ಭಾರತೀಯರ ವಿಧಾನ" ಎಂದೆ. ಆಕೆಗೆ ತಿಳಿಯಲಿಲ್ಲ, ಅಥವ ತಿಳಿದಿದ್ದರೂ ಅದು ನನ್ನ ಅಡುಗೆ ತಂತ್ರಗಾರಿಕೆಯ ಸ್ವಯಂಲೇವಡಿ ಎಂದು ಆಕೆಗೆ ತಿಳಿಯಲಿಲ್ಲ.

ಜೋಕ್ ಹೇಳಿದರೂ ಕಂಪ್ಯೂಟರ್ ಸಿಸ್ಟಂ ಆಫ್ ಮಾಡಿ ನಂತರ ನಗುವ ಜನರಲ್ಲವೆ ಫಿನ್ನಿಶ್. "ಅಂದರೆ ನೀನು ಸೇಫ್ ತಾನೇ?" ಎಂದಳು. ಖಂಡಿತ. ಆದರೆ ನನ್ನ ಅಡುಗೆಯನ್ನು ನಾನು ತಿಂದ ನಂತರ ಅದೇ ಮಾತನ್ನು ನನ್ನ ಬಗ್ಗೆಯೇ ನಾನು ಹೇಳಲಾರೆ. ಟೇಸ್ಟ್ ಮಾಡುವುದಾದರೆ ಭಾರತೀಯ ಊಟ ಬಡಿಸುವೆ" ಎಂದೆ ಪಕ್ಕದ ಸ್ಟುಡಿಯೋದ ಆ ಹುಡುಗ ಹುಡುಗಿಗೆ.

ಉತ್ತರ ಕರ್ನಾಟಕದ ಹಸಿಮೆಣಸಿನಕಾಯಿ ಒಣರೊಟ್ಟಿ ತಿಂದ ಉತ್ತರ ಕರ್ನಾಟಕದವರಲ್ಲದವರ ಎಕ್ಸ್‌ಪ್ರೆಶನ್ ಅವರ ಮುಖಗಳಲ್ಲಿತ್ತು.

ಅಡುಗೆ ಮಾಡಿದೆ. ನಮ್ಮದೇ ಸ್ಟುಡಿಯೋದ ಎರಡನೇ ಕೋಣೆಯಲ್ಲಿದ್ದ ಕೆನಡಾದ ಲಿಸ ಕ್ಲಾಪ್‌ಸ್ಟಾಕಳಿಗೆ ರುಚಿ ನೋಡಲು ನೀಡಿದೆ. ಕೊಟ್ಟದ್ದನ್ನು ನುಂಗಿ ನೀರು ಕುಡಿದಳು. ಭಾರತಕ್ಕೆ ಸಾಕಷ್ಟು ಸಾರಿ ಬಂದು ಹೋಗಿದ್ದಳಾಕೆ. "ವೆರಿ ಗುಡ್. ನೀನು ಒಳ್ಳೆಯ ಅಡುಗೆ ಮಾಡುತ್ತೀ" ಎಂದಳು. "ನನಗೆ ಭಾರತೀಯ ಅಡುಗೆ ಮಾಡಲು ಬರದು" ಎಂದು ಸುಳ್ಳು ಹೇಳಿದ್ದೆ. ನಿಜವೇನೆಂದರೆ ನನಗೆ ಯಾವ ಅಡುಗೆಯನ್ನೂ ಮಾಡಲು ಬರದಿರುವುದು. ಪ್ರತಿದಿನ ನಾನು ತಿನ್ನುವ ಮುನ್ನ ಆಕೆಗೆ ಒಂದು ಬಟ್ಟಲಿನಲ್ಲಿ ಅಡುಗೆ ನೀಡುತ್ತಿದ್ದೆ. ಆಕೆ ಸರಾಗವಾಗಿ ಧನ್ಯವಾದ ಹೇಳಿ ತಿಂದುಬಿಡುತ್ತಿದ್ದಳು. ಬದಲಿಗೆ ಹೆಸರು ಕುಲ ಹಾಗೂ ಗೋತ್ರ ಗೊತ್ತಿಲ್ಲದ, ಭಾರತದಲ್ಲಿ ನಾನೂರರಿಂದ ಆರುನೂರು ರೂಗಳವರೆಗೆ ಬೆಲೆ ಬರಬಹುದಾದ (ಕೆಜಿಗೆ) ಹಣ್ಣುಗಳನ್ನು ಕೊಡುತ್ತಿದ್ದಳು. ನನಗೆ ತಿನ್ನಲು ಭಯ. ನನ್ನ ರೂಮಿನಲ್ಲಿ ಮೈತುಂಬ ಮುಳ್ಳುಗಳಿದ್ದ ಆ ಹಣ್ಣುಗಳು ಕೊನೆಯವರೆಗೂ ಕೊಳೆಯುತ್ತಿದ್ದವು.

ಕ್ರಮೇಣ ಒಬ್ಬನಿಗಾಗಿ ಮಾಡುತ್ತಿದ್ದ ಅಡುಗೆ ಇಬ್ಬರಿಗೆ ಮಾಡಬೇಕಾಗಿ ಬರುತ್ತಿತ್ತು . ಹೊರಗೆ ತಿನ್ನೋಣವೆಂದರೆ ಒಂದೂಟಕ್ಕೆ ಕೇವಲ ಐದಾರು ಯೂರೊ ( ಮುನ್ನೂರು-ನಾನ್ನೂರು ರೂಪಾಯಿ, ಒಂದೊತ್ತಿಗೆ).

ಹೇಗಾದರೂ ಲೀಸಳಿಗೆ ನನ್ನ ಪಾಲಿನ ಊಟ ನೀಡುವುದು ನಿಲ್ಲಿಸಬೇಕೆಂದುಕೊಂಡೆ. ನನಗೆ ನಾನೇ ಹೇಳಿಕೊಂಡದ್ದೇನೆಂದರೆ ಆಕೆ ನನ್ನ ಅಡುಗೆ ತಿಂದ ನಂತರ ಹತ್ತು ನಿಮಿಷದಲ್ಲಿ ಸ್ವತಃ ರೆಡಿಮೇಡ್ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಳು. ಒಮ್ಮೆ ಮಾತಿಗೆ, "ನಾನು ಶುದ್ಧ ಸಸ್ಯಾಹಾರಿ" ಎಂದಳು. ನನಗಷ್ಟೇ ಸಾಕಾಗಿತ್ತು. ಪ್ರತಿದಿನ ಸಸ್ಯಾಹಾರಿ ಅಡುಗೆ ಮಾಡುತ್ತಿದ್ದೆ. ಕೊನೆಗೆ ಬೇಯಿಸಿರುವ ಬೇಕಾನ್ ಮಾಂಸವನ್ನು ಸಣ್ಣದಾಗಿ ಹಚ್ಚಿ ಸಾರಿನೊಳಕ್ಕೆ ಪ್ರೋಕ್ಷಿಸುತ್ತಿದ್ದೆ. ದೊಡ್ಡ ದೊಡ್ಡ ಪೀಸ್‌ಗಳನ್ನು ಹಾಕಿದರೆ ಅವುಗಳನ್ನು ತೆಗೆದು ಬದಿಗಿರಿಸಿ, ಅದನ್ನೇ ಸಸ್ಯಾಹಾರಿ ಭಾರತೀಯ ಅಡುಗೆ ಎಂದುಕೊಂಡು ಆಕೆ ತಿನ್ನುವ ಚಾನ್ಸ್ ಇರುತ್ತಿತ್ತಲ್ಲ! ಅಲ್ಲಿಗೆ ಖರ್ಚಿನ ಗಂಡಾತರ ನಿಂತಂತಾಯಿತು. ಅಥವ ನಾನು ಹಾಗೆಂದುಕೊಂಡಿದ್ದೆ.

ಒಂದು ದಿನ ನಮ್ಮ ಸ್ಟುಡಿಯೋದ ನಿರ್ದೇಶಕರಲ್ಲಿ ಒಬ್ಬನಾದ ಪೆಕ್ಕ ಕಂಟೋನೆನ್ ಸ್ಟುಡಿಯೋಗೆ ಬಂದ. ತಿನ್ನಲು 'ಭಾರತೀಯ' ಎಂದು ನಾನೇ ಹೆಸರಿಸಿಬಿಟ್ಟಿದ್ದ ಅಡುಗೆ ನೀಡಿದೆ. ಭಾರತೀಯರಲ್ಲದವರು ಮಾತ್ರ ನನ್ನ ಅಡುಗೆಯ ರುಚಿ ನೋಡಿದ್ದರು. ಹಾಗೂ ನಾನು ಭಾರತೀಯನಾದುದರಿಂದಾಗಿ ನನ್ನ ಅಡುಗೆಯನ್ನು 'ಭಾರತೀಯ' ಎಂದು ಅನುಮಾನಾತೀತವಾಗಿ ಅನುಮೋದಿಸಿದ್ದರು.

ಸಕ್ಕರಿ ವೈಕು ಮತ್ತು ಪೆಕ್ಕ ಕಂಟೋನೆನ್"ಅನಿಲ್ ಅಡುಗೆ ತುಂಬ ಚೆನ್ನಾಗಿ ಮಾಡುತ್ತಾನೆ" ಎಂದು ಲೀಸ ತಾರೀಫು ಮಾಡಿದಳು. ಯಾವುದೇ ಲಾಭದ ಉದ್ದೇಶವಿಲ್ಲದೆ ಮಾತನ್ನೂ ಆಡದ ಕಲಾವಿದೆ ಲೀಸ. "ಇಂಗು ಮತ್ತು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ ಎಂದು ನಮ್ಮಲ್ಲಿ ಗಾಧೆಯೇ ಇದೆ" ಎಂದೆ. ಲೀಸ ನನ್ನನ್ನು ಒಂದು ಸುತ್ತು ಹಾಕಿ, ದಿಟ್ಟಿಸಿ, "ನೀನು ಮಂಗನಂತೆ ಕಾಣುತ್ತಿಲ್ಲವಲ್ಲ. ಅಡುಗೆ ಹೇಗೆ ಮಾಡಿದೆ" ಎಂದಳು.
ತಿಂಗಳಾಯಿತು. ಪೆಕ್ಕ ಕಂಟೋನೆನ್‌ನಿಂದ ಫೋನ್. "ಇನ್ನು ಹದಿನೈದು ದಿನಕ್ಕೆ ನಮ್ಮಲ್ಲಿ ಪಾರ್ಟಿ ಇದೆ. ನೀನು ಬರಲೇಬೇಕು. ಬೇರೇನಾದರೂ ಪ್ರೋಗ್ರಾಂ ಇದೆಯೇ?" ಎಂದು ಕೇಳಿದ. "ಇದು ನನಗೆ, ಭಾರತಕ್ಕೆ ಸಂದ ಮರ್ಯಾದೆ" ಎಂದುಕೊಂದು, ಜೋರಾಗಿ ಆತನಿಗೆ ಫೋನಿನಲ್ಲಿ ಕೇಳುವಂತೆ ಅಂದೂ ಬಿಟ್ಟೆ. ಸಂಪಿಗೆಹಳ್ಳಿ, ಯಶ್ವಂತ್‌ಪುರ, ಮಲ್ಲೇಶ್ವರದಿಂದ ಜಗತ್ತಿನ ತುತ್ತತುದಿಯಾದ ಉತ್ತರ ಫಿನ್ಲೆಂಡಿನವರೆಗೂ "ಎಲ್ಲಿಂದ ಎಲ್ಲಿಗೆ ಬಂದ್ಯೋ ಮಗ" ಎಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಅಲ್ಪಸ್ವಲ್ಪ ಯೋಗ ಮಾಡಿದ್ದರಿಂದ ನನ್ನ ಬೆನ್ನನ್ನು ನಾನೇ ತಲುಪಲು ಸಾಧ್ಯವಾಯಿತು.

ಮರುದಿನ ಮತ್ತೆ ಪೆಕ್ಕನ ಫೋನ್, "ಮೂವತ್ತು ಜನ ಬರುತ್ತಿದ್ದಾರೆ ಪಾರ್ಟಿಗೆ. ಬಂದೇ ಬರುತ್ತೀಯಲ್ಲವೆ?"

"ಖಂಡಿತ"

"ಅವರೆಲ್ಲಾ ಫಿನ್ಲೆಂಡಿನ ದೃಶ್ಯಕಲೆಯ ಹಣೆಯಬರಹ ನಿರ್ಧರಿಸುವವರು. ನೀನು ಲಕ್ಕಿ" ಎಂದ.

"ಥ್ಯಾಂಕ್ಸ್" ಎಂದೆ.

ನನ್ನಂತ ಉದಾಸೀನನಲ್ಲದ, ಮಹತ್ವಾಕಾಂಕ್ಷೆಯಿರುವ ನಮ್ಮ ಅಥವಾ ನನ್ನ ಬೆಂಗಳೂರಿನ ಕಲಾವಿದರಾಗಿದ್ದರೆ ಫೋನಿನಲ್ಲೇ ಕುಣಿದು ಕುಪ್ಪಳಿಸಿಬಿಡುತ್ತಿದ್ದರೇನೋ. ನನಗೂ ಒಳಗೊಳಗೇ ಖುಷಿ. ಮರುದಿನ ಪೆಕ್ಕನ ಫೋನ್, 'ಡೆಜಾವೂ'ನಂತೆ (ಇದೇ ಮುಂಚೆಯೇ ಹೀಗಿಯೇ ನಡೆದಂತೆನಿಸುತ್ತದೆ ಎಂಬ ನಾಲ್ಕು ಕನ್ನಡ ಪದಕ್ಕೆ ಸಮ ಈ ಫ್ರೆಂಚ್ ಪದ-ಡೆಜಾವು).

"ಅನಿಲ್, ಲಿಸ ಹೇಳಿದಳು. ನಾನೂ ಪರೀಕ್ಷಿಸಿಯಾಯಿತು. ಎಲ್ಲರಿಗೂ ಹೇಳಿದ್ದೂ ಆಯ್ತು. ನಮ್ಮ ಮನೆಗೆ ಬರುವ ಮೂವತ್ತು ಮಂದಿ ಫಿನ್ಲೆಂಡಿನ ಕಲೆಯ ಹಣೆಯ ಬರಹಗಾರರಿಗೆ ನಿನ್ನ ಕೈಯಿಂದ ಭಾರತೀಯ ಅಡುಗೆ ಸ್ಪೆಷಲ್!" ಎಂದು ಫೋನಿಟ್ಟ.

ಈ ಹಣೆಯಬರಹಗಾರರ ಹಣೆಯಬರಹವೇ ನನ್ನ ಕೈಯಲ್ಲಿತ್ತು. ಪಾರ್ಟಿಯ ಮರುದಿನದ, ಫಿನ್ಲೆಂಡಿನ ರಾಷ್ಟ್ರೀಯ ಪತ್ರಿಕೆಯಾದ "ಹೆಲ್ಸಿಂಕಿ ಸೊನೊಮತ್"ನ ಹೆಡ್‌ಲೈನ್ಸ್ ನೆನೆಸಿಕೊಂಡೆ, ಓದಲಾಗಲಿಲ್ಲ ಏಕೆಂದರೆ ಅದು ಫಿನ್ನಿಶ್ ಭಾಷೆಯಲ್ಲಿತ್ತು.

"ಭಾರತೀಯ ಕಲಾವಿಮರ್ಶಕನಿಂದ ಫಿನ್ಲೆಂಡಿನ ಕಲಾವಿದರ ಭೀಕರ ವಿಮರ್ಶೆ: ವಿಮರ್ಶಕನ ಭಾರತೀಯ ಅಡುಗೆ, ಮುವತ್ತು ಮಂದಿ ಕಲಾವಿದರು ಫಿನಿಶ್!"

ಈ ಪ್ರವಾಸ ಕಥನದ ಇತರ ಭಾಗಗಳು

 

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ