ಫ್ರಮ್ ಪುಲ್ವಾಮಾ
ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯವರು ಉಗ್ರರ ಪುಲ್ವಾಮಾ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ನಮ್ಮ ಧೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರ ದಾಳಿ ಹಾಗೂ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ತೋರಿದ ಕೆಚ್ಚು ಇವುಗಳ ಬಗ್ಗೆ ಬರೆದ ಒಂದು ಫುಟ್ಟ ಪುಸ್ತಕವೇ ‘ಫ್ರಮ್ ಪುಲ್ವಾಮಾ’. ಪುಸ್ತಕದ ರಕ್ಷಾಪುಟದಲ್ಲೇ ವಿಂಗ್ ಕಮಾಂಡರ್ ಅಭಿನಂದನ್ ಅವರ ಭಾವಚಿತ್ರವನ್ನು ಮುದ್ರಿಸಿ ಅದಕ್ಕೆ ಧೀರಾಭಿನಂದನ್ ಎಂದು ಗೌರವ ಸಲ್ಲಿಸಿದ್ದಾರೆ. ಆ ಸಮಯ ಕನ್ನಡದ ನ್ಯೂಸ್ ಚಾನೆಲ್ ಆಗಿರುವ ದಿಗ್ವಿಜಯ ನ್ಯೂಸ್ ನ ಸಹಕಾರದಿಂದ ಪುಲ್ವಾಮಾಗೆ ತೆರಳಿದ ರವಿ ಬೆಳಗೆರೆ ವರದಿಯನ್ನೂ ಮಾಡಿದ್ದರು. ಅದರ ಮಾಹಿತಿಯೂ ಈ ಪುಸ್ತಕದಲ್ಲಿ ಒಳಗೊಂಡಿದೆ.
ಈ ಹಿಂದೆ ಕಾರ್ಗಿಲ್ ಯುದ್ಧವಾದಾಗಲೂ ಅಲ್ಲಿಗೆ ಹೋಗಿ ವರದಿಯನ್ನು ಮಾಡಿ ಕಾರ್ಗಿಲ್ ನಲ್ಲಿ ೨೦ ದಿನಗಳು ಎಂದು ಪುಸ್ತಕ ಬರೆದಿದ್ದರು. ಅವರೇ ಮುನ್ನುಡಿಯಲ್ಲಿ ಬರೆದುಕೊಂಡಂತೆ ‘ಭಾರತದ ಸೈನ್ಯದ ಇತಿಹಾಸದಲ್ಲಿ ಪುಲ್ವಾಮಾ ಒಂದು ಘೋರ ಘಟನೆ. ಅದನ್ನು ನೇರವಾಗಿ ವರದಿ ಮಾಡಿದ ಏಕೈಕ ಕನ್ನಡಿಗ ನಾನು. ನನ್ನ ಕಣ್ಣೆದುರಿಗೇ ನಾಲ್ವರು ಯೋಧರು ಹಾಗೂ ಒಬ್ಬ ಅಧಿಕಾರಿ ಪ್ರಾಣ ತ್ಯಾಗ ಮಾಡಿದ್ದನ್ನು ಯಾತನೆಯಿಂದ ನೋಡಿದೆ. ಹಾಗೆಯೇ ಮೂವರು ಉಗ್ರವಾದಿಗಳ ಹೆಣ ಹಾಕಿ ಎಳೆದು ಅಂಗಳಕ್ಕೆ ಕೆಡವಿದ್ದನ್ನೂ ನೋಡಿದೆ. ಯುದ್ಧದ ಅನುಭವಗಳೇ ವಿಚಿತ್ರ. ಯುದ್ಧ ವಾರ್ತೆ ಸದಾ ರಮ್ಯ ಎನ್ನುತ್ತಾರೆ. ಆದರೆ ಅದನ್ನು ನೋಡಿದವರಿಗೆ ಮಾತ್ರ ಅದರ ಘೋರವೇನೆಂಬುವುದು ಅರ್ಥವಾಗುತ್ತದೆ.’
‘ಈ ಪುಸ್ತಕದಲ್ಲಿ ಕೇವಲ ಯುದ್ಧದ ಸುದ್ದಿಗಳಿಲ್ಲ. ನಿಮಗೆ ಗೊತ್ತೇ ಇಲ್ಲದ ಸೈನಿಕರ ಪ್ರಪಂಚದ ವಿಚಿತ್ರ ವಿವರಗಳಿವೆ. ಬೇರೆಲ್ಲೂ ದೊರಕದ, ನೋಡಲು ಸಿಗದ ಅಪರೂಪದ ಚಿತ್ರಗಳಿವೆ.’
ರವಿ ಬೆಳಗೆರೆಯವರು ಇಡೀ ಪುಸ್ತಕದಲ್ಲಿ ಅಪರೂಪದ ಕೆಲವು ಮಾಹಿತಿಗಳನ್ನು ನೀಡುವುದರ ಜೊತೆಗೆ ಸಾಕಷ್ಟು ಫೋಟೋಗಳನ್ನೂ ಮುದ್ರಿಸಿದ್ದಾರೆ. ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಮಾಡುತ್ತಿರುವ ಆಸಿಯಾ ಅಂದ್ರಾಬಿ ಎಂಬ ಮಹಿಳೆಯ ಬಗ್ಗೆಯೂ ಸಾಕಷ್ಟು ವಿವರಗಳಿವೆ. ಸೈಯದ್ ಆಲಿ ಶಾ ಗಿಲಾನಿ, ಜೈಷ್ ಎ ಮೊಹಮ್ಮದ್ ಮೊದಲಾದವರ ಬಗ್ಗೆ ಮಾಹಿತಿಗಳಿವೆ. ನಮ್ಮ ರಾಜ್ಯದ ವೀರ ಯೋಧ ಗುರು ಬಗ್ಗೆಯೂ ಬರೆದಿದ್ದಾರೆ. ಸುಮಾರು ನೂರು ಪುಟಗಳ ಈ ಪುಸ್ತಕವನ್ನು ರವಿ ಬೆಳಗೆರೆ ವೀರ ಯೋಧ ಅಭಿನಂದನ್ ಅವರಿಗೆ ಅರ್ಪಿಸಿದ್ದಾರೆ.