ಬಂಜೆ ಎನ್ನುವ ಮೊದಲು....
ಕವನ
ಮಡಿಲನು ತುಂಬಲು ಕುಡಿಯನು ಬಯಸಿದೆ
ಪಡೆಯದೆ ಹೋದೆನು ಬಾಳಿನೊಳು
ಬಿಡುವರೆ ನೆರೆಹೊರೆ ಕಿಡಿಯನು ಹಚ್ಚುವ
ನುಡಿಗಳು ಕೂತಿವೆ ಮನಸಿನೊಳು
ಬಂಜೆಯು ಎನುವರು ರಂಜನೆ ಅವರಿಗೆ
ಗಂಜಿಯು ಸೇರದು ಗಂಟಲೊಳು
ಅಂಜುತ ಕುಳಿತಿಹ ಪಂಜರ ಪಕ್ಷಿಗೆ
ನಂಜನು ಉಣಿಸುವ ಕೃತ್ಯಗಳು
ತಂದಿಹ ಗಿಡಗಳ ಚೆಂದದಿ ನೆಡುವರು
ಹೊಂದಲು ಪರಿಮಳ ಹೂಗಳನು
ಚೆಂದದ ಹೂಗಳ ಹೊಂದದ ಗಿಡಗಳ
ಮಂದಿಯು ಜರೆವುದು ತರವೇನು?
ಬಂಧುಗಳಾದರು ಕಂದನು ನೀಡರು
ಕುಂದಿಹ ಬಂಜೆಯು ನಾನಂತೆ
ಕಂದನ ಹಡೆಯದ ನೊಂದಿಹ ಮನವನು
ಕೊಂದರು ಮಾತಲಿ ಇರಿವಂತೇ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
