ಬಂಡಾಯ...

ಬಂಡಾಯ...

ಪ್ರತಿಯೊಂದು ಜೀವಿಯು ತನ್ನ ದೇಹ ಮತ್ತು ಮನಸ್ಸಿನ ವಿರುದ್ಧದ ಅಥವಾ ತನಗೆ ಒಪ್ಪಿಗೆ ಇಲ್ಲದ ಅಥವಾ ತನ್ನ ಮತ್ತು ತನ್ನವರ ರಕ್ಷಣೆಗೆ ಅಪಾಯವಿದೆ ಎಂದು ಅರಿವಾದಾಗ ನೀಡುವ ಪ್ರತಿಕ್ರಿಯೆಯೇ ಬಂಡಾಯ. ಅದು ಮಾತಿನ ಮೂಲಕವೇ ಇರಬಹುದು, ಆಯುಧಗಳ ಮೂಲಕವೇ ಇರಬಹುದು, ಲಲಿತಕಲೆಗಳ ಮೂಲಕವೇ ಇರಬಹುದು, ಮೌನದ ಮೂಲಕವೇ ಇರಬಹುದು, ಎಲ್ಲವನ್ನೂ ಧಿಕ್ಕರಿಸುವ ಮೂಲಕವೇ ಇರಬಹುದು ಅಥವಾ ಹೊಸ ಮತ್ತು ಪರ್ಯಾಯ ಹಾದಿಯ ಮೂಲಕವೇ ಇರಬಹುದು ಅಥವಾ ಇರುವುದನ್ನು ನಾಶ ಮಾಡುವ ಮೂಲಕವೇ ಇರಬಹುದು ಕೊನೆಗೆ ಪರಿವರ್ತನೆ ಹೊಂದುವ ಮೂಲಕವೇ ಇರಬಹುದು ಎಲ್ಲವೂ ಬಂಡಾಯದ ವಿವಿಧ ರೂಪಗಳೇ ಆಗಿವೆ.

ಜೀವಿಗಳ ಅಸ್ತಿತ್ವ ಹೊಂದಿದಾಗಿನಿಂದ ಈ ಕ್ಷಣದವರೆಗೆ ಬಂಡಾಯ ಭುಗಿಲೇಳುತ್ತಲೇ ಇದೆ ಮತ್ತು ಅದಕ್ಕೆ ಮತ್ತೆ ಪ್ರತಿಕ್ರಿಯೆಯಾಗಿ ಅದನ್ನು ಧಮನಿಸುವ ಕ್ರಿಯೆಗಳು ಸಹ ಅಷ್ಟೇ ನಿರಂತರ...ಧಾರ್ಮಿಕ ಬಂಡಾಯಗಳು ಹೊಸ ಧರ್ಮಗಳ ಹುಟ್ಟಿಗೆ, ಸಾಮ್ರಾಜ್ಯ ಬಂಡಾಯಗಳು ಹೊಸ ರಾಜಮನೆತನಗಳ ಹುಟ್ಟಿಗೆ, ರಾಜಕೀಯ ಬಂಡಾಯಗಳು ಹೊಸ ನಾಯಕತ್ವ ಮತ್ತು ಪಕ್ಷಗಳ ಹುಟ್ಟಿಗೆ, ಸೈದ್ಧಾಂತಿಕ ಬಂಡಾಯಗಳು ಹೊಸ ಸಿದ್ದಾಂತಗಳ ಹುಟ್ಟಿಗೆ ಹಾಗೆಯೇ ವ್ಯವಸ್ಥೆಯ ಆಕ್ರೋಶ ಬಂಡಾಯ ಸಾಹಿತ್ಯದ ರಚನೆಗೆ ‌ಕಾರಣವಾಯಿತು.

ಕರ್ನಾಟಕದ ಮಟ್ಟಿಗೆ ಬಹಳ ಹಿಂದಿನಿಂದಲೂ ಸಾಹಿತ್ಯದಲ್ಲಿ ಬಂಡಾಯ ದಾಖಲಾಗಿದೆ. ಸಾಹಿತ್ಯವೆಂಬುದು ಸಾಹಿತ್ಯವೇ ಹೊರತು ಮತ್ತೇನು ಇಲ್ಲ ಅದು ಎಲ್ಲವನ್ನೂ ಒಳಗೊಂಡಿರುತ್ತದೆ ಎಂಬ ವಿಶಾಲವಾದ ಅರ್ಥವನ್ನು ಗಮನಿಸಿದ ನಂತರವೂ 12 ನೆಯ ಶತಮಾನದ ಅನುಭವದ ಅನುಭಾವ ಸಾಹಿತ್ಯದಲ್ಲಿ ಬಂಡಾಯದ ಪ್ರಬಲ ಗುಣಲಕ್ಷಣಗಳಿವೆ. ಆ ಕಾರಣಕ್ಕಾಗಿಯೇ ವಚನ ಸಾಹಿತ್ಯ ಒಂದು ಸಾಮಾಜಿಕ ಚಳವಳಿಯಾಗಿ‌ ಈಗಲೂ ಅಸ್ತಿತ್ವದಲ್ಲಿದೆ.

ಹಾಗೆಯೇ ‌80 ದಶಕದಲ್ಲಿ ಕರ್ನಾಟಕದಲ್ಲಿ ಬಂಡಾಯ ಸಾಹಿತ್ಯ ಎಂಬ ನೆಲದ ಶೋಷಿತರ ಧ್ವನಿ ಬಹುದೊಡ್ಡ ಪ್ರಮಾಣದಲ್ಲಿ ಜನಪ್ರಿಯವಾಯಿತು. ಅಲ್ಲಿಯವರೆಗಿನ ಕನ್ನಡ ಸಾಹಿತ್ಯದಲ್ಲಿ ಪೌರಾಣಿಕ, ಐತಿಹಾಸಿಕ, ಜಾನಪದ, ಭಕ್ತಿ - ದಾಸ ಸಾಹಿತ್ಯ, ನವ್ಯ ನವೋದಯ, ನವ್ಯೋತ್ತರ ಸಾಹಿತ್ಯ ಮುಂತಾದ ಪ್ರಕಾರಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಅಲ್ಲಿಯೂ ಸಹ ಕೆಲವು ಬಂಡಾಯದ ಧ್ವನಿಗಳು ಇದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ್ದು 80 ರ ದಶಕದಲ್ಲಿ.

ಈ ಬಂಡಾಯ ಸಾಹಿತ್ಯದ ಉಗಮ ಬರಹದ ಕಾರಣಕ್ಕಾಗಿ ಆಗದೇ ವ್ಯವಸ್ಥೆಯ ಒಳಗಡೆ ನಡೆಯುತ್ತಿದ್ದ ಅಸಮಾನತೆಯ ಪ್ರಜ್ಞೆ ಶಿಕ್ಷಣದ ಮೂಲಕ ಜಾಗೃತವಾಗುತ್ತಿದ್ದ ಸಮಯದಲ್ಲಿ ಪ್ರಜ್ಞಾವಂತ ಉಪನ್ಯಾಸಕ - ಶಿಕ್ಷಕ ವರ್ಗ ಹೋರಾಟಗಾರ ವರ್ಗ ಸಾಹಿತಿ ಪತ್ರಕರ್ತ ರಂಗಭೂಮಿ ಕಲಾವಿದರ ವರ್ಗ ಉದ್ದೇಶಪೂರ್ವಕವಾಗಿ ಅರಿವಿನ ಮಾರ್ಗವಾಗಿ ಜನ ಜಾಗೃತಿ ಮತ್ತು ಬದಲಾವಣೆಗಾಗಿ ರಚಿತವಾದ ಸಾಹಿತ್ಯ ಪ್ರಕಾರವೇ ಬಂಡಾಯ ಸಾಹಿತ್ಯ.

ಒಬ್ಬ ವ್ಯಕ್ತಿ ತನಗೆ ಮತ್ತು ತನ್ನವರಿಗೆ ಅನ್ಯಾಯವಾಗುತ್ತಿರುವ ಮತ್ತು ಶೋಷಣೆಗೆ ಒಳಗಾಗುತ್ತಿರುವ ಅಂಶಗಳು ಅದಕ್ಕೆ ಕಾರಣಗಳು ಅದಕ್ಕೆ ಪ್ರತಿರೋಧಗಳು ಹೊಸ ದಾರಿಗಳು ಮುಂತಾದ ಅಕ್ಷರಗಳ ರೂಪವೇ ಬಂಡಾಯ ಸಾಹಿತ್ಯ. ಇದು ಭಾಷಾ ಚಳವಳಿ, ರೈತ ಚಳವಳಿ, ದಲಿತ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ, ಮಹಿಳಾ ಚಳವಳಿ, ಕೂಲಿ ಕಾರ್ಮಿಕರ ಚಳವಳಿ, ಭ್ರಷ್ಟಾಚಾರ ವಿರೋಧಿ ಚಳವಳಿ ಹೀಗೆ ನಾನಾ ರೂಪದಲ್ಲಿ ಅಭಿವ್ಯಕ್ತಿಗೊಂಡ ಸಾಹಿತ್ಯ ಪ್ರಕಾರ. ಇಲ್ಲಿ ಕೇವಲ ಒಳ್ಳೆಯ, ಪ್ರಗತಿಪರ, ಕ್ರಿಯಾತ್ಮಕ ಮತ್ತು ಮಾನವೀಯ ಮೌಲ್ಯಗಳ ಬಂಡಾಯವನ್ನು ಮಾತ್ರ ಪರಿಗಣಿಸಲಾಗಿದೆ. ದ್ರೋಹ, ವಂಚನೆ, ಕುತಂತ್ರ, ಮೀರ್ ಸಾದಕ್ ತನ, ಸ್ವಾರ್ಥದ ಪಕ್ಷಾಂತರ, ಬೆನ್ನಿಗೆ ಚೂರಿ ಹಾಕುವುದು ಮುಂತಾದುವುಗಳು ಬಂಡಾಯದ ಪರಿಧಿಯಲ್ಲಿ ಬರುವುದಿಲ್ಲ. ಅವುಗಳನ್ನು ಕ್ರಿಮಿನಲ್ ಅಪರಾಧಗಳು ಎಂದೇ ಕರೆಯಲಾಗುತ್ತದೆ.

ಬಂಡಾಯ ಸಾಹಿತ್ಯ ಕೇವಲ ಜಾತಿ ವರ್ಗಗಳ ಸಂಘರ್ಷ ಮಾತ್ರವಲ್ಲ. ಇದು ಮನುಷ್ಯ ಸ್ವಾತಂತ್ರ್ಯದ ತುಡಿತ. ‌ಇದು ಯಾವ ವಿಷಯಕ್ಕೆ ಯಾವ ಕಾಲದಲ್ಲಿ ಯಾರಿಗಾದರೂ ಸಂಭವಿಸಬಹುದಾದ ಮನಸ್ಥಿತಿ. ಆದ್ದರಿಂದ ಇದು ಸೀಮಿತ ಸಾಹಿತ್ಯ ಎಂಬ ಆರೋಪದಲ್ಲಿ ಹುರುಳಿಲ್ಲ. ಬಂಡಾಯ ಸಾಹಿತ್ಯದ ಬೆಳವಣಿಗೆಯಲ್ಲಿ ಸಾಕಷ್ಟು ಸಂವೇದನಾಶೀಲ ಮನಸ್ಸುಗಳು ಹೋರಾಟ ಮಾಡಿವೆ. 

ಇದೊಂದು ದೀರ್ಘ ಅವಧಿಯ ಪಯಣ. ಅದಕ್ಕೆ ಸಾಕಷ್ಟು ಸಮಯದ ಅವಶ್ಯಕತೆ ಇದೆ. ಆದರೆ ಇಂದಿನ ದಿನಗಳಲ್ಲಿ ಮತ್ತೆ ಬಂಡಾಯ ಮನೋಭಾವ ಎಲ್ಲಾ ಜನರಲ್ಲಿ ಜಾಗೃತಗೊಂಡು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಹೆಚ್ಚು ‌ಸೌಹಾರ್ಧಯುತವಾಗಿ ಮುಂದುವರಿಯಲಿ ಎಂಬ ಅಪೇಕ್ಷೆಯೊಂದಿಗೆ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ