ಬಂಧನದ ಆನೆಗಳ ಸಂಕಟ: 2008ರ ಅಧ್ಯಯನ
“ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಾಲಯಗಳಲ್ಲಲ್ಲ. ಇತರ ಆನೆಗಳ ಜೊತೆ ಕಾಡಿನಲ್ಲಿ ಜೀವಿಸಬೇಕಾದ ಆನೆಯೊಂದನ್ನು ಪೂಜಾ ವಿಧಿಗಳಿಗೆ ಬಳಸಿಕೊಳ್ಳುವುದೂ ಕ್ರೌರ್ಯ ಎನಿಸಿಕೊಳ್ಳುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಕಾಳಿಕಾದುರ್ಗ ಪರಮೇಶ್ವರಿ ದೇವಾಲಯ ಟ್ರಸ್ಟ್ ಸಲ್ಲಿಸಿದ ಅರ್ಜಿಯನ್ನು ೧೯ ಆಗಸ್ಟ್ ೨೦೨೧ರಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವ್ಯಕ್ತಪಡಿಸಿದ ಅಭಿಪ್ರಾಯ ಇದು. (ವಾರ್ತಾ ಪತ್ರಿಕೆ ವರದಿ: ೨೦ ಆಗಸ್ಟ್ ೨೦೨೧)
ಪ್ರಕರಣದ ಹಿನ್ನೆಲೆ: ಕಾಳಿಕಾದುರ್ಗ ಪರಮೇಶ್ವರಿ ದೇವಾಲಯ ಖಾಸಗಿ ಪೂಜಾಸ್ಥಳವಾಗಿತ್ತು. ಅಲ್ಲಿ ಆನೆಯೊಂದನ್ನು ಸಾಕಲಾಗುತ್ತಿದೆ. ಇತ್ತೀಚೆಗೆ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದೆ. ಅಲ್ಲಿನ ಆನೆಯನ್ನು ಸ್ಥಳಾಂತರಿಸಬಾರದೆಂದು ಸರಕಾರಕ್ಕೆ ನಿರ್ದೇಶಿಸಬೇಕೆಂಬುದು ಹೈಕೋರ್ಟಿಗೆ ಅರ್ಜಿದಾರರ ವಿನಂತಿ.
ಈ ಹಿನ್ನೆಲೆಯಲ್ಲಿ, ಹದಿಮೂರು ವರುಷಗಳ ಮುಂಚೆ (೨೦೦೮ರಲ್ಲಿ) ಸಾಕು ಆನೆಗಳ ಆರೋಗ್ಯದ ಬಗ್ಗೆ ಕರ್ನಾಟಕದಲ್ಲಿ ನಡೆಸಿದ ಅಧ್ಯಯನವೊಂದರ ಮುಖ್ಯಾಂಶಗಳು ಈಗಲೂ ಪ್ರಸ್ತುತ. ಅದು ಅಂತಹ ಮೊಟ್ಟಮೊದಲ ಅಧ್ಯಯನ. ಬೆಂಗಳೂರಿನ ಏಷ್ಯನ್ ನೇಚರ್ ಕನ್ಸರ್ವೇಷನ ಫೌಂಡೇಷನ್ (ಎ.ಎನ್.ಸಿ.ಎಫ್.) ಮತ್ತು ಕಂಪಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ (ಸಿಯುಪಿಎ) ಜಂಟಿಯಾಗಿ ನಡೆಸಿದ ಅಧ್ಯಯನ ಅದು.
ಈ ಅಧ್ಯಯನದ ಫಲವಾಗಿ ಆನೆಗಳ ಆರೋಗ್ಯ ರಕ್ಷಣೆ ಬಗ್ಗೆ ಕೈಪಿಡಿ ರಚಿಸಲಾಗಿದೆ. ಇದರಲ್ಲಿರುವ ಮಾಹಿತಿ: ಕರ್ನಾಟಕದಲ್ಲಿ ಬಂಧನದಲ್ಲಿರುವ ೧೫೮ ಆನೆಗಳ ದೇಹದ ಅಳತೆಗಳು, ಮಲದ ಸುತ್ತಳತೆ ಮತ್ತು ತೂಕ, ಆನೆಗಳ ವಾಸ್ತವ್ಯ ಸ್ಥಳದ ವಿಸ್ತೀರ್ಣ, ನೀರಿನ ಮತ್ತು ಸ್ನಾನದ ಲಭ್ಯತೆ, ಆನೆಗಳೊಂದಿಗೆ ಒಡನಾಟ, ಆನೆಗಳ ತರಬೇತಿ, ವರ್ತನೆ ಮತ್ತು ಪಶುವೈದ್ಯರ ಲಭ್ಯತೆ, ಮಾವುತರ ವಿವರ ಮತ್ತು ಅವರ ಸಾಮಾಜಿಕ/ ಆರ್ಥಿಕ ಸ್ಥಿತಿಗತಿ. “ಮಾವುತರ ಸಾಮಾಜಿಕ ಸ್ಥಾನಮಾನ ತೀರಾ ಕೆಳಮಟ್ಟದಲ್ಲಿದೆ. ಅವರಿಗೆ ಸೌಲಭ್ಯಗಳನ್ನು ಒದಗಿಸಲು ಸರಕಾರ ಸಿದ್ಧವಿಲ್ಲ. ಅವರು ಆನೆಗಳ ಬಗ್ಗೆ ಆಸಕ್ತಿ ವಹಿಸಲಿಕ್ಕಾಗಿ ಅವರ ಜೀವನಮಟ್ಟ ಸುಧಾರಿಸುವುದು ಅಗತ್ಯ" ಎನ್ನುತ್ತಾರೆ ಸುಪರ್ಣಾ ಬಕ್ಷಿ ಗಂಗೂಲಿ, ಉಪಾಧ್ಯಕ್ಷ, ಸಿಯುಪಿಎ.
ಸಿಯುಪಿಎಯ ವಾರ್ಷಿಕ ವರದಿಯಲ್ಲಿ, ಈ ಅಧ್ಯಯನದ ಮೂರು ಉದ್ದೇಶಗಳನ್ನು ಹೀಗೆಂದು ಪ್ರಸ್ತುತ ಪಡಿಸಲಾಗಿದೆ: ದೇಶದಲ್ಲಿರುವ ಸಾಕಾನೆಗಳ ಒಟ್ಟು ಸಂಖ್ಯೆ ತಿಳಿಯುವುದು, ಕೆಲವು ಆನೆಗಳ ಸ್ಥಿತಿಗತಿ ಮತ್ತು ಮೇಲುಸ್ತುವಾರಿ ಮಾಹಿತಿ ಸಂಗ್ರಹಿಸುವುದು, ಆನೆಗಳನ್ನು ಸಾಕುವ ವಿವಿಧ ಮಾದರಿಗಳನ್ನು ದಾಖಲಿಸುವುದು ಮತ್ತು ಆನೆಗಳ ಕ್ಷೇಮ ಕೇಂದ್ರಗಳ ಸ್ಥಾಪನೆಗೆ ನೀಲನಕ್ಷೆ ಸಿದ್ಧಪಡಿಸುವುದು.
ಭೂಮಿಯಲ್ಲಿರುವ ಆನೆಗಳ ಒಟ್ಟು ಸಂಖ್ಯೆ ೫೫,೦೦೦. ಇವುಗಳಲ್ಲಿ ೧೫,೦೦೦ - ೧೬,೦೦೦ ಆನೆಗಳನ್ನು ಸಾಕಲಾಗುತ್ತಿದೆ. “ಪುರಾತನ ಕಾಲದಿಂದಲೂ ದೇವಸ್ಥಾನಗಳಲ್ಲಿ ಮತ್ತು ಹಬ್ಬಗಳ ಆಚರಣೆಯಲ್ಲಿ ಆನೆಗಳಿಗೊಂದು ಸಾಂಸ್ಕೃತಿಕ ಸಂಬಂಧವಿದೆ. ಉದಾಹರಣೆಗೆ, ಕೇರಳದ ನಂಬೂದಿರಿ ಸಮುದಾಯದವರಿಗೆ ಆನೆ ಸಾಕುವುದು ಸಾಮಾಜಿಕ ಘನತೆಯ ಸಂಗತಿ” ಎನ್ನುತ್ತಾರೆ, ಎ.ಎನ್.ಸಿ.ಎಫ್.ನ ಸ್ಥಾಪಕ ಟ್ರಸ್ಟಿ ರಾಮನ್ ಸುಕುಮಾರ್.
ಆನೆಗಳನ್ನು “ಉತ್ಸವಮೂರ್ತಿ"ಗಳನ್ನಾಗಿ ಮಾಡಬಾರದೆಂಬುದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರ ಅಭಿಪ್ರಾಯ. ಅದು ಸುಲಭದ ಕೆಲಸವಲ್ಲ; ಆನೆಗಳನ್ನು ಪುನಃ ಕಾಡಿಗೆ ಬಿಡುವುದು ಕಷ್ಟಸಾಧ್ಯ. ಯಾಕೆಂದರೆ, ಈಗ ಸಾಕಾನೆಗಳಿಗೆ ಅಗತ್ಯವಾದಷ್ಟು ವಿಸ್ತೀರ್ಣದ ಆನೆಗಳ ನೆಲೆವೀಡು (ಹ್ಯಾಬಿಟಾಟ್) ಉಳಿದಿಲ್ಲ ಎಂಬುದು ಸುಕುಮಾರ್ ಅವರ ಪ್ರತಿಕ್ರಿಯೆ.
ಅಧ್ಯಯನದ ಎರಡನೇ ಹಂತದಲ್ಲಿ ಸಾಕಾನೆಗಳ ಆರೋಗ್ಯ ಮೌಲ್ಯಮಾಪನ ನಡೆಸಿ, ಅವುಗಳನ್ನು ಬಾಧಿಸುವ ರೋಗಗಳನ್ನು ದಾಖಲಿಸಲಾಯಿತು. “ಆನೆಗಳು ಸಮಾಜಜೀವಿಗಳು. ಅವುಗಳನ್ನು ಬಂಧನದಲ್ಲಿ ಇರಿಸಿದಾಗ, ಬಹುಪಾಲು ಆನೆಗಳು ಒತ್ತಡ, ಆಕ್ರಮಣಶೀಲತೆ ಮತ್ತು ಕ್ಷಯರೋಗದಿಂದ ಬಳಲುವುದು ಕಂಡುಬಂದಿದೆ” ಎಂದು ತಿಳಿಸುತ್ತಾರೆ ಗಂಗೂಲಿ.
ಆದ್ದರಿಂದ, ಕರ್ನಾಟಕ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ವಾಸ್ತವಕ್ಕೆ ಕನ್ನಡಿ ಹಿಡಿದಿದೆ, ಅಲ್ಲವೇ?
ಫೋಟೋ ೧: ಬಂಧನದಲ್ಲಿರುವ ಆನೆಯ ಸಂಕಟ ..... ಕೃಪೆ: ಡೆಕ್ಕನ್ ಹೆರಾಲ್ಡ್. ಕೋಮ್
ಫೋಟೋ ೨: ತಮಿಳ್ನಾಡಿನ ಮರಕ್ಕನಮ್ನಲ್ಲಿ ಬಂಧನದಲ್ಲಿರುವ ಆನೆಗಳು ..... ಕೃಪೆ: ದ ಕ್ವಿಂಟ್.ಕೋಮ್
ಫೋಟೋ ೩: ಕೇರಳದಲ್ಲಿ ಸರಪಳಿ ಬಿಗಿದ ಆನೆಗಳ ಕೆಳಗೆ ಕುಳಿತಿರುವ ಮಾವುತರು ..... ಕೃಪೆ: ಮನೋರಮಾ.ಕೋಮ್