*ಬಕುಳ ಪುಷ್ಪ*
ಕವನ
ಪೆಂಪಿನ ಗುಣವ ತಳೆದಿದೆ
ಕಂಪನು ಬೀರುತ ನಲಿದು ತರುವಲಿ|
ತಂಪನು ಮನಕೆ ನೀಡಿದೆ
ಸೊಂಪಲಿ ಬೆಳೆದಿದೆ ತಾನು ಮುದದಲಿ||
ನಲ್ಲೆಯ ಮನವ ಸೆಳೆದಿಹ
ಮಲ್ಲೆಯ ಕಾನನ ಸುಮವು ಬಕುಳವು|
ಸೊಲ್ಲನು ಹೇಳಿ ಮೌನದಿ
ಚಲ್ಲುತ ನಕ್ಷತ್ರ ನಗುವ ಪುಷ್ಪವು||
ಹೊನ್ನಿನ ಕಿರಣ ಬೀರುತ
ಪನ್ನಗಧರನಲಿ ಚರಣ
ಸೇರುತ|
ಕನ್ನಿಕೆ ಹೆರಳ ಕಾಂತಿಯ
ಸನ್ನಿದವಾಯಿತು ಬಕುಳ ಬಾಗುತ||
ಮುಡಿಯುತ ನಲಿದು ಕುಣಿದೆನು
ತುಡಿಯುವ ಬಯಕೆಯ ಲೋಕ ದಾಟುತ|
ಗಿಡದಲ್ಲರಳಿದ ಬಕುಳವು
ಮಡಿಯಿಂದ ಮುಡಿಯಲಿ ತಾನು ನಲಿಯುತ||
ಪಕಳೆಯು ಚಿತ್ರದಂತೆಯೆ
ಲಕಲಕ ಹೊಳೆಯುತ ನಿಂತು ಸೆಳೆಯಿತು|
ಸಖನಲಿ ಧ್ಯಾನ ಮೂಡಿಸಿ
ಥಕಥಕ ಕುಣಿಸುತ ಚಣದಿ ಮುದುಡಿತು||
-*ಶಂಕರಾನಂದ ಹೆಬ್ಬಾಳ*
ಚಿತ್ರ್