ಬಣ್ಣಗಳ ಬಂಧನದಲ್ಲಿ ಉಕ್ಕುವ ಕಾರಂಜಿ ಈ ಹೋಳಿ

"ಭರತ ಭೂಮಿಯ ಪ್ರತಿ ಗ್ರಾಮ, ನಗರದಲ್ಲಿ ಆಚರಿಸುವ ಹಬ್ಬ ಹೋಳಿ. ಚಳಿಗಾಲಕ್ಕೆ ವಿದಾಯ ಹೇಳಿ ಬೇಸಿಗೆಗೆ ಕಾಲಿಡುವ ಹಬ್ಬ. ಬಣ್ಣ ಬಣ್ಣದ ರಂಗು ರಂಗಿನಲ್ಲಿ ಯುವ ಹೃದಯವನ್ನು ಹುಚ್ಚೆಬ್ಬಿಸಿ ಕುಣಿಯುವ, ನಲಿಯುವ ಪ್ರೀತಿ, ಸ್ನೇಹ, ಸಹೋದರತೆಯ ಹಬ್ಬವೇ ಹೋಳಿ ಹಬ್ಬವಾಗಿದೆ"
ಭರತ ಭೂಮಿಯ ಪ್ರತಿ ಗ್ರಾಮ, ನಗರದಲ್ಲಿ ಆಚರಿಸುವ ಹಬ್ಬ ಹೋಳಿ. ಚಳಿಗಾಲಕ್ಕೆ ವಿದಾಯ ಹೇಳಿ ಬೇಸಿಗೆಗೆ ಕಾಲಿಡುವ ಫಾಲ್ಗುಣ ಮಾಸದ ಹಬ್ಬವಾಗಿದೆ. ಬಣ್ಣ ಬಣ್ಣದ ರಂಗು ರಂಗಿನಲ್ಲಿ ಯುವ ಹೃದಯವನ್ನು ಹುಚ್ಚೆಬ್ಬಿಸಿ ಕುಣಿಯುವ, ನಲಿಯುವ ಪ್ರೀತಿ, ಸ್ನೇಹ, ಸಹೋದರತೆಯ ಹಬ್ಬವೇ ಹೋಳಿ ಹಬ್ಬವಾಗಿದೆ. ಕಾಮಣ್ಣ ಮತ್ತು ರತಿದೇವಿಯನ್ನು ಸಂಜೆ ಪ್ರತಿಷ್ಟಾಪನೆ ಮಾಡಿ ಬೆಳಿಗ್ಗೆ ದಹನ ಮಾಡಲಾಗುತ್ತದೆ. ಈ ಹಬ್ಬದಲ್ಲಿ ಹೋಳಿ ಹಾಡು, ಮನರಂಜನೆ ಆಟ, ಜಾಗರಣೆ, ರತಿಪದ ಹಾಡಿ ರಂಜಿಸುತ್ತಾರೆ. ಬಣ್ಣ ಕಲಿಸಿ ಕರಗಿಸಿ ಕುದಿಸಿ ಎರಚಿ ಮಿಂದೇಳುತ್ತಾರೆ. ಆದ್ದರಿಂದ ಈ ಹಬ್ಬವನ್ನು ಯುವ ಪಡೆಯ ಬಣ್ಣದ ಕಾರಂಜಿಯ ಹಬ್ಬವಾಗಿದೆ.
ಹೋಳಿ ಹಬ್ಬದ ಪರಂಪರೆ: ಹೋಳಿ ಹಬ್ಬದ ಬಗ್ಗೆ ಅನೇಕ ದಂತಕಥೆಗಳಿವೆ. ಹಿರಣ್ಯಕಶ್ಯಪುವಿನ ಸಹೋದರಿ ಹೋಳಿಕಾ ಅಣ್ಣನ ಮಾತು ನೆರವೇರಿಸಲು, ಮಹಾ ವಿಷ್ಣುದೇವನ ಮೇಲೆ ಸೇಡು ತೀರಿಸಲು ಮತ್ತು ತನ್ನ ಅಳಿಯ ಹರಿ ಭಕ್ತ ಪ್ರಹ್ಲಾದ್ ನನ್ನು ದಹನ ಮಾಡಲು ಬೆಂಕಿಯ ಚಿತೆಯಲ್ಲಿ ಪ್ರಹ್ಲಾದನೊಂದಿಗೆ ಕುಳಿತಳು. ಹೋಳಿಕಾ ಅಗ್ನಿ ನಿರೋದಕ ವರ ಪಡೆದಿದ್ದರು ಕಾರ್ಯ ಅಧರ್ಮವಾಗಿದ್ದರಿಂದ ಮತ್ತು ಈ ವರಹ ಒಬ್ಬಳೇ ಅಗ್ನಿಯಲ್ಲಿ ಕುಳಿತರೆ ಫಲಿಸುತ್ತದೆ ಅಂತಾ ಮರೆತು ಭಕ್ತ ಬಾಲಕನನ್ನು ದಹನ ಮಾಡಲು ಅಗ್ನಿ ಗರ್ಭಕ್ಕೆ ಇಳದಿದ್ದರಿಂದ ವರ ಶಾಪವಾಗಿ ತಾನೇ ದಹಿಸಿ ಹೋಗಿದ್ದರಿಂದ ಈ ಹಬ್ಬವನ್ನು ಹೋಳಿಕಾ ಹಬ್ಬ ಅಂತಾ ಕರೆಯುತ್ತಾರೆ. ಆದರೆ ಈ ಹಬ್ಬವನ್ನು ಎಡಪಂಥಿಯರು ಹೋಳಿಕಾ ಮೇಲೆ ನಡೆದ ಅಹಿತಕರ ಅಂತಾ ವಾದವಿದೆ. ಮತ್ತೊಂದು ಕಥೆಯ ಪ್ರಕಾರ ತಾರಕಾಸುರನು ತಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆದು ದೇವತೆಗಳನ್ನು ಮತ್ತು ಪ್ರಜೆಗಳನ್ನು ಹಿಂಸೆ ಮಾಡತೊಡಗಿದ. ಇವನನ್ನು ಹತನ ಮಾಡಿ ಲೋಕ ಉಳಿಸಲು ಏಳು ದಿನದ ಮಗುವಿನಿಂದ ಮಾತ್ರ ಸಾಧ್ಯವಿತ್ತು. ಆಗ ಶಿವನ ಮೊರೆ ಹೋಗಿ ಲೋಕ ಉಳಿಸಲು ಕೇಳಲು ಬಂದಾಗ ಶಿವ ಭೋಗ ಸಮಾದಿಯಲ್ಲಿದ್ದ. ಶಿವನನ್ನು ಎಚ್ಚರಿಸಲು ಕಾಮ ಮತ್ತು ರತಿ ಬಂದು ಹೂವು ಬಾಣ ಬಿಟ್ಟರು. ಇದರಿಂದ ಕೋಪಗೊಂಡ ಶಿವನು ಮೂರನೇಯ ಭಯಂಕರ ಕಣ್ಣಿನಿಂದ ಕಾಮನನ್ನು(ಮನ್ಮಥ) ಸುಟ್ಟು ಭಸ್ಮ ಮಾಡಿದ. ರತಿಯ ಕೋರಿಕೆಯಂತೆ ಶಿವನು ಕಾಮನಿಗೆ ಶರೀರಿಯಾಗು ಅಂತಾ ವರ ನೀಡಿದ. ಇದು ಫಾಲ್ಗುಣ ಮಾಸದ ಶುದ್ಧ ಪೂರ್ಣಿಮೆಯಂದು ನಡೆದಿದ್ದರಿಂದ ಈ ಹಬ್ಬವನ್ನು ಕಾಮನ ಹುಣ್ಣಿಮೆ ಅಂತಾ ಕರೆಯುತ್ತಾರೆ. ಹೀಗೆ ಇನ್ನು ದಂತಕಥೆಗಳಿವೆ.
ನಿಸರ್ಗದತ್ತವಾಗಿರಲಿ ಹೋಳಿ: ಹೋಳಿ ಹಬ್ಬದಂದು ಯುವ ಜನತೆ ಬಹಳಷ್ಟು ಸಂತೋಷದಿಂದ ಬಣ್ಣ ಎರಚಿ ದೇಹಕ್ಕೆ ಹಚ್ಚುತ್ತಾರೆ. ಆದರೆ ಹೋಳಿಗೆ ಬಳಸುವ ಬಣ್ಣ ಬಹಳಷ್ಟು ಸಲ ನಿಸರ್ಗದತ್ತವಾದ ಬಣ್ಣವಾಗಿರುವದಿಲ್ಲಾ. ಇದರಿಂದ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೆಚ್ಚು ರಾಸಾಯನಿಕ ಮತ್ತು ಆರೋಗ್ಯಕ್ಕೆ ಹಾನಿಕಾರಕ ಬಣ್ಣವನ್ನು ಮುಖ, ತಲೆ, ಕಣ್ಣು, ದೇಹದ ಅಂಗಾಂಗಗಳಿಗೆ ಹಚ್ಚುವದರಿಂದ ಕಣ್ಣು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಪುಡಿ ಒಣ ಬಣ್ಣ ಮನಬಂದಂತೆ ತುರುವದರಿಂದ ಗಾಳಿಯಲ್ಲಿ ಬಣ್ಣ ಸೇರಿ ಉಸಿರಾಟ ತೊಂದರೆ ಬರಬಹುದು, ವಾಯು ಮಾಲಿನ್ಯವಾಗುತ್ತದೆ. ರಾಸಾಯನಿಕ ಬಣ್ಣ ಬಳಸುವದರಿಂದ ಭೂಮಿಗೆ ಬಿದ್ದು ಜಲಮೂಲಕ್ಕೆ ಹರಿದರೆ ಜಲಚರಿಗಳಿಗೆ ತೊಂದರೆಯಾಗುತ್ತದೆ.
ಕಾಮ ದಹನ ಮಾಡುವಾಗ ಸಗಣಿ ಕುಳ್ಳು, ಸವದೆ ಬಳಸಬೇಕು. ಹೆಚ್ಚು ಸಮಯ ಬೆಂಕಿ ಉರಿಯಲು ಮತ್ತು ದಹನ ಮಾಡಲು ವಾಹನಗಳ ಟೈರ್, ಪ್ಲಾಸ್ಟಿಕ್, ಬಣ್ಣ ಆಡಿದ ಬಟ್ಟೆಗಳು, ರಬ್ಬರ್, ಹೆಚ್ಚು ಹೊಗೆ ಸೂಸುವ ವಸ್ತುಗಳಿಂದ ಸುಡುವದರಿಂದ ಪರಿಸರ ಮಾಲಿನ್ಯವಾಗುತ್ತದೆ. ಸಾಕಷ್ಟು ಇಂಗಾಲ ಪಸರಿಸಿ ವಾಯು ವಿಷಗೊಳಿಸುತ್ತದೆ. ಕಾಮ ದಹನಕ್ಕೆ ಮತ್ತು ಸಂಪ್ರದಾಯ ನಿಯಮಕ್ಕೆ ವಿರುದ್ಧವಾದ ವಸ್ತುಗಳನ್ನು ದಹಿಸದೆ ಸನಾಥನವಾಗಿ ಆಚರಣೆ ಮಾಡಿಕೊಂಡು ಬಂದ ಪದ್ಧತಿ ಮಾಡಬೇಕು. ಆಕಳು ಸಗಣಿ ಕುಳ್ಳು ಮತ್ತು ಸುದ್ದ ಕಟ್ಟಿಗೆಯನ್ನು ಕಾಮ ದಹನ ಮಾಡಲು ಬಳಸಬೇಕು. ಇದು ಭಗವಂತನ ಕೃಪೆಗೆ ಪಾತ್ರವಾಗುತ್ತದೆ. ನಿಸರ್ಗ ಮೇಲೆ ಮತ್ತು ಭಗವಂತನ ಇಚ್ಛೆಗೆ ವಿರುದ್ಧವಾದ ದಹನ ಕ್ರಿಯೆ ನಡೆಸದೆ ಭಕ್ತಿ ಮತ್ತು ಸಂಪ್ರದಾಯದಂತೆ ನೆರವೇರಿಸಬೇಕು.
ಸಂಸ್ಕೃತಿಯ ಪ್ರತೀಕವಾಗಲಿ ಹಬ್ಬ: ಹೋಳಿ ಹಬ್ಬವನ್ನು ಪ್ರೀತಿ, ಸ್ನೇಹ, ಭಾತೃತ್ವ, ಸಹೋದರತೆಯಲ್ಲಿ, ಭಗವಂತನ ಭಕ್ತಿಯಲ್ಲಿ, ಭಗವಂತನ ವಿಜಯ ಅಂತಾ ಸನಾಥನ ಸಂಸ್ಕೃತಿಗೆ ಧಕ್ಕೆ ಬಾರದ ರೀತಿ ಮತ್ತು ಅನ್ಯ ಧರ್ಮಗಳಿಗೆ ಮಾದರಿ ಮತ್ತು ಆದರ್ಶ ರೀತಿ ಹಬ್ಬ ಆಚರಣೆ ಮಾಡಬೇಕು. ಯುವ ಜನಾಂಗ ಬಹಳಷ್ಟು ಜನ ಹಬ್ಬದಲ್ಲಿ ಮದ್ಯ ಸೇವನೆಯಿಂದ ಮನ ಬಂದಂತೆ ವರ್ತಿತಿಸುತ್ತಿರುವದು, ಮಾದಕತೆಯಲ್ಲಿ ಕುಣಿಯುವದು, ರೆಗುವದು, ಅಸಭ್ಯವಾಗಿ ನಡೆದುಕೊಳ್ಳವದು ಇದು ಸಂಸ್ಕೃತಿಗೆ ವಿರುದ್ಧವಾಗುತ್ತಿದೆ. ಗುಂಪು ಘರ್ಷಣೆ, ಕಲಹ, ಇರಿತಗಳು, ಕೋಮು ಸಂಘರ್ಷ ಇತ್ಯಾದಿ ಚಟುವಟಿಕೆಗಳು ಹಬ್ಬದ ಮೇಲೆ ಕರಾಳತೆಯನ್ನು ಬೀರುತ್ತಿರುವದರಿಂದ ಹಬ್ಬದಲ್ಲಿ ಸಡಗರದಿಂದ ಮತ್ತು ಒಗ್ಗಟ್ಟಿನಿಂದ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಸಂಸ್ಕೃತಿಯ ಪ್ರತೀಕವಾಗಿ ಹಬ್ಬ ಕಾಣಬೇಕು. ದಾನ, ಅನ್ನ, ಸಹಾಯ, ಮನರಂಜನೆ, ಭಕ್ತಿ, ಪರೋಪಕಾರ, ಸಹಕಾರ ಇತ್ಯಾದಿ ಧಾರ್ಮಿಕ ಕೆಲಸಗಳು ಹಬ್ಬದಲ್ಲಿ ಅಡಕವಾಗಿ ಹಬ್ಬ ಆಚರಿಸಬೇಕು. ಬಣ್ಣ ಬಣ್ಣದ ರಂಗು ಮನಸ್ಸಿನಲ್ಲಿ ಅರಳುವ ರೀತಿ ನಡೆಯಬೇಕು. ಯುವ ಜನತೆ ಹಬ್ಬದ ವಾರುಸುದಾರರಾಗಿ ಜಾಗೃತಿಯಿಂದ ವರ್ತಿಸಬೇಕು.
ಬಣ್ಣ ಬಣ್ಣದ ಸ್ಪರ್ಧೆಗಳು: ಹೋಳಿ ಹಬ್ಬದಂದು ಬಣ್ಣದ ರಂಗೇರಿಸಲು ಮತ್ತು ಗುಂಪುಗಳಲ್ಲಿ ಬಲ ಪ್ರದರ್ಶನ ಮಾಡಲು ಯುವಕರ ತಂಡಗಳ ನಡುವೆ ಹಲವಾರು ಸ್ಪರ್ಧೆಗಳು ಎರಪಡುತ್ತವೆ. ರಾಜ ಬೀದಿಯಲ್ಲಿ ಎರಡು ಕಂಬಗಳಿಗೆ ಹಗ್ಗ ಕಟ್ಟಿ ನಡುವೆ ಬಣ್ಣ ತುಂಬಿದ ಬಿಂದಿಗೆ ಕಟ್ಟಿ ಕಳಗೆ ಮಾನವ ಗೋಪುರ ಮಾಡಿ ಬಣ್ಣದ ಗಡಿಗೆ ಒಡೆಯುತ್ತಾರೆ. ಮಾನವ ಗೋಪುರಕ್ಕೆ ಬಣ್ಣ, ನೀರು, ತತ್ತಿ ಎರಚುತ್ತಾರೆ. ಇದು ಮನಸ್ಸಿಗೆ ಮದ ನೀಡುತ್ತದೆ. ಕಣ್ಮನ ಸೆಳೆಯುತ್ತದೆ. ಆದರೆ ಕರಗತವಿಲ್ಲದೆ ಮತ್ತು ಪರಿಪೂರ್ಣತೆ, ಸ್ಪಷ್ಟತೆ ಇಲ್ಲದೆ ಇಂತಹ ಅಪಾಯಕಾರಿ ಕಾರ್ಯ ಮಾಡುವದರಿಂದ ಜೀವ ಹಾನಿಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಮೇಲಿಂದ ಬಿದ್ದು ಅಂಗವೈಕಲ್ಯ ಆಗಿದ್ದು ಕಾಣಬಹುದು. ಹಲಿಗೆ ಹಬ್ಬದಲ್ಲಿ ಹಲಗಿಯ ಮೇಲೆ ಕುಣಿಯುವದು ಕೆಲವು ಸಲ ಅಪಾಯಕಾರಿ. ಬೈಕ್, ಸೈಂಕಲ್, ಬೆಟ್ಟಿಂಗ್ ಇತ್ಯಾದಿ ಅಪಾಯಕಾರಿಯಾಗದೆ ಕ್ರಮವಹಿಸಬೇಕು. ಯಾವುದೇ ಕ್ರೀಡೆ ಸ್ಪರ್ಧೆ ಮಾಡುವಾಗ ಸಂಪೂರ್ಣ ತರಬೇತಿ ಹೊಂದಿದ ನಂತರ ಮಾಡಬೇಕು. ಈ ಹಬ್ಬದಲ್ಲಿ ಅಹಿತಕರ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಯುವ ಶಕ್ತಿ ಹೋಳಿಯನ್ನು ಸಂಸ್ಕೃತಿ, ಸಂಪ್ರದಾಯ, ಪರಂಪರೆಗೆ ಧಕ್ಕೆ ಬಾರದ ರೀತಿ ಸುಂದರವಾಗಿ ಮತ್ತು ಸುವ್ಯವಸ್ಥಿತವಾಗಿ ಹೋಳಿ ಹಬ್ಬವು ಬಣ್ಣದ ಸಿರಿಯಾಗಿ, ಭಾರತದ ಮನೆ ಮನೆ ಮಾತಾಗಲಿ.
- ಶರೀಫ ಗಂಗಪ್ಪ ಚಿಗಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ