ಬದಲಾವಣೆಯತ್ತ ಬ್ರಿಟನ್

ಬ್ರಿಟನ್ ದೊಡ್ಡ ಪ್ರಮಾಣದ ಬದಲಾವಣೆಯತ್ತ ಸಾಗಿದೆ. ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷವು ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಕಳೆದ ೧೪ ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷವು ಹೀನಾಯವಾಗಿ ಸೋಲು ಕಂಡಿದೆ. ಪ್ರಧಾನಿ ರಿಷಿ ಸುನಕ್ ಅವರು ಅವಧಿಗೆ ಮುನ್ನ ಚುನಾವಣೆ ಘೋಷಿಸಿದ್ದು, ಅವರ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ತಂದಿದೆ. ಲೇಬರ್ ಪಕ್ಷದ ಕೀರ್ ಸ್ಟಾರ್ಮರ್ ಮುಂದಿನ ಪ್ರಧಾನಿಯಾಗಲಿದ್ದಾರೆ.
ಕನ್ಸರ್ವೇಟಿವ್ ಪಕ್ಷವು ಸೋಲುವುದೆಂಬುದು ಚುನಾವಣೆಗೆ ಮುನ್ನವೇ ಖಾತರಿಯಾಗಿತ್ತು. ಇಂಗ್ಲೆಂಡ್ ಆ ಪ್ರಮಾಣದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು ಜನರು ಸರಕಾರ ಬದಲಾವಣೆಗೆ ಹಾತೊರೆದಿದ್ದರು. ಬ್ರಿಟನ್ ನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಐರೋಪ್ಯ ಒಕ್ಕೂಟದಿಂದ ಹೊರಬಂದುದು ಕೂಡಾ ಇಂಗ್ಲೆಂಡಿನ ಸಮಸ್ಯೆ ಹೆಚ್ಚಿಸಿತ್ತು. ಒಂದು ಕಾಲದಲ್ಲಿ ವಿಶ್ವದ ಬಲಿಷ್ಟ ಶಕ್ತಿಗಳಲ್ಲಿ ಒಂದಾಗಿದ್ದ ಬ್ರಿಟನ್ ಇತ್ತೀಚಿನ ವರ್ಷಗಳಲ್ಲಿ ಕೇವಲ ಅಮೇರಿಕದ ಮಿತ್ರ ರಾಷ್ಟ್ರ ಎಂಬಷ್ಟಕ್ಕೇ ಸೀಮಿತವಾಗಿತ್ತು. ಹಾಗಾಗಿ ಲೇಬರ್ ಪಕ್ಷದ ಮುಖ್ಯ ಘೋಷಣೆಯೇ ‘ಬದಲಾವಣೆಯತ್ತ ಹೆಜ್ಜೆ' ಎಂಬುದಾಗಿತ್ತು. ಪ್ರಧಾನಿಯಾಗಲಿರುವ ಸ್ಟಾರ್ಮರ್ ಕೂಡಾ ‘ಬದಲಾವಣೆ ಇಲ್ಲಿಂದಲೇ ಆರಂಭವಾಗಲಿದೆ. ದೇಶಕ್ಕೆ ಹೊಸ ಭವಿಷ್ಯ ತೋರುವುದು ನಮ್ಮ ಸರಕಾರದ ಗುರಿಯಾಗಲಿದೆ.’ ಎಂದು ಘೋಷಿಸಿದ್ದಾರೆ. ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳ ನೀತಿಗಳು ಬಹುತೇಕವಾಗಿ ಪರಸ್ಪರ ವಿರುದ್ಧವಾಗಿರುವುದರಿಂದ ಲೇಬರ್ ಪಕ್ಷದ ಆಡಳಿತವು ಎಂತೆಂತಹ ಆಡಳಿತಾತ್ಮಕ ಬದಲಾವಣೆಗಳನ್ನು ತರುವುದೆಂದು ಕಾದುನೋಡಬೇಕು. ಬದಲಾವಣೆ ತರುವುದು ಅಷ್ಟೇನೂ ಸುಲಭವಲ್ಲ ಎಂಬುದು ನಿಜವೇ. ಮುಖ್ಯವಾಗಿ ದೇಶದ ಆರ್ಥಿಕತೆ ಸುಧಾರಿಸಲು ಸಾಕಷ್ಟು ಪರಿಶ್ರಮ ಬೇಕಾಗಿದೆ. ವಲಸಿಗರ ಸಮಸ್ಯೆಯನ್ನು ಹೊಸ ಸರಕಾರ ಹೇಗೆ ನಿಭಾಯಿಸುತ್ತದೆಂದು ಕೂಡಾ ನೋಡಬೇಕು. ಪ್ಯಾಲೆಸ್ತೇನ್ ಸಮರ, ಉಕ್ರೇನ್ ಸಮರ ಮುಂತಾಗಿ ವಿದೇಶಾಂಗ ನೀತಿಯನ್ನು ನಿಭಾಯಿಸುವಲ್ಲೂ ಸರ್ಕಾರದ ಮುಂದಿನ ಹೆಜ್ಜೆಗಳನ್ನು ಗಮನಿಸಲಾಗುತ್ತಿದೆ.
ಭಾರತಕ್ಕೆ ಸಂಬಂಧಿಸಿ ಬ್ರಿಟನ್ ನ ನೀತಿಯಲ್ಲಿ ಏನಾದರೂ ಬದಲಾವಣೆಯಾಗುವುದೇ ಎಂಬುದೂ ಗಮನಿಸಬೇಕಾದ ವಿಷಯ. ಹಿಂದೊಮ್ಮೆ ಲೇಬರ್ ಪಕ್ಷವು ಭಾರತ ವಿರೋಧಿ ಧೋರಣೆ ಹೊಂದಿತ್ತು. ಕಾಶ್ಮೀರ ವಿಷಯದಲ್ಲಿ ಭಾರತ ವಿರೋಧಿ ನಿಲುವು ತಳೆದು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಆಗ್ರಹಿಸಿತ್ತು. ಆದರೆ ಸ್ಟಾರ್ಮರ್ ನೇತೃತ್ವದಲ್ಲಿ ಲೇಬರ್ ಪಕ್ಷವು ಭಾರತ ಪರವಾದ ನಿಲುವಿಗೆ ವಾಲಿದೆ. ಪಕ್ಷದಲ್ಲಿರುವ ಖಲಿಸ್ತಾನ ಪರವಾಗಿರುವ ಮುಖಂಡರನ್ನು ಕೂಡಾ ಹದ್ದುಬಸ್ತಿನಲ್ಲಿಟ್ಟಿದೆ. ಭಾರತದೊಂದಿಗೆ ನೂತನ ವ್ಯೂಹಾತ್ಮಕ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಲೇಬರ್ ಪಕ್ಷದ ಪ್ರಣಾಳಿಕೆ ಹೇಳಿದೆ. ಹಿಂದು ಫೋಬಿಯಾವನ್ನು ಖಂಡಿಸಿರುವ ಪಕ್ಷವು, ಇಂಗ್ಲೆಂಡಿನಲ್ಲಿ ಹೋಳಿ, ದೀಪಾವಳಿಯಂತಹ ಹಿಂದೂ ಹಬ್ಬಗಳನ್ನು ಆಚರಿಸುವುದನ್ನು ಬೆಂಬಲಿಸಲಿದೆ. ಉಳಿದಂತೆ ನೂತನ ಸರಕಾರವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಹಿತಾಸಕ್ತಿಗಳ ಕುರಿತಂತೆ ಹೇಗೆ ಪ್ರತಿಕ್ರಿಯಿಸುವುದೆಂಬುದನ್ನು ಮುಂದಿನ ದಿನಗಳು ಹೇಳಲಿವೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೬-೦೭-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ