ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ

ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ

ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ ಹೋಗುವ ಅಥವಾ ಅವರಿಗಿಂತ ಮುಂದೆ ಹೋಗಬೇಕೆನ್ನುವ ಧಾವಂತ, ಈ ಧಾವಂತದಲ್ಲಿ ಅದೆಷ್ಟೊಂದನ್ನ ಕಳೆದುಕೊಂಡಿದ್ದೇವೆ ಅನ್ನುವ ಯೋಚನೆಯೂ, ಆ ಯೋಚನೆಗೆ ಬೇಕಾದ ಸಮಯವೂ ನಮಗೆ ಸಾಲುತ್ತಿಲ್ಲ. ಬದುಕು ಬದಲಾಗಿದೆಯೇ ಅಥವಾ ಬದಲಾಗಿರುವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೀವೋ ಅಥವಾ ಬದಲಾವಣೆಯ ಬಯಸಿ ಆ ಬದುಕಿನ ನಿರೀಕ್ಷೆಯಲ್ಲಿರುವೆವೋ?. ಹೊಸತನ್ನ ಪಡೆಯುವ ಹಂಬಲದಲ್ಲಿ ಹಳತನ್ನ ಮರೆತುಬಿಟ್ಟು ಬಂದಿದ್ದೇವೆ, ಆ ಮರೆತ ವಸ್ತುವನ್ನ ಮತ್ತೆ ಪಡೆಯುವ ಮನಸ್ಸು ಈಗಿಲ್ಲ, ಒಂದು ವೇಳೆ ಇದ್ದರೂ ಹಿಂದಿರುಗಿ ಹೋಗಿ ಪಡೆಯುವ ಉತ್ಸಾಹವಿಲ್ಲ. ಆಗಿದ್ದಾಗಲಿ ಪಡೆದೇ ತೀರುತ್ತೇನೆಂಬ ಹುಮ್ಮಸ್ಸಿನಲ್ಲಿ ಬಂದ ದಾರಿಯಲ್ಲಿ ಹಿಂದಿರುಗಿ ಹೊರಟರೆ ಗಮ್ಯ ಸಿಗುವ ಸಾದ್ಯತೆ ತುಂಬಾಕಡಿಮೆ, ಸಿಕ್ಕರೂ ಆಗ ಅನುಭವಿಸಿದ್ದ ಆ ಭಾವ ಮತ್ತೆ ಮರಳಿ ಬರುವ ಸಾಧ್ಯತೆ ಕ್ಷೀಣ.

ಈ ಬದಲಾವಣೆ ಬೇಕಿತ್ತೇ ಎಂದು ಹಲುಬುತ್ತಿರುವ ಮತ್ತು ಅದರೊಂದಿಗೆ ಅನುಸರಿಸಿಕೊಂಡು ಹೋಗಬೇಕಾದ ಪೀಳಿಗೆ ಒಂದಾದರೆ, ಹಳತನ್ನ ಅನುಭವಿಸಿ ಹೊಸತನಕ್ಕೆ ಕಾಲಿಟ್ಟು ಎರಡಕ್ಕೂ ಸೇತುವೆಯಂತಿರುವ ಪೀಳಿಗೆ ಇನ್ನೊಂದು, ಅವೆರಡೂ ಗೊತ್ತಿರದೇ ಗೊತ್ತಿದ್ದರೂ ಅದನ್ನು ತಿಳಿದುಕೊಳ್ಳುವ ವ್ಯವಧಾನವಿಲ್ಲದೆ ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಿರುವ ಪೀಳಿಗೆ ಮತ್ತೊಂದು. ಇದು ಹೀಗೆಯೇ ತಿರುಗಬೇಕಾದಂಥಹ ಚಕ್ರ, ಆದರೆ ಈ ಚಕ್ರವು ಸ್ವಲ್ಪ ಜಾಸ್ತಿಯೇತಿರುಗುತ್ತಿದೆ ಅನ್ನುವ ಅನುಮಾನ ಕಾಡದಿರಲಾರದು.

ದೂರದಲ್ಲಿ ಓದುತ್ತಿರುವ ಮಗನು ಹೇಗಿದ್ದಾನೋ, ತಿಂಡಿ ಊಟ ಚೆನ್ನಾಗಿ ಮಾಡುತ್ತಿರುವನೋ, ಬಟ್ಟೆಬರೆಗಳನ್ನ ಚೆನ್ನಾಗಿ ತೊಳೆದುಕೊಳ್ಳುತ್ತಿರುವನೋ ಎಂಬ ಯೋಚನೆ ಅಮ್ಮನಿಗೆ ಅದರಂತೆ ತನ್ನ ಗಂಡನಿಗೆ ಹೇಳಿ ಒಂದು ಇನ್ಲ್ಯಾಂಡ್ ಲೆಟರ್ ತರಿಸಿ ಅದರಲ್ಲಿ ಅವನ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಬರೆಯಹೊರಟರೆ ಅಕ್ಕ ಮತ್ತೆ ತಂಗಿಗೂ ಅವನನ್ನ ವಿಚಾರಿಸುವ ಆಸೆ, ಖಾಲಿ ಇರುವ  ಜಾಗವನ್ನ  ಆದಷ್ಟು ಸಣ್ಣ  ಸಣ್ಣ ಅಕ್ಷರಗಳಿಂದ  ತುಂಬುವ  ಬಯಕೆ, ಅಂಟು ಹಾಕುವ ಜಾಗದಲ್ಲೂ ಮತ್ತೇನನ್ನೋ ಬರೆಯುವಾಸೆ, ಅಲ್ಲಿ ಬರೆದರೆ ಕಾಗದ ಹರಿಯುವಾಗ ಏನೂ ಕಾಣಿಸುವುದಿಲ್ಲ ಎಂದು ಅಮ್ಮ ಗದರಿಸಿದರೂ ಕೇಳದೆ ಬರೆದು, ಅಜ್ಜ  ಅಜ್ಜಿ ಹೇಳಿದ್ದನ್ನೂ ಸ್ವಲ್ಪ ಬರೆದು ಅಂಟನ್ನು ಹಾಕಿ ಪೋಸ್ಟ್ ಮಾಸ್ಟ್ರಿಗೆ ಕೊಟ್ಟರೆ ಏನೋ ಸಮಾಧಾನ. ಕಾಲೇಜ್ ಮುಗಿಸಿ ಹಾಸ್ಟೆಲ್ ತಲುಪಿ ತನ್ನ ಕೋಣೆಯ ಬಾಗಿಲು ತೆಗೆದ ತಕ್ಷಣ ಅಲ್ಲಿ ಕೆಳಗೆ ಬಿದ್ದಿರುವ  ಇನ್ಲ್ಯಾಂಡ್ ಲೆಟರ್ ತೆಗೆದು ಅದನ್ನು ನಿಧಾನಕ್ಕೆ ಹರಿದು ಓದಲು ತೊಡಗಿದರೆ ಅವನಿಗಾಗುತ್ತಿದ್ದ ಅನುಭೂತಿ ಅವಿಸ್ಮರಣೀಯ. ಕಾಗದ ಓದುತ್ತಿರುವಾಗ  ಆಗುತ್ತಿದ್ದ  ಆ ರೋಮಾಂಚನ ಬಹುಷಃ ಸ್ವತಹ ಅಪ್ಪ ಅಮ್ಮ ಅಕ್ಕ ತಂಗಿ ಎದುರಿಗೆ ಬಂದು ನಿಂತರೂ ಆಗುತ್ತಿರಲಿಲ್ಲವೇನೋ. ಸರಿ, ಘಟ್ಟದ  ಮೇಲಿಂದ  ಪತ್ರವೇನೋ ಬಂದಾಯ್ತು, ಈಗ ಘಟ್ಟದ ಮೇಲೆ ಪತ್ರ ಕಳಿಸಬೇಕಲ್ಲಾ, ಕಬೋರ್ಡಿನಲ್ಲಿರುತ್ತಿದ್ದ  ಪೋಸ್ಟ್ ಕಾರ್ಡ್ಗಳೆಲ್ಲವೂ ಖಾಲಿ.ಆದರೆ ನಾಳೆಯಿಂದ ಟೆಸ್ಟ್ಇದೆ. ಪೋಸ್ಟಾಫೀಸಿಗೆ ಹೋಗಿ ೧೫ ಪೈಸೆಯಒಂದು ಪೋಸ್ಟ್ಕಾರ್ಡ್ ತಂದು ಎಲ್ಲರ ಯೋಗಕ್ಷೇಮ ವಿಚಾರಿಸಿ, ತೋಟದಲ್ಲಿ ಏನು ಕೆಲಸ,  ಬೇಸಾಯಕ್ಕೆ ಮಳೆ ಚೆನ್ನಾಗಿ ಬಂತೇ, ಗದ್ದೆ ನಾಟಿಯಾಯಿತೇ, ಕರಿಯ ಬಿಳಿಯ (ಎತ್ತುಗಳು) ಚೆನ್ನಾಗಿವೆಯೇ, ಮಂಜ, ಭೈರ ಚಿಕ್ಕನನ್ನ ವಿಚಾರಿಸಿ ಟೈಗರನ್ನ (ಮನೆಯ ನಾಯಿ) ವಿಚಾರಿಸಿ, ಮಳೆಗಾಲ ಮುಗಿದ ಕೂಡಲೇ ಊರಿಗೊಮ್ಮೆ ಬರುವುದಾಗಿ ಹೇಳಿ  ಎಂದು ಹೇಳುವಷ್ಟರಲ್ಲಿ ಕಾಗದದ ಕೊನೆ ಬಂದು, ಇನ್ನುಳಿದದ್ದನ್ನ  ಅಡ್ರೆಸ್  ಬರೆಯುವ  ಜಾಗದ ಕೆಳಗೆ  ತುರುಕುವ  ಸನ್ನಾಹ, ಕೋಡುಬಳೆ, ಕರ್ಜಿಕಾಯಿ, ಕೆಸಿನ ಸೊಪ್ಪು ಕಾಯಿ ಕಡುಬು ಎಲ್ಲಾ ಮಾಡಿರು ಎಂದು ಅಮ್ಮನಿಗೆ ಹೇಳುವಲ್ಲಿಗೆ ಕಾಗದ ತನ್ನ ಜೀರ್ಣಶಕ್ತಿಯನ್ನ ಕಳೆದುಕೊಂಡಿರುತ್ತಿತ್ತು.    

ಅಪ್ಪ-ಮಗನಿಗೆ, ಅಳಿಯ-ಮಾವನಿಗೆ, ಮಗಳು-ಅಪ್ಪನಿಗೆ,ಗಂಡ-ಹೆಂಡತಿಗೆ, ಸುಗ್ಗಿಹಬ್ಬಕ್ಕೆ, ಊರ ಜಾತ್ರೆಗೆ, ಸಂತಸಕ್ಕೆ, ಭಾಂದವ್ಯಕ್ಕೆ, ನಲಿವಿಗೆ, ನೋವಿಗೆ ಬರೆದ ಕಾಗದಗಳೆಷ್ಟೋ, ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಪುಟ ತಿರುಗಿಸ ಹೋದರೆ ಹಳೆಯ ಸುಮಧುರ ನೆನಪುಗಳ ಖೋಡಿ. ಆದರೀಗ ಎಲ್ಲವೂ ಬದಲಾಗಿ ಹೋಗಿದೆ.  ಕೇವಲ ಒಂದು ಕರೆಯಿಂದ  ಮೇಲಿನ ಎಲ್ಲಾ ವಿಷಯಗಳನ್ನ ಬಾಯಿಮಾತಿನಲ್ಲಿ ಹೇಳಿ ಮುಗಿಸುವ ಮಟ್ಟಕ್ಕೆ ಬಂದು ನಿಂತಿದ್ದೇವೆ ನಾವು. ಒಂದು ಮೊಬೈಲ್ ಎನ್ನುವ ಸಾಧನವು ಪತ್ರ ವ್ಯವಹಾರವನ್ನು, ಅದು ಕೊಡುತ್ತಿದ್ದ  ಆ ರೋಮಾಂಚನವನ್ನು, ಆ ಅಕ್ಷರಗಳಲ್ಲಿ ತುಂಬಿರುತ್ತಿದ್ದ  ಭಾವಗಳನ್ನ ನುಂಗಿ ಹಾಕಿದೆ.

ಆಗೆಲ್ಲಾ ದೂರದಲ್ಲಿರುವ ಸಂಬಂಧಿಕರ ಬಳಿ ಫೋನಿನಲ್ಲಿ ಮಾತನಾಡುವುದೆಂದರೆ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆ ಫೋನಿನ ರಿಸೀವರ್ ಎತ್ತಿ ಬೇಕಾದ  ಸಂಖ್ಯೆಯಲ್ಲಿ ಬೆರಳಿಟ್ಟು ಅದಿರುವ ಜಾಗದಿಂದ ಕೊನೆಗೆ ಮುಟ್ಟಿಸಿದರೆ ಏನೋ ಪುಳಕ. ಟ್ರಂಕ್ ಕಾಲ್ ಮಾಡಿ ಆ ಕರೆಗೆ ಮನೆಮಂದಿಯೆಲ್ಲಾ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಿದ್ದರು, ಬಂದರೆ ೧೫ ನಿಮಿಷವಾದ ಮೇಲೆ ಇಲ್ಲವೆಂದರೆ ೧ ಘಂಟೆ ೨ ಘಂಟೆ ಕಾಯಬೇಕಾಗುತ್ತಿತ್ತು. ಕಾಲ್ ಬಂದ ನಂತರ ನೆಂಟರ ಜೊತೆ ಮಾತನಾಡುವ ಸಂಭ್ರಮವಿದೆಯಲ್ಲಾ ಅದನ್ನ ನೋಡಿಯೇ ಅನುಭವಿಸಬೇಕು.  ಕೆಲವೊಮ್ಮೆ ರಾತ್ರಿ ಟ್ರಂಕ್ ಕಾಲ್ ಮಾಡಿದರೆ ಬೆಳಗ್ಗೆ ಬರುತ್ತಿದ್ದ ಉದಾಹರಣೆಗಳುಂಟು!. ಈಗ ದೂರವಾಣಿ ಎನ್ನುವುದು ಅದರ ಹೆಸರಿಗೆ ತಕ್ಕಂತೆ ಆಗಿದೆ. ಮನೆಯಲ್ಲಿರುತ್ತಿದ್ದ ಚೆಂದಚೆಂದದ ಫೋನ್ಗಳು ಈಗ ಬರಿಯ ನೆನಪುಗಳು. ಮೊಬೈಲ್ ಎಂಬ ಮಹಾದೈತ್ಯ ಅವುಗಳ ಸ್ಥಾನವನ್ನು ಕಸಿದುಕೊಂಡಿದೆ. ತಂತ್ರಜ್ನ್ನಾನ ಮಾನವನ ಕೆಲಸಗಳನ್ನು ಸುಲಭ ಸಾಧ್ಯವಾಗಿಸಿದೆ, ಆದರೆ ಯಾವ ಪುರುಷಾರ್ಥಕ್ಕೆ? ಮೊಬೈಲ್ ಎದುರಿಗಿದ್ದರೂ ನೆಂಟರಿಷ್ಟರ ಬಳಿ ಮಾತನಾಡಲು ಸಮಯವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದೇವೆ. ಮನಸ್ಸುಗಳು ಅಷ್ಟರ ಮಟ್ಟಿಗೆ ಸಂಕುಚಿತಗೊಂಡಿವೆ.

ನೆಂಟರಿಷ್ಟರ ಮನೆಗೆ ಹೊರಡುವುದೇ ಸಂಭ್ರಮ, ಮಾವನ ಮನೆಗೋ ಅತ್ತೆಯ  ಮನೆಗೋ, ಅಮ್ಮನ ತವರು ಮನೆಗೋಹೋಗಲು ಅಪ್ಪ ಒಪ್ಪಿಗೆ ಕೊಟ್ಟಾಕ್ಷಣ  ಮಾಡಿಯ (ಮಹಡಿ) ಮೇಲೆ ಇರುವ ಬ್ಯಾಗನ್ನ ಹುಡುಕಿ ಅದಕ್ಕೆ ೪-೫ ಜೊತೆ ಬಟ್ಟೆ ಹಾಕಿ ಅಮ್ಮ ಮತ್ತೆ ಅಕ್ಕನ  ಜೊತೆ  ಹೊರಟು ಬಸ್ ಸ್ಟ್ಯಾಂಡಿಗೆ ಬಂದು ಬಸ್ಸಿಗೆ ಕಾಯ್ದು ಅದು ಬಂದಾಕ್ಷಣ ಹತ್ತಿ ಆ ಜನಜಂಗುಳಿಯಲ್ಲಿ ನುಗ್ಗಿ ಪೇಟೆ ಬಂದ ತಕ್ಷಣ ಇಳಿದು ಎದುರುಗಡೆ ಇರುವ ಸಿನೆಮಾ ಮಂದಿರದಲ್ಲಿ ಯಾವ ಸಿನೆಮಾ ಎಂದು ಕಣ್ಕಣ್ಬಿಟ್ಟು ನೋಡುತ್ತಿರುವಷ್ಟರಲ್ಲಿ ಅಮ್ಮ ಕೈ ಎಳೆದು ಇನ್ನೊಂದು ಬಸ್ಸಿಗೆ ಹತ್ತಿಸಿದಾಗಲೇ ಆ ಸ್ವಪ್ನಲೋಕದಿಂದ ಎಚ್ಚರ. ಮಾವನ ಮನೆ ತಲುಪಿದಾಕ್ಷಣ ಅಲ್ಲಿ ಆಡುತ್ತಿದ್ದ ಮಾವನ ಮಕ್ಕಳು ಅತ್ತೆ, ಅಕ್ಕ ಅಣ್ಣ ಬಂದ್ರು ಅಂತ ಕಿರುಚಿ ಒಳಗೆ ಓಡಿದರೆ ಅವರು ಬಂದ ವಿಷಯ ಕ್ಷಣಾರ್ಧದಲ್ಲಿ ತಿಳಿಯುತ್ತಿತ್ತು. ಅತ್ತೆ ಹೊರಬಂದು ಕಾಲು ತೊಳೆಯಲು ತಂಬಿಗೆಯಲ್ಲಿ ನೀರು ತಂದು ಇಡುವಷ್ಟರಲ್ಲಿ ಮಾವನ ಮಕ್ಕಳ ಜೊತೆ ಇವನು ತೋಟದ ಹಾದಿ ಹಿಡಿದಾಗಿರುತ್ತಿತ್ತು, ಸೀಬೆ, ಕಿತ್ತಲೆ, ಚಕೋತ, ನೇರಳೆ ಹಣ್ಣು ಎಲ್ಲವೂ ಆ ಸಣ್ಣ ಹೊಟ್ಟೆಯಲ್ಲಿ ಎಷ್ಟು ಬೇಕೋ ಅಷ್ಟು ಸ್ಥಾನವನ್ನ ಆಕ್ರಮಿಸಿಕೊಂಡಿರುತ್ತಿದ್ದವು.ಅಮ್ಮ ಮಾರನೇ ದಿನ ಮನೆಗೆ ಹೊರಟುಬಿಡುತ್ತಿದ್ದಳು, ಇವನು ಒಂದು ವಾರ ಮಾವನ ಮಕ್ಕಳ ಜೊತೆ ಸೇರಿ ಊರು ಕೊಳ್ಳೆ ಹೊಡೆದೇ ಊರಿಗೆ ಹಿಂದಿರುಗುತ್ತಿದ್ದದ್ದು. ಆದರಿಂದು ನೆಂಟರ ಮನೆಯಲ್ಲಿ ವಾರಗಟ್ಟಲೆ ಉಳಿಯುವುದಿರಲಿ, ಹೋಗಿಬರುವುದೇ ಕಡಿಮೆಯಾಗಿದೆ. ಒಂದೊಮ್ಮೆ ಹೋದರೂ ಒಂದು ಹೊತ್ತು ಊಟ ಮಾಡಿ ತುಂಬಾ ಹೊತ್ತಾಯಿತು ಎಂದು ಹೊರಡುವ ಪರಿಸ್ತಿತಿ ಬಂದಿದೆ. ಸಂಬಂಧಗಳು ಸಂಕೀರ್ಣಗೊಂಡಿವೆ, ಅಪ್ಪನ ಕಡೆಯವರು ಅಮ್ಮನ  ಕಡೆಯವರು ಯಾರೊಬ್ಬರೂ ಗೊತ್ತಿಲ್ಲ, ಅಪ್ಪ,ಅಮ್ಮನನ್ನೇ ಮಾತನಾಡಿಸಲು ಪುರುಸೊತ್ತಿಲ್ಲದಿರುವಾಗ ಅತ್ತೆ ಮಾವ ಅಣ್ಣ ಅತ್ತಿಗೆ ಅಕ್ಕ ಬಾವ ಇನ್ನೆಲ್ಲಿ ನೆನಪಿಗೆ ಬಂದಾರು?.

ಟಿ. ವಿ ನಮ್ಮನ್ನೆಲ್ಲಾ ಆಕ್ರಮಿಸುವ ಮುಂಚೆ ನಮ್ಮೆಲ್ಲರನ್ನ ಸೂರೆಗೊಂಡಿದ್ದ  ಸಾಧನ ರೇಡಿಯೋ, ಕೇಳುಗರಿಗೆ ಒಂದು ಅಭೂತಪೂರ್ವವಾದ ಅನುಭವ ಕೊಡುತ್ತಿದ್ದ ಒಂದು ಅಶರೀರವಾಣಿ. ಬೆಳಗ್ಗೆ ಎದ್ದು ಓದುತ್ತಾ ಕುಳಿತರೆ, ಮನೆಯ ಚಾವಡಿಯಲ್ಲಿ ಅಪ್ಪ ಹಾಕಿಟ್ಟ ರೇಡಿಯೋ ತನ್ನ ಕೆಲಸವನ್ನ ಪ್ರಾರಂಭಿಸುತ್ತಿತ್ತು. ಮೊದಮೊದಲು ಕಿವಿಗೆ ಕೇಳಿಸುತ್ತಿದ್ದದ್ದು ಸಂಸ್ಕೃತ ವಾರ್ತೆ, ಆಮೇಲೆ ಪ್ರದೇಶ ಸಮಾಚಾರ, ಆ ನಂತರ ವಾರ್ತೆಗಳು ನಂತರ ಚಿತ್ರಗೀತೆಗಳು. ಆ ಚಿತ್ರಗೀತಗಳನ್ನ ಕೇಳುವುದೇ ಒಂದು ಆನಂದದ ಕ್ಷಣ. ಕ್ರಿಕೆಟ್  ಪಂದ್ಯ ನಡೆಯುವಾಗ ಯಾರಾದರೂ ರೇಡಿಯೋವನ್ನ ಕಿವಿಗೆ ಆನಿಸಿಕೊಂಡಿದ್ದರೆ ಅವರು ಕಾಮೆಂಟರಿ ಕೇಳುತ್ತಿದ್ದಾರೆ ಎಂದೇ ಅರ್ಥ, ಅವರ ಹತ್ತಿರ ಹೋಗಿ ಸ್ಕೋರ್ ಕೇಳಿದರೇ ಸಮಾಧಾನ. ಸಾಮಾನ್ಯವಾಗಿ ಆಗ ಯಾರಿಗೂ ಕಾಮೆಂಟರಿ ಅರ್ಥವಾಗುತ್ತಿರಲಿಲ್ಲ ಆದರೆ ಓವರ್ ಆದ ತಕ್ಷಣ  ಸ್ಕೋರ್ ಹೇಳುತ್ತಿದ್ದುದರಿಂದ ಗೊತ್ತಾಗುತ್ತಿತ್ತು. ಅದರ ನಂತರ ಕ್ರಮೇಣ  ಟಿ. ವಿ ಕೆಲವರ ಮನೆಗಳನ್ನ ಪ್ರವೇಶಿಸಿತು, ಯಾರದೋ ಮನೆಗೆ  ಟಿ. ವಿ ಬಂತೆಂದರೆ ಇಡೀ ಊರಿನ ಹುಡುಗರ ಹಿಂಡು ಅಲ್ಲಿ ನೆರೆದಿರುತ್ತಿತ್ತು. ಆ ಆಂಟೆನಾ ತಿರುಗಿಸಿ  ಟಿ. ವಿ ಸೆಟ್ ಆದ ಬಳಿಕ  ಟಿ. ವಿಯ ಮುಂದೆ ಇಡೀ ವಟಾರವೇ ಬಂದು ಕುಳಿತಿರುತ್ತಿತ್ತು. ರಾಮಾಯಣ, ಮಹಾಭಾರತ, ಚಿತ್ರಹಾರ್, ಚಿತ್ರಮಂಜರಿ....ದೂರದರ್ಶನ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತ್ತು. ಆ ಕಾರ್ಯಕ್ರಮಗಳನ್ನ ನೋಡುತ್ತಿದ್ದರೆ ತಾವೇ ಅದರಲ್ಲಿ ಲೀನವಾಗಿ ಹೋಗಿರುವ ಭಾವ. ಆದರಿಂದು ಹಲವಾರು ಎಫ್ ಎಂಗಳ ಭರಾಟೆಯಲ್ಲಿ, ನೂರಾರು ಚಾನೆಲ್ಗಳ ಸಾಗರದಲ್ಲಿ ಮುಳುಗಿಹೋಗಿದ್ದೇವೆ. ಎಷ್ಟು ನೋಡಿದರೂ, ಯಾವುದನ್ನೇ ನೋಡಿದರೂ ಅತೃಪ್ತಿಯೇ. ಚಾನೆಲ್ಗಳಿಗಾಗಿ ಅಣ್ಣ ತಂಗಿ ಅಕ್ಕ ತಮ್ಮನಲ್ಲೇ ಕಿತ್ತಾಟ. ಆಗ ಸ್ವಲ್ಪವಿದ್ದರೂ ಎಲ್ಲವೂ ಸಿಕ್ಕ ಸಂತೃಪ್ತಿ, ಈಗ ಅತಿಯಾಗಿದ್ದರೂ ಏನೂ ಸಿಗದ  ಅತೃಪ್ತಿ.

ಅಮ್ಮ ಮಾಡಿಕೊಟ್ಟ ಕೋಡುಬಳೆ, ಅದನ್ನು ಆ ಮಳೆಯಲ್ಲಿ ಮೆಲ್ಲುತ್ತಾ ಕುಳಿತ ಸಂಭ್ರಮ ಬಹುಷಃ ದೊಡ್ಡ ಬೇಕರಿಯಲ್ಲಿ ಭಿನ್ನ ಭಿನ್ನವಾದ ತಿಂಡಿಗಳನ್ನ ಕೊಂಡು ಆ ಜನಜಂಗುಳಿಯ ಮಧ್ಯೆ ತಿನ್ನುವಾಗ ಬರದು. ಅಪ್ಪ ಕೊಟ್ಟ ೫೦ ಪೈಸೆಯಲ್ಲಿ ಎರಡು ಟಾಫೀ (ಕಡ್ಲೆ ಮಿಠಾಯಿ) ಮತ್ತೆ ೧೦ ಗೋಲಿ ತೆಗೆದುಕೊಂಡಾಗ ಆದ ಸಂತೋಷ ಈಗ ಸಾವಿರ ರೂಪಾಯಿ ಕೊಟ್ಟರೂ ಸಿಗಲಾರದು. ಕೆಂಡದ ಮೇಲೆ ರೊಟ್ಟಿ ಬೇಯುತ್ತಿರುವಾಗ ಅದನ್ನು ತೆಗೆದುಕೊಳ್ಳಲು ಅಣ್ಣನ, ತಮ್ಮನ, ಅಕ್ಕನ, ತಂಗಿಯ ಜೊತೆ ಕಿತ್ತಾಡಿ ತಿಂದಾಗ ಸಿಗುತ್ತಿದ್ದ ತೃಪ್ತಿ ಯಾವುದೇ ಫೈವ್ ಸ್ಟಾರ್ ಹೋಟೆಲ್ನ ನೀರವ ವಾತಾವರಣದಲ್ಲಿ ಕೂತು ತಿನ್ನುವಾಗ ಸಿಗುವುದಿಲ್ಲ. ಜಾತ್ರೆಯಲ್ಲಿ ನಾಲ್ಕಾಣೆಗೆ ಕೊಂಡ ಬಲೂನ್ ಸೃಷ್ಟಿಸುತ್ತಿದ್ದ ಜಾದೂ ಈಗಿನ ಯಾವುದೇ ಮಾಲ್ಗಳಲ್ಲಿ ಕೊಂಡರೂ ಬರುವುದಿಲ್ಲ. ಆ ದಿವ್ಯ  ಮೌನದಲಿ ಮುಂಜಾವಿನಲ್ಲಿ ನೀಲಾಕಾಶದಲ್ಲಿ ಸೂರ್ಯೋದಯ, ಮುಸ್ಸಂಜೆಯಲಿ ದಿಗಂತದಲ್ಲಿ ಸೂರ್ಯಾಸ್ತ, ರಾತ್ರಿಯ ಹೊತ್ತು ಆಗಸದಲ್ಲಿ ಮೂಡುತ್ತಿದ್ದ ನಕ್ಷತ್ರಗಳ ಚಿತ್ತಾರ ನೀಡುತ್ತಿದ್ದ ಆ ದಿವ್ಯಾನುಭವವನ್ನ ಕಾಂಕ್ರೀಟ್ ಕಾಡು ಮುಚ್ಚಿಹಾಕಿದೆ.

ಅಕ್ಕ ತಂಗಿ ತಮ್ಮಂದಿರ ಜೊತೆ ಚೌಕ ಭಾರ, ಚೆನ್ನಮಣೆ ಆಡಿದ, ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳ ಜೊತೆಗೆ ತೋಟಕ್ಕೆ ನುಗ್ಗಿದ, ಬಸ್ಸಿನ ಮೇಲೆ ಕುಳಿತು ಹೋದ, ದನ ಕಾಯ್ದ, ಊರ ಹುಡುಗರೊಂದಿಗೆ ಆಡಿದ ಗೋಲಿ, ಬುಗುರಿ, ಮರಕೋತಿಯಾಟ, ಲಗೋರಿ ಇವೆಲ್ಲವೂ ಈಗ ನೆನಪುಗಳು. ಮತ್ತೊಮ್ಮೆ ಬಯಸಿದರೂ ಬಾರದು, ಬಯಸುವುದು ಒತ್ತಟ್ಟಿಗಿರಲಿ ಈಗ ಹೋಗಿ ನೋಡಿಅನುಭವಿಸೋಣವೆಂದರೂ ಸಿಗದಂತಹ ಹಂತಕ್ಕೆ ಬಂದು ನಿಂತಿದ್ದೇವೆ. ಬಯಸದೆ ಬಂದ ಬದಲಾವಣೆಗೆ ಒಗ್ಗಿಕೊಂಡು ಹಳತನ್ನ ಹಿಂದೆ ಬಿಟ್ಟು ಬಂದಿದ್ದೇವೆ. ಒಮ್ಮೆ ಹಿಂದಿರುಗಿ ನೋಡಿ, ಎಲ್ಲವೂ ಕಾಣೆಯಾಗಿದ್ದರೂ ನಮ್ಮೊಟ್ಟಿಗೆ ಆಡಿದ, ನೋವಿಗೆ, ನಲಿವಿಗೆ ಸ್ಪಂದಿಸಿದ, ಸುಮಧುರ ಕ್ಷಣಗಳಿಗೆ ಸಾಕ್ಷಿಯಾದ, ನೆನಪಿಸಿಕೊಳ್ಳಲಾರದೆ ಮರೆತೇಹೋದ ಎಷ್ಟೋ ಬಂಧು ಬಾಂಧವರು,ಸ್ನೇಹಿತರು, ಹಿತೈಷಿಗಳು ಇದ್ದಾರೆ. ಭೇಟಿಯಾಗಲಾಗದಿದ್ದರೂ ಅವರಿಗೊಂದು ಕರೆ ಮಾಡಿ ಆ ನೆನಪುಗಳು ಮತ್ತೊಮ್ಮೆ ಚಿಮ್ಮಿ ಬರಬಹುದು. ಮರೆತುಹೋದ ಭಾವಗಳೆಲ್ಲಾ ಮತ್ತೊಮ್ಮೆ ಮರಳಿ ಬರಬಹುದೇನೋ.

                                                                       
                                                                                                        ಚೇತನ್ ಕೋಡುವಳ್ಳಿ

Comments

Submitted by sathishnasa Wed, 09/26/2012 - 11:35

ಹಳೆಯ ನೆನಪಿನಂಗಳಕ್ಕೆ ಕರೆದೊಯ್ಯಿತು ನಿಮ್ಮ ಲೇಖನ >> ಆಗ ಸ್ವಲ್ಪವಿದ್ದರೂ ಎಲ್ಲವೂ ಸಿಕ್ಕ ಸಂತೃಪ್ತಿ, ಈಗ ಅತಿಯಾಗಿದ್ದರೂ ಏನೂ ಸಿಗದ ಅತೃಪ್ತಿ.<< ಈ ಮಾತಂತು ನೂರು ಪ್ರತಿಶತ ನಿಜ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು ಚೇತನ್ ರವರೇ ....ಸತೀಶ್
Submitted by venkatb83 Wed, 09/26/2012 - 17:47

ಚಿಕ್ಕು- ಮೊಬೈಲು ಎಫೆಕ್ಟ್ ಬಗ್ಗೆ ಹೇಳಿದ್ದು ನಿಜ.. ಹಾಗೆಯೇ ಇನ್ನೊಂದು ಸೇರಿಸಬೇಕು... ಸರ್ವೇ ಸಾಮಾನ್ಯವಾಗಿ ಮನೆಗೆ ನೆಂಟರು ಬಂದಾಗ ನಾವು ಮಾಡುವುದು ಮತ್ತು ನಾವೇ ಅತಿಥಿಗಳಾಗಿ ಬೇರೆಯೇವರ ಮನೆಗೆ ಹೋದಾಗ ಅವರು ಮಾಡುವುದು ಏನು? ಟೀ ವಿ ಹಾಕಿ ಇಲ್ಲ ಪತ್ರಿಕೆ ಪುಸ್ತಕ ಕೊಟ್ಟು ಓದುತ್ತಿರಿ ನೋಡುತ್ತಿರಿ ಎಂದು ಹೇಳಿ ಒಳಗೆ ಹೋಗಿ..... ಇಲ್ಲವೇ ಅಲ್ಲಿಯೇ ಮುಂದೆ ಕುಳಿತು ಟೀ ವಿ ಕಡೆ ನೋಡುತ್ತಾ ಮುಲಾಜಿಗೆ ಎಂಬಂತೆ ಮಾತಾಡೋದು.....!! ಆ ತರಹದ ಅನುಭವ ನಿಮಗಾಗಿಲ್ಲವೇ? ಅಮಗೆ ಬೇಜಾನ್ ಆಗಿದೆ ಅದ್ಕೆ.... ಅದ್ಕೆ... ನಾವ್ ಬೇರೆಯವರ ಮನೆಗೆ ಹೋಗೋಲ್ಲ.. ಆರನ್ನ ಹೊರಗಡೆಯೇ ಮೀಟ್ ಮಾಡೋದು ಆಗ ಅವ್ರಿಗೆ ನಮ್ನೇ ನೋಡುತ್ತಾ ಮಾತಾಡುವ ಆನಿವಾರ್ಯ..!! ಹೇಗಿದೆ ಐಡಿಯಾ?? ನಿಮ್ಮ ಬರಹದ ಬಹುಪಾಲು ಅಂಶಗಳು ಎಲ್ಲರ ಮನದಲ್ಲಿ ಮೂಡುವನ್ತವೆ ಅವಕ್ಕೆ ಅಕ್ಷರ ರೂಪ ಕೊಟ್ಟು ನಮ್ ಭಾವನೆಗಳ ಅನಾವರಣ ಮಾಡಿರುವಿರಿ .. ಅಂದ್ ಹಾಗೆ 'ಮರಿ ಚಿಕ್ಕು' ಏನಾರ??????? ನನ್ನಿ ಶುಭವಾಗಲಿ. \|
Submitted by Chikku123 Thu, 09/27/2012 - 11:13

In reply to by venkatb83

ಧನ್ಯವಾದ ಸಗಿಯವ್ರೆ <ಆ ತರಹದ ಅನುಭವ ನಿಮಗಾಗಿಲ್ಲವೇ? ಅಮಗೆ ಬೇಜಾನ್ ಆಗಿದೆ> :) :) ಇಲ್ಲ ಹಾಗೇನೂ ಆಗಿಲ್ಲ! ಮುಂದೆ ಆಗ್ಬಹುದೇನೋ! <ನಿಮ್ಮ ಬರಹದ ಬಹುಪಾಲು ಅಂಶಗಳು ಎಲ್ಲರ ಮನದಲ್ಲಿ ಮೂಡುವನ್ತವೆ ಅವಕ್ಕೆ ಅಕ್ಷರ ರೂಪ ಕೊಟ್ಟು ನಮ್ ಭಾವನೆಗಳ ಅನಾವರಣ ಮಾಡಿರುವಿರಿ> ನಿಜ <ಅಂದ್ ಹಾಗೆ 'ಮರಿ ಚಿಕ್ಕು' ಏನಾರ???????> :) ಇಲ್ಲ
Submitted by kavinagaraj Thu, 09/27/2012 - 16:43

ಚಿಕ್ಕೂ, ಒಳ್ಳೆಯ ನೆನಪುಗಳು. ಈಗಿನವೂ ಬದಲಾಗುತ್ತಲೇ ಇರುತ್ತದೆ. ಬದಲಾವಣೆಗಳೂ ಒಳ್ಳೆಯದೇ! ಒಂದು ಕಾರ್ಡು ತಲುಪಲು ವಾರಗಟ್ಟಲೆ ಆಗುತ್ತಿತ್ತು. ಈಗ ಯಾವುದೇ ಮೂಲೆಯಲ್ಲಿರಲಿ, ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದು! ಮುಖತಃ ನೋಡಬಹುದು, ಮಾತನಾಡಬಹುದು!! ಧನ್ಯವಾದಗಳು.
Submitted by Chikku123 Thu, 10/04/2012 - 11:36

In reply to by kavinagaraj

ಅದು ನಿಜ ಸರ್...ಆಯಾ ಕಾಲಕ್ಕೆ ಬದಲಾಗುತ್ತಿರುತ್ತವೆ. ವಾರಗಟ್ಟಲೆ ತೆಗೆದುಕೊಂಡ ಕಾಗದ ತಲುಪಿ ಓದಿದಾಗ ಸಿಗುತ್ತಿದ್ದ ಸಂತೋಷ ಈಗೆಲ್ಲಿ!! ಪ್ರತಿಕ್ರಿಯೆಗೆ ಧನ್ಯವಾದ