ಬದುಕಿನೊಂದು ತಿರುವಿನಲಿ

ಬದುಕಿನೊಂದು ತಿರುವಿನಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಶುಭಾ ಎ.ಆರ್. (ದೇವಯಾನಿ)
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೧

"‘ದೇವಯಾನಿ’ ಎಂಬ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೃಜನಶೀಲ ಬರಹಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ಶುಭಾ ಎ ಆರ್ ಅವರ ಮತ್ತೊಂದು ಮಹತ್ವದ ಆಸಕ್ತ ಕ್ಷೇತ್ರ ಅನುವಾದ. ಇವರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ಹಲವು ಕಥೆಗಳು ಈಗಾಗಲೇ ತುಷಾರ, ಮಯೂರಗಳಲ್ಲಿ ಪ್ರಕಟಗೊಂಡಿವೆ.

ವಿಜ್ಞಾನ ಮತ್ತು ಗಣಿತ ಶಿಕ್ಷಕಿಯಾಗಿ ಅಸಂಖ್ಯಾತ ವಿದ್ಯಾರ್ಥಿಗಳ ಅರಿವಿಗೆ ನೀರೆರೆವ ಮಕ್ಕಳಿಗಾಗಿಯೇ ವಿಜ್ಞಾನ ನಾಟಕಗಳನ್ನೂ ಬರೆದು ‘ಧರೆಯನುಳಿಸುವ ಬನ್ನಿರಿ' ಎಂಬ ಮೂರು ವೈಜ್ಞಾನಿಕ ನಾಟಕಗಳುಳ್ಳ ಪುಸ್ತಕ ಹೊರತಂದಿದ್ದಾರೆ. ‘ತುಟಿ ಬೇಲಿ ದಾಟಿದ ನಗು' (ಕವಿತೆಗಳು) ಮತ್ತು ‘ತುಂಡು ಭೂಮಿ ತುಣುಕು ಆಕಾಶ' (ಕತೆಗಳು) ಕೃತಿಗಳು ಈಗಾಗಲೇ ಪ್ರಕಟವಾಗಿವೆ.

ಸದ್ಯದ ಇಲ್ಲಿನ ಕಥೆಗಳು ಇಂಗ್ಲೆಂಡ್, ಅಮೇರಿಕಾ ಮತ್ತು ಫಿಲಿಫೈನ್ಸ್ ನ ಒಟ್ಟು ಐವರು ಮಹತ್ವದ ಲೇಖಕರ ಕತೆಗಳ ಅನುವಾದವಾಗಿದೆ. ೧೮೬೨ ರಿಂದ ೨೦೧೨ರವರೆಗಿನ ಕಾಲಘಟ್ಟದಲ್ಲಿ ಪ್ರಸಿದ್ಧ ಕತೆಗಾರರಿಂದ ಬರೆಯಲ್ಪಟ್ಟಿರುವ ಈ ಐದೂ ಕಥೆಗಳು ತಮ್ಮದೇ ಆದ ಕಾರಣಕ್ಕೆ ಓದುಗರಿಗೆ ಬೆರಗು ಹುಟ್ಟಿಸುತ್ತವೆ. ಅಲ್ಜೆರಾನ್ ಬ್ಲಾಕ್ ವುಡ್, ಅಲ್ಫ್ರೆಡ್ ಮ್ಯಾಕ್ ವೇ, ರೇ ಡಗ್ಲಾಸ್ ಬ್ರಾಡ್ ಬರಿ, ಓ ಹೆನ್ರಿ ಮತ್ತು ರಾಬರ್ಟ್ ಆರ್ಥರ್ ಅವರ ಆಯ್ದ ಒಟ್ಟು ಐದು ಕಥೆಗಳಿವೆ. ಶಾಪಾಗ್ನಿ, ಪ್ರತಿಮೆಯ ಬಾಹುಗಳಲಿ, ಆಟ, ಜೇಡ ಕಥೆಗಳು ಹೆಜ್ಜೆ ಹೆಜ್ಜೆಗೂ ಓದುಗರ ಕುತೂಹಲ ಕೆರಳಿಸುವ ಇಲ್ಲಿನ ಕಥೆಗಳು ಕಥಾಚಿತ್ರವನ್ನು ಕಣ್ಣಿಗೆ ಕಟ್ಟಿಕೊಡುವುದರ ಮೂಲಕ ಅಪರಾಧ, ಅತೀಂದ್ರಿಯ ಜಗತ್ತಿನ ಬಾಗಿಲನ್ನು ತೆರೆಯುತ್ತವೆ, ಜೊತೆಗೇ ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡುತ್ತವೆ. ಬದುಕೊಂದು ತಿರುವಿನಲಿ ಸಣ್ಣ ಕಥೆಯಾದರೂ ಕಥಾನಾಯಕನ ಪರಿಸ್ಥಿತಿಗೆ ಮನ ಮರುಗುತ್ತದೆ.

ತಮ್ಮ ಅನುವಾದ ಮತ್ತು ಓದಿನ ಮೂಲಕ ಅಪರೂಪದ ಕಥನಗಳನ್ನು ಶೋಧಿಸುವ ಶುಭಾ ಇಲ್ಲಿ ಒಬ್ಬ ಸಮರ್ಥ ಅನುವಾದಕಿಯಾಗಿ ನಿಲ್ಲುತ್ತಾರೆ. ಭಿನ್ನ ಭೌಗೋಳಿಕ, ಭಾಷಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಕನ್ನಡಕ್ಕೆ ತರುವುದು ಸರಳವಲ್ಲ. ಇಂಗ್ಲೀಷ್ ಭಾಷೆಯ ಒಳ ಲಯ ಮತ್ತು ಅದರ ಮೊನಚನ್ನು ಬಲ್ಲ ಶುಭಾ ಸಲೀಸಾಗಿ ಕನ್ನಡಕ್ಕೆ ತಾಕಿಸಬಲ್ಲರು. ಇಲ್ಲಿನ ಕತೆಗಳಲ್ಲಿ ಮನುಷ್ಯನ ಆಳವಾದ ದಾಹ, ಹುಡುಕಾಟ, ವಿಸ್ಮಯ, ಆಕಸ್ಮಿಕಗಳ ಮೇಲಾಟ, ಮಾತುಗಾರಿಕೆಯ ಮೂಲಕ ತಲುಪಬಲ್ಲ ಗಮ್ಯವನ್ನು ಕಾಣಬಹುದು. ಓದುಗರನ್ನು ಕೊನೆಯವರೆಗೂ ತುದಿಗಾಲಲ್ಲಿ ನಿಲ್ಲಿಸುವಂತೆ ಹಿಡಿದಿಡುವ ಇಲ್ಲಿನ ಕತೆಗಳು ಕನ್ನಡ ನುಡಿ ಪರಂಪರೆಗೆ ಹೊಸ ಸ್ಪರ್ಷವನ್ನು ತಂದುಕೊಟ್ಟಿವೆ. ಅನುವಾದ ಸಾಹಿತ್ಯ ಕೇವಲ ಯಾಂತ್ರಿಕತೆಯಲ್ಲ, ಅದು ಹೊರಜಗತ್ತನು ನಮ್ಮೊಳಗೆ ತುಂಬಿಕೊಳ್ಳಲು ಇರುವ ಜೀವಂತಿಕೆಯ ಸೇತುವೆ ಎಂಬುದನ್ನು ಶುಭಾ ಅವರು ಅನುವಾದಿಸಿರುವ ಇಲ್ಲಿನ ಕತೆಗಳು ಮತ್ತೆ ಮತ್ತೆ ಸಾಬೀತು ಪಡಿಸುತ್ತವೆ. ಶುಭಾ ಅವರ ಪ್ರಯತ್ನ ಸಾಹಿತ್ಯಾಸಕ್ತರನ್ನು ತಲುಪಲಿ" ಎಂದು ಪುಸ್ತಕಕ್ಕೆ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ ಹಿರಿಯ ಲೇಖಕರಾದ ವಾಸುದೇವ ನಾಡಿಗ್ ಅವರು.