ಬದುಕು-ಬವಣೆ

ಬದುಕು-ಬವಣೆ

ಬರಹ

ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ
ಸುಡು ಬಿಸಿಲ ಕಡು ಕೋಪಕೆ ಕರಟಿಹೊಯ್ತ ಮುರುಟಿ ಮುರುಟಿ
ಧರೆಗೊರಗುವ ನೋವ ನಡುವೆ ವಿಶಾದದ ನಗು, ಏನಿದು ಸತ್ವಹೀನ ಬದುಕು?

ಸುಗ್ಗಿ ಕಾಲದ ಕಂಪಿನಲಿ ಸೊಕ್ಕಿ ಬೆಳೆದ ದಪ್ಪನೆಯ ಕಬ್ಬು
ಕಬ್ಬಿನಾಲೆಯ ಗಾಣಕ್ಕೆ ಸಿಕ್ಕಿ ಹಿಂಡಿ ಹಿಪ್ಪೆಯಾಯ್ತು ಸೊರಟಿ ಸೊರಟಿ
ತೊಟ್ಟಿಯ ಸೇರಿದ ಕಬ್ಬಜಲ್ಲೆಗೊಂದು ಕಹಿ ನಗು, ಏನಿದು ರಸಹೀನ ಬದುಕು?

ಕಪ್ಪು ಕತ್ತಲೆಯಲಿ ಬೆತ್ತಲೆ ನೆಲವನಪ್ಪಿ ಮಲಗಿದ ತಬ್ಬಲಿ ದೇಹ
ಹಸಿದೊಡಲಿಗೆ ಸಂತ್ವಾನ ಹೇಳಲು ಬಿಕ್ಷೆಗಿಳಿಯಿತು ಊರು ಕೇರಿಗಳ ದಾಟಿ ದಾಟಿ
ಎಂಜಲನ್ನವ ತಿಂದ ತುಟಿಗಳಲೊಂದು ನೋವಿನ ನಗು, ಎನಿದು ಅರ್ಥಹೀನ ಬದುಕು?

ಬದುಕು ಬವಣೆಗಳ ನಡುವೆ ಅಲ್ಲೊಂದು ಇಲ್ಲೊಂದು ನಂಬಿಕೆಯ ಕಿಂಡಿ, ಭರವಸೆಯ ಬತ್ತಿ
ಮೂಕ ವೀಣೆಯಿಂದ ಸಂಗೀತ ಸಾಗರವ ಸ್ರಷ್ಟಿಸುವನೊಬ್ಬ ವೈಣಿಕ, ತಂತಿಯ ಮೀಟಿ ಮೀಟಿ
ನಿರ್ಜೀವ ಶಿಲೆಗೂ ಜೀವ ಕೊಡುವನೊಬ್ಬ ಶಿಲ್ಪಿ, ತನ್ನ ಚೇಣಿಂದ ಕಲ್ಲ ಕೆತ್ತಿ ಕೆತ್ತಿ
ಮನದ ಮೂಲೆಯಿಂದೊಂದು ಅಶರೀರವಾಣಿ,
ಕಾದಿದ್ದಳು ಅಂದು ಶಬರಿ ರಾಮನಿಗಾಗಿ, ಕಾಯುತ್ತಲಿರು ಇಂದು ನೀನು...