ಬದುಕ ಪ್ರೀತಿ ಇಲ್ಲದ ಮೇಲೆ ಸಾಹಿತ್ಯ ಹುಟ್ಟೀತು ಹೇಗೆ?
ಏನನ್ನು ಓದಬೇಕು? ಎಲ್ಲಿಂದ ಓದಲು ಪ್ರಾರಂಭಿಸಿದರೆ ಕನ್ನಡ ಸಾಹಿತ್ಯದ ಸರಿಯಾದ ರೀತಿ ಅರ್ಥವಾಗುತ್ತದೆ?- ಇದು ಸಾಹಿತ್ಯದ ಸಭೆ, ಸಮಾರಂಭಗಳು ಮುಗಿದ ನಂತರ ಆಹ್ವಾನಿತ ಸಾಹಿತಿಗಳನ್ನು/ಬರಹಗಾರರನ್ನು ಕುರಿತು ಕೆಲವರು ಕೇಳುವ ಪ್ರಶ್ನೆ. ಕನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಲು ಅರ್ಥೈಸಿಕೊಳ್ಳಲು ತಮಗೆ ಸಮಯಾಭಾವವಿರುವುದನ್ನು ಅವರು ತಪ್ಪದೇ ಸೇರಿಸಿರುತ್ತಾರೆ. ಜೊತೆಗೆ ತಮ್ಮ ಬಿಡುವಿರದ ಕೆಲಸ, ಕಾರ್ಯಗಳ ಜೊತೆಗೆ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ತಿಳಿಯಬಯಸಿರುವವರನ್ನು ಹಿರಿಯರು, ಸಾಹಿತಿಗಳೂ ಬೆಂಬಲಿಸಿ ಆ ಬಗ್ಗೆ ತರಗತಿಗಳನ್ನೋ/ ತಿಳುವಳಿಕೆಯ ಸೋದಾಹರಣ ಭಾಷಣವನ್ನೋ ಕೊಡಬೇಕೆಂದೂ ಬಯಸುತ್ತಾರೆ.
ಹೌದು. ಇವತ್ತು ಕನ್ನಡದ ಕೃತಿಗಳನ್ನು ಓದುವವರೇ ಇಲ್ಲದ ಕಾಲದಲ್ಲಿ ಹೀಗೆ ಇಷ್ಟಪಟ್ಟು ಓದಬಯಸುವವರಿಗೆ ಸರಿಯಾದ ಮಾಹಿತಿಗಳ ಅವಶ್ಯಕತೆ ಇದ್ದೇ ಇದೆ. ಆದರೆ ಇಂಥ ಬೇಡಿಕೆಗಳಿಗೆ ಸರಿಯಾದ ಉತ್ತರ ಇದೆಯೇ ಎಂದು ಯೋಚಿಸಿದರೆ ಇಂಥ ಬೇಡಿಕೆಗಳಲ್ಲೇ ಲೋಪವಿರುವುದು ಗೊತ್ತಾಗುತ್ತದೆ. ಒಳ್ಳೆಯ ಸಂಗೀತ ಕಛೇರಿಗಳನ್ನು ಕೇಳಿದ ಕೂಡಲೇ ಸಂಗೀತಗಾರರಾಗಬೇಕೆಂಬ ಬಯಕೆ, ಒಳ್ಳೆಯ ನಾಟಕಗಳನ್ನು ನೋಡಿದ ಕೂಡಲೇ ನಟರಾಗಬೇಕೆಂಬ ಬಯಕೆ, ಕವಿಗೋಷ್ಠಿಗಳು ನಡೆಯುತ್ತಿರುವಾಗಲೇ ಉದ್ದವಾಗುತ್ತ ಹೋಗುವ ಕವಿಗಳ ಪಟ್ಟಿಯೂ ಇದೇ ಬಗೆಯ ಬಯಕೆಯಿಂದಲೇ ಹುಟ್ಟುವಂಥವು. ಕಾಗುಣಿತ, ಒತ್ತಕ್ಷರ, ಉಚ್ಛಾರ ಗೊಂದಲಗಳಲ್ಲಿರುವವರಿಗೆ ಉತ್ತಮ ಸಾಹಿತ್ಯ ಎಂದರೆ ಏನೆಂದು ತಿಳಿಯಪಡಿಸುವುದು ಕಷ್ಟದ ಕೆಲಸವೇ ಹೌದು. ಜೊತೆಗೆ ಇಂಥ ಬೇಡಿಕೆಗಳನ್ನು ಇಟ್ಟುಕೊಂಡು ಭೇಟಿಯಾಗುವವರಿಗೆ ಹಳಗನ್ನಡ ತಿಳಿಯುವುದಿಲ್ಲ. ಕುಮಾರ ವ್ಯಾಸ, ಲಕ್ಷ್ಮೀಶರದು ದೂರದ ಮಾತು. ಕುವೆಂಪು, ಕಾರಂತ, ಬೇಂದ್ರೆ ಅವರ ಪ್ರಕಾರ ಔಟ್ ಡೇಟೆಡ್ ಆಗಿದ್ದಾರೆ. ನವ್ಯದ ಖ್ಯಾತನಾಮರೂ ಅವರಿಗೆ ಬೇಕಿಲ್ಲ. ವಚನಗಳಿಗಿಂತ ಬೇರೆ ಸಾಹಿತ್ಯ ಬೇಕೇ ಅಂತಂದರೆ ಯಾಕೋ ಮೂಗು ಮುರಿಯುತ್ತಾರೆ. ಹೀಗೆ ಮಾತಿಗೆ ಎಳೆಯುವ ಪ್ರತಿಶತ ಐವತ್ತಕ್ಕೂ ಹೆಚ್ಚುಜನ ಭೈರಪ್ಪನವರ ಕಾದಂಬರಿಗಳಲ್ಲಿ ಒಂದೆರಡನ್ನು ಓದಿರುತ್ತಾರೆ. ರವಿ ಬೆಳಗೆರೆಯ ಬಾಟಂ ಐಟಂ ಓದಿರುತ್ತಾರೆ. ಪ್ರತಾಪ ಸಿಂಹರ ಕಾಲಂ ಇಷ್ಟಪಟ್ಟಿರುತ್ತಾರೆ. ತಮ್ಮದೇ ಬ್ಲಾಗಿನಲ್ಲೋ ಅಥವಾ ಇನ್ಯಾವುದೋ ಸೋಷಿಯಲ್ ನೆಟ್ವರ್ಕಿನ ಸದಸ್ಯರಾಗಿಯೋ ಅನ್ನಿಸಿದ್ದಷ್ಟನ್ನು ಗೀಚಿ ನಿಟ್ಟುಸಿರು ಬಿಟ್ಟಿರುತ್ತಾರೆ. ಊಹೂಂ. ಅದರಾಚೆ ಅವರು ಯೋಚಿಸಲು, ಕಲ್ಪಿಸಿಕೊಳ್ಳಲು ಹಿಂಜರಿಯುತ್ತಾರೆ. ಅನಂತಮೂರ್ತಿ ಇಂಥವರಿಗೆ ಯಾಕೋ ಅಪಥ್ಯರಾಗುತ್ತಾರೆ. ಮುಂಗಾರು ಮಳೆಯ ಹಾಡುಗಳು ಇಷ್ಟವಾಗಿದ್ದರೂ ಜಯಂತ ಕಾಯ್ಕಿಣಿಯ ಇತರ ಕವಿತೆಗಳನ್ನು ಇವರು ಓದಿರುವುದೇ ಇಲ್ಲ. ನಿಜಕ್ಕೂ ಓದಿನ ರುಚಿ ಹೆಚ್ಚಿಸುವ ಎನ್.ನರಸಿಂಹಯ್ಯನವರ ಪತ್ತೇದಾರಿ ಪುರುಷೋತ್ತಮ ಇವರಿಗೆ ತಿಳಿದಿರುವುದೇ ಇಲ್ಲ.ಅದಕ್ಕಿಂತ ಹೆಚ್ಚಾಗಿ ಸಮಯಬಾಕತನದಲ್ಲಿ ನರಳುವ ಇವರಿಗೆ ಯಾವ ವಿಚಾರದಲ್ಲೂ ದೀರ್ಘಕಾಲದ ಒಡನಾಟ ಬೇಸರಬರಿಸುತ್ತದೆ. ಎಲ್ಲಕ್ಕೂ ಚುಟುಕು, ಚೂರು, ಸಂಕ್ಷಿಪ್ತ ಉತ್ತರ ಇವರ ದಾರಿ. ಇಂಥವರ ಜೊತೆಗೆ ಒಂದು ಹಿತವಾದ ಸಾಹಿತ್ಯ ಸಂವಾದ ಸಾಧ್ಯವಾಗದೇ ಅತಿಥಿಯಾಗಿ ಬಂದವರು ಬಳಲುತ್ತಾರೆ. ಅವರ ಬೇಡಿಕೆಗಳಿಗೆ ಸರಿಯಾದ ಉತ್ತರ ಗೊತ್ತಾಗದೇ ತೊಳಲಾಡುತ್ತಾರೆ. ಮತ್ತೆ ಮುಂದಿನ ಸಭೆಯಲ್ಲಿ, ಮತ್ತೊಂದು ಊರಿನಲ್ಲಿ ಇಂಥದೇ ಪ್ರಶ್ನೆ ಎದುರಾದಾಗ ಕನ್ನಡದ ಸದ್ಯದ ಅಗತ್ಯತೆಗಳಲ್ಲಿ ಇದೂ ಒಂದೆಂದು ಮುಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯ ಮಂಡಿಸಲು ನಿರ್ಧರಿಸುತ್ತಾರೆ.
ಹಾಗೆ ನೋಡಿದರೆ ಸಾಹಿತ್ಯಾಸಕ್ತಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದನ್ನು ಪೋಷಿಸಿಕೊಂಡು ಜತನವಾಗಿಸುವುದು ಮಾತ್ರ ಎಲ್ಲರಿಂದಲೂ ಸಾಧ್ಯವಾಗಿರುವುದಿಲ್ಲ. ಅದಕ್ಕೇ ಇರಬೇಕು ಜಪಾನಿನಲ್ಲೋ ಇಲ್ಲಾ ಚೀನದಲ್ಲೋ ಯಾರು ಸತ್ತರೂ ಕವಿಯೊಬ್ಬ ಸತ್ತ ಎಂದೇ ಹೇಳುತ್ತಾರಂತೆ. ಮನೆಯ ಅಟ್ಟದಲ್ಲೇನಾದರೂ ನಿಮ್ಮ ಪಿ.ಯು.ಸಿ. ದಿನಗಳ ನೋಟ್ಸ್ ಪುಸ್ತಕ ಸಿಕ್ಕರೆ ಬಿಡಿಸಿ ನೋಡಿ. ಅದರ ಕಡೆಯ ಹಾಳೆಗಳಲ್ಲಿ ನಿಮಗೇ ಗೊತ್ತಾಗದಂತೆ ಯಾವ ಕವಿಯ ಪ್ರಭಾವವೂ ಇಲ್ಲದೇ ನಿಮಗೆ ನೀವೇ ಬರೆದ ಲಹರಿಯ ತುಣುಕೊಂದು ಇನ್ನೂ ಫ್ರೆಷ್ ಆಗಿ ಘಮಘಮಿಸುತ್ತಿರುತ್ತದೆ. ಅದು ತರಗತಿಯ ಏಕತಾನತೆ ಮೀರಲು ಬರೆದದ್ದೋ ಅಥವ ನಿಮ್ಮ ಮನಸ್ಸನ್ನು ಆ ಕ್ಷಣದಲ್ಲಿ ತುಂಬಿಕೊಂಡ ನಿಮ್ಮ ಸಹಪಾಠಿಯ ಕುರಿತೋ ಆಗಿರುತ್ತದೆ. ಶಕುಂತಳೆ ಅಥವ ದುಷ್ಯಂತರ ಮೇಲೋ ಇಲ್ಲ, ಮಾಳವಿಕಾಗ್ನಿಮಿತ್ರದ ಒಂದು ಆಖ್ಯಾನದ ಮೇಲೋ, ಶೇಕ್ಸ್ಪಿಯರನ ಯಾವುದೋ ಪಾತ್ರದ ಮೇಲೆ ನೀವೇ ಬರೆದ ಒಂದು ಸಣ್ಣ ಟಿಪ್ಪಣಿ ಸಿಕ್ಕರೆ ನೋಡಿ. ಅಲ್ಲಿ ಖಂಡಿತ ಒಬ್ಬ ಸಾಹಿತಿ ಇರುತ್ತಾನೆ. ತೇಜಸ್ವಿಯವರ ಕರ್ವಾಲೋನ ಮಂದಣ್ಣ ಇಲ್ಲವಾದರೆ ಜುಗಾರಿ ಕ್ರಾಸಿನ ಲಟಾರಿ ಬಸ್ಸಿನ ಚಿತ್ರ ಪಡಿಮೂಡಿರುತ್ತವೆ. ಆದರೆ ಒಂದು ವಯಸ್ಸು ಕಳೆದ ನಂತರ, ಕಾಲೇಜು ಶಿಕ್ಷಣ ಮುಗಿದ ನಂತರ ಅದರಲ್ಲೂ ಹೊಟ್ಟೆಪಾಡಿಗೆ ಒಂದು ಉದ್ಯೋಗದ ಹಂಗಿಗೆ ಬಿದ್ದ ನಂತರ ಸಾಹಿತ್ಯದ ಓದು ಕಷ್ಟ ಸಾಧ್ಯದ ಮಾತು. ಮೂಗುಬ್ಬುಸ ಹತ್ತಿಸುವ ಬದುಕಿನ ತಿರುವುಗಳು. ಸಾಹಿತ್ಯದ ಮೇಲೆ ಆಸಕ್ತಿ ಇದ್ದರೂ ಅದನ್ನು ಮುಂದುವರೆಸಿಕೊಂಡು ಹೋಗಲು ಹಲವು ಅಡ್ಡಿ ಆತಂಕಗಳು. ಎಲ್ಲೋ ಕೆಲವರಿಗಷ್ಟೇ ಬಾಲ್ಯದಲ್ಲಿ ಮಾರ್ಗದರ್ಶಕರು ಸಿಕ್ಕಿರುತ್ತಾರೆ. ಏನನ್ನು ಓದಿದರೆ ಮತ್ತು ಹೇಗೆ ಓದುವುದರಿಂದ ಊರ ಲೈಬ್ರರಿಯಲ್ಲಿನ ಎಲ್ಲ ಪುಸ್ತಕಗಳೊಂದಿಗೆ ಒಡನಾಟ ಸಾಧ್ಯವಾಗುವುದೆಂದು ಕಲಿಸಿರುತ್ತಾರೆ. ಒಳ್ಳೆಯ ಓದಿನ ಸುಖವನ್ನು ತಿಳಿಸಿಕೊಟ್ಟಿರುತ್ತಾರೆ. ಅವರು ತೋರಿದ ಹಾದಿಯಲ್ಲಿ ನಡೆಯುತ್ತಲೇ ಬಳಸಿ ಬಳಲಿದ ಹಳೆಯ ಮಾರ್ಗವನ್ನು ಮೀರುವ ಮೂಲಕ ಸುಖ ಮುಮ್ಮಡಿಗೊಂಡಿರುತ್ತದೆ. ಆದರೆ ಇಂಥ ಸೌಭಾಗ್ಯ ಎಲ್ಲರಿಗೂ ದಕ್ಕದಿರುವುದರಿಂದಲೇ ಮೇಲೆ ಹೇಳಿದ ಸಮಸ್ಯೆಗಳು ಅಲ್ಲಲ್ಲಿ ಕಾಣಸಿಕ್ಕುತ್ತಲೇ ಇರುತ್ತವೆ. ಹೀಗೆ ಓದಿನ ಬಯಕೆ ವ್ಯಕ್ತಪಡಿಸಿದವರ ಸಮಸ್ಯೆ ಏನೆಂದರೆ ಅವರಿಗೆ ಹಳಬರ ಬರವಣಿಗೆ ಇಷ್ಟವಿರುವುದಿಲ್ಲ. ಹೊಸ ಬರಹಗಾರರ ಬಗ್ಗೆ ತಿಳಿದಿರುವುದಿಲ್ಲ. ಎಲ್ಲಿಂದ ಮತ್ತು ಯಾರಿಂದ ಪ್ರಾರಂಭಿಸಿದರೂ ಅವರ ಓದು ಪರಿಪೂರ್ಣವಾಗುವುದಿಲ್ಲ. ವಿಮರ್ಶೆ ಮತ್ತು ವೈಚಾರಿಕ ಬರಹಗಳು ಅವರ ವ್ಯಾಪ್ತಿಯಾಚೆಗೆ ಉಳಿಯುವುದರಿಂದ ಸಮಸ್ಯೆ ಮತ್ತೂ ಕಗ್ಗಂಟಾಗುತ್ತದೆ.
ಇಂಥ ಪ್ರಶ್ನೆಗಳಿಗೆ ಉತ್ತರ ಸುಲಭಕ್ಕೆ ಸಿಕ್ಕುವುದಿಲ್ಲ. ಏಕೆಂದರೆ ಸಾಹಿತ್ಯದ ಅರಿವು ಕೇವಲ ಕತೆ, ಕಾದಂಬರಿ, ಕವನ ಸಂಗ್ರಹಗಳ ಅಭ್ಯಾಸಗಳಿಂದ ಮಾತ್ರ ದಕ್ಕುವುದಂಥಲ್ಲವಲ್ಲ. ಬ್ಲಾಗುಗಳ ಬಣ್ಣಗಳಲ್ಲಿ ಹಿಡಿದಿಡಲೂ ಆಗುವುದಿಲ್ಲ. ಸಾಹಿತ್ಯವೆಂದರೆ ಅದು ಚರಿತ್ರೆ, ಪುರಾಣ, ಉಪನಿಷತ್ತು, ಶಾಸ್ತ್ರ, ಸಂಪ್ರದಾಯಗಳ ಪರಿಚಯ ಹಾಗೂ ಅವುಗಳ ನಡುವೆ ಒಂದರಿಂದ ಮತ್ತೊಂದಕ್ಕಿರುವ ಸಂಬಂಧಗಳ ಅರಿವು. ಒಬ್ಬ ಒಳ್ಳೆಯ ಓದುಗ ಇನ್ನೊಬ್ಬ ಕೆಟ್ಟ ಬರಹಗಾರನಿಗಿಂತಲೂ ಸೂಕ್ಷ್ಮಜ್ಞನಾಗಿರುತ್ತಾನೆ. ಏಕೆಂದರೆ ಸಾಹಿತ್ಯದ ಅರಿವಿಗೆ ಇಂಥದ್ದೇ ಎಂಬ ಪಠ್ಯ ಇಲ್ಲವೇ ಇಲ್ಲ. ನಮ್ಮ ವಿಶ್ವವಿದ್ಯಾಲಯಗಳಿಗೂ ಅಂಥ ನಿಖರ ಸಿಲಿಬಸ್ ಕಂಡುಕೊಳ್ಳುವುದು ಸಾಧ್ಯವಿಲ್ಲ. ಹೆಚ್ಚೆಂದರೆ ಒಂದು ಮಾರ್ಗಸೂಚಿ ಕೊಡಬಹುದಷ್ಟೇ. ಇಂತಿಂಥ ದಾರಿಯಲ್ಲಿ ಹೋದರೆ ಇಂತಿಂಥ ಊರುಗಳು ಸಿಕ್ಕುತ್ತವೆ ಎಂಬ ಹಾಗೆ! ಒಂದೋ ಎರಡೋ ಕೃತಿಗಳ ಅಭ್ಯಾಸಮಾತ್ರದಿಂದ ಸಾಹಿತ್ಯದ ಸಂಪೂರ್ಣ ತಿಳುವಳಿಕೆ ಬರುತ್ತದೆನ್ನುವುದೇ ಅಹಂಕಾರದ ಅವಸರದ ಮಾತು. ಅಡುಗೆ ಮಾಡುವುದು ಬಾರದೇ ಹೋದರೂ ಒಳ್ಳೆಯ ಊಟ ಮಾಡುವುದು ಕೂಡ ಸಿದ್ಧಿಸಿಕೊಳ್ಳಬೇಕಾದ ಕಲೆಯೇ. ಸಾಹಿತ್ಯವೂ ಹಾಗೆ. ಓದೆಂಬುದು ನಮ್ಮ ತಿಳುವಳಿಕೆಯ ಮಟ್ಟವನ್ನು ವಿಸ್ತರಿಸುವ ಮಾರ್ಗ ಮಾತ್ರ. ಪ್ರತಿಯೊಂದು ಹೊಸ ಓದು ಈಗಾಗಲೇ ನಮ್ಮ ಗ್ರಹಿಕೆಯಲ್ಲಿರುವುದಕ್ಕೆ ಪೂರಕವಾಗಿದ್ದರೆ ಮಾತ್ರ ಅದು ನಮ್ಮನ್ನು ತಟ್ಟುತ್ತದೆ. ಇಲ್ಲವಾದರೆ ಅಂಥ ಓದು ವ್ಯರ್ಥವಾಗುತ್ತದೆ. ಸಮಯ ಕೊಲ್ಲುತ್ತದೆ ಅಷ್ಟೆ. ಇದನ್ನೇ ಪರಂಪರೆಯ ಅರಿವು ಎಂದರೆ ನಮ್ಮ ಕಾಲದ ಕೆಲವು ಬರಹಗಾರರು ಸಿಟ್ಟಾಗುತ್ತಾರೆ. ಬಂದರೆ ಬರಲಿ ಬಿಡಿ, ಆ ಮೂಲಕವಾದರೂ ಅವರು ನಮ್ಮ ಕುಮಾರ ವ್ಯಾಸನನ್ನೋ ಪಂಪ, ರನ್ನರನ್ನೋ ಓದಿ ಆ ಮೂಲಕ ಅವರಿಗಿರುವ ಪದಭಂಡಾರದ ಕೊರತೆ ನೀಗಿಸಿಕೊಂಡರೆ ಏಕತಾನತೆಯ ಬರಹಗಳಿಂದ ಮುಕ್ತಿ ಸಿಗುವ ಲಾಭವಾಗುವುದು ನಮಗೇ ತಾನೆ? ಬರೀ ಸೃಜನಶೀಲ ಬರವಣಿಗೆ ಮಾತ್ರವಲ್ಲದೇ ಸಿನಿಮಾ, ರಂಗಭೂಮಿ, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಸಂಗೀತ, ಅರ್ಥಶಾಸ್ತ್ರ, ರಾಜಕೀಯವನ್ನೂ ಸೇರಿದಂತೆ ಬದುಕಿನ ಎಲ್ಲ ಮಗ್ಗುಲಗಳಲ್ಲೂ ಓದುಗನನ್ನು ಹೊರಳಿಸಿ, ಅರಳಿಸಿ ಆ ಮೂಲಕ ಹುಟ್ಟುವ ಗ್ರಹಿಕೆಯ ಮೂಲಕ ಜೀವನವನ್ನು ಕಟ್ಟಿಕೊಳ್ಳುವಂತೆ ಪ್ರೇರೇಪಿಸುವ, ಉದ್ದೀಪಿಸುವ ಹಲವು ಪ್ರಾತಃ ಸ್ಮರಣೀಯರ ದೊಡ್ಡ ಪಟ್ಟಿಯೇ ನಮ್ಮ ಕಣ್ಣೆದುರು ನಿಲ್ಲುತ್ತದೆ. ಕನ್ನಡದ ಮಣ್ಣಲ್ಲಿ ಹುಟ್ಟಿದ ನಮ್ಮ ಪುಣ್ಯ ವಿಶೇಷಗಳ ಬಗ್ಗೆ ಹೆಮ್ಮೆಯೂ ಮೂಡುತ್ತದೆ.
ಆದರೆ ಇದಕ್ಕಿಂತ ಇನ್ನು ಒಂದು ಹೆಜ್ಜೆ ಹಿಂದೆ ಹೋದರೆ ಅಂದರೆ ಯಾವುದಾದರೂ ಹೈಸ್ಕೂಲು ಅಥವ ಪದವಿಪೂರ್ವ ಕಾಲೇಜಿನ ಸಭೆಗೆ ಹೋಗಿ ಸಾಹಿತ್ಯದ ಬಗ್ಗೆ ಮಾತನಾಡಿ ಸ್ಕೂಟರು ಹತ್ತುವ ಮೊದಲೇ ಹಸ್ತಪ್ರತಿ ಹಿಡಿದು ಎಡತಾಕುವ ಎಳೆಯರಂತೂ ತಕ್ಷಣಕ್ಕೆ ಅವರು ಬರೆದ ಪದ್ಯಗಳ ಬಗ್ಗೆ ವಿಮರ್ಶೆ ಅಲ್ಲಲ್ಲ ಮೆಚ್ಚುಗೆಯ ಮಾತು ಬಯಸುತ್ತಾರೆ. ಪದ್ಯಗಳನ್ನೇ ಏಕೆ ಎಲ್ಲರೂ ಬರೆಯುತ್ತೀರಿ? ಬರೆಯಲು ಬೇರೆ ಬೇರೆ ಮಾಧ್ಯಮಗಳಿವೆ ಅಂದರೆ ಪದ್ಯದಷ್ಟು ಸುಲಭದ ಮಾರ್ಗ ಬೇರೆ ಇಲ್ಲವಲ್ಲ ಅನ್ನುತ್ತಾರೆ! ಅಸಲಿಗೆ ಅನುಭವದ ಪಾತಳಿಯಿಲ್ಲದ ಗದ್ಯದ ತುಂಡುಗಳನ್ನೇ ಅಲ್ಲಲ್ಲಿ ತುಂಡರಿಸಿ ನೇಯ್ದ ಪದ್ಯ ರಚನೆಗಳನ್ನು ಖ್ಯಾತ ನಾಮರೇ ಅನುಸರಿಸುತ್ತಿರುವಾಗ ಪಾಪ ಈ ಎಳೆಯ ಬೊಮ್ಮಟೆಗಳಿಗೆ ಹೇಳುವುದಾದರೂ ಏನು? ತಮ್ಮ ಉಪನ್ಯಾಸಕರು ತಮಗೆ ಪ್ರೋತ್ಸಾಹ ಕೊಡುತ್ತಿಲ್ಲವೆಂದೋ ತಮ್ಮ ಕಾಲೇಜಿನಲ್ಲಿ ಗೋಡೆ ಪತ್ರಿಕೆಗಳು ಇಲ್ಲದಿರುವ ಕಾರಣ ತಮ್ಮ ಬರಹಗಳು ಯಾರಿಗೂ ಗೊತ್ತಾಗದೇ ಅನಾಥವಾಗುತ್ತಿರುವುವೆಂದೂ ತಮ್ಮ ಮನದಾಳದ ದುಃಖ ತೋಡಿಕೊಳ್ಳುತ್ತಾರೆ. ಕುತೂಹಲಕ್ಕೆ ಅವರು ಮುಂದೆ ಹಿಡಿದ ಹಸ್ತಪ್ರತಿ ತೆರೆದು ನೋಡಿದರೆ ಬಹುತೇಕ ಎಲ್ಲ ರಚನೆಗಳೂ ಹಂಸಲೇಖರ ಚಿತ್ರಗೀತೆಗಳಂತೆ ಅಥವ ದುಂಡಿರಾಜರ ಚುಟುಕಗಳ ನಕಲಿನಂತೇ ಇರುತ್ತವೆ. ಲಕ್ಷ್ಮಣರಾಯರು, ಜಯಂತ ಕಾಯ್ಕಿಣಿ ಕೂಡ ನುಸುಳಿಕೊಂಡಿರುತ್ತಾರೆ! ಬಂಡಾಯದ ಕಾವು ಕಳೆದ ವರ್ತಮಾನದಲ್ಲೂ ಜಾತಿ ವ್ಯವಸ್ಥೆಯನ್ನು ಮೂದಲಿಸುವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯನ್ನೆತ್ತಿಕೊಂಡು ಸಮಾನತೆಯ ಭಾಷಣ ನೀಡುವ ರಚನೆಗಳೂ ಇರುತ್ತವೆ. ಈಗಾಗಲೇ ಜನಪ್ರಿಯವಾಗಿರುವ ಹಿರಿಯ ಲೇಖಕರ ಬರಹಗಳಲ್ಲಿ ಒಂದೋ ಎರಡೋ ಪದಗಳನ್ನು ಅಲ್ಲಿ ಇಲ್ಲಿ ಬದಲಿಸಿ ಅದು ತಮ್ಮದೇ ಎಂಬ ಹುಂಬ ಧೈರ್ಯದಲ್ಲಿ ಪ್ರದರ್ಶಿತ್ತಾರಲ್ಲ ಅಂತ ಅಂದುಕೊಳ್ಳುವ ಜೊತೆಜೊತೆಗೇ ಸದ್ಯ ಅಷ್ಟನ್ನಾದರೂ ಓದಿಕೊಂಡಿದ್ದಾರಲ್ಲ, ಕನ್ನಡ ಸಾಹಿತ್ಯ ಇನ್ನೂ ಯುವಜನರನ್ನು ಆಕರ್ಷಿಸುತ್ತಲೇ ಇದೆಯಲ್ಲ ಎಂಬ ದಿವ್ಯ ಸಮಾಧಾನವೂ ಆಗುತ್ತದೆ. ಆದರೆ ಇಂಥ ಆಸಕ್ತ ವಿದ್ಯಾರ್ಥಿಗಳೂ ಸಿ.ಇ.ಟಿ ಪರೀಕ್ಷೆಗೆ ಕೂತು ಬಿ.ಯಿಗೋ, ಎಂ.ಬಿಗೋ ಸೇರಿಬಿಟ್ಟರೆ ಸಾಹಿತ್ಯ ಓದಲು ಉಳಿಯುವವರಾದರೂ ಯಾರು? ಇಷ್ಟವಿಲ್ಲದೇ ಓದಿ ಕೈಗೊಂದು ಪದವಿ ಬಂದ ಕಾರಣಕ್ಕೆ ಮಾನಸಗಂಗೋತ್ರಿಯ ಹಾದಿಹಿಡಿದವರು! ಪ್ರಾಯಶಃ ಇದೇ ಕಾರಣಕ್ಕೆ ಇವತ್ತು ನಮ್ಮ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯವನ್ನು ಜೀವನ ಪ್ರೀತಿ ಎಂಬಂತೆ ಬಿಂಬಿಸುವವರಿಲ್ಲದೇ ಹೋಗಿರುವುದು.
ಏನು ಮಾಡುವುದು? ಸಾಹಿತ್ಯವನ್ನೇ ಮುಖ್ಯ ಓದನ್ನಾಗಿ ಆರಿಸಿಕೊಂಡು ಸ್ನಾತಕೋತ್ತರ ತರಗತಿಗಳಲ್ಲಿ ಓದುತ್ತಿರುವವರೇ ಸಾಹಿತ್ಯ ಕಾರಣಗಳಿಗಾಗಿ ಮಾಡಿಕೊಂಡ ಸಾಹಿತ್ಯ ಚರಿತ್ರೆಯ ವಿಭಾಗೀಕರಣವನ್ನು ಸರಿಯಾಗಿ ಅರ್ಥೈಸಿಕೊಳ್ಳದಿರುವಾಗ ಖುಷಿಯ ಕಾರಣಕ್ಕಾಗಿ ಸಾಹಿತ್ಯದ ಬೆನ್ನು ಬಿದ್ದಿರುವ ನತದೃಷ್ಟರಿಗೆ ಇನ್ನಾವ ದಾರಿ? ಆಳ ತಿಳಿದವರಿಗೆ ವಿಸ್ತಾರ ತಿಳಿದಿರುವುದಿಲ್ಲ. ವಿಸ್ತಾರಕ್ಕೆ ಬೆರಗುಗೊಂಡವರಿಗೆ ಆಳದ ಊಹೆ ನಿಲುಕುವುದಿಲ್ಲ. ಬದುಕಿನ ಬಗ್ಗೆ ಪ್ರೀತಿ ಇಲ್ಲದವರಿಗೆ ಸಾಹಿತ್ಯದ ಪ್ರೀತಿ ದೂರದ ಮಾತು. ಪ್ರೀತಿ ಇಲ್ಲದ ಮೇಲೆ ಬದುಕು ಸಹ್ಯವಾಗುವುದಾದರೂ ಹೇಗೆ?